ಸಾರಿಗೆ ಸಚಿವ ಸವದಿ ತವರು ಜಿಲ್ಲೆಯ ಹಳ್ಳಿಗಳಿಗಿಲ್ಲ ಸರ್ಕಾರಿ ಬಸ್‌ ಸೌಲಭ್ಯ

ಬೆಂಗಳೂರು; ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾಗಿದ್ದರೂ ರಾಜ್ಯದ ಹಲವು ಗ್ರಾಮಗಳು ಸರ್ಕಾರಿ ಬಸ್‌ಗಳನ್ನೇ ಕಂಡಿಲ್ಲ. ವಿಪರ್ಯಾಸವೆಂದರೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆ ಬೆಳಗಾವಿ ವಿಭಾಗದ ಹಲವು ಗ್ರಾಮಗಳಿಗೆ ಈವರೆವಿಗೂ ಸರ್ಕಾರಿ ಬಸ್‌ಗಳು ಸಂಚಾರವನ್ನೇ ಆರಂಭಿಸಿಲ್ಲ.

ವಿಶೇಷವೆಂದರೆ ಲಕ್ಷ್ಮಣ ಸವದಿ ಅವರು ಪ್ರತಿನಿಧಿಸುವ ಚಿಕ್ಕೋಡಿ ವಿಭಾಗದ(ಅಥಣಿ) ಎಲ್ಲಾ ಗ್ರಾಮಗಳಿಗೆ ಸರ್ಕಾರಿ ಬಸ್ ಸೌಲಭ್ಯ ಇದೆ. ಇಲ್ಲಿನ ಯಾವ ಗ್ರಾಮಗಳು ಕೂಡ ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತವಾಗಿಲ್ಲ. ಆದರೆ ಈ ವಿಭಾಗ ಹೊರತುಪಡಿಸಿ ಬೆಳಗಾವಿ ಜಿಲ್ಲೆಯ ಇತರ ವಿಭಾಗಗಳಲ್ಲಿನ ಗ್ರಾಮಗಳಿಗೆ ಸರ್ಕಾರಿ ಬಸ್‌ ಸಂಚಾರ ಸೌಲಭ್ಯ ನೀಡದೇ ತಾರತಮ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳಿಗೆ ಸರ್ಕಾರಿ ಬಸ್‌ ಸೌಲಭ್ಯವಿಲ್ಲ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ಸಂಚಾರ ಅಧಿಕಾರಿಯು ಅಥಣಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರಿಗೆ ಮಾಹಿತಿ ಒದಗಿಸಿದ್ದಾರೆ.

ವಿಭಾಗೀಯ ಕೇಂದ್ರ ಸ್ಥಾನಮಾನ ಹೊಂದಿರುವ ಬೆಳಗಾವಿ ವಿಧಾನಸಭಾ ವ್ಯಾಪ್ತಿಯ ಹೆಗ್ಗೇರಿ, ಕುದರಿ, ರಾಮದುರ್ಗ ವಿಧಾನಸಭಾ ವ್ಯಾಪ್ತಿಯ ನಾಗನೂರು ತಾಂಡಾ, ಖಾನಾಪುರ ವಿಧಾನಸಭಾ ವ್ಯಾಪ್ತಿಯ ಬಾಳಗುಂದ, ಅಮಗಾಂವ್, ಹೊಳದಾ, ಜಮಗಾಂವ, ಮತ್ತು ಗವಳಿ ಸೇರಿ 8 ಗ್ರಾಮಗಳಿಗೆ ಸರ್ಕಾರಿ ಬಸ್‌ಗಳ ಸೌಲಭ್ಯವೇ ಇಲ್ಲ ಎಂಬ ಸಂಗತಿಯನ್ನು ಭೀಮನಗೌಡ ಅವರು ಬಹಿರಂಗಗೊಳಿಸಿದ್ದಾರೆ.

ಬೆಳಗಾವಿ ವಿಭಾಗದ ಬೆಳಗಾವಿಯಲ್ಲಿ 162, ಬೈಲಹೊಂಗಲದಲ್ಲಿ 124, ರಾಮದುರ್ಗದಲ್ಲಿ 134, ಖಾನಾಪುರದಲ್ಲಿ 215 ಸೇರಿದಂತೆ ಒಟ್ಟು 635 ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ. ಆದರೆ ಇನ್ನೂ 8 ಗ್ರಾಮಗಳಿಗೆ ಬಸ್‌ ಸಂಚಾರ ಸೌಲಭ್ಯ ಕಲ್ಪಿಸಿಲ್ಲವೇಕೆ ಎಂಬ ಪ್ರಶ್ನೆಗೆ ವಿಭಾಗೀಯ ಸಂಚಾರ ಅಧಿಕಾರಿ ಮಾಹಿತಿಯಲ್ಲಿ ಉತ್ತರಿಸಿಲ್ಲ.

ಕರ್ನಾಟಕ ಸರ್ಕಾರದ ಡಿಸಿಎಂ ಮತ್ತು ಸಾರಿಗೆ ಸಚಿವ ಹುದ್ದೆ ಪಡೆದಿರುವ ಲಕ್ಷ್ಮಣ ಸವದಿ ಅವರ ಸ್ವಂತ ಜಿಲ್ಲೆಯ 8 ಹಳ್ಳಿಗಳು ಸರ್ಕಾರಿ ಬಸ್‌ ಸೌಲಭ್ಯ ವಂಚಿತ ಆಗಿವೆ. ಇದೊಂದು ದೌರ್ಭಾಗ್ಯ. ಈ ಕೂಡಲೇ ಸಾರಿಗೆ ಸಚಿವರು ತಮ್ಮ ತವರು ಜಿಲ್ಲೆಯಲ್ಲಿ ಸರ್ಕಾರಿ ಬಸ್ ವಂಚಿತ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ  ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಿದ್ದೇನೆ

ಭೀಮನಗೌಡ ಪರಗೊಂಡ, ಮಾಹಿತಿ ಹಕ್ಕು ಕಾರ್ಯಕರ್ತ

ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ, ಉಮೇಶ್‌ ಕತ್ತಿ ಸೇರಿದಂತೆ ಸಕ್ಕರೆ ಸಾಹುಕಾರರನ್ನೇ ಹೊಂದಿರುವ ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳಿಗೆ ಈವರೆವಿಗೂ ಸರ್ಕಾರಿ ಬಸ್‌ಗಳ ಸಂಚಾರ ಇಲ್ಲ. ಸರ್ಕಾರವನ್ನೂ ತಮ್ಮ ಅಂಕೆಯಲ್ಲಿಟ್ಟುಕೊಳ್ಳುವ ಅಥವಾ ನಿಯಂತ್ರಿಸುವ ಪ್ರಭಾವಿಗಳಿದ್ದರೂ ಜಿಲ್ಲೆಯ ಹಲವು ಗ್ರಾಮಗಳಿಗೆ ಸರ್ಕಾರಿ ಬಸ್‌ ಸಂಚಾರ ಸೌಲಭ್ಯವಿಲ್ಲದಿರುವುದು ಅವರೆಲ್ಲರ ಆಡಳಿತ ವೈಖರಿಗೆ ಕೈಗನ್ನಡಿ ಹಿಡಿದಂತಾಗಿದೆ.

the fil favicon

SUPPORT THE FILE

Latest News

Related Posts