Monday | August 3, 2026 |

ಲಸಿಕೆ ಖರೀದಿ; ಕರ್ನಾಟಕ ಸೇರಿ 37 ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ನಷ್ಟ

ಬೆಂಗಳೂರು; ಕೋವಿಡ್‌ ಲಸಿಕೆಗಳನ್ನು ನೇರವಾಗಿ ಖರೀದಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ 2021ರ ಮೇ ತಿಂಗಳಲ್ಲಿ ಒಟ್ಟು 2,13,50,490 (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಲಸಿಕೆಗಳನ್ನು ಖರೀದಿಸಿರುವ ಕರ್ನಾಟಕವೂ ಸೇರಿದಂತೆ ದೇಶದ 37 ರಾಜ್ಯಗಳು (ಕೇಂದ್ರಾಡಳಿತ ಸೇರಿ) 689 ಕೋಟಿ ರು. ವೆಚ್ಚ ಮಾಡಿದೆ.

ಒಕ್ಕೂಟ ಸರ್ಕಾರವೇ 2,13,50,490 ಪ್ರಮಾಣದ ಲಸಿಕೆಗಳನ್ನು 150 ರು. ದರದಲ್ಲಿ ಖರೀದಿಸಿದ್ದರೆ 325.25 ಕೋಟಿ ರು.ಮಾತ್ರ ವೆಚ್ಚವಾಗುತ್ತಿತ್ತು. ಲಸಿಕೆ ಖರೀದಿಗೆ ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ರಾಜ್ಯಗಳ ಬೊಕ್ಕಸಕ್ಕೆ 368 ಕೋಟಿ ರು. ನಷ್ಟ ಸಂಭವಿಸಿದಂತಾಗಿದೆ.

ಕೋವಿಡ್‌ ಲಸಿಕೆಗಳ ಖರೀದಿ ಸಂಬಂಧ ಒಕ್ಕೂಟ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ 2021ರ ಮೇ ತಿಂಗಳಲ್ಲಿ ಖರೀದಿಯಾಗಿರುವ ಲಸಿಕೆಗಳ ವಿವರಗಳನ್ನು ಒದಗಿಸಿದೆ.

ಕೋವಿಶೀಲ್ಡ್‌ 1,65,00,000 ಮತ್ತು 48,50,490 ಕೊವಾಕ್ಸಿನ್‌ ಲಸಿಕೆಗಳನ್ನು ದೇಶದ 37 ರಾಜ್ಯಗಳು ಮೇ ತಿಂಗಳೊಂದರಲ್ಲಿ ಖರೀದಿಸಿದೆ. ಕೋವಿಶೀಲ್ಡ್‌ ಲಸಿಕೆಯನ್ನು 300 ರು ದರದಲ್ಲಿ 495 ಕೋಟಿ, ಕೊವಾಕ್ಸಿನ್‌ಗೆ 400 ರು. ದರದಲ್ಲಿ 194 ಕೋಟಿ ರು. ವೆಚ್ಚ ಮಾಡಲಾಗಿದೆ. ಈ ಪೈಕಿ ಕರ್ನಾಟಕವು 10,04,050 ಕೋವಿಶೀಲ್ಡ್‌ ಮತ್ತು 1,94,170 ಕೊವಾಕ್ಸಿನ್‌ ಲಸಿಕೆಯನ್ನು ಖರೀದಿಸಿರುವುದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಪ್ರಮಾಣಪತ್ರದಿಂದ ತಿಳಿದು ಬಂದಿದೆ.

ಕರ್ನಾಟಕವು ಮೇ ತಿಂಗಳಲ್ಲಿ 11,98,220 (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಲಸಿಕೆಗಳನ್ನು ನೇರವಾಗಿ ಖರೀದಿಸಿದೆ. ಉತ್ತರ ಪ್ರದೇಶ ಸರ್ಕಾರವು 34,38,840, ಗುಜರಾತ್‌ ಸರ್ಕಾರವು 12,67,890, ಮಹಾರಾಷ್ಟ್ರ ಸರ್ಕಾರವು 21,60,730, ಆಂಧ್ರಪ್ರದೇಶವು 13,35,630, ರಾಜಸ್ಥಾನವು 14,37,720, ತಮಿಳುನಾಡು 9,60,270, ತೆಲಂಗಾಣವು 3,90,590, ಪಶ್ಚಿಮ ಬಂಗಾಳವು 14,24,400, ದೆಹಲಿ ಸರ್ಕಾರವು 7,17,690 ಲಸಿಕೆಗಳನ್ನು ಖರೀದಿಸಿದೆ.

