ಬೆಂಗಳೂರು; ರಾಜ್ಯದಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಆಯುಷ್ಮಾನ್ ಭಾರತ್ (ಎಬಿ) ಯೋಜನೆಯಡಿ ಕ್ಲೈಮ್ ಮಾಡಿರುವ 2,34,247 ಪ್ರಕರಣಗಳ ಪೈಕಿ ಕೇವಲ 14,371 ಮಂದಿಯಷ್ಟೇ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಒಟ್ಟು ಕ್ಲೈಮ್‌ಗಳ ಪೈಕಿ ಸಾವಿನ ಪ್ರಮಾಣ ಶೇಕಡವಾರು 6ರಷ್ಟಿದೆ. ಅದೇ ರೀತಿ ಕೋವಿಡ್ ಬುಲೆಟಿನ್‌ನಲ್ಲಿ (2021ರ ಆಗಸ್ಟ್ 2) ನಮೂದಿಸಿರುವ ಸಾವಿನ ಸಂಖ್ಯೆ ಮತ್ತು ಡೆತ್ ಆಡಿಟ್‌ನಲ್ಲಿ ಒದಗಿಸಿರುವ ಸಾವಿನ ಸಂಖ್ಯೆ ನಡುವೆ 1,471ಯಷ್ಟೇ ಅಂತರವಿದೆ.
ರಾಜ್ಯದಲ್ಲಾದ ಕೋವಿಡ್ ಸಾವಿನ ಬಗ್ಗೆ ನಿಖರವಾದ ಮಾಹಿತಿ (ಡೆತ್ ಆಡಿಟ್) ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿರುವ ವರದಿಯಿಂದ ಈ ಮಾಹಿತಿ ತಿಳಿದು ಬಂದಿದೆ. ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
2021ರ ಜುಲೈ 31ರ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 35,141 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಕೋವಿಡ್ ಬುಲೆಟಿನ್ ಪ್ರಕಾರ 2021ರ ಆಗಸ್ಟ್ 2ರ ಅಂತ್ಯಕ್ಕೆ 36,612 ಕೋವಿಡ್ ಸಾವು ಸಂಭವಿಸಿದೆ ಎಂದು ಡೆತ್ ಆಡಿಟ್‌ನಲ್ಲಿ ಮಾಹಿತಿ ಒದಗಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಡೆತ್ ಆಡಿಟ್‌ನಲ್ಲಿ ನಮೂದಿಸಿರುವ ಕೋವಿಡ್ ಸಾವಿನ ಸಂಖ್ಯೆಗೂ ಮತ್ತು ಇದೇ ವರದಿಯಲ್ಲಿ ಕೋವಿಡ್ ಬುಲೆಟಿನ್‌ನಲ್ಲಿ ನಮೂದಿಸಿರುವ ಸಾವಿನ ಸಂಖ್ಯೆ ನಡುವೆ ಕೇವಲ 1,471 ವ್ಯತ್ಯಾಸವಿರುವುದು ಕಂಡು ಬಂದಿದೆ. ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸಾವು ಸಂಭವಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಹೊತ್ತಿನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡೆತ್ ಆಡಿಟ್‌ನಲ್ಲಿ ಒದಗಿಸಿರುವ ಮಾಹಿತಿಯು ನೈಜತೆಯಿಂದ ಕೂಡಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.
ಆಯುಷ್ಮಾನ್ ಭಾರತ್ ಯೋಜನೆ ಅಡಿ ದಾಖಲಾಗಿ ಸಾವನ್ನಪ್ಪಿರುವ ಕೋವಿಡ್ ರೋಗಿಗಳ ಸಂಖ್ಯೆಯೂ ಸೇರಿದಂತೆ ಒಟ್ಟಾರೆ ಕೋವಿಡ್ ಸಾವಿನ ಬಗ್ಗೆ ಇಲಾಖೆ ಒದಗಿಸಿರುವ ನಿಖರವಾದ ಮಾಹಿತಿ (ಡೆತ್ ಆಡಿಟ್)ಯಲ್ಲಿ ಕೋವಿಡ್ ಸಾವುಗಳ ಲೆಕ್ಕವನ್ನು ಕಡಿಮೆ ತೋರಿಸಲಾಗಿದೆ ಎಂಬ ಅನುಮಾನಗಳಿಗೆ ಮತ್ತಷ್ಟು ಪುಷ್ಠೀಕರಿಸಿದಂತಿದೆ.
ಕೋವಿಡ್ ಮೊದಲ ಅಲೆ (2020ರ ಜುಲೈನಿಂದ 2021ರ ಜುಲೈವರೆಗೆ)ಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಒಟ್ಟು 1,32,409 ಕ್ಲೈಮ್ ಮಾಡಲಾಗಿದ್ದರೆ ಈ ಪೈಕಿ 5,220 ಮಾತ್ರ (ಶೇ.4ರಷ್ಟು) ಮತ್ತು ಕೋವಿಡ್ ಎರಡನೇ ಅಲೆಯಲ್ಲಿ ವರದಿ ಸಲ್ಲಿಸಿರುವ ದಿನಾಂಕದವರೆಗೆ (2021ರ ಆಗಸ್ಟ್ 17) 1,01,938 ಕ್ಲೈಮ್‌ಗಳ ಪೈಕಿ 9,151 ಸೇರಿದಂತೆ ಒಟ್ಟು 14,371 ಮಂದಿ ಮಾತ್ರ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮಾಹಿತಿ ಒದಗಿಸಿರುವುದು ವರದಿಯಿಂದ ಗೊತ್ತಾಗಿದೆ.
ಕೋವಿಡ್ ಸಾವಿನ ಬಗ್ಗೆ ನಿಖರವಾದ ಮಾಹಿತಿ (ಡೆತ್ ಆಡಿಟ್) ಪ್ರಕಾರ 2021ರ ಜುಲೈ 31ಕ್ಕೆ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 35,141 ಸಾವು ಸಂಭವಿಸಿದೆ. ಅಲ್ಲದೇ ಇದೇ ವರದಿಯಲ್ಲಿ 2021ರ ಆಗಸ್ಟ್ 2ರ ಅಂತ್ಯಕ್ಕೆ ಒಟ್ಟು ಕೋವಿಡ್ ಬುಲೆಟಿನ್ ಪ್ರಕಾರ ಸಾವುಗಳ ಸಂಖ್ಯೆ 36,612 ಎಂದು ನಮೂದಿಸಿದೆ. ಇವೆರಡರ ಮಧ್ಯೆ 1,471 ವ್ಯತ್ಯಾಸವಿರುವುದು ವರದಿಯಿಂದ ತಿಳಿದು ಬಂದಿದೆ.
ಡೆತ್ ಆಡಿಟ್‌ನಲ್ಲಿ ನಮೂದಿಸಿರುವ ಕೋವಿಡ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 2021ರ ಆಗಸ್ಟ್ 2ರ ಅಂತ್ಯಕ್ಕೆ 15,885 ಸಾವಿನ ಸಂಖ್ಯೆ ಇದ್ದರೆ 2021ರ ಜುಲೈ 31ರ ಅಂತ್ಯದ ಡೆತ್ ಆಡಿಟ್ ಪ್ರಕಾರ 15,809 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯು ದಾಖಲಿಸಿದೆ.
ಅದೇ ರೀತಿ ಡೆತ್ ಆಡಿಟ್ ಪ್ರಕಾರ ಮೈಸೂರಿನಲ್ಲಿ 2,078, ದಕ್ಷಿಣ ಕನ್ನಡದಲ್ಲಿ 1,341, ಹಾಸನದಲ್ಲಿ 1,127, ತುಮಕೂರಿನಲ್ಲಿ 1,072, ಧಾರವಾಡದಲ್ಲಿ 1,262, ಶಿವಮೊಗ್ಗದಲ್ಲಿ 1,041 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇನ್ನುಳಿದ ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ಸಂಖ್ಯೆ ಮೂರಂಕಿ ದಾಟಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೋವಿಡ್ ಸಾವುಗಳ ಲೆಕ್ಕವನ್ನು ಕಡಿಮೆ ತೋರಿಸಲಾಗುತ್ತಿದೆ ಎಂದು ಹಲವು ಅಧ್ಯಯನ ಸಂಸ್ಥೆಗಳು ವರದಿ ಪ್ರಕಟಿಸುತ್ತಲೇ ಬಂದಿವೆ. ಕೋವಿಡ್ ಎರಡನೇ ಅಲೆಯಲ್ಲಿ ಇಡೀ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದೂ ವರದಿಗಳು ಹೇಳಿದ್ದವು.
ಆದರೆ ಇವುಗಳನ್ನು ಕೋವಿಡ್ ಸಾವು ನೋಂದಣಿ ಮಾರ್ಗಸೂಚಿಯ ಅನ್ವಯ ನೋಂದಣಿ ಮಾಡದೇ ಇರುವ ಕಾರಣ ಎಲ್ಲಾ ಕೋವಿಡ್ ಸಾವುಗಳು ಲೆಕ್ಕಕ್ಕೇ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಜಿಲ್ಲಾಡಳಿತಗಳು ನೀಡುತ್ತಿರುವ ಸಾವಿನ ಲೆಕ್ಕಕ್ಕೂ, ಚಿತಾಗಾರ ಮತ್ತು ಸ್ಮಶಾನಗಳಲ್ಲಿ ನಡೆದ ಅಂತ್ಯಕ್ರಿಯೆಗಳ ಸಂಖ್ಯೆಗೂ ಭಾರಿ ಅಂತರವಿದೆ ಎಂಬ ಮಾತುಗಳು ಕೇಳಿ ಬಂದಿತ್ತು.