ಉಲ್ಲಂಘನೆ; ಮುಖ್ಯಕಾರ್ಯದರ್ಶಿ, ಡಿಜಿಐಜಿ, ಅಧಿಕಾರಿಗಳು ಚರಾಸ್ತಿ ಗೌಪ್ಯವಾಗಿಟ್ಟರೇ?

ಬೆಂಗಳೂರು; ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿರುವ ಅಖಿಲ ಭಾರತ ಸೇವೆ ಅಧಿಕಾರಿಗಳು (ಐಎಎಸ್‌, ಐಪಿಎಸ್‌, ಐಎಫ್‌ಎಸ್‌) ಕೇವಲ ಸ್ಥಿರಾಸ್ತಿ ಮಾತ್ರ ಘೋಷಿಸಿ ಚರಾಸ್ತಿ, ಇನ್ನಿತರೆ ಹೊಣೆಗಾರಿಕೆಗಳನ್ನು ಘೋಷಿಸದೆಯೆ ಗೌಪ್ಯವಾಗಿರಿಸುತ್ತಿದ್ದಾರೆ. ಚರಾಸ್ತಿ ಘೋಷಣೆ ಮಾಡುವ ಸಂಬಂಧ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಭಾರತ ಸರ್ಕಾರವು 2015ರಲ್ಲಿಯೇ ಸೂಚಿಸಿದ್ದರೂ ಯಾವ ರಾಜ್ಯ ಸರ್ಕಾರಗಳೂ ಪಾಲಿಸದೆಯೆ ಉಲ್ಲಂಘಿಸಿರುವುದು ಕಂಡು ಬಂದಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌, ಡಿಜಿಐಜಿಪಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣರೆಡ್ಡಿ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪೊಲೀಸ್‌ ಅಯುಕ್ತರು, ಎಡಿಜಿಪಿ, ವಿವಿಧ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ ಯಾವೊಬ್ಬ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳು 2015ರಿಂದ ಚರಾಸ್ತಿ/ಹೊಣೆಗಾರಿಕೆಗಳ ವಿವರಗಳನ್ನು ಸಲ್ಲಿಸದಿರುವುದು ತಿಳಿದು ಬಂದಿದೆ.

2015ರಲ್ಲಿ ಬರೆದಿರುವ ಪತ್ರದಲ್ಲೇನಿದೆ?

ಭಾರತ ಸರ್ಕಾರವು 2015ರ ಜನವರಿ 23ರಂದು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದ ಪ್ರಕಾರ ಅಖಿಲಭಾರತ ಸೇವೆ ಅಧಿಕಾರಿಗಳು ಕೇವಲ ಸ್ಥಿರಾಸ್ತಿಗಳ ವಿವರಗಳನ್ನಷ್ಟೇ ಸಲ್ಲಿಸುವುದಲ್ಲ. ಅದರ ಜತೆಗೆ ಚರಾಸ್ತಿಗಳು ಮತ್ತು ಸಾಲ, ಹೊಣೆಗಾರಿಕೆಯ ವಿವರಗಳನ್ನೂ ಸೇರ್ಪಡೆಗೊಳಿಸಿ ಪರಿಷ್ಕೃತ ವಾರ್ಷಿಕ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಸೂಚಿಸಿ ಪತ್ರ ಬರೆದಿತ್ತು.

ಅಲ್ಲದೆ ಸಾರ್ವಜನಿಕ ನೌಕರನು (ಆಸ್ತಿಗಳ ವಿವರಗಳ ವಾರ್ಷಿಕ ಸಲ್ಲಿಕೆ ಮತ್ತು ಮಾಹಿತಿ ಘೋಷಣೆ ಹಾಗೂ ಆಸ್ತಿಗಳ ವಿನಾಯಿತಿಯ ಮಿತಿ) 2014ರ ಪರಿಷ್ಕೃತ ನಿಯಮದ ಪ್ರಕಾರ ಅಧಿಸೂಚನೆ ಸಂಖ್ಯೆ ಜಿಎಸ್‌ಆರ್‌ 918(ಇ- 2014ರ ಡಿಸೆಂಬರ್‌ 26ರಲ್ಲಿ ಸೂಚಿಸಿರುವ ನಮೂನೆ 2 ಮತ್ತು 4 ರ ಪ್ರಕಾರ ಚರಾಸ್ತಿ, ಸಾಲ , ಹೊಣೆಗಾರಿಕೆಯ ವಿವರಗಳನ್ನು ಸಲ್ಲಿಸಬೇಕು ಇದೇ ಪತ್ರದಲ್ಲಿಯೇ ಪ್ರಸ್ತಾಪಿಸಿತ್ತು. ಅಲ್ಲದೆ ನಮೂನೆಗಳ ಮಾದರಿಗಳನ್ನೂ ಒದಗಿಸಿತ್ತು.

ಆದರೆ ಅಖಿಲಭಾರತ ಸೇವೆ ಅಧಿಕಾರಿಗಳು ಕಳೆದ 6 ವರ್ಷದಿಂದಲೂ ಈ ಯಾವ ವಿವರಗಳನ್ನು ಒದಗಿಸಿಲ್ಲ ಎಂದು ತಿಳಿದು ಬಂದಿದೆ. ಹಾಗೆಯೇ ಚರಾಸ್ತಿಗಳ ವಿವರಗಳನ್ನು ಒದಗಿಸುವ ನಮೂನೆಯನ್ನೂ ಭಾರತ ಸರ್ಕಾರಕ್ಕೆ ಸಲ್ಲಿಸದಿರುವುದು ಗೊತ್ತಾಗಿದೆ. ಭಾರತ ಸರ್ಕಾರವು ಪತ್ರ ಬರೆದ ಹೊತ್ತಿನಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಭಾರತ ಸರ್ಕಾರವು ಪತ್ರ ಬರೆದ ನಂತರವೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು 3 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಸೂಚನೆಯನ್ನು ಪಾಲಿಸುವ ಗೋಜಿಗೆ ಹೋಗಲೇ ಇಲ್ಲ.

ಅಲ್ಪ ಅವಧಿಗೆ ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಸದ್ಯ ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಇವರ ಅವಧಿಯಲ್ಲಿಯೂ ಐಎಎಸ್‌, ಐಪಿಎಸ್‌, ಐಎಫ್ಎಸ್‌ ಅಧಿಕಾರಿಗಳು ಭಾರತ ಸರ್ಕಾರದ ಸೂಚನೆಯಂತೆ ಚರಾಸ್ತಿ ವಿವರಗಳನ್ನು ಸಲ್ಲಿಸದೇ ಇದ್ದರೂ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮುಖ್ಯಮಂತ್ರಿಗಳ ಬಳಿಯೇ ಇದ್ದರೂ ಮೂವರು ಮುಖ್ಯಮಂತ್ರಿಗಳು ಭಾರತ ಸರ್ಕಾರದ ಸೂಚನೆಯತ್ತ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. ಅ ನಿರ್ಲಕ್ಷ್ಯ ಈಗಲೂ ಮುಂದುವರೆದಿದೆ.

ವಿಶೇಷವೆಂದರೆ ಯೋಗಿ ಅದಿತ್ಯನಾಥ್‌ ಮುಖ್ಯಮಂತ್ರಿಯಾದ ನಂತರ ಭಾರತ ಸರ್ಕಾರದ ಸೂಚನೆಯಂತೆ ಚರಾಸ್ತಿ ವಿವರಗಳನ್ನು ಸಲ್ಲಿಸಬೇಕು ಎಂದು 2017ರಲ್ಲಿ ಉತ್ತರ ಪ್ರದೇಶದ ಡಿಜಿಐಜಿಪಿ ಅವರು ಆ ರಾಜ್ಯದ ಎಲ್ಲಾ ಐಪಿಎಸ್‌ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದರು. ಆದರೂ ಆ ರಾಜ್ಯದ ಐಪಿಎಸ್‌ ಅಧಿಕಾರಿಗಳೂ ಚರಾಸ್ತಿ ಸಲ್ಲಿಸದಿರುವುದು ದಾಖಲೆಯಿಂದ ತಿಳಿದು ಬಂದಿದೆ.

1968ರ ಅಖಿಲ ಭಾರತ ಸೇವೆಗಳ ನಿಯಮದ ಪ್ರಕಾರ ಈ ಮೊದಲಿನಿಂದಲೂ ಚರಾಸ್ತಿಗಳ ವಿವರಗಳ ಪಟ್ಟಿಯನ್ನು ಘೋಷಿಸಬೇಕಿತ್ತು. ತದನಂತರ 2013ರಲ್ಲಿ ಜಾರಿಗೊಂಡ ಲೋಕಪಾಲ್‌/ಲೋಕಾಯುಕ್ತ ಕಾಯ್ದೆ ಪ್ರಕಾರ ನಿರ್ದಿಷ್ಟವಾದ ಸೂಚನೆಗಳಿದ್ದರೂ ಸಹ ಚರಾಸ್ತಿಗಳ ವಿವರವನ್ನು ಘೋಷಿಸದೆಯೇ ನಿಯಮ ಉಲ್ಲಂಘಿಸುವ ಮೂಲಕ ಭಾರತ ಸರ್ಕಾರದ ಅಧಿಸೂಚನೆಯನ್ನು ಬದಿಗೆ ಸರಿಸಲಾಗಿದೆ. ಉನ್ನತ ಅಧಿಕಾರಿಗಳೇ ಈ ತರಹದ ಉಲ್ಲಂಘನೆ ಮಾಡುತ್ತಿರುವುದರ ಹಿಂದೆ ಅವರು ಮಾಡಿರಬಹುದಾದ ಹೂಡಿಕೆಗಳು, ಷೇರುಗಳ ಖರೀದಿ ಸೇರಿದಂತೆ ಇನ್ನಿತರೆ ವಾಣಿಜ್ಯ/ವ್ಯವಹಾರ ಚಟುವಟಿಕೆಗಳನ್ನು ಮುಚ್ಚಿಟ್ಟಿರುವ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಕೂಡ ಬಲವಾದ ಕಾರಣ ಇರಬಹುದು.

ಆದರ್ಶ್‌ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ಚರಾಸ್ತಿಗಳ ಪಟ್ಟಿಯಲ್ಲೇನಿದೆ?

ಸರ್ಕಾರಿ ಆದಾಯ, ಹೂಡಿಕೆ ಕುರಿತ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಹೆಂಡತಿ, ಮಕ್ಕಳ ಹೆಸರಿನಲ್ಲಿರುವ ಆದಾಯವನ್ನು ಸಹ ಘೋಷಿಸಬೇಕಾಗಿದೆ. ಕೈಯಲ್ಲಿರುವ ನಗದು, ಬ್ಯಾಂಕ್ ಠೇವಣಿ, ಬಾಂಡ್, ಡಿಬೆಂಚರ್, ಷೇರು, ಮ್ಯೂಚುಯಲ್ ಫಂಡ್‌ ಗಳಲ್ಲಿನ ಹೂಡಿಕೆ, ವಿಮೆ, ಫ್ರಾವಿಡೆಂಡ್ ಫಂಟ್, ವೈಯಕ್ತಿಕ ಸಾಲ, ಬೇರೆ ವ್ಯಕ್ತಿಗಳಿಗೆ ನೀಡಿರುವ ಸಾಲ ಮುಂತಾದ ವಿವರಗಳನ್ನು ಸಲ್ಲಿಸಬೇಕು.

ಅಲ್ಲದೆ ಉದ್ಯೋಗಿಗಳು ಹೊಸ ನಿಯಮದಂತೆ ಹೊಂದಿರುವ ವಾಹನ, ಚಿನ್ನಬೆಳ್ಳಿ ಆಭರಣಗಳು, ಗಟ್ಟಿಗಳ ವಿವರಗಳನ್ನು ಘೋಷಿಸಬೇಕು. ಅಖಿಲಭಾರತ ಸೇವೆಗಳ ಅಧಿನಿಯಮ 1968ರಲ್ಲಿಯೂ ಇದನ್ನೇ ಉಲ್ಲೇಖಿಸಲಾಗಿದೆ. ಆದರೆ ಈ ನಿಯಮವನ್ನು ಪಾಲಿಸದ ಬಹುತೇಕ ಐಎಎಸ್‌, ಐಪಿಎಸ್‌, ಐಎಫ್ಎಸ್‌ ಅಧಿಕಾರಿಗಳು ಕೇವಲ ಸ್ಥಿರಾಸ್ತಿಯನ್ನಷ್ಟೇ ಘೋಷಿಸಿ ಚರಾಸ್ತಿಯನ್ನು ಘೋಷಿಸದೇ ಮುಚ್ಚಿಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇನ್ನು, ಆದಾಯ ತೆರಿಗೆ ಸಲ್ಲಿಸುವ ಸಂದರ್ಭದಲ್ಲೇ ಚರಾಸ್ತಿ ವಿವರಗಳನ್ನು ಘೋಷಿಸುವುದರಿಂದ ಪ್ರತ್ಯೇಕವಾಗಿ ಭಾರತ ಸರ್ಕಾರಕ್ಕೆ ಸಲ್ಲಿಸುವ ಪ್ರಮೇಯವಿಲ್ಲ ಎಂದು ಕೆಲ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳು ಕುಂಟು ನೆಪವೊಡ್ಡಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು ಮೆಟ್ರೋಪಾಲಿಟಿನ್‌ ಹೌಸಿಂಗ್‌ ಸೊಸೈಟಿ ಹಂಚಿಕೆ ಮಾಡಿರುವ ನಿವೇಶನ ಹೊರತುಪಡಿಸಿ ಬೇರಾವ ಸ್ಥಿರಾಸ್ತಿಯೂ ತಮ್ಮ ಬಳಿ ಇಲ್ಲ ಎಂದು ಘೋಷಿಸಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣರೆಡ್ಡಿ ಅವರು ಎಚ್‌ ಎಸ್‌ ಆರ್‌ ಲೇಔಟ್‌, ಅಂಜನಾಪುರ ಬಡಾವಣೆ, ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಹೊಂದಿರುವ ನಿವೇಶನಗಳನ್ನು ಘೋಷಿಸಿರುವುದು ತಿಳಿದು ಬಂದಿದೆ. ಇದೇ ಮಾದರಿಯಲ್ಲೇ ಉಳಿದ ಅಧಿಕಾರಿಗಳೂ ಸ್ಥಿರಾಸ್ತಿಗಳನ್ನು ಘೋಷಿಸಿದ್ದಾರೆ. 10ಕ್ಕೂ ಹೆಚ್ಚು ಐಎಎಸ್‌ ಅಧಿಕಾರಿಗಳು ತಮ್ಮ ಬಳಿ ಒಂದೇ ಒಂದು ಸ್ಥಿರಾಸ್ತಿ ಇಲ್ಲ ಎಂದು ಘೋಷಿಸಿರುವುದು ಗೊತ್ತಾಗಿದೆ.

ಅಖಿಲ ಭಾರತ ಸೇವೆ ಶ್ರೇಣಿ ಅಧಿಕಾರಿಯಾಗಿದ್ದರೂ ಯಾವ ರಾಜ್ಯದಲ್ಲಿ ಆ ಅಧಿಕಾರಿ ಸೇವೆ ಸಲ್ಲಿಸುತ್ತಾರೋ ಆ ರಾಜ್ಯಗಳಲ್ಲಿ ರೂಪಿಸಿರುವ ಸೇವೆಗಳ ಅಧಿಸೂಚನೆ/ನಿಯಮ/ಕಾಯ್ದೆ/ಕಾನೂನು ಅನ್ವಯವಾಗುತ್ತವೆ ಮತ್ತು ಬಾಧ್ಯಸ್ಥರಾಗುತ್ತಾರೆ. ಹೀಗಾಗಿ ಅವರು ಸಹ ಚರಾಸ್ತಿಗಳ ವಿವರವನ್ನೂ ಸಲ್ಲಿಸಲು ಜವಾಬ್ದಾರರಾಗಿರುತ್ತಾರೆ. ಚರಾಸ್ತಿಯಲ್ಲಿ ಕ್ರಯ-ವಿಕ್ರಯ, ಹಣಕಾಸು ಸೇರಿದಂತೆ ಇನ್ನಿತರೆ ವ್ಯವಹಾರಗಳು ಸೇರುತ್ತವೆ. ಹೀಗಾಗಿ ಇದರ ವ್ಯಾಪ್ತಿಯೂ ದೊಡ್ಡದಿದೆ ಎನ್ನುತ್ತಾರೆ ಕೆಎಎಸ್‌ ಅಧಿಕಾರಿಯೊಬ್ಬರು.

SUPPORT THE FILE

Latest News

Related Posts