ಬೆಂಗಳೂರು; ಮುಖ್ಯಮಂತ್ರಿಯೂ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯ್ತಿ ಸದಸ್ಯರು, ರಾಜ್ಯ ಸರ್ಕಾರದ ಸೇವೆಯಲ್ಲಿರುವ ಡಿ ಗ್ರೂಪ್ ನೌಕರರೂ ಆಯಾ ವರ್ಷದ ಆಸ್ತಿ ಮತ್ತು ದಾಯಿತ್ವ(ಸಾಲಸೋಲ ಕೊಡಬೇಕಾದ ಬಾಧ‍್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆಜ್ಞೆ ಹೊರಡಿಸುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಹಲವು ವರ್ಷಗಳಿಂದಲೂ ಸಲ್ಲಿಸಿಲ್ಲ.
ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸೇರಿದಂತೆ ಬಿಜೆಪಿ ಸರ್ಕಾರದ 9ಕ್ಕೂ ಹೆಚ್ಚು ಸಚಿವರು ಮತ್ತು ಒಟ್ಟು 148 ಮಂದಿ ಚುನಾಯಿತ ಜನಪ್ರತಿನಿಧಿಗಳು ನಿಗದಿತ ಅವಧಿಯೊಳಗೆ ಚರ ಮತ್ತು ಸ್ಥಿರಾಸ್ತಿ ಪಟ್ಟಿಯನ್ನು ಸಲ್ಲಿಸದೇ ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 22ನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿರುವ ಬೆನ್ನಲ್ಲೇ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸದಿರುವ ವಿಚಾರವೂ ಮುನ್ನೆಲೆಗೆ ಬಂದಿದೆ.
ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ಪಡೆಯುವ ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಆಸ್ತಿ ವಿವರವನ್ನು ಸಲ್ಲಿಸದ ಲೋಕಾಯುಕ್ತರನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ಪ್ರದರ್ಶಿಸಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಲವು ಬಾರಿ ತಿದ್ದುಪಡಿಗೆ ಒಳಗಾಗುತ್ತಿದೆಯಾದರೂ ಲೋಕಾಯುಕ್ತರು, ಉಪ ಲೋಕಾಯುಕ್ತರು ಕೂಡ ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರುವ ಧೈರ್ಯವನ್ನು ಯಾವೊಬ್ಬ ಶಾಸಕರೂ ತೋರುತ್ತಿಲ್ಲ.
ಕಾನೂನಿನಲ್ಲಿ ಹೇಳಿಲ್ಲ ಎಂಬ ತಾಂತ್ರಿಕ ಆಂಶವನ್ನೇ ಮುಂದಿರಿಸಿಕೊಂಡಿರುವ ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡು 2 ವರ್ಷಗಳಾಗಿದ್ದರೂ ಆಸ್ತಿ ವಿವರ ಸಲ್ಲಿಸುವುದರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಆಸ್ತಿ ವಿವರಗಳನ್ನು ಬಹಿರಂಗಪಡಿಸುವ ಧೈರ್ಯ ಮತ್ತು ಬದ್ಧತೆಯನ್ನೂ ಪ್ರದರ್ಶಿಸಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಲೋಕಾಯುಕ್ತದ ಘನತೆ ಕಾಪಾಡಬೇಕಿದ್ದವರೇ ಆಸ್ತಿ ವಿವರ ಸಲ್ಲಿಸುವುದರಿಂದ ನುಣುಚಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆಗಳು ಎದ್ದಿವೆ.
ಲೋಕಾಯುಕ್ತರು ಆಸ್ತಿ ವಿವರ ಕೋರಿ ಮಾಹಿತಿ ಹಕ್ಕು ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿರುವ ಲೋಕಾಯುಕ್ತ ಸಂಸ್ಥೆಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯೂ ಆಗಿರುವ ಉಪ ನಿಬಂಧಕರು ‘ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 22ರಲ್ಲಿ ಸಾರ್ವಜನಿಕರು/ಚುನಾಯಿತ ಜನಪ್ರತಿನಿಧಿಗಳು ಮಾತ್ರ ಲೋಕಾಯುಕ್ತ ಸಂಸ್ಥೆಗೆ ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸುತ್ತದೆ. ಸದರಿ ಕಾಯ್ದೆ ಅಥವಾ ಕಾಯ್ದೆಯ ಅಡಿಯಲ್ಲಿ ಗೌರವಾನ್ವಿತ ಲೋಕಾಯುಕ್ತರು/ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಸಲ್ಲಿಸಬೇಕೆಂದು ಹೇಳಿರುವುದಿಲ್ಲ,’ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ಹೆಗ್ಡೆ ಮತ್ತು ಉಪ ಲೋಕಾಯುಕ್ತರಾಗಿದ್ದ ಸುಭಾಷ್‌ಬಿ ಆಡಿ ಅವರು ಆಸ್ತಿ ವಿವರ ಸಲ್ಲಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.
