ಬೆಂಗಳೂರು; ಅವಶ್ಯಕತೆಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಕೊಳ್ಳದಿರುವುದು ಮತ್ತು ಅನುದಾನ ಕಲ್ಪಿಸಿಕೊಳ್ಳದಿರುವುದು ಸೇರಿದಂತೆ ಅಧಿಕಾರಿಗಳ ಲೋಪದಿಂದಾಗಿ ಕೈ ಮಗ್ಗ ನೇಕಾರರ ವಿದ್ಯುತ್ ಬಾಕಿ 268.94 ಕೋಟಿ ರು. ಬಾಕಿ ಉಳಿದಿದೆ. ಸರ್ಕಾರ ಅನುದಾನ ನೀಡುತ್ತಿದೆಯಾದರೂ ಈ ಅನುದಾನವೆಲ್ಲ ಬಡ್ಡಿ ಮೊತ್ತಕ್ಕೆ ಜಮಾ ಆಗಿರುವ ಸಾಧ್ಯತೆಗಳೇ ಹೆಚ್ಚಿವೆ. ಇಷ್ಟೊಂದು ಹೊಣೆಗಾರಿಕೆ ಬೃಹತ್ ಪ್ರಮಾಣದಲ್ಲಿ ಬೆಳೆದ ನಂತರ ಕೈಮಗ್ಗ ಮತ್ತು ಜವಳಿ ಇಲಾಖೆ ಎಚ್ಚೆತ್ತುಕೊಂಡಿದೆ.
ಕೈಮಗ್ಗ ವಿದ್ಯುತ್ ನೇಕಾರರ ಬಾಕಿ ವಿದ್ಯುತ್ ಶುಲ್ಕ ಮೊತ್ತದಲ್ಲಿ ಸರ್ಕಾರದಿಂದ ಒದಗಿಸಬೇಕಾದ ಬಾಕಿ ಸಹಾಯ ಧನ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೇರವಾಗಿ ಬಿಡುಗಡೆಗೊಳಿಸಬೇಕು ಎಂದು ಇಂಧನ ಇಲಾಖೆ ಪ್ರಸ್ತಾಪಿಸಿರುವ ಬೆನ್ನಲ್ಲೇ ನೇಕಾರರ ಬಾಕಿ ಉಳಿದಿರುವ ವಿದ್ಯುತ್ ಶುಲ್ಕ ಮೊತ್ತವೂ ಮುನ್ನೆಲೆಗೆ ಬಂದಿದೆ. ನೇಕಾರರ ಸಮ್ಮಾನ ಯೋಜನೆ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ವಿದ್ಯುತ್ ಶುಲ್ಕ ಪಾವತಿಯಾಗದೇ ಬಾಕಿ ಉಳಿದಿರುವ ಸಂಬಂಧ ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.
ಬಾಕಿ ವಿದ್ಯುತ್ ಶುಲ್ಕ ಮೊತ್ತಕ್ಕೆ ಸಂಬಂಧಿಸಿದಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯು ಆರ್ಥಿಕ ಇಲಾಖೆಗೆ ಈ ಸಂಬಂಧ ಸ್ಪಷ್ಟೀಕರಣ ಕೋರಿದೆ. ಈ ಸಂಬಂಧ ಇಲಾಖೆಗೆ ಸಲ್ಲಿಸಿರುವ ಟಿಪ್ಪಣಿ ಹಾಳೆ ‘ದಿ ಫೈಲ್’ಗೆ ಲಭ್ಯವಾಗಿದೆ.
268.94 ಕೋಟಿ ಮೊತ್ತದಷ್ಟು ವಿದ್ಯುತ್ ಶುಲ್ಕ ಬಾಕಿ ಉಳಿದಿರುವ ಕಾರಣ ಈ ಮೊತ್ತವನ್ನು ಪಾವತಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯು ಹೆಚ್ಚಿನ ಅನುದಾನ ಕೋರಿತ್ತು. ಅನುದಾನ ಹಂಚಿಕೆಯಾಗದ ಕಾರಣ ಇಷ್ಟೊಂದು ಮೊತ್ತ ಬಾಕಿ ಉಳಿಯಲು ಕಾರಣ ಎಂದು ಆಡಳಿತ ಇಲಾಖೆಯು ಆರ್ಥಿಕ ಇಲಾಖೆಗೆ ಮಾಹಿತಿ ಒದಗಿಸಿದೆ.
ಆದರೆ ಆರ್ಥಿಕ ಇಲಾಖೆಯು ನೇಕಾರರ ಪ್ಯಾಕೇಜ್‌ನಡಿಯಲ್ಲಿ ಒಟ್ಟಾರೆಯಾಗಿ ಅನುದಾನವನ್ನು ಹಂಚಿಕೆ ಮಾಡುತ್ತದೆ. ಆದ್ಯತೆ ಮೇಲೆ ವೆಚ್ಚಗಳನ್ನು ಅವಶ್ಯಕತೆಗೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ರೂಪಿಸಿಕೊಳ್ಳದಿರುವುದು ಕೂಡ ವಿದ್ಯುತ್ ಶುಲ್ಕ ಬಾಕಿ ಉಳಿಯಲು ಮತ್ತೊಂದು ಕಾರಣ ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಳ್ಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಈವರೆವಿಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ.
ಆದರೆ ಆರ್ಥಿಕ ಇಲಾಖೆಯು ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪಿಕೊಂಡಿಲ್ಲ. ‘ಅವಶ್ಯಕತೆಗೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ಆಡಳಿತ ಇಲಾಖೆಯು ರೂಪಿಸಿಕೊಳ್ಳಬೇಕು. ಹೀಗೆ ಹೊಣೆಗಾರಿಕೆ ಬೃಹತ್ ಪ್ರಮಾಣದಲ್ಲಿ ಬೆಳೆದ ನಂತರ ಅದರಲ್ಲೂ ಇಂಧನ ಇಲಾಖೆ ಬೇಡಿಕೆ ಕಳಿಸಿ ಆರ್ಥಿಕ ಇಲಾಖೆ ಸ್ಪಷ್ಟೀಕರಣ ಕೋರಿದಾಗ ನೀಡಿರುವ ಈ ಉತ್ತರವೂ ಸಮರ್ಪಕವಾಗಿಲ್ಲ,’ ಎಂದು ಆಡಳಿತ ಇಲಾಖೆಗೆ ಅಭಿಪ್ರಾಯಿಸಿದೆ.
ವಿದ್ಯುತ್ ಸಹಾಯಧನಕ್ಕೆ ವಾರ್ಷಿಕವಾಗಿ 70-75 ಕೋಟಿ ರು. ಬೇಕಾಗುತ್ತದೆ. ಅವಶ್ಯವಿರುವ ಅನುದಾನ ಹಂಚಿಕೆಯಾಗದ ಕಾರಣ ಬಾಕಿ ಇದೆ. ಅಲ್ಲದೆ ಹಿಂದಿನ ವರ್ಷಗಳಲ್ಲಿ ಆರ್ಥಿಕ ವರ್ಷಾಂತ್ಯದಲ್ಲಿ ಅನುದಾನವು ಸಮರ್ಪಕವಾಗಿ ವೆಚ್ಚವಾಗದೆ ಉಳಿತಾಯ ಮಾಡಲಾಗಿದೆ. ಇದರ ಬದಲಿಗೆ ಇಂತಹ ಬಾಕಿಗಳನ್ನು ಪಾವತಿಸಬಹುದಿತ್ತು. ಆದರೆ ಅಧಿಕಾರಿಗಳು ಬಾಕಿ ಪಾವತಿಸಲು ಕ್ರಮ ಕೈಗೊಂಡಿಲ್ಲ ಎಂಬುದು ಗೊತ್ತಾಗಿದೆ.
ನೇಕರಾರರ ಪ್ಯಾಕೇಜ್‌ಗೆ ಸಂಬಂಧಿಸಿದಂತೆ 2016-17ರಲ್ಲಿ ಒಟ್ಟಾರೆ 27126.6 ಲಕ್ಷ ರು.ಗಳನ್ನು ನೀಡಲಾಗಿತ್ತು. ಈ ಅವಧಿಯಲ್ಲಿ ಯಾವುದೇ ಸಬ್ಸಿಡಿ ನೀಡಲಾಗಿರಲಿಲ್ಲ. ಅದೇ ರೀತಿ 2017-18ರಿಂದ 2021-21ರಲ್ಲಿ ಇತರೆ ವೆಚ್ಚಗಳಿಗೆ ಅನುದಾನ ನೀಡದ ಸರ್ಕಾರವು ಸಬ್ಸಿಡಿ ಮೊತ್ತವನ್ನು ನೀಡಿತ್ತು. 2017-18ರಲ್ಲಿ ಒಟ್ಟಾರೆ 29374 ಲಕ್ಷ ರು., 1080,690 ಲಕ್ಷ ರು., 2019-20ರಲ್ಲಿ 28131.82 ಲಕ್ಷ ರು., 2020-21ರಲ್ಲಿ ಒಟ್ಟಾರೆ 13708.97 ಲಕ್ಷ ರು.ಗಳನ್ನು ಪ್ಯಾಕೇಜ್‌ನಲ್ಲಿ ಘೋಷಿಸಲಾಗಿತ್ತು.
ಬಿಡುಗಡೆಯಾಗುವ ಸಹಾಯಧನವನ್ನು ಮೊದಲಿಗೆ ಬಡ್ಡಿಗೆ ಜಮೆ ತೆಗೆದುಕೊಂಡು ನಂತರ ಅಸಲಿಗೆ ಜಮೆ ತೆಗೆದುಕೊಳ್ಳಲಾಗುತ್ತದ. ಅಂದರೆ ಇಲಾಖೆಯು ಪಾವತಿಸುತ್ತಿರುವ ಅನುದಾನವೆಲ್ಲಾ ಬಹುಶಃ ಬಡ್ಡಿ ಮೊತ್ತಕ್ಕೆ ಜಮೆ ಆಗಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ಗೊತ್ತಾಗಿದೆ.