ಸಕ್ಕರೆ ಕಾರ್ಖಾನೆ ಖಾಸಗಿ ಗುತ್ತಿಗೆಗೆ ಹೊಸ ಟೆಂಡರ್‌ಗೆ ಆದೇಶ; ಸಚಿವ ನಿರಾಣಿಗೆ ಮುಖಭಂಗ

ಬೆಂಗಳೂರು; ನಲವತ್ತು ವರ್ಷಗಳ ಅವಧಿಗೆ ಎಲ್‌ಆರ್‌ಒಟಿ ಆಧಾರದ ಮೇಲೆ ಬಾಗಲಕೋಟೆ ಜಿಲ್ಲೆಯ ಮುಧೋಳದ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಸಾಲ ಮತ್ತು ಜವಾಬ್ದಾರಿಗಳನ್ನು ತೀರುವಳಿ ಮಾಡಲು ನಿರಾಣಿ ಷುಗರ್ಸ್‌ಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣವನ್ನೊಡ್ಡಿ 2020ರಲ್ಲಿ ಕರೆದಿದ್ದ ಟೆಂಡರ್‌ನ್ನು ಬಿಜೆಪಿ ಸರ್ಕಾರವು ರದ್ದುಗೊಳಿಸಿದೆ.

ಶತಾಯಗತಾಯ ಮುಧೋಳದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಯತ್ನಿಸಿದ್ದರು. ಗುತ್ತಿಗೆ ನೀಡುವ ಪ್ರಕ್ರಿಯೆಯ ಟೆಂಡರ್‌ನ್ನು ರದ್ದುಗೊಳಿಸಿ ಸರ್ಕಾರವು ಹೊಸದಾಗಿ ಟೆಂಡರ್‌ ಕರೆಯಲು ಸರ್ಕಾರವು 2021ರ ಆಗಸ್ಟ್‌ 24ರಂದು ಹೊರಡಿಸಿರುವ ಆದೇಶದಿಂದಾಗಿ ನಿರಾಣಿ ಅವರಿಗೆ ಭಾರೀ ಮುಖಭಂಗವಾದಂತಾಗಿದೆ. ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಈ ಕಾರ್ಖಾನೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದ್ದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಒಡೆತನದಲ್ಲಿರುವ ನಿರಾಣಿ ಷುಗರ್ಸ್‌ ಮುಂದಾಗಿತ್ತು. ಅಲ್ಲದೆ ಟೆಂಡರ್‌ನಲ್ಲಿ ಭಾಗವಹಿಸಿದ್ದ ನಿರಾಣಿ ಷುಗರ್ಸ್‌ ಕಂಪನಿಯು ಏಕವ್ಯಕ್ತಿ ಬಿಡ್‌ದಾರನಾಗಿ ಹೊರಹೊಮ್ಮಿತ್ತು. ಇದಕ್ಕೂ ಮುನ್ನ ಸರ್ಕಾರವು ಪ್ರಭುಲಿಂಗೇಶ್ವರ ಷುಗರ್ಸ್‌ ಲಿಮಿಟೆಡ್‌ ಮತ್ತು ಗೋದಾವರಿ ಷುಗರ್ಸ್ ಲಿಮಿಟೆಡ್‌ನೊಂದಿಗೆ ಪ್ರಿ-ಬಿಡ್‌ ಸಭೆ ನಡೆಸಿತ್ತು.

315 ಕೋಟಿ ನಮೂದಿಸಿದ್ದ ನಿರಾಣಿ ಷುಗರ್ಸ್‌

ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಎಲ್‌ಆರ್‌ಒಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂಬಂಧ 2020ರ ನವೆಂಬರ್‌ 2ರಂದು ಟೆಂಡರ್‌ ಕರೆದಿತ್ತು. ಇದರಲ್ಲಿ ಭಾಗವಹಿಸಿದ್ದ ನಿರಾಣಿ ಷುಗರ್ಸ್‌ ಒಟ್ಟು 315 ಕೋಟಿ ರು.ಗಳನ್ನು ನಮೂದಿಸಿತ್ತು. ಹಾಗೂ ಇದರ ಎನ್‌ಪಿವಿ 82.70 ಕೋಟಿಗಳಷ್ಟಿತ್ತು. ನಿರಾಣಿ ಷುಗರ್ಸ್‌ ಲಿಮಿಟೆಡ್‌ನ ಆರ್ಥಿಕ ಬಿಡ್‌ನ್ನು ಅನುಮೋದಿಸಲು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ನಿರಾಣಿ ಷುಗರ್ಸ್‌ ಜತೆ ದರ ಸಂಧಾನ ಸಭೆಯನ್ನೂ ನಡೆಸಿದ್ದರು.

ಸಕ್ಕರೆ ಕಾರ್ಖಾನೆಗೆ ಬೇಕಿದ್ದದ್ದು 489.79 ಕೋಟಿ

2020ರ ಡಿಸೆಂಬರ್‌ 15ರಂದು ನಿರಾಣಿ ಷುಗರ್ಸ್‌ ಜತೆ ದರ ಸಂಧಾನ ಸಭೆ ನಡೆಸಿತ್ತು. ಬಿಡ್‌ದಾರರಾಗಿದ್ದ ನಿರಾಣಿ ಷುಗರ್ಸ್‌ ಲಿಮಿಟೆಡ್‌ ಗುತ್ತಿಗೆ ಮೊತ್ತವನ್ನು ಪರಿಷ್ಕರಿಸಿತ್ತಲ್ಲದೇ 345 ಕೋಟಿ ರು. ಎಂದು ಸಭೆಯಲ್ಲಿ ನಮೂದಿಸಿತ್ತು. ಇದೇ ಸಭೆಯಲ್ಲಿ ಹಾಜರಿದ್ದ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಕಾರ್ಖಾನೆಯ ಸಾಲ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಲು 489.79 ಕೋಟಿ ರು. ಅಗತ್ಯವಿದೆ ಎಂದು ಹೇಳಿದ್ದರು.

‘ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ 345 ಕೋಟಿಗಳ ಗುತ್ತಿಗೆ ಮೊತ್ತದಿಂದ ಕಾರ್ಖಾನೆಯ ಸಾಲ ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಬಗ್ಗೆ ಹಾಗೂ ಗುತ್ತಿಗೆದಾರರು ಕೊನೆಯ ವರ್ಷಗಳಲ್ಲಿ ಹೆಚ್ಚಿನ ಗುತ್ತಿಗೆ ಮೊತ್ತವನ್ನು ಪಾವತಿಸುವುದು ಮತ್ತು ಮೊದಲಿನ 5-6 ವರ್ಷಗಳಲ್ಲಿ ಸಾಲ ಮತ್ತು ಜವಾಬ್ದಾರಿಗಳನ್ನು ತೀರುವಳಿ ಮಾಡುವ ಅಂಶಗಳು ಹೊಂದಾಣಿಕೆಯಾಗುವುದಿಲ್ಲ,’ ಎಂದು ಉಲ್ಲೇಖಿಸಲಾಗಿದೆ.

489.79 ಕೋಟಿಗೆ ಒಪ್ಪದ ನಿರಾಣಿ ಶುಗರ್ಸ್‌

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಕೋರಿದ್ದ 489.79 ಕೋಟಿ ರು.ಗಳ ಗುತ್ತಿಗೆ ಮೊತ್ತದ ಪ್ರಸ್ತಾವನೆಯನ್ನು ಬಿಡ್‌ದಾರ ನಿರಾಣಿ ಶುಗರ್ಸ್‌ ಒಪ್ಪಿರಲಿಲ್ಲ. ಹೀಗಾಗಿ ಹಣಕಾಸಿನ ಮತ್ತು ಕಾನೂನಿನ ತೊಡಕುಗಳನ್ನು ಬಿಡ್‌ದಾರರು ಅಂಗೀಕರಿಸುವರೇ ಎಂದು ಸ್ಪಷ್ಟಪಡಿಸಬೇಕು ಎಂದು ಆರ್ಥಿಕ ಇಲಾಖೆ ಅಭಿಪ್ರಾಯಿಸಿತ್ತು ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿದೆ.

ಇದಾದ ನಂತರ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ನಿರಾಣಿ ಶುಗರ್ಸ್‌ ಲಿಮಿಟೆಡ್‌ ಮತ್ತು ಮುಧೋಳದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ದರ ಸಂಧಾನ ಸಭೆ ನಡೆಸಿತ್ತು. ಈ ಸಭೆಯಲ್ಲಿ ಹಲವು ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು.

ಕಾರ್ಖಾನೆಯು ವಿವಿಧ ಬ್ಯಾಂಕ್‌ಗಳಿಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಾದ ಸಾಲವು ಅಸಲು ಮತ್ತು ಬಡ್ಡಿ ಸೇರಿ ಒಟ್ಟು 246.34 ಕೋಟಿ ಮತ್ತು ಇತರೆ ಜವಾಬ್ದಾರಿಗಳು 58.00 ಕೋಟಿ ರು. ಸೇರಿ ಒಟ್ಟು ಸಾಲ ಮತ್ತು ಜವಾಬ್ದಾರಿಗಳು 304.34 ಕೋಟಿ ರು.ನಷ್ಟಿತ್ತು. ಅಲ್ಲದೆ ಅಪೆಕ್ಸ್‌ ಬ್ಯಾಂಕ್‌, ಬಾಗಲಕೋಟೆ ಡಿಸಿಸಿ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಾಲ ವಸೂಲಾತಿಗಾಗಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂಬ ಅಂಶವು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿತ್ತು.

