Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ; ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ 1 ಕೋಟಿಯಷ್ಟೇ

ಬೆಂಗಳೂರು; ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದ ಅವಧಿಯಲ್ಲಿ ಜನ್‌ಧನ್‌ ಖಾತೆ ಹೊಂದಿದ್ದ ಮಹಿಳಾ ಖಾತೆದಾರರಿಗೆ ಕೇಂದ್ರ ಘೋಷಿಸಿದ್ದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿಯಲ್ಲಿ ಕರ್ನಾಟಕ 8ನೇ ಸ್ಥಾನ ಪಡೆದಿದೆ. ಆದರೆ ರಾಜ್ಯದ ಹಲವು ಜಿಲ್ಲೆಗಳ ಮಹಿಳಾ ಖಾತೆದಾರರಿಗೆ ಈವರೆವಿಗೂ ಹಣವು ಜಮಾ ಆಗಿಲ್ಲ.

ಅಥಣಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆರ್‌ಟಿಐ ಅಡಿ ಫಲಾನುಭವಿಗಳ ಪಟ್ಟಿ ಮತ್ತು ಬ್ಯಾಂಕ್‌ ಖಾತೆಗೆ ಜಮಾ ಆಗಿರುವ ಹಣದ ವಿವರವನ್ನು 2020ರ ನವೆಂಬರ್‌ 11ರಂದು ಒದಗಿಸಿದೆ. ಈ ಪಟ್ಟಿ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೋಂದಾಯಿಸಿದ್ದರೆ ಬಿಹಾರ ಎರಡನೇ ಸ್ಥಾನ ಮತ್ತು ಪಶ್ಚಿಮ ಬಂಗಾಳ ಮೂರನೇ ಸ್ಥಾನದಲ್ಲಿರುವುದು ತಿಳಿದು ಬಂದಿದೆ.

ರಾಜಸ್ಥಾನ, ಆಂಧ್ರಪ್ರದೇಶ, ಒಡಿಶಾದ ನಂತರ 8ನೇ ಸ್ಥಾನದಲ್ಲಿರುವ ರಾಜ್ಯದಲ್ಲಿ 80.60 ಲಕ್ಷ ಫಲಾನುಭವಿಗಳಿಗೆ 1.17 ಕೋಟಿ ರು.ಗಳನ್ನು ಜಮಾ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಆರ್‌ಟಿಐ ಅಡಿ ಮಾಹಿತಿ ಒದಗಿಸಿದೆ. ಆದರೆ ರಾಜ್ಯದ ಬೆಳಗಾವಿ, ಕಲ್ಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಮಹಿಳೆಯರ ಖಾತೆಗಳಿಗೆ ಹಣವಿನ್ನೂ ಜಮಾ ಆಗಿಲ್ಲ ಎಂದು ಗೊತ್ತಾಗಿದೆ.

ಉತ್ತರ ಪ್ರದೇಶದಲ್ಲಿ 32437601 ಫಲಾನುಭವಿಗಳಿಗೆ 485698.76 ಲಕ್ಷ ರು., ಬಿಹಾರದಲ್ಲಿ 24362070 ಫಲಾನುಭವಿಗಳಿಗೆ 365523.65 ಲಕ್ಷ ರು., ಪಶ್ಚಿಮ ಬಂಗಾಳದಲ್ಲಿ 19369409 ಫಲಾನುಭವಿಗಳಿಗೆ 290495.29 ಲಕ್ಷ ರು., ಗುಜರಾತ್‌ನಲ್ಲಿ 7173309 ಫಲಾನುಭವಿಗಳಿಗೆ 107355.95 ಲಕ್ಷ ರು. ಜಮಾ ಆಗಿರುವುದು ಆರ್‌ಟಿಐನಿಂದ ತಿಳಿದು ಬಂದಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಜನ್ ಧನ್ ಯೋಜನೆಯಡಿ ಖಾತೆ ಹೊಂದಿರುವ ಮಹಿಳಾ ಖಾತಾದಾರರಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ಏಪ್ರಿಲ್ ತಿಂಗಳ 500 ರೂಪಾಯಿ ಎಕ್ಸ್ ಗ್ರೇಷಿಯಾ ಮೊತ್ತವನ್ನು ಬಿಡುಗಡೆ ಮಾಡಿತ್ತು.

ರಾಜ್ಯ ಸರ್ಕಾರಗಳು ಸಹ ತನ್ನ ಜಿಲ್ಲಾಡಳಿತ ಮತ್ತು ಪೊಲೀಸರ ಸಹಕಾರದ ಮೂಲಕ ಖಾತೆದಾರರಿಗೆ ಹಣ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳು ತನ್ನ ಬ್ಯಾಂಕ್ ಪ್ರತಿನಿಧಿಗಳು ಹಾಗೂ ಬ್ಯಾಂಕ್ ಗಳ ಶಾಖೆಗಳಿಂದ ಹಣ ಪಡೆಯುವ ವಿಧಾನದ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆಯೂ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

ರಾಜ್ಯದ ಜನರಿಗೆ ಈ ಯೋಜನೆ ಸಮರ್ಪಕವಾಗಿ ತಲುಪಿಲ್ಲ. ಕೊರೊನಾ ಸಮಯದಲ್ಲಿ ಪ್ರತಿ ತಿಂಗಳು 500 ರು.ನಂತೆ 3 ತಿಂಗಳು ಕೇಂದ್ರ ಸರ್ಕಾರ ನೀಡಿದ್ದ ಹಣ ಬಡವರ ಕುಟುಂಬಕ್ಕೆ ನಾಮಕಾವಸ್ಥೆ ಎಂಬಂತಾಗಿದೆ. ಇದರಿಂದ ಸಂಕಷ್ಟದಲ್ಲಿ ಇರುವ ಬಡ ಕುಟುಂಬದ ಒಬ್ಬರಿಗೆ 2 ಜೊತೆ ಬಟ್ಟೆ ಇರಲಿ, ಒಂದು ತಿಂಗಳ ಆಹಾರ ಸಾಮಗ್ರಿ ಖರೀದಿಸಲು ಆಗುವುದಿಲ್ಲ. ಕೇಂದ್ರ ಸರ್ಕಾರ ನೀಡಿದ ಅಂಕಿ ಅಂಶಗಳನ್ನು ನೋಡಿದರೆ ತಳಮಟ್ಟದ ಫಲಾನುಭವಿಗಳಿಗೆ ಇಂದಿಗೂ ಹಣ ತಲುಪಿಲ್ಲ ಎಂಬುದು ಗೊತ್ತಾಗುತ್ತದೆ.

ಭೀಮನಗೌಡ ಪರಗೊಂಡ, ವಕೀಲರು

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 31 ಕೋಟಿ ಜನರಿಗೆ ಒಟ್ಟು 28 ಸಾವಿರ ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರ್ಕಾರ ನೀಡಿದ್ದನ್ನು ಸ್ಮರಿಸಬಹುದು. ಏಪ್ರಿಲ್‌ 10 ವರೆಗಿನ ಅಂಕಿ-ಅಂಶಗಳ ಪ್ರಕಾರ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಜನತೆಗೆ ಸಹಕರಿಯಾಗಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 31 ಕೋಟಿ ಜನರಿಗೆ ಆರ್ಥಿಕ ನೆರವು ನೀಡಲಾಗಿತ್ತು.

ಇದೇ ಯೋಜನೆಯಡಿಯಲ್ಲಿ ಒಟ್ಟಾರೆ ಮೊತ್ತದ ಹಣದಲ್ಲಿ 13,855 ಕೋಟಿ ರೂಪಾಯಿ ಹಣವನ್ನು 6.93 ಕೋಟಿ ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ನೀಡಲಾಗಿದೆ.ಇನ್ನು ಪ್ರಧಾನಮಂತ್ರಿ ಜನಧನ್ ಯೋಜನೆಯ ವ್ಯಾಪ್ತಿಯಲ್ಲಿ ಬರುವ 20.05 ಕೋಟಿ ಮಹಿಳಾ ಖಾತೆದಾರರಿಗೆ ಸರ್ಕಾರದಿಂದ 10,025 ಕೋಟಿ ರೂಪಾಯಿ ವಿತರಿಸಲಾಗಿದೆ. 2.16 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3,066 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.

Share:

Leave a Reply

Your email address will not be published. Required fields are marked *