ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿದರೆ ನಿವೃತ್ತಿ; ಅಮಿತ್‌ ಷಾಗೆ ವಿಜಯೇಂದ್ರ ಸವಾಲು?

ಬೆಂಗಳೂರು: ಯಾವುದಾದರೂ ಭ್ರಷ್ಟಾಚಾರದ ಆರೋಪಗಳಿದ್ದರೆ ಅವುಗಳನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ ಹೊಂದಲು ಸಿದ್ಧನಿದ್ದೇನೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರಿಗೆ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರನೂ ಆದ ಬಿ.ವೈ.ವಿಜಯೇಂದ್ರ ಸವಾಲು ಹಾಕಿ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವಂತಹ ರಾಜಕೀಯ ಬೆಳವಣಿಗೆಗಳು ಬಿರುಸಿನಿಂದ ನಡೆಯುತ್ತಿರುವುದು ಮತ್ತು ಬಿ ವೈ ವಿಜಯೇಂದ್ರ ಅವರು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಹೊತ್ತಿನಲ್ಲೇ ಬಿ ವೈ ವಿಜಯೇಂದ್ರ ಅವರು ಅಮಿತ್‌ ಶಾ ಅವರಿಗೆ ಸವಾಲು ಎಸೆದು ಬಂದಿದ್ದಾರೆ ಎಂಬ ಸುದ್ದಿ ಇದೀಗ ಮುನ್ನೆಲೆಗೆ ಬಂದಿದೆ. ಅಲ್ಲದೆ ವಿವಿಧ ಮಠಾಧೀಶರನ್ನು ಭೇಟಿ ಮಾಡಿ ಬೆಂಬಲ ಕೋರುವಂತಹ ನಡೆದಿರುವ ಬೆಳವಣಿಗೆಗಳು ಇನ್ನಷ್ಟು ಮಹತ್ವ ಪಡೆದುಕೊಂಡಿವೆ.

ಜೂನ್ 9ರ ಮಧ್ಯಾಹ್ನ ಚಿತ್ರದುರ್ಗದ ಮುರುಘಾ ಮಠಕ್ಕೆ ದಿಢೀರ್ ಭೇಟಿ ನೀಡಿ ಮುರುಘಾ ಶರಣರ ನೇತೃತ್ವದಲ್ಲಿ 10ಕ್ಕೂ ಹೆಚ್ಚು ದಲಿತ ಮತ್ತು ಹಿಂದುಳಿದ ಮಠಾಧೀಶರನ್ನು ವಿಜಯೇಂದ್ರ ಅವರು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಮಠದಲ್ಲಿ ಆಯೋಜಿಸಿದ್ದ ಹೋಳಿಗೆ ಸೀಕರಣೆಯ ಪ್ರಸಾದ ಸ್ವೀಕರಿಸಿದ ನಂತರ ಎಲ್ಲ ಮಠಾಧೀಶರೊಂದಿಗೆ ವಿಜಯೇಂದ್ರ ಅವರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು. “ನಾನು ಇತ್ತೀಚೆಗೆ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಈ ಕುರಿತು ಸ್ಪಷ್ಟವಾದ ಮಾತುಗಳಲ್ಲಿ ಹೇಳಿ ಬಂದಿದ್ದೇನೆ” ಎಂದು ತಿಳಿಸಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು ಎಂದು ಗೊತ್ತಾಗಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ ಎಂದು ಹೇಳಿರುವ ಕೆಲ ಮೂಲಗಳು “ಇನ್ನೂ ಎರಡು ವರ್ಷಗಳ ಕಾಲ ನಮ್ಮ ತಂದೆಯವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಸಾಧ್ಯವಿಲ್ಲ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬುದು ತಿಳಿದು ಬಂದಿದೆ.

“ಈ ಮೊದಲಿಗೆ ನಮ್ಮಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ವಿರುದ್ಧ ಹಲವಾರು ಸುಳ್ಳು ಕೇಸುಗಳನ್ನು ಹಾಕಲಾಗಿತ್ತು. ಅವುಗಳನ್ನು ಎದುರಿಸಲು ನಾನು ಕಳೆದ 10 ವರ್ಷಗಳಿಂದ ಬಹಳಷ್ಟು ಹೋರಾಟ ಮಾಡಿದ್ದೇನೆ. ಸನ್ಮಾನ್ಯ ಯಡಿಯೂರಪ್ಪ ಒಬ್ಬ ಮುತ್ಸದ್ದಿ ರಾಜಕಾರಣಿ. ಅಂಥವರು ಯಾವುದೇ ಕಾರಣಕ್ಕೂ ಅಧಿಕಾರದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಿಶೇಷವಾಗಿ ನನ್ನ ಮೇಲಿದೆ. ಅದಕ್ಕಾಗಿ ಅವರನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ನಾನು ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಈ ದಿಸೆಯಲ್ಲಿ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ನನ್ನ ಮೇಲಿರಲಿ” ಎಂದು ಕೋರಿದ್ದಾಗಿ ಮೂಲಗಳು ವಿವರಿಸಿವೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ವಾಮೀಜಿಯೊಬ್ಬರು ಮಾತನಾಡಿ, “ಯಡಿಯೂರಪ್ಪನವರು ಶೋಷಿತರ ಪರವಾಗಿ ಇದ್ದಾರೆ. ಮಠಗಳಿಗೆ ಅನುದಾನ ಒದಗಿಸುವ ಪರಂಪರೆ ಆರಂಭಿಸಿದ್ದೇ ಯಡಿಯೂರಪ್ಪ. ಹೀಗಾಗಿ ಅವರ ಜೊತೆ ನಾವಿದ್ದೇವೆ” ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮುರುಘಾಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು, ರಾಜನಹಳ್ಳಿಯ ವಾಲ್ಮೀಕಿ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಹೊಸದುರ್ಗದ ಉಪ್ಪಾರ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶಿರಸಿಯ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಾವೇರಿ ಹೊಸಮಠದ ಶಾಂತಲಿಂಗ ಸ್ವಾಮೀಜಿ, ಚಳ್ಳಕೆರೆಯ ವಿರಕ್ತ ಮಠದ ಬಸವಕಿರಣ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಚಿತ್ರದುರ್ಗದ ಭೋವಿ ಪೀಠದ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಮೇದಾರ ಪೀಠದ ಕೇತೇಶ್ವರ ಸ್ವಾಮೀಜಿ, ಖನಿಜ ನಿಗಮ ಮಂಡಳಿ ಅಧ್ಯಕ್ಷ ಲಿಂಗಮೂರ್ತಿ ಹಾಗೂ ವರ್ತಕ ಪಟೇಲ್ ಶಿವಕುಮಾರ್ ಹಾಜರಿದ್ದರು ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts