ಹರ್ಷ ಷುಗರ್ಸ್‌ ಕರಾಮತ್ತು; ಹಳೇ ಸಾಲಕ್ಕೆ ಹೊಂದಾಣಿಕೆಯಾಯಿತು ಹೊಸ ಸಾಲದ 50 ಕೋಟಿ

ಬೆಂಗಳೂರು; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಷುಗರ್ಸ್‌ ಲಿಮಿಟೆಡ್‌ ಅಪೆಕ್ಸ್‌ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

ಅಪೆಕ್ಸ್‌ ಬ್ಯಾಂಕ್‌ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್‌ ಬ್ಯಾಂಕ್‌ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಹೊರಗೆಡವಿದ್ದಾರೆ.

2018-19ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧನೆ ವರದಿಯಲ್ಲಿ ಹರ್ಷ ಷುಗರ್ಸ್‌ ಲಿಮಿಟೆಡ್‌ಗೆ ಸಾಲ ಮಂಜೂರಾತಿಯಲ್ಲಿನ ನಿಯಮಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚಲಾಗಿದೆ. ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಪೆಕ್ಸ್ಸ್ ಬ್ಯಾಂಕ್‌ನಿಂದ ಹೆಚ್ಚುವರಿ ಸಾಲ ಮಂಜೂರು ಮಾಡಿಸಿಕೊಂಡಿರುವ ಹರ್ಷ ಷುಗರ್ಸ್ ಲಿಮಿಟೆಡ್‌, ಬಾಗಲಕೋಟೆ, ಬಿಜಾಪುರ, ದಕ್ಷಿಣ ಕನ್ನಡ, ಕೆನರಾ, ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಸೇರಿದಂತೆ ಇನ್ನಿತರೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರವನ್ನು ಪಡೆದಿರಲಿಲ್ಲ ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

ಅಪೆಕ್ಸ್‌ ಹೆಗಲಿಗೆ ಹೆಚ್ಚುವರಿ ಸಾಲದ ಹೊಣೆ

ಅಪೆಕ್ಸ್‌ ಬ್ಯಾಂಕ್‌ ಸೇರಿದಂತೆ ಸಮೂಹ ಬ್ಯಾಂಕ್‌ಗಳಿಂದಲೂ ಸಾಲ ಪಡೆದಿರುವ ಹರ್ಷ ಷುಗರ್ಸ್‌ ಲಿಮಿಟೆಡ್‌ 246.51 ಕೋಟಿ ರು.ಗಳನ್ನು ಹೊರಬಾಕಿ ಉಳಿಸಿಕೊಂಡಿತ್ತು. ಆದರೂ ಅಪೆಕ್ಸ್‌ ಬ್ಯಾಂಕ್‌ ಹೆಚ್ಚುವರಿ ಸಾಲವನ್ನು ಮಂಜೂರು ಮಾಡಿತ್ತು. ‘ಹೆಚ್ಚುವರಿ ಸಾಲ ಸೌಲಭ್ಯದ ಬಗ್ಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದಿರುವುದಿಲ್ಲ. ಸಾಲಗಾರ ಕಂಪನಿಗೆ ಬ್ಯಾಂಕು ಮಂಜೂರು ಮಾಡಿರುವ ಹೆಚ್ಚುವರಿ ಸಾಲ ಸೌಲಭ್ಯವನ್ನು ಸಮೂಹ ಬ್ಯಾಂಕ್‌ಗಳು ಒಪ್ಪದಿದ್ದಲ್ಲಿ ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್‌ ಬ್ಯಾಂಕ್‌ನದ್ದಾಗಿರುತ್ತದೆ. ಅಲ್ಲದೆ ಕಂಪನಿಯು ಒದಗಿಸಿರುವ ಭದ್ರತೆ ಮೇಲೂ ಪರಿಣಾಮ ಬೀರುತ್ತದೆ,’ ಎಂದು ಲೆಕ್ಕ ಪರಿಶೋಧಕರು ಎಚ್ಚರಿಸಿದ್ದಾರೆ.

