ವಿಧಾನಸಭೆ ಸಚಿವಾಲಯ ಅಧಿಕಾರಿಯ ಅನಧಿಕೃತ ಕೆಲಸ; ಒಪ್ಪಿಕೊಂಡ ಸಿಎಂ ಕಚೇರಿ?

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿ ಹಿರಿಯ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಸಿ ಹೊಸೂರ್‌ ಅವರ ಕಚೇರಿಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬ ಆರೋಪಕ್ಕೆ ಪೂರಕ ದಾಖಲೆ ಲಭ್ಯವಾಗಿದೆ.

ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ ಪಿ ಪ್ರಶಾಂತ್‌ಕುಮಾರ್‌ ಅವರು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯೇ ಪರೋಕ್ಷವಾಗಿ ಒಪ್ಪಿಕೊಂಡಿದೆ. ಆರ್‌ಟಿಐನಡಿಯಲ್ಲಿ ನೀಡಿರುವ ಮಾಹಿತಿಯಲ್ಲಿ ಎಂ ಪಿ ಪ್ರಶಾಂತ್‌ಕುಮಾರ್‌ ಅವರ ಹೆಸರು ಇಲ್ಲದಿರುವುದು ಅವರು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪವನ್ನು ಇನ್ನಷ್ಟು ಬಲಪಡಿಸಿದಂತಾಗಿದೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಹಿರಿಯ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಹೊಸೂರ್‌, ಶೀಘ್ರಲಿಪಿಗಾರ ಬಸವಂತರಾಯ, ಕಿರಿಯ ಸಹಾಯಕ ಚಂದ್ರಪ್ಪ ಬಿ ಕೆ, ದಲಾಯತ್‌ ಬಸವರಾಜು ಮತ್ತು ಕೃಷ್ಣಪ್ಪ ಅವರ ಹೆಸರುಗಳನ್ನಷ್ಟೇ ಬಹಿರಂಗಪಡಿಸಿರುವ ಮುಖ್ಯಮಂತ್ರಿಗಳ ಸಚಿವಾಲಯವು ಕಾರ್ಯದರ್ಶಿಯ ಅಪ್ತ ಕಾರ್ಯದರ್ಶಿ ಎಂದು ಸಹಿ ಮಾಡಿರುವ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ ಪಿ ಪ್ರಶಾಂತ್‌ಕುಮಾರ್‌ ಅವರ ಹೆಸರನ್ನು ಮಾಹಿತಿಯಲ್ಲಿ ಒದಗಿಸಿಲ್ಲ.

‘ಕಚೇರಿ ಕೆಲಸದ ಅಗತ್ಯದನುಸಾರವಾಗಿ ಮುಖ್ಯಮಂತ್ರಿಗಳ ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯ ಕಚೇರಿಯ ಸಿಬ್ಬಂದಿಯವರ ಸೇವೆಯನ್ನು ಪಡೆಯಲಾಗುತ್ತದೆ,’ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯವು ಆರ್‌ಟಿಐ ಅಡಿಯಲ್ಲಿ ಒದಗಿಸಿದೆ. ಆದರೆ ಸೇವೆ ಪಡೆಯುತ್ತಿರುವ ವಿಧಾನಸೌಧದಲ್ಲಿ ಅನ್ಯ ಕಚೇರಿಯ ಸಿಬ್ಬಂದಿ ಹೆಸರು, ಪದನಾಮ ಮತ್ತು ಎಂದಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿವರಗಳನ್ನೂ ಬಹಿರಂಗಪಡಿಸದೆ ಮುಚ್ಚಿಟ್ಟಿರುವುದು ಒದಗಿಸಿರುವ ಮಾಹಿತಿಯಿಂದ ಮೇಲ್ನೋಟಕ್ಕೆ ಗೊತ್ತಾಗಿದೆ.

ಇನ್ನು, ಅನ್ಯ ಕಚೇರಿಯ ಸಿಬ್ಬಂದಿ ಸೇವೆಯನ್ನು ಹೇಗೆ ಪಡೆಯಲಾಗುತ್ತಿದೆ, ನಿಯೋಜನೆಯೇ ಅಥವಾ ಅನ್ಯ ಕರ್ತವ್ಯದ ಮೇರೆಗೋ ಎಂಬ ವಿವರಗಳು ಮಾಹಿತಿಯಲ್ಲಿ ಒದಗಿಸಿಲ್ಲ. ಅನ್ಯ ಕಚೇರಿಯಿಂದ ಸಿಬ್ಬಂದಿ ಸೇವೆ ಪಡೆಯುತ್ತಿದೆ ಎಂಬ ಮಾಹಿತಿ ನೀಡಿರುವ ಮುಖ್ಯಮಂತ್ರಿಗಳ ಸಚಿವಾಲಯವು ಅನ್ಯ ಕಚೇರಿ ಸಿಬ್ಬಂದಿ ವಿವರಗಳನ್ನೇಕೆ ಒದಗಿಸಿಲ್ಲ ಎಂಬುದು ಪ್ರಶ್ನಾರ್ಹ. ಅಲ್ಲದೆ ಕಾರ್ಯದರ್ಶಿ ಕಚೇರಿಗೆ ಅನ್ಯ ಕಚೇರಿಯ ಸಿಬ್ಬಂದಿ ಸೇವೆಯನ್ನು ಪಡೆಯುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ ಎಂದು ನೀಡಿರುವ ಮಾಹಿತಿಯೂ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಗೆ ಅನ್ಯ ಕರ್ತವ್ಯ ಅಥವಾ ನಿಯೋಜನೆ ಮೇಲೆ ತೆರಳದಿದ್ದರೂ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ ಪಿ ಪ್ರಶಾಂತ್‌ಕುಮಾರ್‌ ಎಂಬುವರು ಮುಖ್ಯಮಂತ್ರಿ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಯಾಗಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ ಅವರ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಹಲವು ಟಿಪ್ಪಣಿಗಳನ್ನು ಹೊರಡಿಸಿದ್ದರು. ಕಾರ್ಯದರ್ಶಿಗಳಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಲ್ಲಿ ಅವರ ಹೆಸರನ್ನು ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗಪಡಿಸಲಿಲ್ಲವೇಕೆ ಎಂಬ ಪ್ರಶ್ನೆಗಳೂ ಇದೀಗ ಕೇಳಿ ಬಂದಿವೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಗೆ ಅನ್ಯ ಕರ್ತವ್ಯ ಅಥವಾ ನಿಯೋಜನೆ ಮೇಲೆ ತೆರಳದಿದ್ದರೂ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ ಪಿ ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಯಾಗಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಹಲವು ಟಿಪ್ಪಣಿಗಳನ್ನು ಹೊರಡಿಸಿದ್ದನ್ನು ‘ದಿ ಫೈಲ್‌’ ಹೊರಗೆಡವಿತ್ತು.

ಪ್ರಕರಣದ ಹಿನ್ನೆಲೆ

ಕರ್ನಾಟಕ ವಿಧಾನಸಭೆ ಸಚಿವಾಲಯದ ಶಾಖಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ ಪಿ ಪ್ರಶಾಂತ್‌ಕುಮಾರ್‌ ಅವರಿಗೆ 2020ರ ಮೇ 29ರಂದು ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ದೊರೆತಿತ್ತು. ಇದಾದ ನಂತರ ಎಂ ಪಿ ಪ್ರಶಾಂತ್‌ಕುಮಾರ್‌ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಪ್ರಶಾಂತ್‌ಕುಮಾರ್‌ ಅವರು ಅನ್ಯ ಕರ್ತವ್ಯ ಮತ್ತು ನಿಯೋಜನೆ ಮೇಲೆ ತೆರಳಿರುವುದಿಲ್ಲಎಂದು ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಬಿ ಎಂ ಶಂಭು ಅವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದರು.

ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್‌ ಎಸ್‌ ಹೊಸೂರ್‌ ಅವರ ಕಚೇರಿಗೆ ಅನ್ಯ ಕರ್ತವ್ಯ/ ನಿಯೋಜನೆ ಮೇಲೆ ತೆರಳದಿದ್ದರೂ ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಿರುವುದು ಮತ್ತು ಅವರ ಆಪ್ತ ಕಾರ್ಯದರ್ಶಿ ಎಂದು ಸಹಿ ಮಾಡಿ ಟಿಪ್ಪಣಿಗಳನ್ನು ಹೊರಡಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.

ಮುಖ್ಯಮಂತ್ರಿ ಕಾರ್ಯದರ್ಶಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಜರಾತಿ ದೃಢೀಕರಣ, ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಸರ್ಕಾರಿ ವಸತಿಗೃಹಗಳಲ್ಲಿ ಕೊಠಡಿ ಕಾಯ್ದಿರಿಸುವುದು ಮತ್ತು ಅನ್ಯ ಕರ್ತವ್ಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರಕ್ಕೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿಯೇ ಸಹಿ ಮಾಡಿ ದೃಢೀಕರಿಸಿದ್ದಾರೆ. ಅಲ್ಲದೆ ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯ ರವಾನೆ ಪುಸ್ತಕದಲ್ಲಿ ಒಎಸ್‌ಡಿ ಎಂದೇ ಸಹಿ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿತ್ತು.

ಗಿರೀಶ್‌ ಸಿ ಹೊಸೂರ್‌ ಅವರಿಗೆ ಲೋಕೋಪಯೋಗಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೃಷಿ, ಸಾರಿಗೆ, ಅಲ್ಪಸಂಖ್ಯಾತರ ಕಲ್ಯಾಣ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಧಾನಸಭೆ, ವಿಧಾನಪರಿಷ್‌ ಸದಸ್ಯರು, ಸಂಸತ್‌ ಸದಸ್ಯರೊಂದಿಗೆ ಸಮನ್ವಯ, ಇಂಧನ ಇಲಾಖೆಯ ಸೇವೆಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳ ಕಚೇರಿ, ಅಧಿಕಾರಿ, ನೌಕರರ ವರ್ಗಾವಣೆ ವಿಷಯಗಳು ಸೇರಿದಂತೆ ಹಲವು ಕರ್ತವ್ಯಗಳು ಹಂಚಿಕೆಯಾಗಿದೆ.

SUPPORT THE FILE

Latest News

Related Posts