ಪ್ರತ್ಯೇಕ ದರ ನಿಗದಿಪಡಿಸಿದ್ದರಿಂದ ಕರ್ನಾಟಕ ಸರ್ಕಾರದ ಬೊಕ್ಕಸದ ಮೇಲೆ ಈವರೆವಿಗೆ ಅಂದಾಜು 55.78 ಕೋಟಿ ರು. ಹೊರೆಬಿದ್ದಿತ್ತು. ರಾಜ್ಯಕ್ಕೆ 2021ರ ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಖರೀದಿಸಿರುವ ಒಟ್ಟು 30.71 ಲಕ್ಷ ಡೋಸ್‌ (ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌) ಗಳಿಗೆ 101.84 ಕೋಟಿ ರು. ವೆಚ್ಚವಾಗಲಿದೆ. ಈ ಪೈಕಿ 87 ಕೋಟಿ ರು.ಗಳನ್ನು ಸಿರಮ್‌ ಇನ್ಸಿಟಿಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗೆ ಪಾವತಿ ಮಾಡಿತ್ತು.

ಒಂದೊಮ್ಮೆ ಲಸಿಕೆಗಳನ್ನು ಕೇಂದ್ರ ಸರ್ಕಾರವೇ 150 ರು. ದರದಲ್ಲಿಯೇ ಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡಿದ್ದರೆ ರಾಜ್ಯ ಸರ್ಕಾರದ ಮೇಲೆ 55.78 ಕೋಟಿ ಹೊರೆ ಬೀಳುತ್ತಿರಲಿಲ್ಲ. ಜೂನ್‌ 2ರವರೆಗೆ ರಾಜ್ಯ ಸರ್ಕಾರವು ಕಂಪನಿಗಳಿಂದ ನೇರವಾಗಿ 30.71 ಲಕ್ಷ ಡೋಸ್‌ಗಳನ್ನು ಖರೀದಿಗೆ ಆದೇಶ ನೀಡಿದೆ. 150 ರು. ದರದಲ್ಲಿ ಕೇಂದ್ರ ಸರ್ಕಾರವೇ 30.71 ಲಕ್ಷ ಡೋಸ್‌ಗಳನ್ನು ಖರೀದಿಸಿದಿದ್ದರೆ ಕೇವಲ 46.06 ಕೋಟಿ ರು. ಮಾತ್ರ ಖರ್ಚಾಗುತ್ತಿತ್ತು.

ಆದರೆ ಕೇಂದ್ರದ ಲಸಿಕೆ ಖರೀದಿ ನೀತಿಯಿಂದಾಗಿ ರಾಜ್ಯ ಸರ್ಕಾರವು ಕೋವಿಶೀಲ್ಡ್‌ಗೆ 300 ರು. ಮತ್ತು ಕೊವಾಕ್ಸಿನ್‌ಗೆ 400 ರು. ದರದಲ್ಲಿ ಖರೀದಿಸಿರುವುದರಿಂದ ರಾಜ್ಯ ಸರ್ಕಾರವೊಂದರ ಮೇಲೆ ಈವರೆಗೆ 55.78 ಕೋಟಿ ರು. ಹೊರೆ ಬಿದ್ದಿರುವುದು ನಿಚ್ಚಳವಾಗಿ ಕಂಡು ಬಂದಿದೆ.

2021ರ ಏಪ್ರಿಲ್‌ 30ರಿಂದ ಜೂನ್‌ 2ವರೆಗೆ 25,85,130 ಡೋಸ್‌ ಖರೀದಿ ಆದೇಶ ನೀಡಿತ್ತು. ಈಗಾಗಲೇ ರಾಜ್ಯ ಸರ್ಕಾರವು ಇದಕ್ಕಾಗಿ 81,43,15,950 ರು.ಗಳನ್ನು ವೆಚ್ಚ ಮಾಡಲಿದೆ. ಕೋವಿಶೀಲ್ಡ್‌ ತಯಾರಿಕೆ ಕಂಪನಿಗೆ ಈವರೆವಿಗೆ ಒಟ್ಟು 67,15,01,880 ರು.ಗಳನ್ನು ಪಾವತಿಸಿದೆ. 25 ಲಕ್ಷ ಡೋಸ್‌ಗಳ ಪೈಕಿ ಜೂನ್‌ 2ರವರೆಗೆ ರಾಜ್ಯಕ್ಕೆ ಬಂದಿರುವುದು 13,54,050 ಡೋಸ್ಸ್ ಮಾತ್ರ.

2021ರ ಏಪ್ರಿಲ್‌ 30ರಂದು 3,00,000 ಡೋಸ್‌, ಮೇ 3ಕ್ಕೆ 7,04,050, ಮೇ 6ಕ್ಕೆ 3,50,000, ಮೇ 29ಕ್ಕೆ 8,13,270, ಜೂನ್‌ 2ಕ್ಕೆ 4,17,810 ಡೋಸ್‌ಗೆ ಖರೀದಿ ಆದೇಶ ನೀಡಿತ್ತು. ಏಪ್ರಿಲ್‌ 30ಕ್ಕೆ 3,00,000 ಡೋಸ್‌, ಮೇ 9ರಂದು 3,50,000, ಮೇ 11ರಂದು 1 ಲಕ್ಷ, 18ರಂದು 2 ಲಕ್ಷ, 21ರಂದು 2 ಲಕ್ಷ, 22ರಂದು 2.40 ಲಕ್ಷ ಡೋಸ್‌ ಸ್ವೀಕರಿಸಿತ್ತು. ಅದೇ ರೀತಿ 2021ರ ಮೇ 3ರಿಂದ 25ರವರೆಗೆ ಒಟ್ಟು 4,86,040 ಡೋಸ್‌ಗಳಿಗೆ ಖರೀದಿ ಆದೇಶ ನೀಡಲಾಗಿತ್ತು.

ಇದರ ಒಟ್ಟು ವೆಚ್ಚ 20,41,36,800 ರು.ಗಳಾಗಿವೆ. ಈ ಪೈಕಿ ಈಗಾಗಲೇ ಕೊವಾಕ್ಸಿನ್‌ ತಯಾರಿಕೆ ಕಂಪನಿಗೆ 20,02,48,480 ರು.ಗಳನ್ನು ಪಾವತಿಸಿದೆ. 4.86 ಲಕ್ಷ ಡೋಸ್‌ಗಳ ಪೈಕಿ ರಾಜ್ಯ ಸರ್ಕಾರವು ಕೇವಲ 1,94,170 ಡೋಸ್‌ಗಳನ್ನಷ್ಟೇ ಸ್ವೀಕರಿಸಿತ್ತು.

ಮೇ 3ರಂದು 2,44,170, 25ರಂದು 2,41,870 ಡೋಸ್‌ಗಳಿಗೆ ಖರೀದಿ ಆದೇಶ ನೀಡಿತ್ತು. ಮೇ 11ರಂದು 14,41,170 ಡೋಸ್‌ ಮತ್ತು ಮೇ 27ರಂದು 50,000 ಡೋಸ್‌ ಸೇರಿ ಒಟ್ಟು 1,94,170 ಡೋಸ್‌ಗಳನ್ನಷ್ಟೇ ಪಡೆದಿತ್ತು. ಅಲ್ಲದೆ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್‌ಗಳನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಉಚಿತವಾಗಿ ನೀಡದ ಕಾರಣ ರಾಜ್ಯ ಸರ್ಕಾರವೇ ಇದರ ಹೊರೆ ಹೊತ್ತುಕೊಂಡಿದೆ. ರಾಜ್ಯ ಸರ್ಕಾರವು 18-44 ವರ್ಷ ವಯೋಮಾನದವರಿಗೆ ಲಸಿಕೆ ನೀಡಲು ಖರೀದಿಸಿದ್ದ 8.94 ಲಕ್ಷ ಡೋಸ್‌ಗಳನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಿತ್ತು. ಕೇಂದ್ರದ ಪಾಲನ್ನೂ ರಾಜ್ಯ ಸರ್ಕಾರವು ಭರಿಸಿರುವ ಕಾರಣ ಅಂದಾಜು 28 ಕೋಟಿ ರು. ಹೊರೆಯನ್ನೂ ಹೊರಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.

