ಕೋವಿಡ್ ಲಸಿಕೆ ಕಾರ್ಪೋರೇಟ್‌ ಆಸ್ಪತ್ರೆಗಳ ಪಾಲು; ದೇವಿಶೆಟ್ಟಿ ಆಸ್ಪತ್ರೆಯಲ್ಲಿದೆ 2.20 ಲಕ್ಷ ಡೋಸ್‌

ಬೆಂಗಳೂರು; ಕರ್ನಾಟಕದ ಮಹಾನಗರಗಳು ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ಜನಸಾಮಾನ್ಯರು ಸರದಿಯಲ್ಲಿ ಗಂಟೆಗಟ್ಟಲೇ ನಿಂತರೂ ಕೋವಿಡ್‌ ಲಸಿಕೆ ಇಲ್ಲದೆ ಆಳುವ ಸರ್ಕಾರವನ್ನು ಶಪಿಸುತ್ತ ಹೊರಬರುತ್ತಿದ್ದರೆ ಅತ್ತ ಒಟ್ಟು ಉತ್ಪಾದನೆಯಾಗಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಪ್ರಮಾಣದಲ್ಲಿ ಬೆಂಗಳೂರು ನಗರ ಸೇರಿದಂತೆ ದೇಶದ ಮಹಾನಗರಗಳಲ್ಲಿರುವ ಕಾರ್ಪೋರೇಟ್‌ ಆಸ್ಪತ್ರೆಗಳು ಖರೀದಿಸಿರುವುದು ಬಹಿರಂಗವಾಗಿದೆ.

ವಿಶೇಷವೆಂದರೆ ಕರ್ನಾಟಕದಲ್ಲಿ ಕೋವಿಡ್‌ 3ನೇ ಅಲೆಯನ್ನು ತಡೆಗಟ್ಟಲು ರಚಿಸಿರುವ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ಡಾ ದೇವಿಶೆಟ್ಟಿ ಅವರು ನಡೆಸುವ ನಾರಾಯಣ ಹೃದಯಾಲಯವು 2.02 ಲಕ್ಷ ಡೋಸ್‌ಗಳನ್ನು ಮೇ ತಿಂಗಳಲ್ಲಿ ಖರೀದಿಸಿತ್ತು. ಶಿವಮೊಗ್ಗ ನಗರದಲ್ಲಿನ ಖಾಸಗಿ ಆಸ್ಪತ್ರೆಯೊಂದು 6,000 ಕೋವಿಶೀಲ್ಡ್‌ ಡೋಸ್‌ಗಳನ್ನು ಖರೀದಿಸಿ ದಾಸ್ತಾನು ಮಾಡಿತ್ತು.

ಕೋವಿಡ್‌ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉತ್ಪಾದಕ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟ ಮರುಗಳಿಗೆಯಲ್ಲಿಯೇ ಫೋರ್ಟಿಸ್‌ ಸೇರಿದಂತೆ ಕಾರ್ಪೋರೇಟ್‌ ಆಸ್ಪತ್ರೆಗಳು ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ದೈನಿಕವು ವರದಿ ಮಾಡಿದೆ.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆಗಳ ಕೊರತೆಗೆ ಕಾರ್ಪೋರೇಟ್‌ ಮಾತ್ರವಲ್ಲದೇ ಮಧ್ಯಮ ಮತ್ತು ಸಣ್ಣ ಪ್ರಮಾಣದ ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ಖರೀದಿಸಿರುವುದೇ ಮೂಲ ಕಾರಣ ಎಂದು ಹೇಳಲಾಗಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ದೈನಿಕ ವರದಿ ಪ್ರಕಾರ ದೇಶದ 9 ಕಾರ್ಪೋರೇಟ್‌ ಆಿಸ್ಪತ್ರೆಗಳು ಮೇ ತಿಂಗಳಲ್ಲಿ 1.20 ಕೋಟಿ ಡೋಸ್‌ ಲಸಿಕೆಗಳನ್ನು ಖರೀದಿಸಿ ದಾಸ್ತಾನು ಮಾಡಿವೆ. ಇದಲ್ಲದೆ ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ 300ಕ್ಕೂ ಹೆಚ್ಚು ಆಸ್ಪತ್ರೆಗಳು ಕೋವಿಡ್‌ ಲಸಿಕೆಗಳನ್ನು ದಾಸ್ತಾನು ಮಾಡಿಕೊಂಡಿರುವುದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯಿಂದ ತಿಳಿದು ಬಂದಿದೆ.

