ಕೋವಿಡ್‌ ಭೀತಿ; ರೆಮ್‌ಡಿಸಿವಿರ್‌ ಮತ್ತಿತರ ರೋಗ ನಿರೋಧಕ ಔಷಧಗಳಿಗೆ 15,000 ಕೋಟಿ ವೆಚ್ಚ

ಬೆಂಗಳೂರು; ಕೋವಿಡ್‌ ಸೋಂಕನ್ನು ಎದುರಿಸಲು ರೆಮ್‌ಡಿಸಿವಿರ್‌, ಐವರ್‌ಮೆಕ್ಟಿನ್‌ ಸೇರಿದಂತೆ ರೋಗ ನಿರೋಧಕ ಹೆಚ್ಚಿಸುವ ಔಷಧಗಳಿಗಾಗಿ ಕಳೆದ ಒಂದು ವರ್ಷದಲ್ಲಿ ಭಾರತೀಯರು ರೋಗ ನಿರೋಧಕ ಔಷಧಗಳ ಖರೀದಿಗಾಗಿ ಅಂದಾಜು 15,000 ಕೋಟಿ ರು. ವೆಚ್ಚ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 20ರಷ್ಟು ಹೆಚ್ಚಳವಾಗಿದೆ. ಕೋವಿಡ್‌ ಸೋಂಕಿನ ಭೀತಿಯಿಂದ ರೋಗ ನಿರೋಧಕ ಔಷಧಗಳನ್ನು ಮುಗಿಬಿದ್ದು ಖರೀದಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಪದಾರ್ಥಗಳ ವಹಿವಾಟಿನ ಕುರಿತು ಅಖಿಲ ಭಾರತ ಕೆಮಿಸ್ಟ್‌ ಮತ್ತು ಡ್ರಗ್ಗೀಸ್ಟ್‌ ಸಂಘಟನೆ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. 2020ರ ಜೂನ್‌ನಿಂದ 2021ರ ಮೇ ತಿಂಗಳಿನವರೆಗೆ ಅಂದಾಜು 15,000 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಅಖಿಲ ಭಾರತ ಕೆಮಿಸ್ಟ್‌ ಮತ್ತು ಡ್ರಗ್ಗೀಸ್ಟ್‌ ಸಂಘಟನೆ ನೀಡಿರುವ ಅಂಕಿ ಅಂಶಗಳನ್ನಾಧರಿಸಿ ದಿ ಎಕೋನಾಮಿಕ್‌ ಟೈಮ್ಸ್‌ ಈ ಕುರಿತು ವರದಿ ಪ್ರಕಟಿಸಿದೆ.

ಫೇವಿಫಿರವಿಯರ್‌ ಔಷಧಕ್ಕೆ 1,220 ಕೋಟಿ ರು. ವೆಚ್ಚ ಮಾಡಿದ್ದರೆ 833 ಕೋಟಿ ಮೊತ್ತದ ರೆಮ್‌ಡಿಸಿವಿರ್‌ ಖರೀದಿಗೆ ಖರ್ಚು ಮಾಡಿದ್ದಾರೆ. ಅದೇ ರೀತಿ 992 ಕೋಟಿ ಮೊತ್ತದ ಅಜಿತ್ರೋಮೈಸಿನ್‌ ವೆಚ್ಚವಾಗಿದ್ದು, ಇದು ಕಳೆದ ವರ್ಷದಲ್ಲಿ ಶೇ.38ರಷ್ಟು ಹೆಚ್ಚಿದೆ. ಅದೇ ರೀತಿ 237 ಕೋಟಿ ಮೊತ್ತದ ಐವರ್‌ಮೆಕ್ಟಿನ್‌ ಮಾರಾಟವಾಗಿದೆ. ಇದು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 10 ಪಟ್ಟು ಹೆಚ್ಚಳವಾಗಿದೆ. ಹಾಗೆಯೇ 85 ಕೋಟಿ ಮೊತ್ತದಲ್ಲಿ ಡೋಕ್ಸಿಸೈಕ್ಲಿನ್‌ಗಾಗಿ ವೆಚ್ಚ ಮಾಡಿದ್ದು, ಇದು ಒಟ್ಟು ವೆಚ್ಚದಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ ಎಂದು ವರದಿಯಿಂದ ಗೊತ್ತಾಗಿದೆ.

ಗ್ಲೆನ್‌ ಮಾರ್ಕ್‌ ಫಾರ್ಮಾ, ಅಪೆಕ್ಸ್‌ ಲ್ಯಾಬ್ಸ್‌, ಪಿಫೈಜರ್‌, ಸಿಪ್ಲಾ, ಟೊರೆಂಟ್‌ ಫಾರ್ಮಾ, ಅಲೆಂಬಿಕ್‌, ಸನ್‌ ಫಾರ್ಮಾ, ಅಬ್ಬೂಟ್‌ ಹೆಲ್ತ್‌ ಕೇರ್‌, ಅಲಕೆಮ್‌ ಲ್ಯಾಬ್ಸ್‌ ಸೇರಿದಂತೆ ಇನ್ನಿತರೆ ಔಷಧ ಕಂಪನಿಗಳು 2020ರ ಮೇ ತಿಂಗಳಿನಲ್ಲಿ ವಿವಿಧ ಬ್ರ್ಯಾಂಡ್‌ಗಳ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಈ ಪೈಕಿ ಫೇವಿಪಿರವಿರ್‌ ಔಷಧವನ್ನು ಬಿಡುಗಡೆ ಮಾಡಿದ್ದ ಗ್ಲೆನ್‌ ಮಾರ್ಕ್‌ ಫಾರ್ಮಾ ಕಂಪನಿಯು ಇದೊಂದೇ ಉತ್ಪನ್ನದಲ್ಲಿ 2021ರಲ್ಲಿ 975 ಕೋಟಿ ರು. ವಹಿವಾಟು ನಡೆಸಿತ್ತು. ಅದೇ ರೀತಿ ಅಪೆಕ್ಸ್‌ ಲ್ಯಾಬ್‌ (ಮಲ್ಟಿವಿಟಮಿನ್‌) ಕಂಪನಿಯು 2020ರ ಮೇ ಅಂತ್ಯಕ್ಕೆ 230 ಕೋಟಿ ರು. ವಹಿವಾಟು ನಡೆಸಿದ್ದರೆ 2021ರ ಮೇ ಅಂತ್ಯಕ್ಕೆ 585 ಕೋಟಿ ರು. ವಹಿವಾಟು ನಡೆಸಿತ್ತು. ಬಿ ಕಾಂಪ್ಲೆಕ್ಸ್‌ ವಿಟಮಿನ್‌ ಸಿ ಔಷಧ ತಯಾರಿಕೆ ಕಂಪನಿಯು ಈ ಔಷಧದಿಂದ 2020ರ ಮೇ ಅಂತ್ಯದಲ್ಲಿ 337 ಕೋಟಿ ವಹಿವಾಟು ನಡೆಸಿದ್ದರೆ 2021ರ ಮೇ ಅಂತ್ಯಕ್ಕೆ 433 ಕೋಟಿ ರು. ಮೊತ್ತದ ಈ ಔಷಧವನ್ನು ಮಾರಾಟ ಮಾಡಿತ್ತು.

ಅದೇ ರೀತಿ ಸಿಪ್‌ ರೆಮಿ ಬ್ರ್ಯಾಂಡ್‌ ಹೆಸರಿನಲ್ಲಿ ರೆಮ್‌ಡಿಸಿವಿರ್‌ ಉತ್ಪಾದಿಸಿದ್ದ ಸಿಪ್ಲಾ ಕಂಪನಿಯು ಈ ಔಷಧದಿಂದ 2021ರ ಮೇ ಅಂತ್ಯದಲ್ಲಿ 309 ಕೋಟಿ ರು. ವಹಿವಾಟು ನಡೆಸಿದ್ದರೆ ಕ್ಯಾಲ್ಸಿಯಂ ಔ‍ಷಧ ತಯಾರಕ ಕಂಪನಿಯಾದ ಟೊರೆಂಟ್‌ ಫಾರ್ಮಾವು 2020ರ ಮೇ ಅಂತ್ಯದಲ್ಲಿ 223 ಕೋಟಿ ರು. ವಹಿವಾಟು ನಡೆಸಿದ್ದರೆ 2021ರ ಮೇ ಅಂತ್ಯಕ್ಕೆ 279 ಕೋಟಿ ರು. ಮೊತ್ತದ ಈ ಔಷಧವನ್ನು ಮಾರಾಟ ಮಾಡಿತ್ತು.

ಹಾಗೆಯೇ ಅಲೆಂಬಿಕ್‌ ಕಂಪನಿಯು ಮೇ 2020ರಲ್ಲಿ 170 ಕೋಟಿ ರು. ಮೌಲ್ಯದ ಅಜಿತ್ರೊಮೈಸಿನ್‌ನ್ನು ಮಾರಾಟ ಮಾಡಿದ್ದರೆ 2021ರ ಮೇ ಅಂತ್ಯಕ್ಕೆ 259 ಕೋಟಿ ಮೊತ್ತದ ಔಷಧವನ್ನು ಮಾರಾಟ ಮಾಡಿದೆ. ಮಲ್ಟಿ ವಿಟಮಿನ್‌ ತಯಾರಿಸಿರುವ ಸನ್‌ ಫಾರ್ಮಾ ಕಂಪನಿಯು 2020ರ ಮೇ ಅಂತ್ಯದಲ್ಲಿ 132 ಕೋಟಿ ರು. , 2021ರ ಮೇ ಅಂತ್ಯಕ್ಕೆ 200 ಕೋಟಿ, ಅಬ್ಬೋಟ್‌ ಹೆಲ್ತ್‌ ಕೇರ್‌ ಕಂಪನಿಯು 2020ರ ಮೇ ಅಂತ್ಯಕ್ಕೆ 48 ಕೋಟಿ ರು., ಮೇ 2021ರ ಅಂತ್ಯಕ್ಕೆ 192 ಕೋಟಿ ರು. ಮೊತ್ತದ ವಿಟಮಿನ್‌ ಸಿ, ಅಲ್‌ಕೆಮ್‌ ಲ್ಯಾಬ್ಸ್‌ ಮೇ 2020ರ ಅಂತ್ಯಕ್ಕೆ 72 ಕೋಟಿ, 2021ರ ಮೇ ಅಂತ್ಯಕ್ಕೆ 132 ಕೋಟಿ ಮೊತ್ತದ ವಿಟಮಿನ್‌ ಡಿ ಯನ್ನು ಮಾರಾಟ ಮಾಡಿರುವುದು ಎಐಒಸಿಡಿಯ ಅಂಕಿ ಅಂಶದಿಂದ ತಿಳಿದು ಬಂದಿದೆ.

ಭಾರತದ 15 ರಾಜ್ಯಗಳ 32 ನಗರಗಳಲ್ಲಿ ದಕ್ಷಿಣ ಏಷ್ಯಾದ ವುಂಡರ್‌ಮನ್‌ ಥಾಂಪ್ಸ್‌ನ್‌ ನಡೆಸಿರುವ ಅಧ್ಯಯನವು ಕೂಡ ರೋಗ ನಿರೋಧಕ ಔಷಧಗಳಿಗೆ ಹೆಚ್ಚಿನ ವೆಚ್ಚ ಮಾಡಿರುವುದನ್ನು ಹೊರಗೆಡವಿದೆ. ಈ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಶೇ.94ರಷ್ಟು ಮಂದಿ ರೋಗ ನಿರೋಧಕ ಔಷಧಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ತಿಳಿಸಿದೆ.

ಹಾಗೆಯೇ ಗೂಗಲ್‌ ಹುಡುಕಾಟದಲ್ಲಿಯೂ ಶೇ.500ರಷ್ಟು ರೋಗ ನಿರೋಧಕ ಔಷಧಗಳಿಗಾಗಿ ಮತ್ತು ಆರೋಗ್ಯ, ಆರೋಗ್ಯ ಸಂಬಂಧಿತ ಔಷಧಗಳಿಗಾಗಿ  ಶೋಧಿಸಿದ್ದಾರೆ ಎಂದು ಗೂಗಲ್‌ ಕೂಡ ವರದಿ ಮಾಡಿದೆ. ಈ ಮಧ್ಯೆ ಆಯುಷ್‌ ಸಚಿವಾಲಯವು ಕೂಡ ರೋಗ ನಿರೋಧಕ ಹೆಚ್ಚಿಸುವ ಆಯುರ್ವೇದ ಔಷಧಗಳನ್ನು ಬಳಸಲು ಶಿಫಾರಸ್ಸು ಮಾಡಿತ್ತು.

SUPPORT THE FILE

Latest News

Related Posts