ಗುತ್ತಿಗೆದಾರರು 10 ವರ್ಷಗಳಲ್ಲಿ 392.10 ಕೋಟಿ ರು.ಗಳನ್ನು ಅಥವಾ 15 ವರ್ಷಗಳಲ್ಲಿ 453.17 ಕೋಟಿ ರು.ಗಳನ್ನು ಅಥವಾ 20 ವರ್ಷಗಳಲ್ಲಿ 450.60 ಕೋಟಿ ಗುತ್ತಿಗೆ ಮೊತ್ತವನ್ನು ಪಾವತಿಸಿದ್ದಲ್ಲಿ ಕಾರ್ಖಾನೆಯ ಸಾಲ ಮತ್ತು ಜವಾಬ್ದಾರಿಗಳನ್ನು ತೀರುವಳಿ ಮಾಡಲು ಸಾಧ್ಯವಾಗಲಿದೆ ಎಂದು ದರ ಸಂಧಾನ ಸಭೆಯಲ್ಲಿ ಪ್ರಸ್ತಾಪವಾಗಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.

ಅಲ್ಲದೆ ಕಾರ್ಪೋರೇಟ್‌ ಗ್ಯಾರಂಟಿಯ ಮೇಲೆ ಕಬ್ಬು ಕಟಾವು, ಕಬ್ಬು ಸಾಗಾಣಿಕೆ ಮತ್ತು ಬೆಳೆ ಸಾಲಕ್ಕಾಗಿ 62.00 ಕೋಟಿಯನ್ನು ರೈತರು ಮತ್ತು ಕಾರ್ಮಿಕರ ಹೆಸರಿನಲ್ಲಿ ಕಾರ್ಖಾನೆಯು ಬ್ಯಾಂಕ್‌ ಆಫ್‌ ಇಂಡಿಯಾದ ಮುಧೋಳ ಶಾಖೆಯಿಂದ ಸಾಲ ಪಡೆದಿತ್ತು. ಆದರೆ ಈ ಸಾಲವು ಸುಸ್ತಿಬಾಕಿಯಾಗಿತ್ತು. ಸರ್ಕಾರಿ ಸೌಲಭ್ಯಗಳ ಮೊತ್ತವು ರೈತರ ಖಾತೆಗೆ ಜಮೆಯಾದಲ್ಲಿ ಮೊತ್ತವನ್ನು ರೈತರಿಗೆ ಪಾವತಿಯಾಗದ ಕಾರಣ ರೈತರು ಹಣಕಾಸಿನ ತೊಂದರೆ ಅನುಭವಿಸಿದ್ದರು ಎಂಬ ಸಂಗತಿಯು ತಿಳಿದು ಬಂದಿದೆ.

‘2021-22ನೇ ಸಾಲಿನಲ್ಲಿ ಕಬ್ಬು ನುರಿಸುವಿಕೆಯನ್ನು ಪ್ರಾರಂಭಿಸುವುದು ಅನಿವಾರ್ಯವಾಗಿರುವುದರಿಂದ ಮರು ಟೆಂಡರ್‌ ಪ್ರಕ್ರಿಯೆ ನಡೆಸಲು ಅನುಮತಿ ನೀಡಬೇಕು’ ಎಂದು ಇದೇ ದರ ಸಂಧಾನ ಸಭೆಯು ಸರ್ವಾನುಮತದಿಂದ ನಿರ್ಣಯಿಸಿತ್ತು. ಈ ಹಿನ್ನೆಲೆಯಲ್ಲಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರಿಗೆ ಮರು ಟೆಂಡರ್‌ ಕರೆಯಬೇಕು ಎಂದು 2021ರ ಆಗಸ್ಟ್‌ 7ರಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ರೈತರ ಬಾಕಿ ಹಣ ಪಾವತಿಸಲಾಗದಂತಹ ಸ್ಥಿತಿಗೆ ತಲುಪಿರುವ ಕಾರ್ಖಾನೆಯು ಎಲ್ಲಿ ಭವಿಷ್ಯದಲ್ಲಿ ಖಾಸಗಿಯವರ ಪಾಲಾಗಲಿದೆ ಎನ್ನುವ ಆತಂಕ ಕಬ್ಬು ಬೆಳೆಗಾರರಲ್ಲಿ ಮನೆ ಮಾಡಿದೆ. ಕಳೆದ 15 ವರ್ಷಗಳಿಂದಲೂ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಸಚಿವ ಗೋವಿಂದ ಕಾರಜೋಳರ ಬೆಂಬಲಿಗರ ಕಪಿಮುಷ್ಟಿಯಲ್ಲಿಯೇ ಇರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts