ಬೆಂಗಳೂರು; ಇ-ವಿಧಾನ್ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳು ನಿಗದಿತ ಕಾಲಾವಧಿಯಲ್ಲಿಯೇ ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದರೂ ಕರ್ನಾಟಕ ವಿಧಾನಸಭೆ ಮಾತ್ರ ಇನ್ನೂ ತೆವಳುತ್ತಲೇ ಇದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ನೇವಾ ವನ್ನು ಬಹುತೇಕ ರಾಜ್ಯಗಳು ಪರಿಣಾಮಕಾರಿಯಾಗಿ ಮತ್ತು ಎಲ್ಲಿಯೂ ದುಂದುವೆಚ್ಚಕ್ಕೆ ಅವಕಾಶಮಾಡಿಕೊಡದೆಯೇ ಅನುಷ್ಠಾನಗೊಳಿಸುತ್ತಿದ್ದರೆ ಕರ್ನಾಟಕ ವಿಧಾನಸಭೆಯು ಇನ್ನೂ ಕಾರ್ಯಯೋಜನೆಗೆ ಅರ್ಥಿಕ ಇಲಾಖೆಯ ಅನುಮೋದನೆ ಪಡೆದಿಲ್ಲ.
ಕೇಂದ್ರ ಸರ್ಕಾರದ ಪ್ರತಿಷ್ಠಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿರುವ ಕರ್ನಾಟಕ ವಿಧಾನಸಭೆಯು ಕೇಂದ್ರ ಸರ್ಕಾರಕ್ಕೆ ಅಗೌರವ ತೋರಿದಂತಾಗಿದೆ. ಒಂದು ದೇಶ ಒಂದು ಚುನಾವಣೆ ಮತ್ತು ಏಕರೂಪ ನಾಗರಿಕ ಸಂಹಿತೆ ಸೇರಿದಂತೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಮಾದರಿಯಾಗಿಸುವ ರಾಜ್ಯ ಬಿಜೆಪಿ ಸರ್ಕಾರವು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನೇವಾ ಯೋಜನೆಯನ್ನು ಹಳ್ಳ ಹಿಡಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅನ್ಯ ರಾಜ್ಯಗಳು ನೇವಾದಡಿಯಲ್ಲಿ ಲಭ್ಯವಾಗಿರುವ ಯೋಜನೆ ವೆಚ್ಚವನ್ನು ಬಳಸಿಕೊಳ್ಳುವ ಮೂಲಕ ಇ-ವಿಧಾನ ಯೋಜನೆಯನ್ನು ಅನುಷ್ಠಾನಗೊಳಿಸುವ ಹಂತದಲ್ಲಿದ್ದರೇ ಕರ್ನಾಟಕ ವಿಧಾನಸಭೆ ಅಂದಾಜು ವೆಚ್ಚವನ್ನು ಅನಗತ್ಯವಾಗಿ ಏರಿಕೆ ಮಾಡಿರುವ ಕಾರಣ ಇಲ್ಲಿನ ಆರ್ಥಿಕ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿಯೇ ಕರ್ನಾಟಕ ವಿಧಾನಸಭೆಯು ಅನ್ಯ ರಾಜ್ಯಗಳ ವಿಧಾನಸಭೆಗಿಂತಲೂ ಹಿಂದೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಹರ್ಯಾಣ, ಒಡಿಶಾ, ಬಿಹಾರ್, ಪಂಜಾಬ್, ಮೇಘಾಲಯ, ಮಣಿಪುರ, ಗುಜರಾತ್, ಅರುಣಾಚಲ ಪ್ರದೇಶ, ತ್ರಿಪುರ, ಮಿಜೋರಾಂ ರಾಜ್ಯಗಳ ವಿಧಾನಸಭೆಯು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಶೀಘ್ರದಲ್ಲಿಯೇ ಕಾಗದರಹಿತವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ದುಂದುವೆಚ್ಚಕ್ಕೆ ಅವಕಾಶವಿಲ್ಲದೆಯೇ ಗರಿಷ್ಠ 20 ಕೋಟಿ ರು.ವೆಚ್ಚದಲ್ಲಿ ಕಾರ್ಯಯೋಜನೆ ವರದಿ ಸಿದ್ದಪಡಿಸಿದ ಕಾರಣ ಅಲ್ಲಿನ ಆರ್ಥಿಕ ಇಲಾಖೆಯು ಯಾವುದೇ ತಕರಾರು ಇಲ್ಲದೆಯೇ ಅನುಮೋದನೆ ನೀಡಿದೆ. ಹೀಗಾಗಿಯೇ ಅಲ್ಲಿನ ವಿಧಾನಸಭೆ ಮತ್ತು ವಿಧಾನಪರಿಷತ್ ಸಚಿವಾಲಯವು ಕಾಗದರಹಿತವಾಗಲಿದೆ.
ಇ-ವಿಧಾನ್ ಯೋಜನೆಯನ್ನು ಅನ್ಯ ರಾಜ್ಯಗಳು ಗರಿಷ್ಠ 20 ಕೋಟಿ ವೆಚ್ಚದಲ್ಲಿಯೇ ಪೂರ್ಣಗೊಳಿಸುತ್ತಿದ್ದರೆ ಕರ್ನಾಟಕ ವಿಧಾನಸಭೆಯು ಕಿಯೋನಿಕ್ಸ್ ಮೂಲಕ 254 ಕೋಟಿ ರು. ಮೊತ್ತದ ಕಾರ್ಯಯೋಜನೆ ಸಿದ್ಧಪಡಿಸಿದೆ. ಇದು ಅನಗತ್ಯ ವೆಚ್ಚ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಗೆ ಪತ್ರ ಬರೆದಿರುವ ಕಾರಣ ಆರ್ಥಿಕ ಇಲಾಖೆಯು ಇದುವರೆಗೂ ಹಣ ಬಿಡುಗಡೆಗೆ ಅನುಮತಿ ನೀಡಿಲ್ಲ. ಅಲ್ಲದೆ ಆರ್ಥಿಕ ಇಲಾಖೆಯು ಎತ್ತಿರುವ ತಕರಾರುಗಳಿಗೆ ಕರ್ನಾಟಕ ವಿಧಾನಸಭೆ ಸಚಿವಾಲಯವು ಸೂಕ್ತ ಸಮರ್ಥನೆ ನೀಡಿಲ್ಲ. ಹೀಗಾಗಿ ಕಾರ್ಯಯೋಜನೆ ಸಿದ್ಧಪಡಿಸಿದ್ದ ಕಿಯೋನಿಕ್ಸ್ ಮೊರೆ ಹೋಗಿದೆ ಎಂದು ಗೊತ್ತಾಗಿದೆ.
ವೆಚ್ಚ ಏರಿಕೆಯಾಗಿರುವುದೆಲ್ಲಿ?
ಯೋಜನೆ ಅನುಷ್ಠಾನದ ಮೊದಲ ಹಂತದಲ್ಲಿ ಸಾಫ್ಟ್‌ವೇರ್‌ಗೆ 39.20 ಕೋಟಿ, ಹಾರ್ಡ್‌ವೇರ್, ನೆಟ್‌ವರ್ಕಿಂಗ್‌ಗೆ 1,24,26,14,655 ರು ಸೇರಿ ಒಟ್ಟು 1,63,46,87,002 ರು. ವೆಚ್ಚ ಅಂದಾಜಿಸಲಾಗಿದೆ. ಮೊದಲ ಹಂತಕ್ಕೆ ಖರೀದಿಯಾಗುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗೆ ಜಿ ಎಸ್ ಟಿ 29.42 ಕೋಟಿ ರು ಭರಿಸಬೇಕು.
ಅದೇ ರೀತಿ ಯೋಜನೆ ಅನುಷ್ಠಾನದ 2ನೇ ಹಂತದಲ್ಲಿ 63.15 ಲಕ್ಷ ರು., ಸಾಫ್ಟ್‌ವೇರ್‌ಗೆ ಎಂದು ಅಂದಾಜಿಸಿರುವ ವಿಧಾನಸಭೆ ಸಚಿವಾಲಯವು ಹಾರ್ಡ್‌ವೇರ್, ನೆಟ್‌ವರ್ಕಿಂಗ್‌ಗೆ 50.94 ಕೋಟಿ ರು. ಸೇರಿ ಒಟ್ಟು 51,57,50,173 ರು. ಎಂದು ಅಂದಾಜಿಸಿದೆ. 2ನೇ ಹಂತದ ಉಪಕರಣಗಳ ಖರೀದಿಗೆ ಜಿ ಎಸ್ ಟಿ ಶುಲ್ಕ 9,28,35,031 ರು. ಎಂದು ಅಂದಾಜಿಸಿದೆ ಎಂದು ಗೊತ್ತಾಗಿದೆ.
ವಿಧಾನಮಂಡಲವನ್ನು ಕಾಗದ ರಹಿತವನ್ನಾಗಿಸುವ ಸಂಬಂಧ 2014ರಲ್ಲಿ ಉಭಯ ಸದನಗಳ ಅಂದಿನ ಪೀಠಾಧ್ಯಕ್ಷರು ಅಧ್ಯಯನ ಸಮಿತಿ ರಚಿಸಿದ್ದರು. ಈ ಸಮಿತಿಯು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಈ ಸಂಬಂಧ ವರದಿಯನ್ನು ನೀಡಿತ್ತು. ಈ ಮಧ್ಯೆ ಬಜೆಟ್ ಪೂರ್ವದಲ್ಲಿ ಸುಮಾರು 66.00 ಕೋಟಿ ರು.ಗಳ ಅಂದಾಜು ಪಟ್ಟಿಯನ್ನು ನೀಡಿತ್ತು.
ಆದರೆ ವಿಧಾನಸಭೆ ಸಚಿವಾಲಯವು 253 ಕೋಟಿ ರು.ವೆಚ್ಚದಲ್ಲಿ ಇ-ವಿಧಾನಮಂಡಲ್ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಅಲ್ಲದೆ ಇ-ವಿಧಾನಮಂಡಲ ಯೋಜನೆ ಕುರಿತು ಶಾಸಕರಿಗೆ ಯಾವುದೇ ಪ್ರಾಥಮಿಕ ತರಬೇತಿಯನ್ನೂ ನೀಡಿಲ್ಲ.
ಇ-ಆಫೀಸ್ ತಂತ್ರಾಂಶವನ್ನು ಸಚಿವಾಲಯದ ಅಧಿಕಾರಿಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಸುತ್ತಿಲ್ಲ. ಹೀಗಿರುವಾಗ ಇ-ವಿಧಾನಮಂಡಲ ಯೋಜನೆ ಅನುಷ್ಠಾನಗೊಳಿಸಲು ನಡೆಸುತ್ತಿರುವ ತರಾತುರಿಯ ಹಿಂದೆ ‘ಕಮಿಷನ್ ವ್ಯವಹಾರ’ವೂ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಕಾಗದ ರಹಿತ ವಿಧಾನಮಂಡಲ ವಹಿವಾಟು/ಕಲಾಪ ವ್ಯವಸ್ಥೆ ಮಾಡುವುದು ಮತ್ತು ಕಾಗದಕ್ಕಾಗಿ ವ್ಯಯ ಮಾಡುತ್ತಿರುವ ಸರ್ಕಾರದ ಹಣವನ್ನು ಉಳಿತಾಯ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆಗೆ ಕೇಂದ್ರ ಸರ್ಕಾರವೇ ಶೇ. 60ರಷ್ಟು ನೀಡುವ ಹಣವನ್ನು ಒದಗಿಸಲಿದೆ. ಆರಂಭಿಕ ಹಂತದಲ್ಲಿ ಕೇಂದ್ರದ ಅನುದಾನವನ್ನು ಬಳಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.
ಪ್ರಾಯೋಗಿಕ ಹಂತದಲ್ಲಿ ಯಶಸ್ಸನ್ನಾಧರಿಸಿ ಯೋಜನೆಯನ್ನು ವಿಸ್ತರಿಸಬೇಕಿದ್ದ ಸಚಿವಾಲಯವು ಅನಗತ್ಯವಾಗಿ ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಪ್ರಾಯೋಗಿಕವಾಗಿ ಇ-ವಿಧಾನ ಮಂಡಲ ಯೋಜನೆಯನ್ನು ಅನುಷ್ಠಾನಗೊಳಿಸದೆಯೇ ನೇರವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕೋಟ್ಯಂತರ ರುಪಾಯಿ ದುಂದುವೆಚ್ಚ ಮಾಡಲು ಮುಂದಾಗಿರುವ ವಿಧಾನಸಭೆ ಸಚಿವಾಲಯದ ನಡೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದರು. ಇ-ವಿಧಾನಮಂಡಲ ಯೋಜನಾ ವೆಚ್ಚದಲ್ಲಿ ಆಗಿದ್ದ ಹೆಚ್ಚಳವನ್ನು ‘ದಿ ಫೈಲ್’ ಹೊರಗೆಡವಿತ್ತು. ಯೋಜನಾ ವೆಚ್ಚದಲ್ಲಿ ಆಗಿರುವ ಹೆಚ್ಚಳವನ್ನು ಪುನರ್ ಪರಿಶೀಲಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.
‘ವಿಧಾನಮಂಡಲ ಕಾಗದ ರಹಿತ ಯೋಜನೆಗೆ 254 ಕೋಟಿ ಅಂದಾಜು ಮಾಡಿರುವುದು ತಿಳಿದು ಬಂದಿದೆ. ಈ ಯೋಜನೆಗೆ ಈ ಹಿಂದೆ ಎನ್‌ಐಸಿ ಸಂಸ್ಥೆಯು 60.84 ಕೋಟಿ ರು. ಅಂದಾಜಿಸಲಾಗಿತ್ತು. ಅನಾವಶ್ಯಕವಾಗಿ 254 ಕೋಟಿ ವೆಚ್ಚದ ಯೋಜನೆಯನ್ನು ಕಾರ್ಯಗತಗೊಳಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಈ ರೀತಿ ರಾಜ್ಯದ ಜನತೆಯ ಶ್ರಮದ ಹಣವನ್ನು ದುಂದುವೆಚ್ಚ ಮತ್ತು ದುರ್ಬಳಕೆ ಮಾಡುವ ಅವಶ್ಯಕತೆ ಇರುವುದೇ,’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಅಲ್ಲದೆ ‘ಸಾರ್ವಜನಿಕ ಹಿತಾಸಕ್ತಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲು ಎರಡು ಸರ್ಕಾರಿ ಸಂಸ್ಥೆಗಳು ನೀಡಿರುವ ವಿಸ್ತೃತ ವರದಿಯನ್ನು ನಿಖರವಾಗಿ ಪರಿಶೀಲಿಸಿ ಅನಗತ್ಯವಾಗಿ ಹಣವನ್ನು ಪೋಲು ಮಾಡುವ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಪುನರ್ ಪರಿಶೀಲಿಸಬೇಕು,’ ಎಂದು ಆಗ್ರಹಿಸಿದ್ದರು.