ಕಾರ್ಯಪ್ಪ, ತಿಮ್ಮಯ್ಯಗೆ ಭಾರತರತ್ನ; ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಿಲ್ಲ ಎಂದ ಯಡಿಯೂರಪ್ಪ

ಬೆಂಗಳೂರು; ರಾಷ್ಟ್ರದ ಪ್ರಥಮ ಮಹಾ ದಂಡನಾಯಕ ಫೀಲ್ಡ್‌ ಮಾರ್ಷಲ್‌ ಕೆ ಎಂ ಕಾರ್ಯಪ್ಪ ಹಾಗೂ ಭಾರತೀಯ ಭೂಸೇನೆ 6ನೇ ಮುಖ್ಯಸ್ಥರಾಗಿದ್ದ ಜನರಲ್‌ ತಿಮ್ಮಯ್ಯ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಪ್ರಸ್ತಾವನೆ ಇದುವರೆಗೂ ಸಲ್ಲಿಸಿಲ್ಲ. ಅಲ್ಲದೆ ಈ ಸಂಬಂಧ ಯಾವುದೇ ಕ್ರಮವನ್ನೂ ವಹಿಸಿಲ್ಲ.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು 2021ರ ಫೆಬ್ರುವರಿಯಲ್ಲಿ ನಡೆದ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಖುದ್ದು ಉತ್ತರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ‘ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮ ವಹಿಸಿರುವುದಿಲ್ಲ,’ ಎಂಬ ಮಾಹಿತಿಯನ್ನು ಒದಗಿಸಿದ್ದಾರೆ.

ಕೊಡಗಿನ ಹೆಮ್ಮೆಯ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ “ಭಾರತ ರತ್ನ’ ಗೌರವ ನೀಡಬೇಕೆಂದು ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾಡಿದ್ದ ಮನವಿ ಬೆನ್ನಲ್ಲೇ ರಾಜ್ಯ ಸರ್ಕಾರದ ನಿಲುವು ಮುನ್ನೆಲೆಗೆ ಬಂದಿದೆ.

‘ಭಾರತೀಯ ಸೇನೆಗೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ಅದರಲ್ಲೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರು ದೇಶದ ಹಿರಿಮೆ. ಭಾರತದ ಸೇನಾ ಪಡೆಯಲ್ಲಿ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಅವರ ಹೆಸರು ಚಿರಸ್ಥಾಯಿ. ಇಂಥ ಮಹಾನ್‌ ನಾಯಕನಿಗೆ ಭಾರತದ ಸರ್ವಶ್ರೇಷ್ಠ ಭಾರತ ರತ್ನ ಪ್ರಶಸ್ತಿ ಸಿಗಬೇಕು. ದೇಶದ ಮೊಟ್ಟ ಮೊದಲ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಈ ಪ್ರಶಸ್ತಿ ಸಿಗಬೇಕು. ಬೇರೆಯವರಿಗೆ ಭಾರತ ರತ್ನ ಸಿಗುತ್ತಿದೆ. ಆದರೆ ಕಾರ್ಯಪ್ಪ ಅವರಿಗೂ ಈ ಪ್ರಶಸ್ತಿ ದಕ್ಕಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ತಿಳಿಸಿದ್ದರು.

ಆದರದು ಹೇಳಿಕೆಯಾಗಿಯೇ ಉಳಿದಿದೆಯೇ ವಿನಃ ದೇಶ ಸ್ವತಂತ್ರಗೊಂಡು 74 ವರ್ಷಗಳಾದರೂ ಹೆಮ್ಮೆಯ ಸೇನಾನಿಗಳಿಬ್ಬರಿಗೆ ಭಾರತರತ್ನ ಲಭಿಸಿಲ್ಲ. ‘ಕಾರ್ಯಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವಂತೆ ಹಲವು ಬಾರಿ ಮನವಿ ಮಾಡಿಕೊಂಡೆವು. ಆದರೆ ಕೇಂದ್ರ ಸರ್ಕಾರ ಇದುವರೆಗೆ ಸ್ಪಂದಿಸಲಿಲ್ಲ. ಇನ್ನು ಮುಂದೆ ಪ್ರಶಸ್ತಿ ನೀಡುವಂತೆ ನಾವು ಕೇಳುವುದು ಬೇಡ. ಕಾರ್ಯಪ್ಪ ಅವರು ಜನರ ಹೃದಯದಲ್ಲಿ ರತ್ನವನ್ನಾಗಿ ವಿಜೃಂಭಿಸುತ್ತಿದ್ದಾರೆ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಎಂ ಸಿ ನಾಣಯ್ಯ ಅವರು ಹೇಳಿದ್ದನ್ನು ಸ್ಮರಿಸಬಹುದು.

ಭಾರತರತ್ನ ನೀಡಬೇಕು ಎಂದು ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಪ್ರತಿ ಸಮಾರಂಭದಲ್ಲೂ ಆಗ್ರಹ ಕೇಳಿ ಬರುತ್ತಲೇ ಇರುತ್ತೆ. ಭಾರತ ಸೇನೆಯ ಮಹಾದಂಡನಾಯಕರಾಗಿದ್ದ ಕಾರ್ಯಪ್ಪ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆಯೇ ಭಾರತ ರತ್ನ ನೀಡಬೇಕು ಎಂಬ ಕೂಗು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಲುಪುತ್ತಿಲ್ಲ.

ಸೇನಾ ಪದವಿಯನ್ನು ಪಡೆದುಕೊಂಡ ಮೊಟ್ಟಮೊದಲ ಕೊಡವ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಅವರು ಕ್ವೆಟ್ಟಾದಲ್ಲಿನ ಸಿಬ್ಬಂದಿ ಕಾಲೇಜನ್ನು ಪ್ರವೇಶಿಸಿದ ಮೊಟ್ಟಮೊದಲ ಭಾರತೀಯ ಅಧಿಕಾರಿ, ಮೊಟ್ಟಮೊದಲ ಭಾರತೀಯ ಬ್ರಿಗೇಡಿಯರ್, ಮೊಟ್ಟಮೊದಲ ಭಾರತೀಯ ಮೇಜರ್ ಜನರಲ್, ಮೊಟ್ಟಮೊದಲ ಸರ್ವೋಚ್ಚ ಸೇನಾಧಿಪತಿಯೂ ಆಗಿದ್ದರು. ಅವರಿಗೆ ಯೋಧರ ಬಗೆಗೆ ಅಪಾರವಾದ ಪ್ರೀತಿ ಇತ್ತು. ಅವರ ಸಾಧನೆಗೆ ಭಾರತ ಸರ್ಕಾರ ಫೀಲ್ಡ್ ಮಾರ್ಷಲ್ ಪದವಿಯನ್ನು ನೀಡಿ ಗೌರವಿಸಿದೆ.

ಅದೇ ರೀತಿ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ, 1957ರಿಂದ 1961ರವರೆಗೆ ಭಾರತದ ಭೂಸೇನೆಯ ದಂಡನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾಗಿದ್ದರಲ್ಲದೆ ಯುದ್ಧ ಖೈದಿಗಳ ಸ್ವದೇಶದಲ್ಲಿ ಪುನರ್ವಸತಿಯನ್ನು ಸ್ಥಾಪಿಸುವುದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೈಪ್ರಸ್‌ನಲ್ಲಿದ್ದರು. ಬ್ರಿಟಿಷರ ಆಳ್ವಿಕೆಯಲ್ಲಿ ಲೆಫ್ಟಿನೆಂಟ್ ಗೌರವದೊಂದಿಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ತಿಮ್ಮಯ್ಯನವರು ಹಲವಾರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts