ಭಾರತರತ್ನ; 10 ವರ್ಷದಲ್ಲಿ ಯಾರ ಹೆಸರನ್ನೂ ಶಿಫಾರಸ್ಸು ಮಾಡದ ರಾಜ್ಯ ಸರ್ಕಾರ

ಬೆಂಗಳೂರು; ತ್ರಿವಿಧ ದಾಸೋಹಿ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯೂ ಸೇರಿದಂತೆ ರಾಜ್ಯದ ಹಲವು ಸಾಧಕರಿಗೆ ಭಾರತ ರತ್ನ ನೀಡುವ ಸಂಬಂಧ 2008ರಿಂದ 2018ರವರೆಗೆ ಯಾವುದೇ ಹೆಸರುಗಳನ್ನು ರಾಜ್ಯ ಸರ್ಕಾರವು ಶಿಫಾರಸ್ಸು ಮಾಡಿಲ್ಲ.

ಶಿವಕುಮಾರ ಸ್ವಾಮೀಜಿಗಳಿಗೆ ಭಾರತರತ್ನ ನೀಡಬೇಕು. ಈ ಬಗ್ಗೆ ಲೋಕಸಭಾ ಅಧಿವೇಶನದಲ್ಲಿ ಹೋರಾಟ ನಡೆಸಲು ಬದ್ಧವಾಗಿದ್ದೇನೆಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಅವರು ಹಾಸನದಲ್ಲಿ ನೀಡಿರುವ ಹೇಳಿಕೆಯ ಬೆನ್ನಲ್ಲೇ ಭಾರತ ರತ್ನಕ್ಕೆ ಕಳೆದ ವರ್ಷಗಳಲ್ಲಿ ಯಾರ ಹೆಸರನ್ನೂ ಶಿಫಾರಸ್ಸು ಮಾಡಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ.

ಬಿ ಎಸ್‌ ಯಡಿಯೂರಪ್ಪ(2008) ಡಿ ವಿ ಸದಾನಂದಗೌಡ (2011) ಜಗದೀಶ್‌ ಶೆಟ್ಟರ್‌(2012)ಸಿದ್ದರಾಮಯ್ಯ(2013) ಎಚ್‌ ಡಿ ಕುಮಾರಸ್ವಾಮಿ (2018) ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭಾರತರತ್ನಕ್ಕೆ ಯಾವುದೇ ಹೆಸರುಗಳನ್ನು ಶಿಫಾರಸ್ಸು ಮಾಡಿಲ್ಲದಿರುವುದು ಆರ್‌ಟಿಐನಿಂದ ಬಹಿರಂಗಗೊಂಡಿದೆ.

ತುಮಕೂರಿನ ಸಿದ್ದಗಂಗಾ ಮಠದೊಂದಿಗೆ ಬಿ ಎಸ್‌ ಯಡಿಯೂರಪ್ಪ ಅವರು ಅವಿನಾಭಾವ ಸಂಬಂಧ ಹೊಂದಿದ್ದರೂ ಇವರು 3 ಬಾರಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರೂ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಭಾರತ ರತ್ನಕ್ಕೆ ಶಿಫಾರಸ್ಸು ಮಾಡದಿರುವುದು ಅಚ್ಚರಿ ಮೂಡಿಸಿದೆ.

‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಎಂದು ಬೇಡಿಕೊಂಡರೂ ಕೊಡಲಿಲ್ಲ. ಆದರೆ, ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಾವರ್ಕರ್‌ಗೆ ಈ ಗೌರವ ನೀಡಲು ಮುಂದಾಗಿದೆ’ ಎಂದು ಕಿಡಿಕಾರಿದ್ದ ಸಿದ್ದರಾಮಯ್ಯ ಅವರ 5 ವರ್ಷಗಳ ಅವಧಿಯಲ್ಲಿಯೂ ಶಿವಕುಮಾರ ಸ್ವಾಮೀಜಿ ಹೆಸರನ್ನು ಭಾರತರತ್ನಕ್ಕೆ ಶಿಫಾರಸ್ಸು ಮಾಡಿರಲಿಲ್ಲ ಎಂಬುದು ಆರ್‌ಟಿಐ ನಿಂದ ಗೊತ್ತಾಗಿದೆ.

ಸಾವರ್ಕರ್ ಅವರನ್ನು ಗಾಂಧಿ ಹತ್ಯೆ ಅಪರಾಧಿ ನಾಥೂರಾಮ್  ಗೋಡ್ಸೆಗೆ ಹೋಲಿಸಿ ಹೇಳಿಕೆ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಮೊದಲು ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

ಭಾರತ ರತ್ನಕ್ಕಾಗಿ ಶಿಫಾರಸ್ಸು ಮಾಡಿರುವ ಸಾಧಕರ ಹೆಸರುಗಳನ್ನು ಬಹಿರಂಗಪಡಿಸಲು ರಾಜ್ಯ ಬಿಜೆಪಿ ಸರ್ಕಾರ ನಿರಾಕರಿಸಿದೆ. 2008-09ರಿಂದ 2019-20ನೇ ಸಾಲಿನವರೆಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದ ಸಾಧಕರ ಹೆಸರುಗಳ ಮಾಹಿತಿಯು ‘ಗೌಪ್ಯ’ ಮಾಹಿತಿ ಅಡಿಯಲ್ಲಿ ಬರಲಿದೆ ಎಂದು ‘ಹಿಂಬರಹ ನೀಡಿರುವ ರಾಜ್ಯ ಬಿಜೆಪಿ ಸರ್ಕಾರ, ಸಾಧಕರ ಹೆಸರುಗಳ ಮಾಹಿತಿಯನ್ನೇ ಮುಚ್ಚಿಟ್ಟಿತ್ತು.

ಯಡಿಯೂರಪ್ಪ, ಡಿ ವಿ ಸದಾನಂದಗೌಡ, ಜಗದೀಶ್‌ಶೆಟ್ಟರ್‌(2008-2013) ಸಿದ್ದರಾಮಯ್ಯ (2013-2018) ಮತ್ತು ಎಚ್‌ಡಿ ಕುಮಾರಸ್ವಾಮಿ (2018-19) ಅವಧಿಯಲ್ಲಿ ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಿತ್ತೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು  ‘ರಹಸ್ಯ’ವಾಗಿರಿಸುವ ಮೂಲಕ ಬಿಜೆಪಿ ಸರ್ಕಾರ ಹಲವು ಅನುಮಾನಗಳನ್ನು ಹುಟ್ಟಿಸಿತ್ತು.

ಕಳೆದ 10 ವರ್ಷಗಳಲ್ಲಿ (2008-09ರಿಂದ 2019-20) ಕೇಂದ್ರ ಸರ್ಕಾರ ಹಲವು ಸಾಧಕರಿಗೆ  ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪಟ್ಟಿಯಲ್ಲಿ ಭೀಮಸೇನ ಜೋಷಿ(2009) ಮತ್ತು ಸಿ ಎನ್‌ಆರ್‌ರಾವ್‌(2014)ಅವರಿಗೆ ಭಾರತ ರತ್ನಕ್ಕೆ ಪಾತ್ರರಾಗಿದ್ದರು. ಆದರೆ ಈ ಇಬ್ಬರು ಸಾಧಕರ ಹೆಸರುಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರ ಶಿಫಾರಸ್ಸು ಮಾಡಿತ್ತೇ ಅಥವಾ ಕೇಂದ್ರ ಸರ್ಕಾರವೇ ಸ್ವಯಂ ಪ್ರೇರಿತವಾಗಿ ಆಯ್ಕೆ ಮಾಡಿತ್ತೇ ಎಂಬ ಮಾಹಿತಿಯನ್ನು ಈಗಿನ ಬಿಜೆಪಿ ಸರ್ಕಾರ ಮುಚ್ಚಿಟ್ಟಿರುವುದೇಕೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

ಮಾಹಿತಿ ಗೌಪ್ಯವಲ್ಲ

ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ 2005ರ ಅಡಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಕೆಲ ಮಾಹಿತಿಗಳು ಗೌಪ್ಯ, ರಹಸ್ಯ ಎಂದು ವಿನಾಯಿತಿ ನೀಡಿ ಅಧಿನಿಯಮ ಹೊರಡಿಸಿದೆ. ಈ ಪೈಕಿ  ಭಾರತರತ್ನಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಸಾಧಕರ ಹೆಸರುಗಳನ್ನು ಬಹಿರಂಗಪಡಿಸಲು ಯಾವುದೇ ನಿರ್ಬಂಧಗಳಾಗಲಿ, ವಿನಾಯಿತಿ ಆಗಲಿ, ಗೌಪ್ಯ, ರಹಸ್ಯವೆಂದಾಗಲಿ ಮಾಹಿತಿ ಹಕ್ಕು ಅಧಿನಿಯಮ ಹೇಳಿಲ್ಲ.

ಆದರೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ರಾಜಕೀಯ) ನೀಡಿರುವ ಹಿಂಬರಹದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಯಾವುದೇ ಕಲಂನ್ನೂ ಉಲ್ಲೇಖಿಸದೆಯೇ ಕೋರಿರುವ ಮಾಹಿತಿ ಗೌಪ್ಯ ಮಾಹಿತಿ ಅಡಿಯಲ್ಲಿವೆ  ಎಂದು ಉತ್ತರಿಸಿರುವ ಇಲಾಖೆ,  ಶಿಫಾರಸ್ಸಾಗಿರುವ ಸಾಧಕರ ಹೆಸರುಗಳನ್ನು ಮುಚ್ಚಿಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts