ಬೆಂಗಳೂರು; ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಜಾನೆಯ ಭದ್ರಕೋಣೆಯಲ್ಲಿ ಇರಿಸಿರುವ ಖಜಾನೆ ಪೆಟ್ಟಿಗೆಗಳನ್ನು ಪ್ರಾಧಿಕಾರಣ ಪತ್ರದೊಂದಿಗೆ ಠೇವಣಿ ಇರಿಸಿದ್ದ ಪ್ರಾಧಿಕಾರದ ಅಧಿಕಾರಿಗಳು ಕರ್ತವ್ಯಗಳಿಂದ ವಿಮುಕ್ತಿ ಹೊಂದಿದ್ದರೂ ನಿರ್ವಹಣೆ ಕುರಿತು ವಿಶೇಷ ತನಿಖಾ ತಂಡ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ.
ಐಎಂಎ ಕಂಪನಿಯಿಂದ ವಂಚನೆಗೊಳಗಾಗಿರುವ ಹೂಡಿಕೆದಾರರಿಗೆ ಹಣ ಮರಳಿಸಲು ಸಕ್ಷಮ ಪ್ರಾಧಿಕಾರ ಪ್ರಕ್ರಿಯೆ ಆರಂಭಿಸಿದ್ದರೆ ಇತ್ತ ಎಸ್‌ಐಟಿ ತಂಡವು ಖಜಾನೆ ಪೆಟ್ಟಿಗೆಗಳ ನಿರ್ವಹಣೆ ಮಾಡದಿರುವುದು ಮುನ್ನೆಲೆಗೆ ಬಂದಿದೆ.
ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಅವರ ನೇತೃತ್ವದ ವಿಶೇಷ ತನಿಖಾ ತಂಡವು ಮುದ್ರಾಂಕ ಭಂಡಾರದಲ್ಲಿನ ಖಜಾನೆಯ ಭದ್ರ ಕೋಣೆಯಲ್ಲಿ ಮೊಹರಾದ ಖಜಾನೆ ಪೆಟ್ಟಿಗೆಗಳನ್ನು ಸಂರಕ್ಷಣೆಗೆಂದು ಇರಿಸಿತ್ತು. ಪ್ರಾಧಿಕಾರಣ ಪತ್ರದೊಂದಿಗೆ ಎಸ್‌ಐಟಿಯ ವಿವಿಧ ಅಧಿಕಾರಿಗಳು ಠೇವಣಿ ಇರಿಸಿ ಒಂದು ವರ್ಷಕ್ಕೂ ಹೆಚ್ಚಿನ ಅವಧಿ ಪೂರ್ಣಗೊಂಡಿದೆ. ಆದರೂ ಈ ಸಂಬಂಧ ವಿಶೇಷ ತನಿಖಾ ತಂಡ ಗಮನ ಹರಿಸಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು 2020ರ ನವೆಂಬರ್ 9ರಂದು ಮುದ್ರಾಂಕ ಭಂಡಾರದ ಜಿಲ್ಲಾ ಖಜಾನಾಧಿಕಾರಿ ಅವರು ವಿಶೇಷ ತನಿಖಾ ತಂಡ ಮುಖ್ಯಸ್ಥ ಡಾ ಬಿ ಆರ್ ರವಿಕಾಂತೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಖಜಾನೆಯ ಭದ್ರಕೋಣೆಯಲ್ಲಿ ಸಂರಕ್ಷಣೆಗೆಂದು ಇಡಲಾಗಿರುವ ಮೊಹರಾದ ಖಜಾನೆ ಪೆಟ್ಟಿಗೆಗಳ ನಿರ್ವಹಣೆ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿರುವುದು ಪತ್ರದಿಂದ ತಿಳಿದು ಬಂದಿದೆ. ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
‘ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡವು ಖಜಾನೆಯ ಭದ್ರಕೋಣೆಯಹಲ್ಲಿ ಸಂರಕ್ಷಣೆಗೆಂದು ಇಡಲಾದ ಮೊಹರಾದ ಖಜಾನೆ ಪೆಟ್ಟಿಗೆಗಳನ್ನು ವಿವಿಧ ಎಸ್‌ಐಟಿ ಅಧಿಕಾರಿಗಳ ಪ್ರಾಧಿಕಾರಣ ಪತ್ರದೊಂದಿಗೆ ಠೇವಣಿ ಇರಿಸಿ ಸುಮಾರು ಒಂದು ವರ್ಷಗಳಿಗೂ ಹೆಚ್ಚಿನ ಅವಧಿ ಆಗಿರುತ್ತದೆ. ಯಾವ ಯಾವ ಎಸ್‌ಐಟಿ ಅಧಿಕಾರಿಗಳು ಖಜಾನೆ ಪೆಟ್ಟಿಗೆಗಳನ್ನು ಖಜಾನೆ ಭದ್ರಕೋಣೆಯಲ್ಲಿ ಇರಿಸಿದ್ದಾರೆಯೋ ಅದೇ ಅಧಿಕಾರಿಗಳು ಮಾತ್ರ ಪೆಟ್ಟಿಗೆಗಳನ್ನು ಹಿಂಪಡೆಯಲು ಪ್ರಾಧಿಕಾರವುಳ್ಳರಾಗಿದ್ಧಾರೆ. ಸರ್ಕಾರದ ಹಂತದಲ್ಲಿನ ಮಾಹಿತಿ/ಚರ್ಚಿಸಿದಂತೆ ಠೇವಣಿ ಇರಿಸಿರುವ ಪ್ರಾಧಿಕಾರ ಅಧಿಕಾರಿಗಳು ಎಸ್‌ಐಟಿ(ಐಎಂಎ) ಕರ್ತವ್ಯಗಳಿಂದ ವಿಮುಕ್ತಿ ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಖಜಾನೆ ಪೆಟ್ಟಿಗೆಗಳ ನಿರ್ವಹಣೆ ಕುರಿತಂತೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು,’ ಎಂದು ಜಿಲ್ಲಾ ಖಜಾನಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ.
ಐಎಂಎನಲ್ಲಿ ಒಂದು ಲಕ್ಷದಷ್ಟೂ ಜನರು 2,900 ಕೋಟಿ ಹೂಡಿಕೆ ಮಾಡಿದ್ದರು. ಈ ಪೈಕಿ ಕಂಪನಿಯು 1,500 ಕೋಟಿಯಷ್ಟನ್ನು ಲಾಭಾಂಶದ ರೂಪದಲ್ಲಿ ಹೂಡಿಕೆದಾರರಿಗೆ ಹಿಂತಿರುಗಿಸಿದೆ. 1,400 ಕೋಟಿಯಷ್ಟು ಮೊತ್ತವನ್ನು ಹೂಡಿಕೆದಾರರಿಗೆ ಪಾವತಿಸುವುದು ಬಾಕಿ ಇದೆ.
ಹಾಗೆಯೇ ಕಂಪನಿಯ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ಮತ್ತು ಹಗರಣದಲ್ಲಿ ಶಾಮೀಲಾಗಿದ್ದ ಖಾಶಗಿ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳ ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಢಿ ಹಣ ಸಂಗ್ರಹಿಸಿ ಠೇವಣಿದಾರರಿಗೆ ಹಿಂದಿರುಗಿಸುವ ಪ್ರಸ್ತಾಪವೂ ಪ್ರಾಧಿಕಾರದ ಮುಂದಿದೆ. ಈ ರೀತಿ 475 ಕೋಟಿ ಮೌಲ್ಯದ ಆಸ್ತಿಗಳನ್ನು ಗುರುತಿಸಿದೆ.
ಹಾಗೆಯೇ ಪ್ರಕರಣದಲ್ಲಿ ಶಾಮೀಲಾಗಿದ್ದ ಜಿಲ್ಲಾಧಿಕಾರಿ, ಉಪ ವಿಭಾಘಾಧಿಕಾರಿ, ಗ್ರಾಮ ಲೆಕ್ಕಿಗ ಮತ್ತು ಇನ್ನೊಬ್ಬ ಅಧಿಕಾರಿಯ ಪತ್ನಿಯ ಹೆಸರಿನಲ್ಲಿರುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ.