ಡ್ರಗ್ಸ್‌ ದಂಧೆ; 3 ವರ್ಷದಲ್ಲಿ 30 ಕೋಟಿ ಮೌಲ್ಯದ 15,778 ಕೆ ಜಿ ಮಾದಕ ಪದಾರ್ಥ ವಶ

ಬೆಂಗಳೂರು; ಬೆಂಗಳೂರು ನಗರದ 107 ಠಾಣೆ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ ಗಾಂಜಾ, ಹಾಶೀಶ್‌, ಚರಸ್‌ ಸೇರಿದಂತೆ ಇನ್ನಿತರೆ ಮಾದಕ ಪದಾರ್ಥಗಳ ಮಾರಾಟವು ಹೆಚ್ಚಾಗಿದೆ. 2017ರಿಂದ 2019ರವರೆಗೆ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೆ ಆರ್‌ ಪುಂನಲ್ಲಿ ಕಳೆದ 3 ವರ್ಷದಲ್ಲಿ ಒಟ್ಟು 54 ಪ್ರಕರಣಗಳು ದಾಖಲಾಗುವ ಮೂಲಕ ಬೆಂಗಳೂರು ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ವಿಧಾನಪರಿಷತ್‌ ಸದಸ್ಯ ಲೆಹರ್‌ಸಿಂಗ್ ಸಿರೋಯಾ ಮತ್ತು ಪರಿಷತ್‌ನ ಮತ್ತೋರ್ವ ಸದಸ್ಯ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು 2020ರ ಮಾರ್ಚ್‌ 12ರಂದು ನಡೆದ ಸದನದಲ್ಲಿ ಉತ್ತರಿಸಿದ್ದಾರೆ.

ಗಾಂಜಾ, ಹಾಶೀಶ್‌, ಚರಸ್‌, ಕೊಕೈನ್‌, ಯಾಬಾ, ರೆಸ್ಟಿ, ಆಂಕ್ಸಿಟ್‌ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳ ಮಾರಾಟ ಮಾಡುವ ವೇಳೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ 1985ರಡಿಯಲ್ಲಿ ಒಟ್ಟು 1,408 ಪ್ರಕರಣಗಳು ವರದಿಯಾಗಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ 2017ರಲ್ಲಿ 355, 2018ರಲ್ಲಿ 286 ಪ್ರಕರಣಗಳು ವರದಿಯಾಗಿದ್ದರೆ 2019ರಲ್ಲಿ 767 ಪ್ರಕರಣಗಳು ವರದಿಯಾಗಿವೆ. 2020ರ ಜನವರಿ ಮತ್ತು ಫೆಬ್ರುವರಿಯಲ್ಲಿ 130 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.

ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು, 30 ಕೋಟಿ ಮೌಲ್ಯದ ಒಟ್ಟು 15,778 ಕೆ ಜಿ ಪ್ರಮಾಣದಷ್ಟು ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. 2019-20ರಲ್ಲಿ ಅತಿ ಹೆಚ್ಚು ಎಂದರೆ 18 ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ಧಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸದನಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಮಾದಕ ವಸ್ತುಗಳ ಪ್ರಕರಣಗಳಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದು ಮತ್ತು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎಷ್ಟು ದೋಷಾರೋಪಣೆ ಪಟ್ಟಿಗಳನ್ನು ಸಲ್ಲಿಸಲಾಗಿದೆ ಎಂಬ ವಿವರಗಳನ್ನು ಸದನಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಒದಗಿಸಿಲ್ಲ.

ಕಳೆದ 3 ವರ್ಷದಲ್ಲಿ ಬೆಂಗಳೂರು ನಗರ ಪೊಲೀಸ್‌ ವ್ಯಾಪ್ತಿಯ ಕೆ ಆರ್‌ ಪುರಂ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 54 ಪ್ರಕರಣಗಳು ದಾಖಲಾಗಿವೆ. ಎಲೆಕ್ಟ್ರಾನಿಕ್‌ ಸಿಟಿ ಠಾಣಾ ವ್ಯಾಪ್ತಿಯಲ್ಲಿ 18, ಕಾಡುಗೊಂಡನಹಳ್ಳಿಯಲ್ಲಿ 2019ರಲ್ಲಿ 47, ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ 41, ಜೀವನಭೀಮಾನಗರದಲ್ಲಿ 48, ಕೋರಮಂಗಲದಲ್ಲಿ 21, ಪುಲಿಕೇಶಿ ನಗರದಲ್ಲಿ 25, ಸದ್ದುಗುಂಟೆ ಪಾಳ್ಯದಲ್ಲಿ 49, 2020ರ ಜನವರಿ, ಫೆಬ್ರುವರಿಯಲ್ಲಿ 33 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.

ಅದೇ ರೀತಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌, ಅತ್ತಿಬೆಲೆ, ಆವಲಹಳ್ಳಿ, ಆನುಗೊಂಡನಹಳ್ಳಿ, ಬನ್ನೇರುಘಟ್ಟ, ಚೆನ್ನರಾಯಪಟ್ಟಣ, ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರ ಗ್ರಾಮಾಂತರ, ಟೌನ್‌, ದಾಬಸ್‌ಪೇಟೆ, ಹೆಬ್ಬಗೋಡಿ, ಹೊಸಹಳ್ಳಿ, ಹೊಸಕೋಟೆ, ಜಿಗಣಿ, ಮಾದನಾಯಕನಹಳ್ಳಿ, ನಂದಗುಡಿ, ನೆಲಮಂಗಲ ಟೌನ್‌ ಮತ್ತು ಗ್ರಾಮಾಂತರ, ರಾಜಾನುಕುಂಟೆ, ಸರ್ಜಾಪುರ, ಸೂಲಿಬೆಲೆ, ಸೂರ್ಯನಗರ, ತಿರುಮಲಶೆಟ್ಟಿಹಳ್ಳಿ, ತ್ಯಾಮಗೊಂಡ್ಲು, ನೆಲಮಂಗಲ ಸಂಚಾರ, ವಿಜಯಪುರ, ವಿಶ್ವನಾಥಪುರ ವ್ಯಾಪ್ತಿಯಲ್ಲಿ ಕಳೆದ 3 ವರ್ಷದಲ್ಲಿ ಒಟ್ಟು 88 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 39 ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿರುವುದು ಗೊತ್ತಾಗಿದೆ.

2020ರ ಜನವರಿ ಮತ್ತು ಫೆಬ್ರುವರಿಯ ಕೇವಲ 2 ತಿಂಗಳಲ್ಲಿ 130 ಪ್ರಕರಣಗಳು ವರದಿಯಾಗಿವೆ. ಬ್ರೌನ್‌ ಶುಗರ್‌, ಒಪಿಯಂ, ಹೆರಾಯಿನ್‌, ಹಾಶೀಸ್‌, ಚರಸ್‌, ಕೊಕೈನ್‌, ಎಪ್ರಿಡಿಮ್‌, ಎಂಡಿಎಂಎ, ಎಂಡಿಎಸ್‌, ಪೌಡರ್‌, ಕೆಟಾಮಿನ್‌, ಯಾಬಾ, ಎಲ್‌ಎನ್‌ಡಿ ಪೇಪರ್‌, ಗಾಂಜಾ ಸೇರಿದಂತೆ ಇನ್ನಿತರೆ ರೂಪದ ಮಾದಕ ಪದಾರ್ಥಗಳು ಬೆಂಗಳೂರು ನಗರದ ಬಹುತೇಕ ಭಾಗಗಳಲ್ಲಿ ಎಲ್ಲೆಂದರಲ್ಲಿ ದೊರೆಯುತ್ತಿದ್ದರೂ ಪೊಲೀಸ್‌ ಇಲಾಖೆ ಇಂತಹ ಜಾಲದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.

2020ರ ಫೆಬ್ರುವರಿ 20ರ ಅಂತ್ಯಕ್ಕೆ ಬೆಂಗಳೂರು ನಗರದ 107 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 130 ಪ್ರಕರಣಗಳು ವರದಿಯಾಗಿವೆ. ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ 130.656 ಕೆ ಜಿ ಪ್ರಮಾಣದಲ್ಲಿ ಗಾಂಜಾವನ್ನು ವಶಕ್ಕೆ ಪಡೆದಿರುವ ಬೆಂಗಳೂರು ಪೊಲೀಸ್‌, 226 ಆರೋಪಿಗಳನ್ನು ಬಂಧಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ 6, ಬಾಣಸವಾಡಿಯಲ್ಲಿ 3, ಭಾರತಿ ನಗರದಲ್ಲಿ 4, ಕಮರ್ಷಿಯಲ್‌ ಸ್ಟ್ರೀಟ್‌ 4, ದೇವರಜೀವನಹಳ್ಳಿಯಲ್ಲಿ 11, ಇಂದಿರಾ ನಗರದಲ್ಲಿ 5, ಕಾಡುಗೋಡಿಯಲ್ಲಿ 8 ಪ್ರಕರಣಗಳು ಕಳೆದ ಜನವರಿ ಮತ್ತು ಫೆಬ್ರುವರಿಯಲ್ಲಿ ದಾಖಲಾಗಿವೆ.

ಒಟ್ಟು 130 ಪ್ರಕರಣಗಳ ಪೈಕಿ 123 ಪ್ರಕರಣಗಳು ಗಾಂಜಾ ಮಾರಾಟಕ್ಕೆ ಸಂಬಂಧಿಸಿವೆ. ಅಲ್ಲದೆ 127.763 ಕೆ ಜಿ ಗಾಂಜಾವನ್ನು ವಶಪಡಿಸಿಕೊಂಡಿರುವುದು ಗೊತ್ತಾಗಿದೆ. 2017ರಲ್ಲಿ 554.611 ಕೆ ಜಿ ಗಾಂಜಾ ವಶಪಡಿಸಿಕೊಂಡಿದ್ದ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ 493 ಭಾರತೀಯರು, 23 ಮಂದಿ ವಿದೇಶಿಯರನ್ನು ಬಂಧಿಸಿದ್ದರು. 2018ರಲ್ಲಿ 759.838 ಕೆ ಜಿ ಗಾಂಜಾ ವಶವಾಗಿದ್ದು, 421 ಭಾರತೀಯರು, 13 ವಿದೇಶಿಯರನ್ನು ಬಂಧಿಸಲಾಗಿತ್ತು. 2019ರಲ್ಲಿ 1047.41 ಕೆ ಜಿ ಗಾಂಜಾ ವಶಕ್ಕೆ ಪಡೆದಿದ್ದರೆ ಈ ಸಂಬಂಧ 1,193 ಭಾರತೀಯರು, 7 ಮಂದಿ ವಿದೇಶಿಯರನ್ನು ಬಂಧಿಸಲಾಗಿತ್ತು.

the fil favicon

SUPPORT THE FILE

Latest News

Related Posts