ಸೇಫ್‌ ಸಿಟಿ ಟೆಂಡರ್‌ ಗೋಲ್ಮಾಲ್‌; ಸಮಗ್ರ ವರದಿ ಸಲ್ಲಿಸಲು ಪಿಎಸಿ ಸೂಚನೆ

ಬೆಂಗಳೂರು; ನಿರ್ಭಯಾ ಅನುದಾನದಡಿಯಲ್ಲಿ ಸೇಫ್‌ ಸಿಟಿ ಯೋಜನೆಯ ಟೆಂಡರ್‌ ಪ್ರಕ್ರಿಯೆ ಕುರಿತು ಸಮಗ್ರ ವರದಿ ಸಲ್ಲಿಸಲು ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಒಳಾಡಳಿತ ಇಲಾಖೆಗೆ ಸೂಚಿಸಿದೆ.

ಟೆಂಡರ್‌ ಪ್ರಕ್ರಿಯೆಯನ್ನು ತನಿಖೆಗೊಳಪಡಿಸುವುದು ಮತ್ತು ಸರ್ಕಾರದ ಹಣವನ್ನು ಸಂರಕ್ಷಣೆ ಮಾಡುವ ಸಂಬಂಧ ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಅವರು ಸಲ್ಲಿಸಿದ್ದ ಮನವಿ ಆಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಮಗ್ರ ವರದಿ ಸಲ್ಲಿಸಲು ಸೂಚಿಸಿದೆ. ಈ ಕುರಿತು ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು 2021ರ ಜನವರಿ 1ರಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯರ ಸಂರಕ್ಷಣೆಯ ನಿರ್ಭಯಾ ಯೋಜನೆಯ ಟೆಂಡರ್ ಕುರಿತಾದ ಪ್ರಕ್ರಿಯೆ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ಕಿತ್ತಾಟವು ಸಂಘರ್ಷಕ್ಕೆ ತಿರುಗಿತ್ತು. ಮೊದಲ ಹಂತದ 667 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಬೆಂಗಳೂರು ಮಹಾನಗರದಲ್ಲಿ ಸಿಸಿಟಿವಿ ಅಳವಡಿಕೆ ಸಂಬಂಧ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹಿರಿಯ ಅಧಿಕಾರಿಗಳೇ ಪರಸ್ಪರ ಅರೋಪಿಸಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸಬೇಕು ಎಂದು ರಮೇಶ್‌ ಬಾಬು ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಬರೆದಿದ್ದ ಪತ್ರದಲ್ಲಿ ಕೋರಿದ್ದರು.

ರಮೇಶ್‌ ಬಾಬು ಅವರು ಬರೆದಿರುವ ಪತ್ರವನ್ನಾಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಮಗ್ರ ವರದಿ ಕೇಳಿರುವುದು ಕುತೂಹಲ ಮೂಡಿಸಿದೆ.

ಪತ್ರದಲ್ಲಿದ್ದ ಪ್ರಮುಖಾಂಶಗಳು

1. ನಿರ್ಭಯಾ ಯೋಜನೆಯ ನಿರ್ವಹಣೆ ಗೃಹ ಇಲಾಖೆ ಮುಖಾಂತರ ಬೆಂಗಳೂರು ಪೊಲೀಸ್ ಇಲಾಖೆಗೆ ವಹಿಸಿರುವುದು ಸರಿ ಇದೆಯೇ?

2. ನಿರ್ಭಯಾ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿದ್ದು ಮಹಿಳೆಯರ ಸಂರಕ್ಷಣೆ ಸಂಬಂಧ ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗಿದೆಯೇ?

3. ಯೋಜನೆಯ ಜಾರಿಯಲ್ಲಿ ವಿಳಂಬವಾಗಿದೆಯೇ? ಆಗಿದ್ದರೆ ಅದಕ್ಕೆ ಯಾರು ಹೊಣೆಗಾರರು?

4. ಪಾರದರ್ಶಕತೆ ಕಾಯ್ದೆ ಮತ್ತು ಟೆಂಡರ್ ನಿಯಮಾನುಸಾರ ಟೆಂಡರ್ ಕರಿಯಲಾಗಿತ್ತೇ? ಎರಡು ಬಾರಿ ಟೆಂಡರ್ ಮುಂದೂಡಲು ಕಾರಣವೇನು?

5. ಟೆಂಡರ್ ಕುರಿತಾದ ದೂರುಗಳು ವಾಸ್ತವ ಲೋಪಗಳನ್ನು ಹೊಂದಿದೆಯೇ? ಟೆಂಡರ್ ಮುಂದೂಡಲು ಬೇನಾಮಿ ಹೆಸರಲ್ಲಿ ದೂರು ನೀಡಿದ್ದಾರೆಯೇ?

6. ಹಿರಿಯ ಐಪಿಎಸ್‌ ಅಧಿಕಾರಿಯೇ ಟೆಂಡರ್ ಕುರಿತು ಲಿಖಿತ ದೂರು ನೀಡಿದರೂ ಮುಖ್ಯ ಕಾರ್ಯದರ್ಶಿ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ?

7. ಟೆಂಡರ್ ಮೂಲಕ ಅನುಕೂಲ ಪಡೆದುಕೊಳ್ಳುವ ಕಾರಣಕ್ಕೆ ಟೆಂಡರ್ ನಲ್ಲಿ ಪಾಲ್ಗೊಂಡವರು ಅಧಿಕಾರಿಗಳ ನಡುವೆ ವೈಮನಸ್ಸು ಬಿತ್ತಿದ್ದಾರೆಯೇ?

8. ಸೇವಾ ನಿಯಮಗಳಿಗೆ ವಿರುದ್ಧವಾಗಿ ಪರಸ್ಪರ ಹೇಳಿಕೆ ನೀಡಿ ಮಾಧ್ಯಮಗಳ ಮೂಲಕ ಅಧಿಕಾರಿಗಳು ಆರೋಪ ಮಾಡಿಕೊಂಡರೂ ಅದನ್ನು ತಡೆಯಲು ಏಕೆ ಪ್ರಯತ್ನ ಮಾಡಲಿಲ್ಲ?

9. ಸರ್ಕಾರದ ಹಣ ಸಂರಕ್ಷಣೆ ಮಾಡುವ ಮತ್ತು ಪೋಲಾಗದಂತೆ ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಗೃಹ ಇಲಾಖೆ ಮಾಡಿದೆಯೇ?

10. ಟೆಂಡರ್ ಪ್ರಕ್ರಿಯೆ ಇನ್ನೂ ಪಾರದರ್ಶಕತೆ ಮೂಲಕ ನಡೆಸಿ ಮಹಿಳಾ ಸಂರಕ್ಷಣೆಗೆ ನಿರ್ಭಯಾ ಯೋಜನೆಯನ್ನು ಮಾದರಿಯಾಗಿ ಮತ್ತು ಪರಿಣಾಮಕಾರಿಯಾಗಿ ಬೆಂಗಳೂರು ಮಹಾ ನಗರದಲ್ಲಿ ಜಾರಿಗೊಳಿಸಲು ಸಾಧ್ಯವೇ?

‘ಕರ್ನಾಟಕ ರಾಜ್ಯದ ಇಬ್ಬರು ಐಪಿಎಸ್‌ ಅಧಿಕಾರಿಗಳ ತಿಕ್ಕಾಟ ರಾಜ್ಯ ಸರ್ಕಾರದ ಅಡಳಿತ ಯಂತ್ರದ ಕುಸಿತಕ್ಕೆ ಸಾಕ್ಷಿಯಾಗಿದೆ. ನಿವೃತ್ತಿ ಅಂಚಿನಲ್ಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಐಪಿಎಸ್‌ ಅಧಿಕಾರಿಗಳ ತಿಕ್ಕಾಟವನ್ನು ನಿರ್ವಹಿಸಲು ವಿಫಲವಾಗಿದ್ದಾರೆ,’ ಎಂದು ರಮೇಶ್‌ಬಾಬು ಅವರು ಪತ್ರದಲ್ಲಿ ಆರೋಪಿಸಿದ್ದರು.

ಹಿರಿಯ ಐಪಿಎಸ್‌ ಮತ್ತು ಐಎಎಸ್‌ ಅಧಿಕಾರಿಗಳು ಬಹಿರಂಗ ಹೇಳಿಕೆಗಳ ಮೂಲಕ ಬೀದಿ ಜಗಳ ಮಾಡಲು ಅವಕಾಶ ನೀಡಿದ್ದಾರೆ. ಭ್ರಷ್ಟಾಚಾರ ಆರೋಪದ ಮೇಲೆ ಈ ರೀತಿ ಐಪಿಎಸ್‌ ಅಧಿಕಾರಿಗಳು ಬಹಿರಂಗವಾಗಿ ಕಾಳಗ ನಡೆಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ರಾಜ್ಯದ ಸರ್ಕಾರಿ ನೌಕರರ ಮತ್ತು ಐಎಎಸ್‌, ಐಪಿಎಸ್‌ ಅಧಿಕಾರಿಗಳ ಸೇವಾ ನಿಯಮಗಳನ್ನು ಗಾಳಿಗೆ ತೂರಿ ಇಬ್ಬರು ಹಿರಿಯ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಬರೆಯದೆ ಪತ್ರಗಳನ್ನು ಮಾಧ್ಯಮಗಳಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳ ವೈಫಲ್ಯವೇ ಐಪಿಎಸ್‌ ಹಿರಿಯ ಅಧಿಕಾರಿಗಳ ಜಗಳ ಬೀದಿಗೆ ಬರಲು ಕಾರಣವಾಗಿದೆ ಎಂದೂ ಆರೋಪಿಸಿದ್ದರು.

 

ಟೆಂಡರ್‌ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗೃಹ ಕಾರ್ಯದರ್ಶಿ ರೂಪ ಮೌದ್ಗಿಲ್‌ ಅವರು ನೇರವಾಗಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರ ವಿರುದ್ಧ ಆರೋಪಿಸಿದ್ದರು. ಇದಾದ ನಂತರ ಹೇಮಂತ್‌ ನಿಂಬಾಳ್ಕರ್‌ ಮತ್ತು ರೂಪ ಮೌದ್ಗಿಲ್‌ ನಡುವೆ ಜಟಾಪಟಿ ನಡೆದಿತ್ತು.

ಅಧಿಕಾರಿಗಳಿಬ್ಬರ ನಡೆಯುತ್ತಿದ್ದ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದ್ದರೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬದಲಿಗೆ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕೈ ತೊಳೆದುಕೊಂಡಿದ್ದರು. ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪ ಕುರಿತು ಗೃಹ ಸಚಿವರಾಗಲಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸೊಲ್ಲೆತ್ತಿರಲಿಲ್ಲ.

ಪ್ರಕರಣದ ಹಿನ್ನೆಲೆ

ಬೆಂಗಳೂರು ನಗರದಲ್ಲಿ ನಿರ್ಭಯ ಯೋಜನೆಯಡಿ ಸೇಫ್‌ ಸಿಟಿ ಪ್ರಾಜೆಕ್ಟ್‌ನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು 667.00 ಕೋಟಿ ರು.ಗೆ ಮಂಜೂರಾತಿ ನೀಡಿತ್ತು. ಇದರಲ್ಲಿ ಕೇಂದ್ರದ ಪಾಲಿನ 167.26 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 111.56 ಕೋಟಿ ಒಟ್ಟು 278.76 ಕೋಟಿ ರು. ಅನುದಾಕ್ಕೆ ಮಂಜೂರಾತಿ ದೊರೆತಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಮಟ್ಟದ ಸಭೆ ನಡೆದಿತ್ತು. ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲು 2019ರ ಸೆಪ್ಟಂಬರ್‌ 7ರಂದು ಟೆಂಡರ್‌ ಆಹ್ವಾನ ಸಮಿತಿ, ಟೆಂಡರ್‌ ಪರಿಶೀಲನಾ ಸಮಿತಿ ಮತ್ತು ಅಂಗೀಕಾರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಪೈಕಿ ಟೆಂಡರ್‌ ಆಹ್ವಾನ ಮತ್ತು ಪರಿಶೀಲನಾ ಸಮಿತಿಗೆ ಹೆಚ್ಚುವರಿ ಪೊಲೀಸ್‌ ಆಯುಕ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.

ಪ್ರಧಾನಿ ಕಚೇರಿ ಮೆಟ್ಟಿಲೇರಿತ್ತು ಟೆಂಡರ್‌ ಪ್ರಕರಣ

ಈ ಯೋಜನೆಗೆ ಆರಂಭದಲ್ಲಿ ಪೊಲೀಸ್‌ ಇಲಾಖೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಮತ್ತು ಕಂಪನಿಯನ್ನು ಅಯ್ಕೆ ಮಾಡಿದ್ದ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಪ್ರಧಾನಿ ಕಚೇರಿಗೆ 2020ರ ಜೂನ್‌ 29ರಂದು ದೂರು ಸಲ್ಲಿಸಿತ್ತು. ಟೆಂಡರ್‌ನಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ಲಾರ್ಸನ್‌ ಅಂಡ್‌ ಟೋಬ್ರೋ (ಎಲ್‌ ಅಂಡ್‌ ಟಿ), ಮಾಟ್ರಿಕ್ಸ್‌ ಸೆಕ್ಯುರಿಟಿ ಅಂಡ್‌ ಸರ್ವೇಲೆಯನ್ಸ್‌ ಪ್ರೈವೈಟ್‌ ಲಿಮಿಟೆಡ್‌, ಎನ್‌ಸಿಸಿ ಲಿಮಿಟೆಡ್‌ ಭಾಗವಹಿಸಿದ್ದವು.

ಹಿತಾಸಕ್ತಿ ಸಂಘರ್ಷ ಆರೋಪ

ಟೆಂಡರ್‌ನಲ್ಲಿ ಭಾಗವಹಿಸಿದ್ದ ಮ್ಯಾಟ್ರಿಕ್ಸ್‌ ಮತ್ತು ಎನ್‌ಸಿಸಿ ನಿರ್ದೇಶಕರೊಬ್ಬರು ಎರಡೂ ಕಂಪನಿಯಲ್ಲಿ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಷೇರು ಹೊಂದಿದ್ದರು. ಹೀಗಾಗಿ ಎರಡೂ ಕಂಪನಿಗಳಿಗೆ ಅವಕಾಶಕೊಟ್ಟಲ್ಲಿ ಇದು ಹಿತಾಸಕ್ತಿ ಸಂಘರ್ಷವಾಗಲಿದೆ. ಹಾಗೆಯೇ ಆರ್‌ಎಫ್‌ಪಿ ಷರತ್ತುಗಳನ್ನು ನೇರವಾಗಿ ಉಲ್ಲಂಘಿಸಿದೆ ಎಂದು ಬಿಇಎಲ್‌ ಕಂಪನಿ ಪ್ರಧಾನಿಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿತ್ತು ಎಂಬುದು ತಿಳಿದು ಬಂದಿದೆ.

ಅನರ್ಹಗೊಂಡಿದ್ದ ಎನ್‌ಸಿಸಿ

ಆರ್‌ಎಫ್‌ಪಿ ಪ್ರಕಾರ ದಾಖಲೆಗಳನ್ನು ನೀಡದ ಕಾರಣ ಟೆಂಡರ್‌ ಸಮಿತಿಯು ಎನ್‌ಸಿಸಿ ಲಿಮಿಟೆಡ್‌ನ್ನು ಅನರ್ಹಗೊಳಿಸಿತ್ತು. ಹೀಗಾಗಿ ಮ್ಯಾಟ್ರಿಕ್ಸ್‌ ಕಂಪನಿಯನ್ನು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು ಎಂಬುದು ದೂರಿನಿಂದ ಗೊತ್ತಾಗಿದೆ.

ಚೀನಾ ಉತ್ಪನ್ನ ನಮೂದಿಸಿದ್ದ ಮ್ಯಾಟ್ರಿಕ್ಸ್‌

ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದ ಮ್ಯಾಟ್ರಿಕ್ಸ್‌ ಕಂಪನಿಯು ಚೀನಾ ತಯಾರಿಸಿರುವ ಕ್ಯಾಮರಾ, ಸರ್ವರ್‌, ಸಂಗ್ರಹಣಾ ಕೋಶ ಉಪಕರಣಗಳ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ನಮೂದಿಸಿತ್ತು. ಟೆಂಡರ್‌ ಮೌಲ್ಯಮಾಪನ ಸಮಿತಿ ಮುಂದೆ ಇದೇ ಉಪಕರಣಗಳ ಮಾದರಿಯನ್ನು ಪ್ರದರ್ಶಿಸಿತ್ತು.

ಚೀನಾ ತಯಾರಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿದಲ್ಲಿ ಸಾರ್ವಜನಿಕ ಭದ್ರತೆ, ಸುರಕ್ಷತೆಗೆ ಧಕ್ಕೆ ಆಗಲಿದೆ ಎಂದು ದೂರಿದ್ದ ಬಿಇಎಲ್‌, ನಿವಾಸಿಗಳ ದತ್ತಾಂಶವೂ ಸೋರಿಕೆಯಾಗಲಿದೆ. ಹಾಗೆಯೇ ಖಾಸಗಿತನದ ಮಹತ್ವ ಕಳೆದುಕೊಳ್ಳಲಿದೆ. ಹೀಗಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವ ಮೂಲಕ ಟೆಂಡರ್‌ ಪ್ರಾಧಿಕಾರವು ಮ್ಯಾಟ್ರಿಕ್ಸ್‌ ಕಂಪನಿಯನ್ನು ಅನರ್ಹಗೊಳಿಸಲು ಟೆಂಡರ್‌ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ದೂರಿನಲ್ಲಿ ಕೋರಿತ್ತು.

ಆದರೆ ಇದನ್ನು ಮರೆಮಾಚಿದ್ದ ಅಧಿಕಾರಿಗಳ ಗುಂಪೊಂದು 612 ಕೋಟಿ ಮೊತ್ತದ ಟೆಂಡರ್‌ ಪ್ರಕ್ರಿಯೆಯನ್ನು ಸಚಿವ ಸಂಪುಟದ ಗಮನಕ್ಕೂ ತಂದಿರಲಿಲ್ಲ ಎನ್ನಲಾಗಿದೆ. ಇಡೀ ಟೆಂಡರ್‌ ಪ್ರಕ್ರಿಯೆಯನ್ನು ಹಿರಿಯ ಐಪಿಎಸ್‌ ಅಧಿಕಾರಿಗಳ ಹಂತದಲ್ಲೇ ನಡೆಸಲು ಪೂರ್ಣಗೊಳಿಸಲು ಮುಂದಾಗಿತ್ತು.

ಈ ಹಿಂದೆ ಇದೇ ಯೋಜನೆಗೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಪ್ರಧಾನಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ನೀಡಿದ್ದರಿಂದ ಮರು ಟೆಂಡರ್‌ ಪ್ರಕ್ರಿಯೆ ನಡೆದಿದೆ. ಯೋಜನೆ ಮೊತ್ತ 10 ಕೋಟಿ ರು. ಮೀರಿರುವುದರಿಂದ ಸಚಿವ ಸಂಪುಟಕ್ಕೆ ಟೆಂಡರ್‌ ಪ್ರಕ್ರಿಯೆಗಳನ್ನು ಮಂಡಿಸಬೇಕು. ಈ ಕುರಿತು ರಾಜ್ಯ ಸರ್ಕಾರವು ಈ ಹಿಂದೆ ಆದೇಶ ಹೊರಡಿಸಿತ್ತು.

ಆದರೆ ಟೆಂಡರ್‌ ಆಹ್ವಾನ ಸಮಿತಿಯ ಅಧ್ಯಕ್ಷ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಸಚಿವ ಸಂಪುಟಕ್ಕೆ ಮಂಡಿಸದೆಯೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದರು.

ಅಲ್ಲದೆ ಐಎಂಎ ವಂಚನೆ ಪ್ರಕರಣದಲ್ಲಿ ಗುರುತರ ಆರೋಪ ಮತ್ತು ಸಿಬಿಐ ವಿಚಾರಣೆಗೊಳಪಟ್ಟಿರುವ ಹೇಮಂತ್‌ ನಿಂಬಾಳ್ಕರ್‌ ಅವರನ್ನೇ ಟೆಂಡರ್‌ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಮುಂದುವರೆಸಿರುವುದಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳ ವಲಯದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿತ್ತು.

ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಅಧೀನ ಸಂಸ್ಥೆಗಳು ಹಣಕಾಸು ಲೋಪ ಮಾಡದಂತೆ ಸಾರ್ವಜನಿಕ ಹಣದ ಸಂರಕ್ಷಣೆ ಮೂಲಕ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಉತ್ತರದಾಯತ್ವ ಹೊಂದಿದೆ. ಯಾವುದೇ ಸರ್ಕಾರಿ ನೌಕರರು ಅಥವಾ ಇಲಾಖೆ ಸರ್ಕಾರದ ಹಣವನ್ನು ಲೋಪ ಮಾಡಲು ಯತ್ನಿಸಿದರೆ ಸೂಕ್ತ ತನಿಖೆ ನಡೆಸಿ ಅದನ್ನು ತಡೆಯುವ ಮತ್ತು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡುವ ಸಾಂವಿಧಾನಿಕ ಅಧಿಕಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಈ ಪ್ರಕರಣ ಕುರಿತು ಪತ್ರ ಬರೆದಿದ್ದರು.

the fil favicon

SUPPORT THE FILE

Latest News

Related Posts