ಬೆಂಗಳೂರು; ಪ್ರತಿಷ್ಠಿತ ಪ್ರೆಸ್ಟೀಜ್ ಕಟ್ಟಡ ನಿರ್ಮಾಣ ಕಂಪನಿಯು ತನ್ನ ನಿರ್ಮಾಣದ ಟೆಕ್ ಪಾರ್ಕ್-3ರಲ್ಲಿನ ವಾಣಿಜ್ಯ ಅಪಾರ್ಟ್‌ಮೆಂಟ್‌ಗಳನ್ನು ವರ್ಗಾಯಿಸುವಾಗ/ಮಾರಾಟದ ಸಂದರ್ಭದಲ್ಲಿ ಶಿವಾಜಿನಗರ ಉಪ ನೋಂದಣಾಧಿಕಾರಿಗಳು ಸಾಮಾನ್ಯ ದರವನ್ನೇ ಅನ್ವಯಿಸಿದ್ದರು. ಇದರಿಂದ 70.69 ಲಕ್ಷ ಮೊತ್ತದಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲು ಕಾರಣರಾಗಿದ್ದರು.
ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್ 2019 ಅಂತ್ಯಕ್ಕೆ ಸಿಎಜಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕಕ್ಕೆ ಸಂಬಂಧಿಸಿದಂತೆ ನೀಡಿರುವ ವರದಿಯು, ನಿರ್ದಿಷ್ಟ ಯೋಜನೆಗಳಿಗೂ ಸಾಮಾನ್ಯ ದರವನ್ನು ಅನ್ವಯಿಸಿದ್ದರಿಂದಾಗಿ ಬೊಕ್ಕಸಕ್ಕೆ ಜಮೆಯಾಗಬೇಕಿದ್ದ ಕೋಟ್ಯಂತರ ರುಪಾಯಿ ಹೇಗೆ ಸೋರಿಕೆಯಾಗಿದೆ ಎಂಬುದನ್ನು ವಿವರಿಸಿದೆ.
ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಗಳು ಅದರ ಆಡಳಿತ ವ್ಯಾಪ್ತಿಯೊಳಗಿನ ಪ್ರದೇಶಗಳಿಗೆ ಸಾಮಾನ್ಯ ದರಗಳನ್ನು ಹಾಗೂ ಎಲ್ಲೆಲ್ಲಿ ಸಾಧ್ಯವೋ ಅಂತಹ ಕಡೆಗಳಲ್ಲಿ ವೈಯಕ್ತಿಕ ಆಸ್ತಿಗಳಿಗೆ ನಿರ್ದಿಷ್ಟ ದರಗಳನ್ನು ನಿರ್ದಿಷ್ಟಪಡಿಸಿದೆ. ಅಲ್ಲದೆ ವಿಶೇಷ ನಿರ್ದೇಶನಗಳ ಪ್ರಕಾರ ಯಾವುದೇ ಹೊಸ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ಬಡಾವಣೆಗಳ ನೋಂದಣಿಗೆ ಮುಂಚಿತವಾಗಿ ದರ ನಿಗದಿಗಾಗಿ ಕೇಂದ್ರ ಮೌಲ್ಯಮಾಪನ ಸಮಿತಿಗೆ(ಸಿವಿಸಿ)ಗೆ ಕಳಿಸಿಕೊಡಬೇಕು. ಆದರೆ ಪ್ರೆಸ್ಟೀಜ್ ಕಟ್ಟಡ ನಿರ್ಮಾಣ ಕಂಪನಿ ಪ್ರಕರಣದಲ್ಲಿ ಈ ಯಾವ ಪ್ರಕ್ರಿಯೆಗಳನ್ನು ನಡೆಸಿಲ್ಲ ಎಂದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಪ್ರೆಸ್ಟೀಜ್ ಕಟ್ಟಡ ನಿರ್ಮಾಣ ಕಂಪನಿಯು ವಾಣಿಜ್ಯ ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಶಿವಾಜಿನಗರ ಉಪ ನೋಂದಣಾಧಿಕಾರಿಗಳು ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಗಳಲ್ಲಿ ಯಾವುದೇ ನಿರ್ದಿಷ್ಟ ದರಗಳನ್ನು ನಿರ್ದಿಷ್ಟಪಡಿಸಿರಲಿಲ್ಲ. ಚದರ ಅಡಿ ಒಂದಕ್ಕೆ 3,000 ರು. ಇದ್ದಂತಹ ಸಾಮಾನ್ಯ ದರವನ್ನೇ ನಿಗದಿಪಡಿಸಿದ್ದರು ಎಂಬುದನ್ನು ಸಿಎಜಿ ವರದಿ ಹೊರಗೆಡವಿದೆ.
ದಸ್ತಾವೇಜಿನಲ್ಲಿನ ನಿರೂಪಣೆ ಪ್ರಕಾರ ಅದೇ ಕ್ಯಾಂಪಸ್/ಪ್ರಾಂಗಣದಲ್ಲಿ ಚದರ ಅಡಿ ಒಂದಕ್ಕೆ 6,200 ಹಾಗೂ ಚದರ ಅಡಿ ಒಂದಕ್ಕೆ 6,000 ರು.ದರದಂತೆ ನಿರ್ದಿಷ್ಟ ಮಾರ್ಗಸೂಚಿ ಮೌಲ್ಯದೊಂದಿಗೆ ಎರಡು (ಪ್ರೆಸ್ಟೀಜ್ ಟೆಕ್ ಪಾರ್ಕ್ 1 ಮತ್ತು 2) ಯೋಜನೆಗಳಿದ್ದವು. ಅಲ್ಲದೆ ವರ್ತೂರು ಹೋಬಳಿಯಲ್ಲಿದ್ದ 14 ಟೆಕ್ ಪಾರ್ಕ್‌ಗಳ ಪೈಕಿ ಚದರ ಅಡಿ ಕನಿಷ್ಠ 5,900 ರು. ಗಳಿತ್ತು.
ಆದರೆ ‘ ಶಿವಾಜಿನಗರ ಉಪ ನೋಂದಣಾಧಿಕಾರಿಗಳು ಆ ಪ್ರದೇಶದಲ್ಲಿ ಇತರೆ ಎಲ್ಲಾ ಟೆಕ್ ಪಾರ್ಕ್‌ಗಳಿಗೆ ಹೋಲಿಸಿದಲ್ಲಿ ಕಡಿಮೆ ಪ್ರಮಾಣದ ದರವನ್ನು ಅಳವಡಿಸಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ, ‘ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.
ಹಾಗೆಯೇ ಈ ಉಪನೋಂದಣಾಧಿಕಾರಿಗಳು ದರಗಳನ್ನು ನಿರ್ದಿಷ್ಟಪಡಿಸಿಕೊಳ್ಳುವ ಸಲುವಾಗಿ ಇದನ್ನು ಕೇಂದ್ರ ಮೌಲ್ಯಮಾಪನ ಸಮಿತಿಗೆ ಕಳಿಸುವ ಬದಲಿಗೆ ಸಾಮಾನ್ಯ ದರಗಳನ್ನು ಅಳವಡಿಸಿದ್ದರು. ಇದು ಆ ಪ್ರದೇಶದಲ್ಲಿ ನಿರ್ದಿಷ್ಟಪಡಿಸಲಾಗಿದ್ದಂತಹ ಮೌಲ್ಯಕ್ಕೆ (ಚದರ ಅಡಿ ಒಂದಕ್ಕೆ 5,900) ಹೋಲಿಸಿದರೆ 70.69 ಲಕ್ಷ ಮೊತ್ತದಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿತ್ತು ಎಂದು ಸಿಎಜಿ ವರದಿ ಹೇಳಿದೆ.