ಪಿಂಚಣಿ, ನಿವೃತ್ತಿ ಸೌಲಭ್ಯದ ಮೇಲೆ ಕಣ್ಣು;1.28 ಲಕ್ಷ ಕೋಟಿ ಅನುತ್ಪಾದಕ ವೆಚ್ಚ ಕಡಿತ!

ಬೆಂಗಳೂರು; ಒಕ್ಕೂಟ ಸರ್ಕಾರವು ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ಮೊತ್ತದ ಬಿಡುಗಡೆಗೆ ಒತ್ತಡ ಹೇರಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಹೊರಗುತ್ತಿಗೆ, ದಿನಗೂಲಿ ನೌಕರರ ವೇತನ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿನ 1.28 ಲಕ್ಷ ಕೋಟಿ ರು. ಮೊತ್ತದ ಅನುತ್ಪಾದಕ ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿದೆ.

ಇದಕ್ಕೆ ಪೂರಕವಾಗಿ ಒಂದೇ ಉದ್ದೇಶವಿರುವ ರಾಜ್ಯ ಸರ್ಕಾರದ ಯೋಜನೆಗಳನ್ನು ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ಸಮೀಕರಣ ಮಾಡಿ ಸಿಬ್ಬಂದಿ ಸಂಖ್ಯೆ ಕಡಿತಗೊಳಿಸಿ ನಿರ್ವಹಣೆ ವೆಚ್ಚಗಳನ್ನು ಕಡಿಮೆಗೊಳಿಸಲು ಉದ್ದೇಶಿಸಿದೆ. ಇದರಲ್ಲಿ ಪಿಂಚಣಿ, ನಿವೃತ್ತಿ ನಂತರದ ಸೌಲಭ್ಯಗಳೂ ಸೇರಿವೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿಂದೆ ಬಿದ್ದಿರುವ ರಾಜ್ಯ ಬಿಜೆಪಿ ಸರ್ಕಾರವು ಅನುತ್ಪಾದಕ ವೆಚ್ಚಗಳ ಕಡಿಮೆಗೊಳಿಸುವ ನೆಪದಲ್ಲಿ ಪಿಂಚಣಿ ಮತ್ತು ನಿವೃತ್ತಿ ನಂತರದ ಸೌಲಭ್ಯಗಳಿಗೂ ಕತ್ತರಿ ಹಾಕಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿರವಿಕುಮಾರ್‌ ಅವರು ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ 2021ರ ಸೆಪ್ಟಂಬರ್‌ 2ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯದ ಒಟ್ಠಾರೆ ಆಯವ್ಯಯ 2,46,206,92 ಕೋಟಿ ರು.ಗಳ ಪೈಕಿ 1,17,287,80 ಕೋಟಿ ರು. ಉತ್ಪಾದಕತೆ ಆಯವ್ಯಯ ಮತ್ತು 1,28,919.13 ಕೋಟಿ ರು. ಅನುತ್ಪಾದಕ ವೆಚ್ಚ ಎಂದು ಸರ್ಕಾರವು ಲೆಕ್ಕ ಹಾಕಿದೆ. ಉತ್ಪಾದಕತೆಯು ಶೇ. 48ರಷ್ಟಿದ್ದರೆ ಅನುತ್ಪಾದಕ ವೆಚ್ಚವು ಶೇ.52ರಷ್ಟಿದೆ ಎಂಬುದು ಮುಖ್ಯ ಕಾರ್ಯದರ್ಶಿಗಳು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

‘ಕನಿಷ್ಠ ಶೇ.5ರಷ್ಟು ಅನುತ್ಪಾದಕ ವೆಚ್ಚಗಳನ್ನು ಕಡಿಮೆಗೊಳಿಸಲು ಕ್ರಮ ಜರುಗಿಸಬೇಕು. ಒಂದೇ ಉದ್ದೇಶವಿರುವ ರಾಜ್ಯ ಸರ್ಕಾರದ ಯೋಜನೆಗಳನ್ನು ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ಸಮೀಕರಣವನ್ನು ಮಾಡಿದರೆ ನಿರ್ವಹಣೆ ವೆಚ್ಚಗಳನ್ನು ಹಾಗೂ ಸಿಬ್ಬಂದಿಗಳ ಸಂಖ್ಯೆಯನ್ನು ಆದಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದಾಗಿದೆ,’ ಎಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಸೂಚಿಸಿದ್ದಾರೆ.

ಹೊರಗುತ್ತಿಗೆ, ದಿನಗೂಲಿ ವೇತನ 5157783.58 ಲಕ್ಷ ರು., (ಶೇ.20.95) ಪಿಂಚಣಿ ಮತ್ತು ನಿವೃತ್ತಿ ಭತ್ಯೆ 2421183.74 ಲಕ್ಷ ರು.(ಶೇ.9.83) ಆಡಳಿತಾತ್ಮಕ ವೆಚ್ಚ 229568.65 ಲಕ್ಷ (ಶೇ.0.93), ನಿರ್ವಹಣಾ ವೆಚ್ಚ 404877.12 ಲಕ್ಷ (ಶೇ.1.64), ಸಾಲ ಸೇವೆ 4959949.00 ಲಕ್ಷ (ಶೇ. 20.15), ಆಂತರಿಕ ಖಾತೆಗಳ ವರ್ಗಾವಣೆ 28149.48 ಲಕ್ಷ (ಶೇ.-1.14) ರು.ಅನುತ್ಪಾದಕ ವೆಚ್ಚವೆಂದು ಸರ್ಕಾರವು ಗುರುತಿಸಿರುವುದು ಮುಖ್ಯ ಕಾರ್ಯದರ್ಶಿಗಳ ಪತ್ರದಿಂದ ಗೊತ್ತಾಗಿದೆ.

ಅನುತ್ಪಾದಕ ವೆಚ್ಚಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಮಾನಾಂತರ ಉದ್ದೇಶವಿರುವ ರಾಜ್ಯ ವಲಯ ಯೋಜನೆಗಳನ್ನು ಕೇಂದ್ರದ ಪುರಸ್ಕೃತ ಯೋಜನೆಗಳಿಗೆ ಸಮೀಕರಿಸಿದಲ್ಲಿ ರಾಜ್ಯದ ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಅದೇ ರೀತಿ ವಿದ್ಯಾರ್ಥಿವೇತನ ಇನ್ನಿತರೆ ಸೌಲಭ್ಯ 91732.65 ಲಕ್ಷ (ಶೇ.20.95), ಸಬ್ಸಿಡಿ (1571377.22 ಲಕ್ಷ (ಶೆ.6.38), ಇನ್ನಿತರೆ ಯೋಜನಾ ವೆಚ್ಚ 10065670.00 ಲಕ್ಷ ರು. (ಶೇ.40.88) ಸೇರಿದಂತೆ ಒಟ್ಟು 1, 17, 287.80 ಕೋಟಿ ರು. ಉತ್ಪಾದಕ ವೆಚ್ಚವೆಂದು ಸರ್ಕಾರ ಹೇಳಿದೆ.

SUPPORT THE FILE

Latest News

Related Posts