ಬೆಂಗಳೂರು; ಅನುತ್ಪಾದಕ ವೆಚ್ಚಗಳನ್ನು ಕಡಿತಗೊಳಿಸಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಮೀಕರಿಸಲು ತಯಾರಿ ನಡೆಸಿದೆ. ಒಂದೇ ರೀತಿಯ ಉದ್ದೇಶವನ್ನು ಹೊಂದಿರುವ ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳ ಜತೆ ವಿಲೀನಗೊಳಿಸಿದಲ್ಲಿ 3,140.14 ಕೋಟಿ ರು. ಉಳಿತಾಯ ಮಾಡಬಹುದು ಎಂಬ ಲೆಕ್ಕಾಚಾರವನ್ನೂ ಮಾಡಿದೆ.
ಕರ್ನಾಟಕ ರೇಷ್ಮೆ ಯೋಜನೆ, ಆಯುಷ್ಮಾನ್ ಭಾರತ್, ಡಾ ಅಂಬೇಡ್ಕರ್ ನಿವಾಸ್ ಯೋಜನೆ, ಆಶ್ರಯ-ಬಸವ ವಸತಿ, ವಾಜಪೇಯಿ ನಗರ ವಸತಿ, ಹುಲ್ಲು ಜಮೀನುಗಳ ರಕ್ಷಣೆ, , ಒಳನಾಡು ಮೀನುಗಾರಿಕೆ ಅಭಿವೃದ್ಧಿ, ಪಶು ಸಂಗೋಪನಾ ಸಹಕಾರ ಸಂಘಗಳಿಗೆ ಅನುದಾನ, ಸಾವಯವ ಕೃಷಿ, ಮಹಿಳೆಯರಿಗೆ ಕಲ್ಯಾಣ ಕಾರ್ಯಕ್ರಮ, ನಗರೋತ್ಥಾನ, ಅಲ್ಪಸಂಖ್ಯಾತರ ಹಾಸ್ಟೆಲ್ ವಸತಿ ಶಾಲೆ ನಿರ್ಮಾಣ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಅರ್ಹತೆಯ ಉನ್ನತೀಕರಣ ಸೇರಿದಂತೆ ಇನ್ನಿತರೆ ರಾಜ್ಯ ವಲಯ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಮೀಕರಿಸುವ ಸಂಬಂಧ ಸಿದ್ಧತೆ ನಡೆಸಿದೆ.
ಸರ್ಕಾರ ನಡೆಸಿರುವ ತಯಾರಿ ಮತ್ತು ಇಲಾಖಾವಾರು ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಮೀಕರಿಸುವ ಹಣಕಾಸಿನ ಸಮಗ್ರ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
2021-22ನೇ ಸಾಲಿನ ಆಯವ್ಯಯದ ಪ್ರಕಾರ 19 ಇಲಾಖೆಗಳಲ್ಲಿ ಸುಮಾರು 58 ರಾಜ್ಯ ವಲಯದ ಯೋಜನೆಗಳನ್ನು ಸಮಾನಾಂತರ ಉದ್ದೇಶ ಹೊಂದಿರುವ 23 ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಮೀಕರಿಸಲು ಸರ್ಕಾರವು ಗುರುತಿಸಿದೆ. 2021-22ನೇ ಸಾಲಿಗೆ ಒಟ್ಟು 81 ಯೋಜನೆಗಳಿಗೆ 9,521.51 ಕೋಟಿ ರು.ಗಳ ಅನುದಾನ ಒದಗಿಸಲಾಗಿದೆ. ಇದರಲ್ಲಿ ರಾಜ್ಯ ವಲಯದ ಯೋಜನೆಗಳಿಗೆ 5,377.04 ಕೋಟಿ ರು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ 4,144.47 ಕೋಟಿ ರು.ಗಳನ್ನು ಹಂಚಿಕೆ ಮಾಡಿರುವುದು ಇಲಾಖೆಗಳು ಸಿದ್ಧಪಡಿಸಿರುವ ವಿವರಣೆ ಪಟ್ಟಿಯಿಂದ ತಿಳಿದು ಬಂದಿದೆ.
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರದ ಪಾಲು 2,671.91 ಕೋಟಿ ರು.ಗಳಾಗಿದ್ದೆ (ಹಂಚಿಕೆಯ ಸುಮಾರು ಶೇ.60) ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ವಿಲೀನಗೊಳಿಸಿದರೆ 81 ಯೋಜನೆಗಳ ಒಟ್ಟಾರೆ ಹಂಚಿಕೆಯಲ್ಲಿ (9,521.51 ಕೋಟಿ) ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಇಲಾಖೆಗಳು ಪ್ರತಿಪಾದಿಸಿರುವುದು ಗೊತ್ತಾಗಿದೆ.
ಆದರೆ ಕೇಂದ್ರದ ಪಾಲಿನಲ್ಲಿ ಹೆಚ್ಚಳ ಆಗಬಹುದು ಎಂದು ಅಂದಾಜಿಸಿರುವ ಇಲಾಖೆಗಳು 2,671.91 ಕೋಟಿ ರು.ಗಳಿಂದ 5,817.17 ಕೋಟಿ ರು.ಗಳಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಮಾಡಿವೆ. ಇದರಿಂದ ಕೇಂದ್ರದ ಪಾಲು 3,145.26 ಕೋಟಿ ರು.ಗಳು ಹೆಚ್ಚಳವಾಗಿ ರಾಜ್ಯ ಆಯವ್ಯಯದಲ್ಲಿ ಹೆಚ್ಚಳದಷ್ಟು ಅನುದಾನ ಉಳಿತಾಯವಾಗುತ್ತದೆ. ಇದನ್ನು ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬಹುದು ಎಂಬ ಪ್ರತಿಪಾದಿಸಿರುವುದು ತಿಳಿದು ಬಂದಿದೆ.
ಸಮೀಕರಿಸಿದ ನಂತರ ಇಲಾಖೆಗಳಿಗೆ ಉಳಿತಾಯವಾಗುವ ಮೊತ್ತದ ವಿವರ
ವಸತಿ ಇಲಾಖೆ- 840 ಕೋಟಿ
ಪ್ರಾಥಮಿಕ, ಪ್ರೌಢಶಿಕ್ಷಣ- 293.44 ಕೋಟಿ
ಆರೋಗ್ಯ ಕುಟುಂಬ ಕಲ್ಯಾಣ- 586.71 ಕೋಟಿ
ಉನ್ನತ ಶಿಕ್ಷಣ- 126.00 ಕೋಟಿ
ಮೀನುಗಾರಿಕೆ- 68.58 ಕೋಟಿ
ಅರಣ್ಯ- 180.99 ಕೋಟಿ
ಪಶು ಸಂಗೋಪನೆ- 33.31 ಕೋಟಿ
ಕೃಷಿ ಇಲಾಖೆ- 265.47 ಕೋಟಿ
ನಗರಾಭಿವೃದ್ಧಿ- 242.32 ಕೋಟಿ
ವೈದ್ಯಕೀಯ ಶಿಕ್ಷಣ- 12.38 ಕೋಟಿ
ಕೌಶಲ್ಯಾಭಿವೃದ್ಧಿ- 65.95 ಕೋಟಿ
ಅಲ್ಪಸಂಖ್ಯಾತರ ಕಲ್ಯಾಣ- 120.00 ಕೋಟಿ
ಪರಿಶಿಷ್ಟ ಪಂಗಡಗಳ ಕಲ್ಯಾಣ- 12.50 ಕೋಟಿ
ಪರಿಶಿಷ್ಟ ವರ್ಗಗಳ ಕಲ್ಯಾಣ- 150.00 ಕೋಟಿ
ಲೋಕೋಪಯೋಗಿ- 45.00 ಕೋಟಿ
ರೇಷ್ಮೆ- 8.10 ಕೋಟಿ
ತೋಟಗಾರಿಕೆ- 59.06 ಕೋಟಿ
ಒಳಾಡಳಿತ- 10.91 ಕೋಟಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- 19.44 ಕೋಟಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ಪ್ರಧಾನಮಂತ್ರಿ ಗ್ರಾಮ್ ಸಡಕ್, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟ, ಸಮಗ್ರ ಶಿಕ್ಷಣ ಕರ್ನಾಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ ವಿಪತ್ತು ನಿಧಿಗೆ ಸಹಾಯ ಧನ, ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆ, ಪೂರಕ ಪೌಷ್ಠಿಕಾಂಶ, ಪ್ರಧಾನಮಂತ್ರಿ ಆವಾಸ್ ಯೋಜನೆಗಳು ಕೇಂದ್ರ ಪುರಸ್ಕೃತ ಯೋಜನೆಗಳಾಗಿವೆ.
ಒಂದೇ ಉದ್ದೇಶವಿರುವ ರಾಜ್ಯ ಸರ್ಕಾರದ ಯೋಜನೆಗಳನ್ನು ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ಸಮೀಕರಣವನ್ನು ಮಾಡಿದರೆ ನಿರ್ವಹಣೆ ವೆಚ್ಚಗಳನ್ನು ಹಾಗೂ ಸಿಬ್ಬಂದಿಗಳ ಸಂಖ್ಯೆಯನ್ನು ಆದಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದಾಗಿದೆ,’ ಎಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸೂಚಿಸಿದ್ದನ್ನು ಸ್ಮರಿಸಬಹುದು.