ಸಾವಿನ ಲೆಕ್ಕ; ಅಂಕಿ ಅಂಶದ ತಪ್ಪನ್ನು ತಿದ್ದಿಕೊಂಡ ಪ್ರಜಾವಾಣಿ

ಬೆಂಗಳೂರು; ಕಳೆದ 2 ವರ್ಷದಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಸಾವಿನ ಲೆಕ್ಕಕ್ಕೆ ಸಂಬಂಧಿಸಿದಂತೆ 2021ರ ಜನವರಿಯಿಂದ ಜುಲೈವರೆಗೆ 65,530 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿ ಪ್ರಕಟಿಸಿದ್ದ ಪ್ರಜಾವಾಣಿ ಪತ್ರಿಕೆಯು ಅಂಕಿ ಅಂಶದ ತಪ್ಪನ್ನು ತಿದ್ದಿಕೊಂಡಿದೆ.

ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ದಾಖಲೆಯನ್ನಾಧರಿಸಿ ಪ್ರಜಾವಾಣಿ ಪತ್ರಿಕೆ 2021ರ ಆಗಸ್ಟ್‌ 26ರಂದು ಪ್ರಕಟಿಸಿದ್ದ ವರದಿಯಲ್ಲಿ 2021ರ ಜುಲೈವರೆಗೆ 65,530 ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ರಕಟಿಸಿತ್ತು. ಆದರೆ ವಾಸ್ತವದಲ್ಲಿ 4.26 ಲಕ್ಷ ಮಂದಿ ಸಾವಿಗೀಡಾಗಿದ್ದರು.

ಈ ಕುರಿತು ‘ದಿ ಫೈಲ್‌’ ನಿಖರ ಅಂಕಿ ಅಂಶವನ್ನು ಪ್ರಕಟಿಸಿತ್ತಲ್ಲದೆ 2021ರ ಜನವರಿಯಿಂದ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 4.26 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ವಾಸ್ತವ ಅಂಕಿ ಅಂಶಗಳ ವರದಿ ಪ್ರಕಟಿಸಿತ್ತು.

ಜುಲೈ 2021ರ ವರೆಗೆ ರಾಜ್ಯದಲ್ಲಿ ಸಾವಿಗೀಡಾಗಿದ್ದು 65 ಸಾವಿರವಲ್ಲ, 4.26 ಲಕ್ಷ

ಇದೀಗ ಪ್ರಜಾವಾಣಿಯು ಸಾವಿನ ಲೆಕ್ಕಕ್ಕೆ ಸಂಬಂಧಿಸಿದಂತೆ 2021ರ ಆಗಸ್ಟ್‌ 27ರಂದು ಮತ್ತೊಂದು ವರದಿಯನ್ನು (ಪುಟ ಸಂಖ್ಯೆ 6) ಪ್ರಕಟಿಸಿದೆ. ಇದರಲ್ಲಿ 2021ರ ಜನವರಿಯಿಂದ ಜುಲೈ ಅಂತ್ಯದವರೆಗೆ 4.26 ಲಕ್ಷ ಮಂದಿ ಮರಣ ಹೊಂದಿದ್ದಾರೆ ಎಂದು ವರದಿ ಪ್ರಕಟಿಸುವ ಮೂಲಕ ತಪ್ಪನ್ನು ತಿದ್ದಿಕೊಂಡಿದೆ.

ಹಾಗೆಯೇ ಸಾವಿನ ಸರಾಸರಿ ಪ್ರಮಾಣದಲ್ಲಿ ಆಗಿರುವ ಏರಿಕೆ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನು ಇನ್ನಷ್ಟು ವಿಸ್ತರಿಸಿದೆ. ಕೋವಿಡ್‌ ಪೂರ್ವದಲ್ಲಿ ತಿಂಗಳಿಗೆ ಸರಾಸರಿ ಸಾವಿನ ಸಂಖ್ಯೆ ಅಂದಾಜು 40,000 ಇತ್ತು. ಕಳೆದ 2 ವರ್ಷದಲ್ಲಿ ಸರಾಸರಿ ಸಾವಿನ ಸಂಖ್ಯೆ 70,000ಕ್ಕೆ ಏರಿದೆ ಎಂದು ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನೂ ಪ್ರಜಾವಾಣಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕೋವಿಡ್‌ ಪೂರ್ವಕ್ಕೂ ಮತ್ತು ಕೋವಿಡ್‌ ವರ್ಷದಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆಯು 30,000ದಷ್ಟು ಹೆಚ್ಚಳವಾಗಿದೆ. ಈ ಮೂವತ್ತು ಸಾವಿರ ಮಂದಿ ಕೋವಿಡ್‌ನಿಂದಲೇ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ ಒಟ್ಟು 70,528 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಮೇ ಮತ್ತು ಜೂನ್‌ ತಿಂಗಳಲ್ಲಿ ಒಟ್ಟು 33,270 ಮಂದಿ ಸಾವಿಗೀಡಾಗಿದ್ದಾರೆ. ಕೋವಿಡ್‌ ಬುಲೆಟಿನ್ ಪ್ರಕಾರ ಮೇ 31ರ ಅಂತ್ಯಕ್ಕೆ ಒಟ್ಟು 13,346 ಮಂದಿ, ಜೂನ್‌ ಅಂತ್ಯಕ್ಕೆ 15,626 ಮಂದಿ ಸೇರಿದಂತೆ ಒಟ್ಟು 28,927 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದರು. 2018ರ ಜನವರಿಯಿಂದ 2020 ಡಿಸೆಂಬರ್‌ವರೆಗೆ ಒಟ್ಟು 15,43,903 ಮತ್ತು 2018ರಿಂದ 2021ರ ಜುಲೈ ಅಂತ್ಯಕ್ಕೆ 19,70,846 ಮಂದಿ ಸಾವಿಗೀಡಾಗಿದ್ದರು.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 35,395, ಮೈಸೂರು ಜಿಲ್ಲೆಯಲ್ಲಿ 23,854, ತುಮಕೂರಿನಲ್ಲಿ 21,489 ವಿಜಯಪುರದಲ್ಲಿ 15,884, ಮಂಡ್ಯದಲ್ಲಿ 13,016, ದಾವಣಗೆರೆಯಲ್ಲಿ 13,337, ಬಾಗಲಕೋಟೆಯಲ್ಲಿ 13,126, ಶಿವಮೊಗ್ಗದಲ್ಲಿ 12,601, ಚಿತ್ರದುರ್ಗದಲ್ಲಿ 11,991, ಚಾಮರಾಜನಗರದಲ್ಲಿ 8,308, ಚಿಕ್ಕಬಳ್ಳಾಪುರದಲ್ಲಿ 8,036 ಮಂದಿ ಸಾವಿಗೀಡಾಗಿರುವುದು ಅಂಕಿ ಅಂಶದ ಮೂಲಕ ‘ದಿ ಫೈಲ್‌’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಕೋವಿಡ್‌ ಕಾರಣದಿಂದಾಗಿ ರಾಜ್ಯದಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್‌, ವಾರಾಂತ್ಯ ಕರ್ಫ್ಯೂದಿಂದಾಗಿ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಹೀಗಾಗಿ ಸಹಜವಾಗಿ ಅಪಘಾತಗಳ ಸಂಖ್ಯೆಯೂ ಕನಿಷ್ಠ ಮಟ್ಟಕ್ಕಿಳಿದಿತ್ತು. ಮೇ ಮತ್ತು ಜೂನ್‌ ತಿಂಗಳಲ್ಲಿ ಕೋವಿಡ್‌ನಿಂದ ಸಾವಿಗೀಡಾಗಿದ್ದವರ ಸಂಖ್ಯೆಯೂ ಅಧಿಕವಾಗಿತ್ತು.

ಈ ಅಂಶವನ್ನು ಪರಿಗಣಿಸಿದರೆ ಕಳೆದ 7 ತಿಂಗಳಲ್ಲಿ ಸಾವಿಗೀಡಾಗಿರುವ 4,26,943 ಮಂದಿ ಪೈಕಿ ಅರ್ಧದಷ್ಟು ಮಂದಿ ಕೋವಿಡ್‌ನಿಂದಲೇ ಸಾವಿಗೀಡಾಗಿದ್ದಾರೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಇದರ ಪ್ರಕಾರ ಕಳೆದ 7 ತಿಂಗಳಲ್ಲಿ ಸಾವಿಗೀಡಾಗಿರುವ 4.26 ಲಕ್ಷ ಮಂದಿಯಲ್ಲಿ ಅರ್ಧದಷ್ಟು ಎಂದರೆ 2.13 ಲಕ್ಷ ಮಂದಿ ಕೋವಿಡ್‌ನಿಂದ ಸಾವಿಗೀಡಾಗಿರುಬಹುದು ಎಂದು ಹೇಳಲಾಗುತ್ತಿದೆ.

ಕೋವಿಡ್‌ ಪೂರ್ವದಲ್ಲಿ ತಿಂಗಳಿಗೆ ಸರಾಸರಿ ಸಾವಿನ ಸಂಖ್ಯೆ ಅಂದಾಜು 40,000 ಇತ್ತು. ಕಳೆದ 2 ವರ್ಷದಲ್ಲಿ ಸರಾಸರಿ ಸಾವಿನ ಸಂಖ್ಯೆ 70,000ಕ್ಕೆ ಏರಿದೆ. ಅಂದರೆ ಕೋವಿಡ್‌ ಪೂರ್ವಕ್ಕೂ ಮತ್ತು ಕೋವಿಡ್‌ ವರ್ಷದಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆಯು 30,000ದಷ್ಟು ಹೆಚ್ಚಳವಾಗಿದೆ. ಈ ಮೂವತ್ತು ಸಾವಿರ ಮಂದಿ ಕೋವಿಡ್‌ನಿಂದಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ ಆಯುಷ್ಮಾನ್‌ ಭಾರತ್‌ (ಎಬಿ) ಯೋಜನೆಯಡಿ ಕ್ಲೈಮ್‌ ಮಾಡಿರುವ 2,34,247 ಪ್ರಕರಣಗಳ ಪೈಕಿ ಕೇವಲ 14,371 ಮಂದಿಯಷ್ಟೇ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿತ್ತು. ಒಟ್ಟು ಕ್ಲೈಮ್‌ಗಳ ಪೈಕಿ ಸಾವಿನ ಪ್ರಮಾಣ ಶೇಕಡವಾರು 6ರಷ್ಟಿತ್ತು. ಅದೇ ರೀತಿ ಕೋವಿಡ್‌ ಬುಲೆಟಿನ್‌ನಲ್ಲಿ (2021ರ ಆಗಸ್ಟ್‌ 2) ನಮೂದಿಸಿರುವ ಅಂಕಿ ಸಂಖ್ಯೆಗೂ ಡೆತ್‌ ಆಡಿಟ್‌ನಲ್ಲಿ ಒದಗಿಸಿರುವ ಸಾವಿನ ಸಂಖ್ಯೆ ನಡುವೆ 1,471ಯಷ್ಟೇ ವ್ಯತ್ಯಾಸವಿತ್ತು.

ಕೋವಿಡ್‌ ಮೊದಲ ಅಲೆ (2020ರ ಜುಲೈನಿಂದ 2021ರ ಜುಲೈವರೆಗೆ)ಯಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಒಟ್ಟು 1,32,409 ಕ್ಲೈಮ್‌ ಮಾಡಲಾಗಿದ್ದರೆ ಈ ಪೈಕಿ 5,220 ಮಾತ್ರ (ಶೇ.4ರಷ್ಟು) ಮತ್ತು ಕೋವಿಡ್‌ ಎರಡನೇ ಅಲೆಯಲ್ಲಿ ವರದಿ ಸಲ್ಲಿಸಿರುವ ದಿನಾಂಕದವರೆಗೆ (2021ರ ಆಗಸ್ಟ್‌ 17) 1,01,938 ಕ್ಲೈಮ್‌ಗಳ ಪೈಕಿ 9,151 ಸೇರಿದಂತೆ ಒಟ್ಟು 14,371 ಮಂದಿ ಮಾತ್ರ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮಾಹಿತಿ ಒದಗಿಸಿರುವುದು ವರದಿಯಿಂದ ಗೊತ್ತಾಗಿತ್ತು.

ಡೆತ್‌ ಆಡಿಟ್‌ ಸಲ್ಲಿಕೆ; 2.34 ಲಕ್ಷ ಮಂದಿಯಲ್ಲಿ 14,371 ಮಾತ್ರ ಕೋವಿಡ್‌ ಸಾವು

ಕೋವಿಡ್‌ ಸಾವಿನ ಬಗ್ಗೆ ನಿಖರವಾದ ಮಾಹಿತಿ (ಡೆತ್‌ ಆಡಿಟ್‌) ಪ್ರಕಾರ 2021ರ ಜುಲೈ 31ಕ್ಕೆ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 35,141 ಸಾವು ಸಂಭವಿಸಿದೆ. ಅಲ್ಲದೇ ಇದೇ ವರದಿಯಲ್ಲಿ 2021ರ ಆಗಸ್ಟ್‌ 2ರ ಅಂತ್ಯಕ್ಕೆ ಒಟ್ಟು ಕೋವಿಡ್‌ ಬುಲೆಟಿನ್‌ ಪ್ರಕಾರ ಸಾವುಗಳ ಸಂಖ್ಯೆ 36,612 ಎಂದು ನಮೂದಿಸಿದೆ. ಇವೆರಡರ ಮಧ್ಯೆ 1,471 ವ್ಯತ್ಯಾಸವಿರುವುದು ವರದಿಯಿಂದ ತಿಳಿದು ಬಂದಿತ್ತು.

ಡೆತ್‌ ಆಡಿಟ್‌ನಲ್ಲಿ ನಮೂದಿಸಿರುವ ಕೋವಿಡ್‌ ಬುಲೆಟಿನ್ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 2021ರ ಆಗಸ್ಟ್‌ 2ರ ಅಂತ್ಯಕ್ಕೆ 15,885 ಸಾವಿನ ಸಂಖ್ಯೆ ಇದ್ದರೆ 2021ರ ಜುಲೈ 31ರ ಅಂತ್ಯದ ಡೆತ್‌ ಆಡಿಟ್‌ ಪ್ರಕಾರ 15,809 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯು ದಾಖಲಿಸಿತ್ತು.

ಅದೇ ರೀತಿ ಡೆತ್‌ ಆಡಿಟ್‌ ಪ್ರಕಾರ ಮೈಸೂರಿನಲ್ಲಿ 2,078, ದಕ್ಷಿಣ ಕನ್ನಡದಲ್ಲಿ 1,341, ಹಾಸನದಲ್ಲಿ 1,127, ತುಮಕೂರಿನಲ್ಲಿ 1,072, ಧಾರವಾಡದಲ್ಲಿ 1,262, ಶಿವಮೊಗ್ಗದಲ್ಲಿ 1,041 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇನ್ನುಳಿದ ಜಿಲ್ಲೆಗಳಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಮೂರಂಕಿ ದಾಟಿರಲಿಲ್ಲ ಎಂಬುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts