ಲಸಿಕೆಗಳ ಬೆಲೆಗಿಲ್ಲ ಮಿತಿ; ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೊರಿಸಲಿದೆಯೇ ಕೇಂದ್ರ?

ಬೆಂಗಳೂರು; ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳು ಏದುಸಿರು ಬಿಡುತ್ತಿವೆ. ಲಸಿಕೆ ವ್ಯರ್ಥವಾಗುತ್ತಿರುವುದು ಮತ್ತು ಹಲವೆಡೆ ಕೊರತೆ ಕಾಣಿಸಿಕೊಳ್ಳಲಾರಂಭಿಸಿರುವ ಮಧ್ಯೆಯೇ ಸರ್ಕಾರ ನಿಗದಿಪಡಿಸಿರುವ ಲಸಿಕೆಗಳ ಬೆಲೆಯೂ ಚರ್ಚೆಗೊಳಗಾಗುತ್ತಿದೆ. ಲಸಿಕೆಗಳ ಬೆಲೆಗೆ ಯಾವುದೇ ಮಿತಿ ಮತ್ತು ಕಡಿವಾಣ ಇಲ್ಲ ಎಂಬ ಆರೋಪಗಳೂ ಕೇಳಿಬರಲಾರಂಭಿಸಿವೆ. ಇದರ ಬೆನ್ನಲ್ಲೇ ಲಸಿಕೆ ವೆಚ್ಚವನ್ನು ಕೇಂದ್ರ ಸರ್ಕಾರವು ರಾಜ್ಯಗಳ ಹೆಗಲಿಗೆ ವರ್ಗಾಯಿಸಲಿದೆ!

ಕೇಂದ್ರ ಸರ್ಕಾರವು ಕೋವಿಡ್ ವಾಕ್ಸಿನನ್ನು ಇದೀಗ ಮುಕ್ತ ಮಾರಾಟಕ್ಕೆ ಬಿಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 400 ರೂ ಮತ್ತು ಖಾಸಗಿ ಆಸ್ಪತ್ರೆಯಲ್ಲಿ 600 ರೂಗೆ ನಿಗದಿ ಪಡಿಸಿದೆ. ಲಸಿಕೆಗಳ ಬೆಲೆ ಮತ್ತು ಇದರ ವೆಚ್ಚವು ರಾಜ್ಯ ಸರ್ಕಾರಗಳಿಗೆ ಹೊರೆಯಾಗಲಿದೆ ಎಂಬ ಸಂಗತಿಯೂ ಮುನ್ನೆಲೆಗೆ ಬಂದಿದೆ.

ಕಳೆದ ವರ್ಷ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ಆರ್ಥಿಕ ಪರಿಸ್ಥಿತಿಯು ಕೆಟ್ಟ ಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಲಸಿಕೆ ಉತ್ಪಾದಕರಿಂದ ಪೂರ್ವ ಘೋಷಿತ ಬೆಲೆಯಲ್ಲಿಯೇ ರಾಜ್ಯಗಳು ಖರೀದಿಸಿದಲ್ಲಿ ವೆಚ್ಚದ ಹೊರೆಯನ್ನು ಹೊರಬೇಕಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಲಸಿಕೆ ತಯಾರಕರಿಂದ ಕೇಂದ್ರವು ಶೇ.50ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಅಲ್ಲದೆ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಉಳಿದ ಶೇ. 50ರಷ್ಟನ್ನು ಉತ್ಪಾದಕರಿಂದ ಪೂರ್ವ ಘೋಷಿತ ಬೆಲೆಗೆ ಖರೀದಿಸುತ್ತವೆ. ಬೆಲೆಗೆ ಯಾವುದೇ ಮಿತಿ ಇಲ್ಲದ ಕಾರಣ ಇದರ ವೆಚ್ಚವೂ ರಾಜ್ಯಗಳ ಹೆಗಲಿಗೆ ವರ್ಗಾವಣೆ ಆಗಲಿದೆ. ಇದರಿಂದಾಗಿ ಆರ್ಥಿಕ ಹೊರೆಯೂ ಸಹಜವಾಗಿಯೇ ಹೆಚ್ಚಬಲ್ಲದು ಎಂದೂ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

‘ಒಕ್ಕೂಟ ವ್ಯವಸ್ಥೆಯಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯೂ ಹೌದು. ಲಾಕ್‌ಡೌನ್‌ನ ಪರಿಣಾಮಗಳನ್ನು ರಾಜ್ಯಗಳು ಎದುರಿಸುತ್ತಲೇ ಇವೆ. ರಾಜ್ಯಗಳು ಈಗಾಗಲೇ ಕಳೆದ ಒಂದು ವರ್ಷದಿಂದ ಅಪಾರ ಪ್ರಮಾಣದ ಆರ್ಥಿಕ ಹೊರೆ ಹೊತ್ತುಕೊಂಡಿವೆ. ಆಸ್ಪತ್ರೆಯ ಹಾಸಿಗೆಗಳು, ಚಿಕಿತ್ಸಾ ಕೇಂದ್ರಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ವೆಂಟಿಲೇಟರ್‌ಗಳ ಲಭ್ಯತೆಯನ್ನು ಹೆಚ್ಚಿಸಲು ಹೆಚ್ಚಿದ ಖರ್ಚಿನೊಂದಿಗೆ ಆದಾಯವು ಕುಗ್ಗುತ್ತಿದೆ. ಇದರ ಮಧ್ಯೆಯೇ ಪೂರ್ವ ಘೋಷಿತ ಬೆಲೆಯಲ್ಲಿಯೇ ಲಸಿಕೆಗಳನ್ನು ಖರೀದಿಸಿದರೆ ಇದರ ವೆಚ್ಚವೂ ರಾಜ್ಯಗಳ ಹೆಗಲಿಗೆ ವರ್ಗಾವಣೆಯಾಗಿ ಆರ್ಥಿಕ ಹೊರೆ ಹೆಚ್ಚಲಿದೆ,’ ಎನ್ನುತ್ತಾರೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಅರ್ಥಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ ಆರ್ ರಾಮಕುಮಾರ್.

ಪ್ರಸ್ತುತ, ಕೇಂದ್ರ ಸರ್ಕಾರವು ಉತ್ಪಾದಕರಿಂದ ಲಸಿಕೆಗಳನ್ನು ನಿಯಂತ್ರಿತ ಬೆಲೆಯಲ್ಲಿ ಪಡೆದುಕೊಳ್ಳುತ್ತಿದೆ. ಕೋವಿಶೀಲ್ಡ್‌ಗೆ 150-160 ರೂ. ಮತ್ತು ಕೊವಾಕ್ಸಿನ್‌ಗೆ 206 ರೂ., ಮತ್ತು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಸರಬರಾಜು ಮಾಡುತ್ತದೆ. ಹೊಸ ನೀತಿಯಡಿಯಲ್ಲಿ ಕೇಂದ್ರ ಸರ್ಕಾರವು ಖರೀದಿಸಿದ ಲಸಿಕೆಗಳು ಶೇ. 50ರಷ್ಟು ಸಕ್ರಿಯ ಪ್ರಕರಣಗಳ ಆಧಾರದ ಮೇಲೆ ಮತ್ತು ವ್ಯರ್ಥವಾಗುವ ದರಗಳು ಸೇರಿದಂತೆ ಲಸಿಕೆ ಅಭಿಯಾನದ ಕಾರ್ಯಕ್ಷಮತೆಯನ್ನು ರಾಜ್ಯಗಳಿಗೆ ಹಂಚಲಿದೆ.

ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಹಾಕಲು ಈ ಪಾಲನ್ನು ಬಳಸಲಾಗುತ್ತದೆ. ಮುಂದಿನ ಎರಡು ತಿಂಗಳವರೆಗೆ ಲಸಿಕೆಗಳ ಪೂರೈಕೆ ಹೆಚ್ಚಾಗದಿದ್ದರೆ, ಅರ್ಹರಿಗೆ ಲಸಿಕೆ ಹಾಕಲು ಶೇ. 50 ರ ಪಾಲು ಪ್ರಸ್ತುತ ನಿಧಾನಗತಿಯಲ್ಲಿಯೂ ಸಾಕಾಗುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಉಚಿತ ಲಸಿಕೆ ನೀಡಲು ಬಯಸಿದರೆ ರಾಜ್ಯಗಳು ಪ್ರತ್ಯೇಕವಾಗಿ ಇದನ್ನು ನಿರ್ಧರಿಸಬಹುದು. ಇದಕ್ಕಾಗಿ ಅಸ್ತಿತ್ವದಲ್ಲಿರುವ ಮಾನದಂಡಗಳಿಗೆ ಒಳಪಡದ ತಮ್ಮ ನಾಗರಿಕರಿಗೆ ರಾಜ್ಯ ಸರ್ಕಾರಗಳು ವೆಚ್ಚವನ್ನು ಭರಿಸಬೇಕಾಗುತ್ತದೆ. ವಿರಳವಾದ ಲಸಿಕೆಗಳನ್ನು ಖರೀದಿಸಲು ಖಾಸಗಿ ಖರೀದಿದಾರರೊಂದಿಗೆ ಸ್ಪರ್ಧಿಸಬೇಕಾಗಬಹುದು. ಇದಕ್ಕಾಗಿ ಇನ್ನೂ ಯಾವುದೇ ಮಾನದಂಡಗಳನ್ನು ನಿಗದಿಪಡಿಸಿಲ್ಲ ಎನ್ನುತ್ತಾರೆ ರಾಮ್‌ಕುಮಾರ್‌.

ಅಲ್ಲದೆ ಪ್ರಸ್ತುತ ಬೆಲೆ ನಿಯಮದಿಂದ ಹೊರಹೋಗಲು ಮತ್ತು ಬೆಲೆಗಳನ್ನು ಹೆಚ್ಚಿಸುವ ಸಂಬಂಧ ಸರ್ಕಾರವು ಲಸಿಕೆ ತಯಾರಕರ ಒತ್ತಡಕ್ಕೆ ಮಣಿಯುತ್ತಿದೆ. ತಯಾರಕರು ಸಾಮಾನ್ಯ ಲಾಭವನ್ನು ಗಳಿಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಾರಾದರೂ ಸುಮಾರು 1,000 ರೂ.ಗೆ ಬೆಲೆ ನಿಗದಿಪಡಿಸುವ ಮೂಲಕ “ಸೂಪರ್ ಲಾಭ” ಗಳಿಸಲು ಬಯಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಭಾರತದ ದೈನಂದಿನ ವ್ಯಾಕ್ಸಿನೇಷನ್ ದರವು ಒಂದು ವಾರದಿಂದ ಕುಸಿಯುತ್ತಿದೆ. ಮೇ 1 ರಿಂದ ಭಾರತದ ಲಸಿಕೆ ಅಭಿಯಾನಕ್ಕೆ ಇನ್ನಷ್ಟು ವೇಗ ತರಲು 18 ಮತ್ತು ಇದಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರವು ಪ್ರಕಟಿಸಿದೆ. ಕಳೆದ ವಾರದಲ್ಲಿ, ಭಾರತವು ದಿನಕ್ಕೆ ಸರಾಸರಿ 2.7 ಮಿಲಿಯನ್ ಡೋಸ್‌ಗಳನ್ನು ನೀಡುತ್ತಿದೆ. ಹಿಂದಿನ ವಾರದಲ್ಲಿ ಇದು 3.6 ಮಿಲಿಯನ್‌ಗಿಂತ ಕಡಿಮೆಯೂ ಆಗಿದೆ.

ಹಲವು ರಾಜ್ಯಗಳು ಲಸಿಕೆ ಕೊರತೆ ಅನುಭವಿಸುತ್ತಿರುವ ನಡುವೆಯೂ ಪ್ರತಿ ದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆಯೂ ಏರುತ್ತಿದೆ. ಇದು ಈ ಹಿಂದಿನ ದಾಖಲೆಗಳನ್ನೂ ಮುರಿಯುತ್ತಿವೆ. ಪ್ರತಿದಿನ, ಕಳೆದ ಐದು ದಿನಗಳಿಂದ ಭಾರತವು ದಿನಕ್ಕೆ ಕನಿಷ್ಠ 200,000 ಪ್ರಕರಣಗಳನ್ನು ವರದಿ ಮಾಡುತ್ತಿದೆ ಮತ್ತು ಈ ಕಾಯಿಲೆಯಿಂದ ಪ್ರತಿದಿನ ಕನಿಷ್ಠ 1,000 ಜನರು ಸಾವನ್ನಪ್ಪುತ್ತಿದ್ದಾರೆ.

the fil favicon

SUPPORT THE FILE

Latest News

Related Posts