ಕಾಯ್ದೆಯಲ್ಲೇನಿದೆ?
ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ರ ಕಲಂ 22ರಲ್ಲಿ ‘ಸಾರ್ವಜನಿಕ ನೌಕರರು ಸ್ವತ್ತಿನ ಹೇಳಿಕೆಯನ್ನು ಒಪ್ಪಿಸುವ ಸಂಬಂಧ ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರನ್ನುಳಿದು 7ನೇ ಪ್ರಕರಣದ(1)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಈ ಅಧಿನಿಯಮ ಪ್ರಾರಂಭವಾದ ತರುವಾಯ 3 ತಿಂಗಳೊಳಗೆ ಮತ್ತು ಆ ತರುವಾಯ ಪ್ರತಿ ವರ್ಷ ಜೂನ್30ರೊಳಗೆ (ತನ್ನ ಆಸ್ತಿಗಳ ಮತ್ತು ಹೊಣೆಗಾರಿಕೆ) ತನ್ನ ಕುಟುಂಬದ ಸದಸ್ಯರುಗಳ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ಹೇಳಿಕೆಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸತಕ್ಕದ್ದು,’ ಎಂದು ಹೇಳಿದೆ.
ಸ್ವಾಯತ್ತ ಸಂಸ್ಥೆಯ ಅಧಿಕಾರ ಸ್ವೀಕರಿಸಿರುವ ಲೋಕಾಯುಕ್ತರು, ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಪ್ರಾಮಾಣಿಕತೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಅವರು ತಮ್ಮ ಜವಾಬ್ದಾರಿಯನ್ನು ತೋರಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪತ್ರಿಕೆಯಲ್ಲಿ ಪ್ರಕಟಿಸಿ ಶಿಸ್ತು ಕ್ರಮಕ್ಕಾಗಿ ರಾಜ್ಯಪಾಲರಿಗೆ ಶಿಫಾರಸು ಮಾಡುವ ಘನತೆಯ ಹುದ್ದೆಯಲ್ಲಿದ್ದಾರೆ. ಇಂತಹ ಅಧಿಕಾರ ಹೊಂದಿರುವ ಲೋಕಾಯುಕ್ತರು ತಮ್ಮ ಆಸ್ತಿ ವಿವರ ಸಲ್ಲಿಸುವ ಮೂಲಕ ಪಾರದರ್ಶಕವಾಗಿರಬೇಕಿದ್ದವರೇ ಹಿಂಜರಿಯುತ್ತಿರುವುದಾದರೂ ಏಕೆ?
ಲೋಕಾಯುಕ್ತ ಘನತೆಯುಳ್ಳ ಹುದ್ದೆ. ಅಂತಹ ಹುದ್ದೆ ಅಲಂಕರಿಸಿದವರು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಿತ್ತು. ಜನರ ಅವಹಾಲುಗಳನ್ನು ಆಲಿಸುವ ಲೋಕಾಯುಕ್ತರು ತಮ್ಮ ಆಸ್ತಿ ವಿವರ ಪ್ರಕಟಿಸಿದರೆ ತಪ್ಪೇನಿಲ್ಲ ಎಂಬ ವಾದಗಳು ಕೇಳಿ ಬಂದಿವೆ.
‘ಆಸ್ತಿ ವಿವರ ಸಲ್ಲಿಕೆ ಸಂಬಂಧ ವಿಶ್ವನಾಥ ಶೆಟ್ಟಿ ಅವರು ಹೇಳಿರುವುದು ಕಾನೂನು ಚೌಕಟ್ಟಿನಲ್ಲಿ ಸರಿ ಇದೆ. ಆದರೆ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ಹೆಗ್ಡೆ ಅವರಿಗಷ್ಟೇ ತಮ್ಮ ಆಸ್ತಿಯನ್ನು ಬಹಿರಂಗಗೊಳಿಸುವ ಧೈರ್ಯ ಮತ್ತು ಬದ್ಧತೆ ಇರಲಿಕ್ಕೆ ಸಾಧ್ಯ,’ ಎನ್ನುತ್ತಾರೆ ಕಾನೂನು ತಜ್ಞರು.
ನ್ಯಾಯಾಧೀಶರಷ್ಟೇ ಅಲ್ಲ ಅವರ ಕುಟುಂಬದವರ ವಿವರವನ್ನೂ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಅಲ್ಲದೆ ಹೈಕೋರ್ಟ್‌ನಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮ್ಯಾಜಿಸ್ಟ್ರೇಟ್ ಕೋರ್ಟ್, ಸಣ್ಣ ವ್ಯಾಜ್ಯಗಳ ನ್ಯಾಯಾಲಯ, ತ್ವರಿತ ಗತಿ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ನ್ಯಾಯಮಂಡಳಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸುವ ಸಂಬಂಧ ಮಾದರಿಯನ್ನೂ ಬಿಡುಗಡೆಗೊಳಿಸಿತ್ತು.
ಜೀವ ವಿಮಾ ಪಾಲಿಸಿ, ಭವಿಷ್ಯ ನಿಧಿ, ಠೇವಣಿ ವಿವರ ಹಾಗೂ ಇತರ ಆದಾಯದ ಮೂಲಗಳಿದ್ದರೆ ಅವುಗಳ ವಿವರಗಳನ್ನೂ ಆಸ್ತಿ ವಿವರಗಳಲ್ಲಿ ನಮೂದಿಸಿರುವ ಸ್ಪಷ್ಟವಾಗಿ ಸಲ್ಲಿಸಲು ಸೂಚಿಸಿತ್ತಲ್ಲದೆ, ಒಂದು ವೇಳೆ ನಮೂದಿಸದೇ ಇದ್ದರೆ ಅದನ್ನು ದುರ್ನಡತೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿತ್ತು.
ಬಿಜೆಪಿ ಸರ್ಕಾರದ 9ಕ್ಕೂ ಹೆಚ್ಚು ಸಚಿವರು ಮತ್ತು ಒಟ್ಟು 148 ಮಂದಿ ಚುನಾಯಿತ ಜನಪ್ರತಿನಿಧಿಗಳು ನಿಗದಿತ ಅವಧಿಯೊಳಗೆ ಚರ ಮತ್ತು ಸ್ಥಿರಾಸ್ತಿ ಪಟ್ಟಿಯನ್ನು ಸಲ್ಲಿಸದೇ ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 22ನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ಲೋಕಾಯುಕ್ತ ಸೆಕ್ಷನ್ 22ರ ಪ್ರಕಾರ ಚರ ಮತ್ತು ಸ್ಥಿರಾಸ್ತಿ ಪಟ್ಟಿಯನ್ನು ಆಯಾ ವರ್ಷದ ಜೂನ್ ಅಂತ್ಯಕ್ಕೆ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಆಸ್ತಿ ವಿವರವನ್ನು ಸಲ್ಲಿಸದೇ ಇದ್ದಲ್ಲಿ ಅಂತಹ ಜನಪ್ರತಿನಿಧಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗುತ್ತದೆ. ಅದಾದ ನಂತರವೂ ಆಸ್ತಿ ವಿವರವನ್ನು ಸಲ್ಲಿಸದೇ ಇದ್ದಲ್ಲಿ ಆ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ.
ನಿಗದಿತ ಅವಧಿಯೊಳಗೆ ಆಸ್ತಿ ವಿವರವನ್ನು ಸಲ್ಲಿಸದೇ ಇದ್ದ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಲೋಕಾಯುಕ್ತ ಕಾಯ್ದೆಯಲ್ಲಿ ಏನನ್ನೂ ಹೇಳಿಲ್ಲ. ಲೋಕಾಯುಕ್ತ ಕಾಯ್ದೆಗೆ ಹಲವಾರು ಬಾರಿ ತಿದ್ದುಪಡಿ ತಂದಿದ್ದರೂ ನಿಗದಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸದೇ ಇರುವ ಜನಪ್ರತಿನಿಧಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ತಿದ್ದುಪಡಿಯನ್ನು ಈವರೆವಿಗೂ ತಂದಿಲ್ಲ.
ಆಸ್ತಿ ವಿವರ ಸಲ್ಲಿಸದ ಸಚಿವರ ಪಟ್ಟಿ ಇಲ್ಲಿದೆ
ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ. ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ , ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್, ಅಬಕಾರಿ ಸಚಿವ ಹೆಚ್ ನಾಗೇಶ್ , ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಆಹಾರ ನಾಗರಿಕ ಸರಬರಾಜು ಸಚಿವ ಕೆ ಗೋಪಾಲಯ್ಯ, ಕೃಷಿ ಸಚಿವ ಬಿ ಸಿ ಪಾಟೀಲ್, ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ,ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಇದ್ದಾರೆ.
ಅದೇ ರೀತಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ದಿನೇಶ್ ಗುಂಡೂರಾವ್, ಡಾ. ಜಿ ಪರಮೇಶ್ವರ್, ರಾಮಲಿಂಗಾರೆಡ್ಡಿ , ಎಚ್ ಡಿ ರೇವಣ್ಣ, ಯು ಟಿ ಖಾದರ್, ಜಮೀರ್ ಅಹ್ಮದ್ ಖಾನ್, ಡಿ ಕೆ ಶಿವಕುಮಾರ್, ಅಂಜಲಿ ನಿಂಬಾಳ್ಕರ್, ಎಸ್ ಆರ್ ಪಾಟೀಲ್, ಸಿ ಎಂ ಇಬ್ರಾಹಿಂ, ಸತೀಶ್ ಜಾರಕಿಹೊಳಿ ಕೂಡ ಆಸ್ತಿ ವಿವರ ಸಲ್ಲಿಸದವರ ಪಟ್ಟಿಯಲ್ಲಿದ್ದಾರೆ.