ಮೇ ತಿಂಗಳಲ್ಲಿ ಒಟ್ಟು ಉತ್ಪಾದನೆಯಾಗಿದ್ದ 7.94 ಕೋಟಿ ಪ್ರಮಾಣದ ಡೋಸ್‌ಗಳ ಪೈಕಿ 1.20 ಕೋಟಿಯಷ್ಟು ಡೋಸ್‌ಗಳು ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದವು. ಇದು ಶೇ.15.6ರಷ್ಟಿದೆ. ಅಲ್ಲದೆ ಈ ಆಸ್ಪತ್ರೆಗಳು 22 ಲಕ್ಷ ಡೋಸ್‌ಗಳನ್ನು ಬಳಕೆ ಮಾಡಿವೆ. ಇದು ಶೇ.18ರಷ್ಟಿದೆ. ಇದೇ ಹೊತ್ತಿನಲ್ಲಿ ರಾಜ್ಯಗಳು ಕೇವಲ ಶೇ.33.5 ರಷ್ಟು ಎಂದರೆ ಕೇವಲ 2.66 ಕೋಟಿಯಷ್ಟು ಮತ್ತು ಕೇಂದ್ರ ಸರ್ಕಾರವು ಶೇ.50.9ರಷ್ಟು ಎಂದರೆ 4.03 ಕೋಟಿಯಷ್ಟು ಖರೀದಿಸಿತ್ತು.

ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಅಪೋಲೋ ಸಮೂಹವು 2.90 ಲಕ್ಷ ಪ್ರಮಾಣದ ಕೋವಿಶೀಲ್ಡ್‌ ಡೋಸ್‌ಗಳನ್ನು ಖರೀದಿಸಿತ್ತು. ದೆಹಲಿಯಲ್ಲಿ ಮ್ಯಾಕ್ಸ್‌ ಹೆಲ್ತ್‌ ಕೇರ್‌ ಸಮೂಹವು 2.90 ಲಕ್ಷ ಕೋವಿಶೀಲ್ಡ್‌ ಡೋಸ್‌ಗಳನ್ನು ದಾಸ್ತಾನು ಮಾಡಿತ್ತು.

ಬೆಂಗಳೂರು ಹೊರತುಪಡಿಸಿ ದೇಶದ ಹಲವೆಡೆ ಇರುವ ಅಪೋಲೋ ಸಮೂಹದ ಆಸ್ಪತ್ರೆಗಳು 16.14 ಲಕ್ಷ ಡೋಸ್‌ಗಳನ್ನು ಖರೀದಿಸಿದ್ದವು. ಅದೇ ರೀತಿ ಮ್ಯಾಕ್ಸ್‌ ಹೆಲ್ತ್‌ಕೇರ್‌ ಸಮೂಹ (ಒಟ್ಟು 6 ಆಸ್ಪತ್ರೆಗಳು) 12.97 ಲಕ್ಷ ಡೋಸ್‌, ರಿಲೆಯನ್ಸ್‌ ಫೌಂಡೇಷನ್‌ ನಡೆಸುವ ಎಚ್‌ ಎನ್‌ ಆಸ್ಪತ್ರೆ ಟ್ರಸ್ಟ್‌ 9.89 ಲಕ್ಷ ಡೋಸ್‌, ಮೆಡಿಕಾ ಆಸ್ಪತ್ರೆಗಳು 6.26 ಲಕ್ಷ ಡೋಸ್‌, ಫೋರ್ಟೀಸ್‌ ಹೆಲ್ತ್‌ಕೇರ್‌ (8 ಆಸ್ಪತ್ರೆಗಳು) 4.48 ಲಕ್ಷ ಡೋಸ್‌, ಗೋದ್ರೆಜ್‌ 3.35 ಲಕ್ಷ ಡೋಸ್‌, ಮಣಿಪಾಲ್‌ ಹೆಲ್ತ್‌ ಗ್ರೂಪ್‌ 3.24 ಲಕ್ಷ ಡೋಸ್‌, ನಾರಾಯಣ ಹೃದಯಾಲಯ 2.02 ಲಕ್ಷ ಡೋಸ್‌, ಟೆಕ್ನೋ ಇಂಡಿಯಾ ಡಾಮಾ 2 ಲಕ್ಷ ಡೋಸ್‌ ಲಸಿಕೆಗಳನ್ನು ಖರೀದಿಸಿದ್ದವು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈ ಎಲ್ಲಾ ಆಸ್ಪತ್ರೆಗಳು ಮೆಟ್ರೋ ನಗರಗಳಲ್ಲಿ, ರಾಜಧಾನಿ ಪ್ರದೇಶ ಮತ್ತು ಮೊದಲ ದರ್ಜೆಯ ನಗರಗಳಲ್ಲಿ ಕಾರ್ಯಾಚರಿಸುತ್ತಿವೆ. ಉತ್ಪಾದಿತ ಕಂಪನಿಗಳಿಂದ ನೇರವಾಗಿ ಖರೀದಿಸಿರುವ ಕಾರ್ಪೋರೇಟ್‌ ವಲಯವನ್ನೂ ಒಳಗೊಂಡಂತೆ ಖಾಸಗಿ ಆಸ್ಪತ್ರೆಗಳು ಡೋಸ್‌ವೊಂದಕ್ಕೆ ಕೋವಿಶೀಲ್ಡ್‌ ಲಸಿಕೆಯನ್ನು 600 ರು., ಕೊವಾಕ್ಸಿನ್‌ನನ್ನು 1,200 ರು.ದರ ನಿಗದಿಪಡಿಸಿವೆ.

ಇನ್ನು ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್‌ ಡೋಸ್‌ವೊಂದಕ್ಕೆ 850 ರು.ಗಳಿಂದ 1,000 ರು., ಮತ್ತು ಕೊವಾಕ್ಸಿನ್‌ ಡೋಸ್‌ವೊಂದಕ್ಕೆ 1,250 ರು. ವಸೂಲಿ ಮಾಡಿವೆ. ಇಷ್ಟೊಂದು ದರ ನೀಡಲು ಶಕ್ತರಾಗದ ಮಧ್ಯಮ ವರ್ಗ ಮತ್ತು ಬಡವರ್ಗವನ್ನು ಲಸಿಕೆ ಪಡೆಯುವುದರಿಂದ ವಂಚಿತರನ್ನಾಗಿಸಿದವು ಎಂಬ ಆರೋಪಕ್ಕೂ ಈ ಕಾರ್ಪೋರೇಟ್‌ ಆಸ್ಪತ್ರೆಗಳು ಗುರಿಯಾಗಿವೆ.

ಲಸಿಕೆಗಳನ್ನು ಖರೀದಿಸಿದ್ದ ಅಪೋಲೋ ಸಮೂಹವು 9 ನಗರಗಳಲ್ಲಿ ಕಾರ್ಯಾಚರಿಸುತ್ತಿರುವ ತನ್ನ ಆಸ್ಪತ್ರೆಗಳಲ್ಲಿ ದಾಸ್ತಾನು ಮಾಡಿತ್ತು. ನಾಸಿಕ್‌ ಮತ್ತು ಇಂದೋರ್‌ನಲ್ಲಿರುವ ಅಪೋಲೋ ಸ್ಪೆಕ್ಟ್ರಾ ಮತ್ತು ಅಪೋಲೋ ಕ್ಲಿನಿಕ್‌ಗಳಲ್ಲಿ ಲಸಿಕೆಗಳನ್ನು ದಾಸ್ತಾನು ಮಾಡಿತ್ತು. ಅದೇ ರೀತಿ ಮ್ಯಾಕ್ಸ್‌ ಹೆಲ್ತ್‌ಕೇರ್‌ ಸಮೂಹವು 6 ನಗರಗಳಲ್ಲಿ ದಾಸ್ತಾನು ಮಾಡಿತ್ತು. ರಿಲೈಯನ್ಸ್‌ ಫೌಂಡೇಷನ್‌ ಮುಂಬೈ ಮತ್ತು ನವಿ ಮುಂಬೈನಲ್ಲಿ ಕಾರ್ಯಾಚರಿಸುವ ಎಚ್‌ ಎನ್‌ ಆಸ್ಪತ್ರೆಯಲ್ಲಿ ಶೇಖರಿಸಿಟ್ಟಿತ್ತು.

ಬೆಂಗಳೂರು, ಕೋಲ್ಕತ್ತಾ, ಮುಂಬೈ ಮೆಟ್ರೋಪಾಲಿಟಿನ್‌ ಪ್ರದೇಶ, ಹೈದರಾಬಾದ್‌ನಲ್ಲಿ ಶೇ.80ರಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಕಾರ್ಪೋರೇಟ್‌ ಆಸ್ಪತ್ರೆಗಳು ಮೇ ತಿಂಗಳಲ್ಲಿ ದಾಸ್ತಾನು ಮಾಡಿದ್ದವು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ದೈನಿಕವು ವದಿ ಮಾಡಿದೆ.

the fil favicon

SUPPORT THE FILE

Latest News

Related Posts