ಗೋ ಹತ್ಯೆ ನಿಷೇಧ; ಮುಸ್ಲಿಂರಷ್ಟೇ ಅಲ್ಲ, ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗಕ್ಕೂ ಧಕ್ಕೆ?

ಬೆಂಗಳೂರು; ಜಾನುವಾರು ಹತ್ಯೆ ನಿಷೇಧ ಕಾಯ್ದೆಯು ವೀರಶೈವ ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಪ್ರವರ್ಗ 2(ಎ), 3(ಎ) ಮತ್ತು 3(ಬಿ)ಯಲ್ಲಿರುವ ಬಹುಸಂಖ್ಯಾತ ಹಿಂದುಳಿದ, ರೈತ, ಕೃಷಿಕ ಸಮಾಜದ ಮೇಲೂ ದುಷ್ಪರಿಣಾಮ ಬೀರಲಿದೆ. ಅಲ್ಲದೆ ದೊಂಬಿದಾಸರು, ದರ್ವೆಸುಗಳಲ್ಲದೆ 350 ಜಾತಿ ವರ್ಗಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಧಕ್ಕೆ ಉಂಟಾಗಲಿದೆ.

ಡಾ ಸಿ ಎಸ್‌ ದ್ವಾರಕಾನಾಥ್‌ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕಳೆದ 10 ವರ್ಷದ ಹಿಂದೆಯೇ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ಕಾಯ್ದೆಯನ್ನು ಅನುಷ್ಠಾನ ಮಾಡದೆಯೇ ಹಿಂತೆಗೆದುಕೊಳ್ಳಬೇಕು ಎಂದು ಆಯೋಗ ವಿಶೇಷ ವರದಿಯಲ್ಲಿ ಶಿಫಾರಸ್ಸು ಮಾಡಿತ್ತು. ಈ ಕಾಯ್ದೆ ಅನುಷ್ಠಾನದಿಂದ ಲಿಂಗಾಯತರು, ಒಕ್ಕಲಿಗರೂ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ವಸ್ತುನಿಷ್ಠ ಅಂಶಗಳಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಹಿಂದುಳಿದ ವರ್ಗದ ಆಯೋಗವು ಮಾಡಿದ್ದ ಶಿಫಾರಸ್ಸನ್ನು ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ.

ಮುಸ್ಲಿಂರನ್ನು ಗುರಿಯಾಗಿಟ್ಟುಕೊಂಡು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರವು ಮಂಡಿಸಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿರುವ ಬೆನ್ನಲ್ಲೇ ಕಾಯ್ದೆಯಿಂದ ಹಿಂದುಳಿದ ವರ್ಗಗಳಿಗೂ ಧಕ್ಕೆ ಉಂಟಾಗಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 10 ವರ್ಷದ ಹಿಂದೆಯೇ ನೀಡಿದ್ದ ವರದಿ ಮರು ಜೀವ ಪಡೆದುಕೊಂಡಂತಾಗಿದೆ. ಹಾಗೆಯೇ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಕುರಿತಾದ ಚರ್ಚೆಯನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆ, ವಿಶ್ಲೇಷಣೆ ಮತ್ತು ಶಿಫಾರಸ್ಸಿಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗ ಆಯೋಗ ನೀಡಿರುವ ವರದಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

2010ರಲ್ಲೇ ಅಂದಿನ ಬಿಜೆಪಿ ಸರ್ಕಾರವು ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿತ್ತು. ಆಗಿನ ಕಾಯ್ದೆಯಲ್ಲಿನ ಕೆಲ ಅಂಶಗಳನ್ನು ಮಾರ್ಪಾಡುಗೊಳಿಸಿರುವ ಈಗಿನ ಬಿಜೆಪಿ ಸರ್ಕಾರ ಮಂಡಿಸಿರುವ ಜಾನುವಾರು ಹತ್ಯೆ ನಿಷೇಧ ಮಸೂದೆಗೂ ಪ್ರಮುಖ ವ್ಯತ್ಯಾಸವೇನೂ ಇಲ್ಲ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಆಯೋಗದ ಹಿಂದಿನ ಅಧ್ಯಕ್ಷ ಡಾ ಸಿ ಎಸ್‌ ದ್ವಾರಕಾನಾಥ್‌ ಅವರು 2010ರಲ್ಲೇ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಬಾರದು ಎಂದು ವರದಿ ಸಲ್ಲಿಸಿದ್ದರು. ವರದಿಯನ್ನು ಸರ್ಕಾರ ಸ್ವೀಕರಿಸಿದೆಯಾದರೂ ವರದಿಯಲ್ಲಿ ಮಾಡಿದ್ದ ಶಿಫಾರಸ್ಸು ಮತ್ತು ಸಲಹೆಯನ್ನು ಪರಿಗಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಹಿಂದುಳಿದ ವರ್ಗದಲ್ಲಿರುವ ಲಿಂಗಾಯತರು, ಒಕ್ಕಲಿಗರನ್ನೂ ಒಳಗೊಂಡಂತೆ ಎಲ್ಲ ಜಾತಿಗೆ ಸೇರಿದ ರೈತರು, ರೈತರ ಜಾನುವಾರು ಹಿಂಡುಗಳನ್ನು ಅವರ ಜಾನುವಾರು ಬ್ಯಾಂಕ್‌ಗಳೆಂದು ಪರಿಗಣಿಸಲಾಗಿದೆ. ಈ ಕಾಯ್ದೆ ಪ್ರಕಾರ ಜಾನುವಾರು ಮಾರಾಟ, ಸಾಗಣೆ ಕಟ್ಟುನಿಟ್ಟಾಗಿ ನಿಗ್ರಹಿಸುವುದರಿಂದ ಈ ವರ್ಗಗಳಿಗೆ ಅತ್ಯಂತ ತುರ್ತಿನ ಕಷ್ಟದ ಪರಿಸ್ಥಿತಿಗಳು ಬಂದಾಗ ಜಾನುವಾರು ಮಾರುವುದೇ ಒಂದು ದೊಡ್ಡ ಸಮಸ್ಯೆ ಆಗಲಿದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

ಅಲ್ಲದೆ ‘ ಬಹುಸಂಖ್ಯಾತರಾದ ಹಿಂದುಳಿದ ವರ್ಗಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾರಕವಾದ ಈ ಜೀವ ವಿರೋಧಿ ಕಾಯ್ದೆಯನ್ನು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಅನುಷ್ಠಾನವಾಗದಂತೆ ಹಿಂತೆಗೆದುಕೊಳ್ಳಬೇಕು,’ ಎಂದು ವರದಿ ಶಿಫಾರಸ್ಸುಮಾಡಿದೆ.

ವಿಶ್ಲೇಷಣೆ ವರದಿಯಲ್ಲಿರುವ ಪ್ರಮುಖಾಂಶಗಳಿವು

ಜಾನುವಾರು ಹತ್ಯೆ ನಿಷೇಧ ಕಾಯ್ದೆಯು ಕರ್ನಾಟಕ ರಾಜ್ಯದ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಉದ್ಯೋಗ, ಆರೋಗ್ಯ, ಆಹಾರದ ಹಕ್ಕಿಗೆ ನೀಡಿದ ಮರ್ಮಾಘಾತವಾಗಿದೆ. ದಿನದ ಮಾಂಸವನ್ನು ತಿನ್ನುವುದನ್ನೇ ಅಪರಾಧ ಮಾಡುತ್ತಿರುವುದರಿಂದ ಈವರೆಗೆ ಈ ದೇಶದ ಬಡ ಹಿಂದುಳಿದ ವರ್ಗ ಅದರಲ್ಲೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಪ್ರವರ್ಗ 2(ಬಿ), ಪ್ರವರ್ಗ-1, ಪ್ರವರ್ಗ 3(ಬಿ)ಗೆ ಸೇರುವ ಅಲ್ಪಸಂಖ್ಯಾತರ, ಮುಸ್ಲಿಂ, ಕ್ರೈಸ್ತ, ಬೌದ್ಧ, ಪಿಂಜಾರ, ನದಾಫ್‌, ಚಪ್ಪರ್‌ಬಂದ್‌, ದರ್ವೇಸು, ಜಾತಗಾರ ಮುಂತಾದ ಬಹುತೇಕ ಸಮುದಾಯಗಳಿಗೆ ಅಗ್ಗದ ದರದಲ್ಲಿ ಕನಿಷ್ಠ ಪೋಷಕಾಂಶವನ್ನು ಒದಗಿಸುತ್ತಿದೆ. ಮುಂದೆ ದನದ ಮಾಂಸವನ್ನು ತಿನ್ನುವುದೂ ಅಪರಾಧವಾಗಲಿದೆ.

ಸತ್ತ ದನವನ್ನು ತಿನ್ನುವುದನ್ನು ಸಹ ಈ ಮಸೂದೆ ಪ್ರಕಾರ ಅಪರಾಧವಾಗಿರುತ್ತದೆ ಎಂದರೆ ಈ ಮಸೂದೆ ಹಿಂದಿರುವ ದುರುದ್ದೇಶ ಅರ್ಥವಾಗುತ್ತದೆ. ಎರಡನೆಯದಾಗಿ ಕಂದಾಚಾರಿ ಪಟ್ಟಭದ್ರ ಹಿತಾಸಕ್ತಿಗಳ ಆಡಳಿತಕ್ಕೆ ಅದರಲ್ಲೂ ಪೊಲೀಸರಿಗೆ ಈ ಮಸೂದೆಯು ಸರ್ವಾಧಿಕಾರವನ್ನು ಧಾರೆ ಎರೆಯುತ್ತದೆ.

ಈ ಕಾಯ್ದೆಯಿಂದ ಕರ್ನಾಟಕದ ಹಿಂದುಳಿದ ವರ್ಗಗಳ ಅಂದರೆ ರೈತರನ್ನು, ಜಾನುವಾರು ಸಾಕಾಣಿಕೆದಾರರನ್ನು ಅಪರಾಧಿಗಳನ್ನಾಗಿಸುತ್ತದೆ. ಇಲ್ಲಿ ರೈತರೆಂದರೆ ಹಿಂದುಳಿದ ವರ್ಗದಲ್ಲಿರುವ ಪ್ರವರ್ಗ 3(ಎ) ಹಾಗೂ ಪ್ರವರ್ಗ-1 ಮತ್ತು 2 (ಎ)ನಲ್ಲಿರುವವರು ಎಂದಾಗುತ್ತದೆ. 3(ಬಿ)ನಲ್ಲಿ ಬರುವ ಲಿಂಗಾಯತರು, ಪ್ರವರ್ಗ 2-ಎ ಅಡಿಯಲ್ಲಿ ಬರುವ ಒಕ್ಕಲಿಗರು, ಪ್ರವರ್ಗ-1ರ ಗೊಲ್ಲರು, ಉಪ್ಪಾರರು, ಬೆಸ್ತರು ಮುಂತಾದ ಎಲ್ಲ ಜಾತಿಗಳವರು ಸೇರಿದಂತೆ ಶೇ.90ರಷ್ಟು ಹಿಂದುಳಿದ ವರ್ಗಕ್ಕೆ ಸೇರಿದವರುಎ ಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ.

ಜಾನುವಾರು ಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ 2010ರಲ್ಲಿ ಇದೇ ಬಿಜೆಪಿ ಸರ್ಕಾರ ಕಾಯ್ದೆಯನ್ನು ಜಾರಿಗೆ ತರಬೇಕೆಂದಾಗ ನನ್ನ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದಿಂದ ವರದಿಯನ್ನು ನೀಡಿ, ಸದರಿ ಕಾಯ್ದೆ ಕೃಷಿಯನ್ನೇ ನಂಬಿದ ರೈತಾಪಿ ಸಮುದಾಯಗಳಿಗೆ ಅದೆಷ್ಟು ಪ್ರತಿಕೂಲ ಪರಿಣಾಮಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸಿ ಸರ್ಕಾರಕ್ಕೆ 2010ರಲ್ಲೇ ವರದಿಯೊಂದನ್ನು ಕೊಟ್ಟಿದ್ದೇನೆ. ಈಗ ತರುತ್ತಿರುವ ಕಾಯ್ದೆಗೂ ಅಂದು ತರಬೇಕೆಂದಿದ್ದ ಕಾಯ್ದೆಗೂ ಏನೂ ಪ್ರಮುಖ ವ್ಯತ್ಯಾಸವಿಲ್ಲ. ಆದ್ದರಿಂದ ಅಂದು ನೀಡಿದ್ದ ವರದಿ ಇಂದೂ ಪ್ರಸ್ತುತವೆನಿಸುತ್ತದೆ. ಸರ್ಕಾರದ ಆಯೋಗವೊಂದು ನೀಡಿರುವ ವರದಿಯನ್ನೇ ಸರ್ಕಾರ ಗಮನಿಸದಿರುವುದು ದುರದೃಷ್ಟಕರ

ಡಾ ಸಿ ಎಸ್‌ ದ್ವಾರಕಾನಾಥ್‌, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ಮಸೂದೆಯ ಸೆಕ್ಷನ್‌ 8ರ ಪ್ರಕಾರ ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂಧ ಮಾರುವುದು, ಕೊಳ್ಳುವುದು ಅಥವಾ ಪರಭಾರೆ ಮಾಡುವುದನ್ನು ನಿಷೇಧಿಸುತ್ತದೆ ಮತ್ತು ಅದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುತ್ತದೆ. ಆದರೆ ರೈತರಿಗೆ ಗೊತ್ತಿದ್ದೂ ಮಾರಿದ್ದಾನೆ ಎಂಬುದನ್ನು ಮತ್ತು ಕೊಲ್ಲಲೆಂದು ಕೊಳ್ಳಲಾಗುತ್ತದೆ ಎಂದು ನಂಬುವ ಕಾರಣವಿತ್ತು ಎಂಬುದನ್ನು ನಿರ್ಧರಿಸುವವರು ಯಾರು? ಅಪರಾಧವನ್ನು ತಡೆಗಟ್ಟಲು ಬರುವ ಸಬ್‌ ಇನ್ಸ್‌ಪೆಕ್ಟರ್‌ ಅಥವಾ ಇತಗರೆ ಅಧಿಕಾರಿಗಳು ಅಂದರೆ ಈಗಾಗಲೇ ಆತ್ಮಹತ್ಯೆ ಅಂಚಿನಲ್ಲಿರುವ ರೈತನ ಬದುಕು ಅಂದರೆ ಹಿಂದುಳಿದವರ ಬದುಕು ಮತ್ತು ನೆಮ್ಮದಿ ಪೊಲೀಸ್‌ ಅಧಿಕಾರಿಗಳು ಮತ್ತು ಸರ್ಕಾರದ ಮರ್ಜಿಗೆ ಬೀಳುತ್ತದೆ.

ಕಾಯ್ದೆ ಪ್ರಕಾರ ಇದೆಲ್ಲವೂ ಶಿಕ್ಷಾರ್ಹ ಅಪರಾಧವಾದ್ದರಿಂದ ಇವು ಜಾಮೀನು ರಹಿತ ಅಪರಾಧ. ಫಲಿತಾಂಶವೆಂದರೆ ಈ ಕಾಯ್ದೆಯಿಂದಾಗಿ ರೈತರಾದ ಹಿಂದುಳಿದ ವರ್ಗಗಳು ಯಾವುದೇ ಅಪರಾಧ ಮಾಡದೆಯೇ ಅಪರಾಧಿಗಳೆಂಬ ಹಣೆಪಟ್ಟಿ ಕಟ್ಟಿಸಿಕೊಳ್ಳುತ್ತಾರೆ. ಅಲ್ಲದೆ ಈ ಮಸೂದೆ-ಕಾಯ್ದೆಯನ್ನು ವಿರೋಧಿಸುವುದು ಕೂಡ ಶಿಕ್ಷಾರ್ಹ ಅಪರಾಧ. ಮಸೂದೆ ಸೆಕ್ಷನ್‌ 14ರ ಪ್ರಕಾರ ಈ ಕಾಯ್ದೆಯಲ್ಲಿ ನಮೂದಿಸಲಾಗಿರುವ ಯಾವುದೇ ಅಪರಾಧವನ್ನು ಮಾಡಲು ಪ್ರೋತ್ಸಾಹ-ಪ್ರಚೋದನೆ ಮಾಡುವುದೂ ಶಿಕ್ಷಾರ್ಹ ಅಪರಾಧ.

 

ಹಿಂದುಳಿದ ವರ್ಗಗಳ ಆಹಾರ, ಉದ್ಯೋಗ, ಕೆಲಸದ ಹಕ್ಕನ್ನು ಈ ಕಾಯ್ದೆ ತಡೆಗಟ್ಟುತ್ತದೆ. ಜಾನುವಾರುಗಳ ಮಾರಾಟ, ಜಾನುವಾರುಗಳ ಸಾಗಣೆ ಮೇಲೆ ಈ ಮಸೂದೆಯು ಸಂಪೂರ್ಣವಾಗಿ ನಿಗ್ರಹ ಮಾಡುತ್ತಿರುವುದರಿಂದ ಹಿಂದುಳೀದ ವರ್ಗಗಳು, ಅಲ್ಪಸಂಖ್ಯಾತರು, ದಲಿತ ವರ್ಗಗಳ ಮುಖ್ಯ ಕಸುಬುಗಳಲ್ಲಿ ಒಂದಾದ ಜಾನುವಾರು ಸಾಕಣೆ(ಹಸು-ಎಮ್ಮೆ) ಪ್ರಮಾಣ ಗಣನೀಯವಾಗಿ ಕುಸಿಯಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜಾನುವಾರುಗಳ ಮಾರಾಟ, ವಹಿವಾಟು ಕುಂಠಿತವಾಗುವುದರಿಂದ ಅನುತ್ಪಾದಕ ಜಾನುವಾರು, ಬರಡು ಜಾನುವಾರುಗಳ ಸಂಖ್ಯೆ ಹೆಚ್ಚಾಗಲಿದೆ. ಅವುಗಳ ಪಾಲನೆಯು ಬಡ ಹಾಗೂ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಜನರಿಗೆ ಹೊರೆಯಾಗಲಿದೆ.

 

ಅಪರಾಧ ಸಂಭವಿಸಿದೆಯೆಂದು ತನಿಖೆ ಮಾಡುವ ಅಧಿಕಾರಿಗೆ ಅಲ್ಲಿ ದನದ ಮಾಂಸದ ಬದಲಿಗೆ ಮೇಕೆ-ಕುರಿ ಮಾಂಸ ಸಿಕ್ಕಿದರೂ ಅದು ‘ದನದ ಮಾಂಸ’ ಎಂಬ ಅನುಮಾನದ ಮೇಲೆ ಬಂಧಿಸಬಹುದು. ಏಕೆಂಧರೆ ಅದು ದನದ ಮಾಂಸವಲ್ಲ ಎಂದು ಸಾಬೀತಾಗಬೇಕಾಗಿರುವುದು ಕೋರ್ಟ್‌ನಲ್ಲಿ. ಅಲ್ಲಿಯ ತನಕ ಯಾವುದೇ ಬಗೆಯ ಮಾಂಸಹಾರಿಯೂ ಸಂಭವನೀಯ ಅಪರಾಧಿಯೇ ಆಗಬೇಕಾಗುತ್ತದೆ. ಇದರಿಂದ ಹಿಂದುಳಿದ ವರ್ಗಕ್ಕೆ ಸೇರಿದ ಮುಸ್ಲಿಂ ಹಾಗೂ ಇತರೆ ಉಪ ಜಾತಿಗಳು , ಕ್ರೈಸ್ತರು, ಬೌದ್ಧರ ಮೇಲೆ ಧಾರ್ಮಿಕ ಮೂಲಭೂತವಾದಿಗಳು ಯಾವ ರೀತಿಯಲ್ಲಿದ್ದರೂ ದಂಡಿಸಲು ಕಾನೂನಿನಲ್ಲಿಯೇ ಅವಕಾಶ ದೊರಕಿಸಿಕೊಟ್ಟಂತಾಗುತ್ತದೆ.

the fil favicon

SUPPORT THE FILE

Latest News

Related Posts