ಬೆಂಗಳೂರು: ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲು ವಿಫಲರಾಗಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್ ಮತ್ತು ಕಬ್ಬನ್ ಪಾರ್ಕ್ ಠಾಣಾಧಿಕಾರಿ ಮಾರುತಿ ಬಿ ಅವರ ವಿರುದ್ಧ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ದಾಖಲಿಸಲು ಜನಾಧಿಕಾರ ಸಂಘರ್ಷ ಪರಿಷತ್ ನಿರ್ಧರಿಸಿದೆ.
ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿರುವ ಬೆನ್ನಲ್ಲೇ ಕಮಲ್ ಪಂತ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ದೂರು ಸಲ್ಲಿಸಲು ಮುಂದಾಗಿರುವ ಜನಾಧಿಕಾರ ಸಂಘರ್ಷ ಪರಿಷತ್‌ನ ನಡೆ ಮಹತ್ವ ಪಡೆದುಕೊಂಡಿದೆ.
ಸಿಆರ್‌ಪಿಸಿ 156(3) ಅಡಿಯಲ್ಲಿ ಖಾಸಗಿ ದೂರು ದಾಖಲಿಸಲು ಮುಂದಾಗಿರುವ ಜನಾಧಿಕಾರ ಸಂಘರ್ಷ ಪರಿಷತ್, ಜಾರಕಿಹೊಳಿ ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ಪರವಾಗಿ ವಕೀಲ ವಕೀಲ ಜಗದೀಶ್ ಅವರು ನೀಡಿದ್ದ ದೂರನ್ನಾಧರಿಸಿ ಎಫ್‌ಐಆರ್ ದಾಖಲಿಸಲಾಗಿದೆಯೇ ವಿನಃ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿರಲಿಲ್ಲ. ಇದು ಪೊಲೀಸ್ ಅಧಿಕಾರಿಗಳ ಇಬ್ಬಂದಿತನಕ್ಕೆ ಸಾಕ್ಷಿಯಾಗಿತ್ತು.
ಮತ್ತೊಂದು ಸಂಗತಿ ಎಂದರೆ ಸಂತ್ರಸ್ತೆ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೊದಲೇ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಲು ಮೀನಮೇಷ ಎಣಿಸಿದ್ದರು. ಇನ್ನು, ಜಗದೀಶ್ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದರೂ ಸಂತ್ರಸ್ತೆ ಆಗಲೂ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್‌ನ್ನು ಏಕೆ ದಾಖಲಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಯನ್ನು ಜನಾಧಿಕಾರ ಸಂಘರ್ಷ ಪರಿಷತ್ ಎತ್ತಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಭಯಾ ಕಾಯ್ದೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ಮುಖ್ಯ ನ್ಯಾಯಾಧೀಶರಿಗೆ ಮನವಿಯನ್ನೂ ಸಲ್ಲಿಸಿತ್ತು. ಕಮಲ್ ಪಂತ್ ಮತ್ತಿತರ ಅಧಿಕಾರಿಗಳ ವಿರುದ್ಧದ ದೂರನ್ನು ಕಬ್ಬನ್ ಪಾರ್ಕ್ ಠಾಣಾಧಿಕಾರಿಗೆ ಪರಿಷತ್ ನೀಡಿತ್ತಾದರೂ ಠಾಣಾಧಿಕಾರಿ ದೂರನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಈ ಮೇಲ್ ಮತ್ತು ನೋಂದಾಯಿತ ಅಂಚೆ ಮೂಲಕ ಸಲ್ಲಿಸಿದ್ದ ದೂರನ್ನೂ ಕಬ್ಬನ್ ಪಾರ್ಕ್ ಠಾಣಾಧಿಕಾರಿ ಮುಕ್ತಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ದೂರಿನಲ್ಲಿಯೂ ಕಬ್ಬನ್ ಪಾರ್ಕ್ ಠಾಣಾಧಿಕಾರಿ ಮಾರುತಿ ಅವರ ಹೆಸರನ್ನೂ ಉಲ್ಲೇಖಿಸಿತ್ತು. ಆದರೆ ತನ್ನ ಮೇಲಿದ್ದ ಕ್ರಿಮಿನಲ್ ದೂರನ್ನು ತಾನೇ ಮುಕ್ತಾಯಗೊಳಿಸಿಕೊಂಡಿರುವುದು ವಿಶೇಷ.
ಈ ಪ್ರಕರಣದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರ ವಿರುದ್ಧ ದೂರು ಸಲ್ಲಿಸಿದ್ದ ದೂರುದಾರರನ್ನು ಅಪರಾಧಿಯಂತೆ ಪರಿಗಣಿಸಿ ಮತ್ತು ನಿಜವಾದ ಅಪರಾಧಿಯನ್ನೇ ಸಂತ್ರಸ್ತನೆಂದು ಪರಿಗಣಿಸಲಾಗುತ್ತಿದೆ. ಅಲ್ಲದೆ ಅಪರಾಧಿಯ ಪತ್ರದ ಮೇರೆಗೆ ಗೃಹ ಸಚಿವರು ಹಾಗೂ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಉನ್ನತ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನೇ ರಚಿಸಿರುವುದು ರಾಜಕೀಯ ಮತ್ತು ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ.
2013ರಲ್ಲಿ ಜಾರಿಗೆ ಬಂದಿರುವ ನಿರ್ಭಯಾ ಕಾಯ್ದೆ ಪ್ರಕಾರ ಲೈಂಗಿಕ ಕಿರುಕುಳದ ದೂರು ಕಂಡು ಬಂದಲ್ಲಿ ತತ್‌ಕ್ಷಣವೇ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್)ನ್ನು ದಾಖಲಿಸುವುದು ಕಡ್ಡಾಯ. ಆದರೆ ದೂರು ದಾಖಲಾದ 24 ಗಂಟೆಯೊಳಗೆ ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಾಗಿರಲಿಲ್ಲ. ಪೊಲೀಸ್ ಅಧಿಕಾರಿಗಳು ನಿರ್ಭಯಾ ಕಾಯ್ದೆ ಉಲ್ಲಂಘಿಸಿದ್ದಾರೆ ಎಂಬ ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಯಾವುದೇ ಸಂಜ್ಞೆ ಅಪರಾಧಕ್ಕೆ ಸಂಬಂಧಿಸಿದಂತೆ ದೂರು ಅಥವಾ ಮಾಹಿತಿ ಬಂದಲ್ಲಿ ಅದನ್ನು ತಕ್ಷಣವೇ ಸಿಆರ್‌ಪಿಸಿ ಸೆಕ್ಷನ್ 154ರ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡು ಅದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕಾದ ಜವಾಬ್ದಾರಿ ಪೋಲೀಸರ ಮೇಲಿದೆ. 154ರ ಅಡಿಯಲ್ಲಿ ಮಾಹಿತಿ ಅಥವಾ ದೂರನ್ನು ದಾಖಲಿಸದಿರುವುದು ಐಪಿಸಿ ಸೆಕ್ಷನ್ 166-ಎ ಕಲಂ ಪ್ರಕಾರ ಅಪರಾಧವಾಗಿರುತ್ತದೆ. ಅಂತಹ ಆರೋಪ ಸಾಬೀತಾದಲ್ಲಿ ಆ ಅಪರಾಧಕ್ಕೆ ಆ ಅಧಿಕಾರಿಗೆ 6 ತಿಂಗಳಿಗಿಂತಲೂ ಕಡಿಮೆ ಆಗದ ಸಜೆ ಮತ್ತು 2 ವರ್ಷದ ತನಕ ಹೆಚ್ಚಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶವಿದೆ.
ಇದು ತುಂಬಾ ಮುಖ್ಯವಾದ ಕಾನೂನು. ಇದು ಸಂಜ್ಞೆಯ ಅಪರಾಧಕ್ಕೆ ಸಂಬಂಧಿಸಿರುವುದರಿಂದ ದೂರು ಅಥವಾ ಮಾಹಿತಿಯನ್ನು ತಕ್ಷಣವೇ ದಾಖಲಿಸಿಕೊಳ್ಳಬೇಕಿತ್ತು. ನಂತರ ವಿಚಾರಣೆ ನಡೆಸಬಹುದು. ಆದರೆ ಈ ಸಂಬಂಧ ಪ್ರಯತ್ನ ನಡೆದಿಲ್ಲ. ಹಾಗಾಗಿ ಇದು ಪೊಲಿಸ್ ಅಧಿಕಾರಿಯ ಬೇಜವಾಬ್ದಾರಿ ಎಂಬುದು ತೋರಿಸುತ್ತದೆ. ಹೀಗಾಗಿ ಸೆಕ್ಷನ್ 166-ಎ ಅಡಿಯಲ್ಲಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮಾಜಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಟಿ ವೆಂಕಟೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.