ಬೆಂಗಳೂರು; ಕೋವಿಡ್ ಸೋಂಕಿನಿಂದ ಮೃತರಾದ ಬಡತನ ರೇಖೆಗಿಂತ ಕೆಳಗಿರುವವರಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಬಿಜೆಪಿ ಸರ್ಕಾರವು ಇದೀಗ ಹಿಂಪಡೆದುಕೊಂಡಿದೆ.
ಕೋವಿಡ್ ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50,000 ರು.ಗಳ ಪರಿಹಾರ ನೀಡಲು ಕೇಂದ್ರ ಸರ್ಕಾರದ ಸೂಚನೆ ಬಂದ ಹಿನ್ನೆಲೆಯಲ್ಲಿ 1 ಲಕ್ಷ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ 2021ರ ಸೆ.23ರಂದು ಹೊರಡಿಸಿದ್ದ ಆದೇಶವನ್ನೇ ಹಿಂಪಡೆದುಕೊಂಡಿದೆ. ಈ ಸಂಬಂಧ 2021ರ ಸೆ.28ರಂದು ಪರಿಷ್ಕೃತ ಆದೇಶ ಹೊರಡಿಸಿದೆ.
ಕೋವಿಡ್ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ 1 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಅರ್ಹ ಸಂತ್ರಸ್ತ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ 1 ಲಕ್ಷ ರು.ಗಳನ್ನುಪಾವತಿಸಲು ಆದೇಶಿಸಿತ್ತು. ಆದರೀಗ ಆ ಆದೇಶವನ್ನು ಹಿಂಪಡೆದುಕೊಂಡಿರುವುದು ಸಂತ್ರಸ್ತ ಕುಟುಂಬಗಳನ್ನು ಮತ್ತಷ್ಟು ಕಣ್ಣೀರಿನಲ್ಲಿ ಮುಳುಗಿಸಿದೆ.
‘ಕೇಂದ್ರ ಗೃಹ ಸಚಿವಾಲಯದ 2021 ಸೆ.25ರ ನಿರ್ದೇಶನದಂತೆ ಕೋವಿಡ್-19 ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50,000 ರು. ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿರುವುದರಿಂದ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ಚೆಕ್ ಮೂಲಕ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಸೆ.23ರಂದು ಹೊರಡಿಸಲಾಗಿದ್ದ ಆದೇಶವನ್ನು ಯಥಾವತ್ತಾಗಿ ಹಿಂಪಡೆಯಲಾಗಿದೆ,’ ಎಂದು ಸೆ.28ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಕೋವಿಡ್‌ನಿಂದ ಮೃತ ಹೊಂದಿದ ಬಿಪಿಎಲ್ ಕುಟುಂಬದ ದುಡಿಯುವ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿತರಣೆ ಕುರಿತಂತೆ ರಾಜ್ಯದಲ್ಲಿ ಒಟ್ಟು 7,711 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 950 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 445, ಧಾರವಾಡ ಜಿಲ್ಲೆಯಲ್ಲಿ 434, ಹಾಸನ ಜಿಲ್ಲೆಯಲ್ಲಿ 443, ಕೊಪ್ಪಳದಲ್ಲಿ 633, ಮೈಸೂರು ಜಿಲ್ಲೆಯಲ್ಲಿ 783 ಅರ್ಜಿಗಳು ಸಲ್ಲಿಕೆಯಾಗಿವೆ.
ಕೋವಿಡ್ ಸೋಂಕು ದೃಢವಾದ ಒಂದು ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳು ಕೂಡ 50,000 ರು. ಪರಿಹಾರ ಧನ ಪಡೆಯಲು ಅರ್ಹತೆ ಹೊಂದಿರುತ್ತವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಮೃತರು ಕೋವಿಡ್ ಬಾಧಿತರು ಎಂದು ಸಾಬೀತಾಗಿರಬೇಕು. ಆಗ ಅವರ ಕುಟುಂಬ ಕೂಡಾ ಪರಿಹಾರ ಧನ ಪಡೆಯಲು ಅರ್ಹವಾಗಿರುತ್ತದೆ ಎಂದು ಕೋರ್ಟ್ ಹೇಳಿತ್ತು.
ಈ ಕುರಿತು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿರುವ ಗೃಹ ಸಚಿವಾಲಯ, ಈ ನಿಟ್ಟಿನಲ್ಲಿ ಅಗತ್ಯ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿತ್ತು.ಕೋವಿಡ್–19ನಿಂದ ಮೃತಪಟ್ಟವರ ಮರಣ ಪತ್ರದಲ್ಲಿ ‘ಕೋವಿಡ್ ಕಾರಣದಿಂದ ಆತ್ಮಹತ್ಯೆ’ ಎಂಬ ಅಂಶವನ್ನು ನಮೂದು ಮಾಡದೇ ಇರುವ ಕುರಿತು ಪುನರ್‌ವಿಮರ್ಶೆ ಮಾಡಬೇಕು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ನೀಡಲು ‘ಆತ್ಮಹತ್ಯೆ’ ಎಂಬುದರ ಉಲ್ಲೇಖ ಅತಿಮುಖ್ಯ ಎಂದು ಸೆ.13ರಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಹೇಳಿತ್ತು. ಕೋರ್ಟ್ ಎತ್ತಿರುವ ಕಳಕಳಿ ಕುರಿತು ಪುನರ್‌ವಿಮರ್ಶೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದನ್ನು ಸ್ಮರಿಸಬಹುದು.
ಕೋವಿಡ್‌ನಿಂದ ಬಳಲುತ್ತಿರುವ ವೇಳೆಯೇ, ವಿಷ ಪದಾರ್ಥ ಸೇವನೆ, ಆತ್ಮಹತ್ಯೆ, ಕೊಲೆ ಅಥವಾ ಆತ್ಮಹತ್ಯೆಯಿಂದ ಸಂಭವಿಸಿದ ಸಾವುಗಳನ್ನು ಕೋವಿಡ್‌ನಿಂದ ಸಂಭವಿಸಿದ ಸಾವುಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಐಸಿಎಂಆರ್ ಇದಕ್ಕೂ ಮೊದಲು ಜಂಟಿಯಾಗಿ ಮಾರ್ಗಸೂಚಿ ಹೊರಡಿಸಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆ.11ರಂದು ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕೋವಿಡ್–19 ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಮೊತ್ತವನ್ನು ಭರಿಸಬೇಕು. ಜೂನ್ 30ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿ ಮಾರ್ಗಸೂಚಿ ರೂಪಿಸಿದ್ದನ್ನು ಸ್ಮರಿಸಬಹುದು.