ಕೇಂದ್ರದ ಲಸಿಕೆ ಖರೀದಿ ನೀತಿಯಿಂದ ಈಗಾಗಲೇ ಹೊತ್ತುಕೊಂಡಿರುವ 55.78 ಕೋಟಿ ಮತ್ತು ಕೇಂದ್ರದ ಪಾಲನ್ನೂ ಭರಿಸಿದ ಕಾರಣ ಹೆಚ್ಚುವರಿಯಾಗಿ ಮಾಡಿರುವ ವೆಚ್ಚ 28 ಕೋಟಿ ಸೇರಿದಂತೆ ಒಟ್ಟಾರೆಯಾಗಿ 83.78 ಕೋಟಿ ರು. ಹೊರೆ ಹೊತ್ತುಕೊಳ್ಳಬೇಕಿದೆ.

8.94 ಲಕ್ಷ ಲಸಿಕೆಗಳನ್ನು ರಾಜ್ಯ ಸರ್ಕಾರವು ಬಳಸಲು ಮುಂದಾಗಿತ್ತು. ಆದರೆ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವು 2ನೇ ಡೋಸ್‌ನ್ನು ಸರಬರಾಜು ಮಾಡಿರಲಿಲ್ಲ. ಹೀಗಾಗಿ 8.94 ಲಕ್ಷ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ಗೆ ಬಳಸಿಕೊಂಡಿತ್ತು. ಇದನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿದ್ದನ್ನು ಸ್ಮರಿಸಬಹುದು.

ಭಾರತದ ಅತ್ಯಂತ ಸಾಮಾಜಿಕ, ಆರ್ಥಿಕ ಹಿಂದುಳಿದ ರಾಜ್ಯಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಕೋವಿಡ್‌-19 ಲಸಿಕೆಗಳನ್ನು ಸಂಗ್ರಹಿಸಲು ತಮ್ಮ ಆರೋಗ್ಯ ಬಜೆಟ್‌ನ ಶೇ. 30ರಷ್ಟು ಖರ್ಚು ಮಾಡಬೇಕಾಗುವ ಸ್ಥಿತಿಯೂ ಇದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರ ಪ್ರಕಾರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ರಾಜ್ಯಗಳು ಸಿರಮ್‌ ಇನ್ಸಿಟಿಟ್ಯೂಟ್‌ ಆಫ್‌ ಇಂಡಿಯಾದ ಕೋವಿಶೀಲ್ಡ್ ಖರೀದಿಸಬೇಕಾದರೆ ಶೇ. 23ರಷ್ಟು, ಕೊವಾಕ್ಸಿನ್‌ ಖರೀದಿಸಬೇಕಾದರೆ ಶೇ. 30ರಷ್ಟು ಖರ್ಚು ಮಾಡಬೇಕು.

ಶಾಸಕಾಂಗ ಸಂಶೋಧನಾ ಸಂಕ್ಷಿಪ್ತ ವರದಿ ಪ್ರಕಾರ ಹಿಂದುಳಿದ ರಾಜ್ಯಗಳು ತಮ್ಮ ಪರಿಷ್ಕೃತ ಬಜೆಟ್‌ನ ಅಂದಾಜುಗಳಲ್ಲಿ ಈಗಾಗಲೇ ಆದಾಯದ ಕೊರತೆ ವರದಿ ಮಾಡಿರುವುದರಿಂದ ಕೇಂದ್ರ ನಿಗದಿಪಡಿಸಿರುವ ದರದಲ್ಲಿ ಲಸಿಕೆ ಖರೀದಿ ಮಾಡುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.

Hot this week

ಕಳಪೆ ಶಸ್ತ್ರಾಸ್ತ್ರ ಖರೀದಿ; ಸರ್ಕಾರದ ಬೊಕ್ಕಸಕ್ಕೆ 62.10 ಕೋಟಿ ನಷ್ಟ, ಗಂಭೀರ ಲೋಪ ಪತ್ತೆ ಹಚ್ಚಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ

ಬೆಂಗಳೂರು; ಭಾರತೀಯ ಸೇನೆಗೆ ಸರಬರಾಜು ಮಾಡಲಾದ ದೋಷಪೂರಿತ 155 ಮಿ.ಮೀ. ಮದ್ದುಗುಂಡುಗಳಿಂದ...
Please Scan to make Your Contribution

Topics

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

Related Articles

Popular Categories

error: Content is protected !!