ಸಾಲಗಾರ ಕಂಪನಿಯ ದುಡಿಯುವ ಬಂಡವಾಳ ಸಾಲ ಡ್ರಾ ಮಾಡುವ ಮೊದಲು ಮಂಜೂರಾತಿ ನಿಬಂಧನೆ ಪ್ರಕಾರ ಸಾಲಗಾರ ಕಂಪನಿಯು ಹಳೆ ಸಾಲದ ಎಲ್ಲಾ ಬಾಕಿಗಳನ್ನು ಸಮೂಹ ಬ್ಯಾಂಕ್‌ಗಳಿಗೆ ಮತ್ತು ಅಪೆಕ್ಸ್‌ ಬ್ಯಾಂಕ್‌ಗೆ 2018ರ ಜೂನ್‌ 30ರೊಳಗೆ ಪಾವತಿಸಬೇಕಿತ್ತು. ‘ಆದರೆ ದಾಖಲೆಗಳ ಪ್ರಕಾರ ಕಂಪನಿಯು ಹೊಸ ಸಾಲದಿಂದ ಬಂದ 50.00 ಕೋಟಿಯಲ್ಲಿ 30.81 ಕೋಟಿಗಳನ್ನು ಹಳೆ ಬಾಕಿಗಳಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಇದರಿಂದ ಯಾವ ಉದ್ದೇಶಕ್ಕೆ ಸಾಲ ಒದಗಿಸಲಾಗಿತ್ತೋ ಆ ಸಾಲದ ಉದ್ದೇಶಕ್ಕೆ ಉಪಯೋಗಿಸಿದಂತಾಗಿರುವುದಿಲ್ಲ,’ ಎಂದು ಲೆಕ್ಕಪರಿಶೋಧಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಇನ್ನು, ಈ ಕಂಪನಿಯ ದಾಸ್ತಾನು ತ:ಖ್ತೆಯಲ್ಲಿ ಹಲವು ನ್ಯೂನತಗೆಳನ್ನೂ ಲೆಕ್ಕಪರಿಶೋಧಕರು ಹೊರಗೆಡವಿದ್ದಾರೆ. 2019ರ ಮಾರ್ಚ್‌ 26ರ ಸಾಲಗಾರ ಕಂಪನಿಯ ಪತ್ರದ ಪ್ರಕಾರ 10.51 ಕೋಟಿ ಮೌಲ್ಯದ 32,312 ಕ್ವಿಂಟಾಲ್‌ ಸಕ್ಕರೆಯು ಅಡಮಾನವಾಗಿರಿಸಿರಲಿಲ್ಲ. ಆದರೆ ಇದೇ ದಿನಾಂಕದ ಇನ್ನೊಂದು ಪತ್ರದ ಪ್ರಕಾರ ಅಡಮಾನವಾಗಿಲ್ಲದ 34.00 ಕೋಟಿ ಮೌಲ್ಯದ 109630 ಕ್ವಿಂಟಾಲ್‌ ಸಕ್ಕರೆ ದಾಸ್ತಾನು ಇತ್ತು.

ಅಲ್ಲದೆ 2019ರ ಮಾರ್ಚ್‌ 26ರ ಪತ್ರದ ಪ್ರಕಾರ 16.25 ಕೋಟಿ ರು. ಮೌಲ್ಯದ 50,000 ಕ್ವಿಂಟಾಲ್‌ ಸಕ್ಕರೆ ಅಡಮಾನವಾಗಿತ್ತು. ಇದರಿಂದ ಸಕ್ಕರೆಯ ಪ್ರಮಾಣ ಮತ್ತು ಮೌಲ್ಯದಲ್ಲಿ ವ್ಯತ್ಯಾಸವಾಗಿರುವುದು ದೃಢಪಟ್ಟಿಲ್ಲ. ಹಾಗೆಯೇ 2019ರ ಮಾರ್ಚ್‌ 2019ರ ಅಂತ್ಯಕ್ಕೆ ದೃಢೀಕರೀಸಿದ ದಾಸ್ತಾನು ತ:ಖ್ತೆಯೂ ಲಭ್ಯವಿರಲಿಲ್ಲ. ದೃಢೀಕರಿಸಿದ ಸಕ್ಕರೆ ದಾಸ್ತಾನು ತ:ಖ್ತೆಯನ್ನು ಪರಿಶೀಲನಗೆ ಒದಗಿಸಿರಲಿಲ್ಲ ಎಂಬ ಸಂಗತಿಯನ್ನೂ ಲೆಕ್ಕಪರಿಶೋಧಕರು ಹೊರಗೆಡವಿದ್ದಾರೆ.

ನಿಯಮದ ಪ್ರಕಾರ ಬದಲಾಯಿಸಲಾಗದ ಹಾಗೂ ವೈಯಕ್ತಿಕ ಖಾತರಿಯನ್ನು ಎಲ್ಲಾ ನಿರ್ದೇಶಕರು ಸಹಿ ಮಾಡಬೇಕು. ಆದರೆ ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಒದಗಿಸಿದ್ದ ದಾಖಲೆಗಳ ಪ್ರಕಾರ ಸಾಲಗಾರ ಕಂಪನಿಯ ಒಬ್ಬ ನಿರ್ದೇಶಕರ ವೈಯಕ್ತಿಕ ಖಾತರಿ ಪಡೆದಿದ್ದು, ಉಳಿದ ನಿರ್ದೇಶಕರ ವೈಯಕ್ತಿಕ ಖಾತರಿ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಪರಿಶೀಲನೆಗೆ ಒದಗಿಸಿರಲಿಲ್ಲ ಎಂಬುದು ಲೆಕ್ಕಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts