ವಿಜಯೇಂದ್ರ ವಿರುದ್ಧದ ದೂರು, ‘ಮನವಿ’ ರೂಪಕ್ಕೆ ಪರಿವರ್ತನೆ? ಕೇಸಿನ ವಿಷಯ ತಿರುಚಲಾಗುವುದೇ ?

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಮತ್ತು ಅವರ ಮೊಮ್ಮಗ ಶಶಿಧರ್‌ ಮರಡಿ ಸೇರಿದಂತೆ ಇತರ ಸಹಚರರ ವಿರುದ್ಧದ 7.40 ಕೋಟಿ ಸುಲಿಗೆ ಪ್ರಕರಣದಲ್ಲಿ ದೂರು ಸಲ್ಲಿಕೆಯಾಗಿ 96 ಗಂಟೆಗಳಾದರೂ ಎಫ್‌ಐಆರ್‌ ದಾಖಲಿಸದ ಪೊಲೀಸ್‌ ಅಧಿಕಾರಿಗಳು, ಇದೀಗ ಪ್ರಕರಣವನ್ನು ಠಾಣೆ ಹಂತದಲ್ಲೇ ಮುಕ್ತಾಯಗೊಳಿಸಲು ಯತ್ನಿಸಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.

ಐಪಿಸಿ ಸೆಕ್ಷನ್‌ಗಳನ್ನು ಉಲ್ಲೇಖಿಸಿ ಸಲ್ಲಿಕೆಯಾಗಿರುವ ದೂರನ್ನು ಮನವಿಯನ್ನಾಗಿ ಪರಿವರ್ತಿಸಲು ಹೊರಟಿರುವ ಪೊಲೀಸ್‌ ಅಧಿಕಾರಿಗಳ ನಡೆಯು ಯಾವುದೇ ಕ್ರಮವಿಲ್ಲದೇ ಪ್ರಕರಣವು ಮುಕ್ತಾಯಗೊಳ್ಳಲಿದೆ ಎಂಬ ಆರೋಪಕ್ಕೆ ಹೆಚ್ಚಿನ ಪುಷ್ಠಿ ನೀಡಿದಂತಾಗಿದೆ.

ಈಗಾಗಲೇ ಸಲ್ಲಿಕೆಯಾಗಿರುವ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸದಿರುವುದು ಅಪರಾಧದ ಸಮಯವನ್ನು ಅದಲು-ಬದಲು ಮಾಡುವ ಅಥವಾ ವಿಳಂಬ ಮಾಡುವ ಮೂಲಕ ಕೇಸಿನ ವಿಷಯವನ್ನೇ ತಿರುಚುವ ಸಾಧ್ಯತೆಗಳೂ ಇರುತ್ತವೆ ಎಂಬ ಅಭಿಪ್ರಾಯಗಳು ಕಾನೂನು ತಜ್ಞರ ವಲಯದಲ್ಲಿ ವ್ಯಕ್ತವಾಗಿವೆ.

ಬಹುಮಹಡಿ ವಸತಿ ಸಮುಚ್ಛಯ ಕಂಪನಿ ನಿರ್ದೇಶಕ ಚಂದ್ರಕಾಂತ್‌ ರಾಮಲಿಂಗಂ ಎಂಬುವರಿಂದ 7.40 ಕೋಟಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಐಪಿಸಿ ಸೆಕ್ಷನ್‌ 384, 120(ಬಿ) ಮತ್ತು 34ನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ದೂರು ದಾಖಲಿಸಿತ್ತು. ಇವೆಲ್ಲವೂ ಸಂಜ್ಞೆಯ ಅಪರಾಧವಾಗಿರುವುದರಿಂದ ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸಬೇಕಿತ್ತು. ಆದರೀಗ ಶೇಷಾದ್ರಿಪುರಂ ಠಾಣೆಗೆ ದೂರನ್ನೇ ಮನವಿಯನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರಲ್ಲದೆ ಪೊಲೀಸ್‌ ಅಧಿಕಾರಿಗಳು ಈ ಸಂಬಂಧ ಕಾನೂನು ಅಭಿಪ್ರಾಯವನ್ನೂ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಈ ಕುರಿತು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್‌ ಅವರ ಪ್ರತಿಕ್ರಿಯೆಗಾಗಿ ‘ದಿ ಫೈಲ್‌’ ವಾಟ್ಸಾಪ್‌ ಮೂಲಕ ಸಂದೇಶ ಕಳಿಸಿದ್ದರೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಸಿಆರ್‌ಪಿಸಿ ಉಲ್ಲಂಘನೆ?

ಲಲಿತಾಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಂತೆ ಸಿಆರ್‌ಪಿಸಿ ಸೆಕ್ಷನ್‌ 154ರಡಿಯಲ್ಲಿ ಠಾಣಾಧಿಕಾರಿಗಳು ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸಬೇಕು. ಅಲ್ಲದೆ ದೂರಿನಲ್ಲಿರುವ ಮಾಹಿತಿಯು ಸಂಜ್ಞೆ ಅಪರಾಧವನ್ನು ಬಹಿರಂಗಪಡಿಸಿದರೆ ಎಫ್‌ಐಆರ್‌ನ್ನು ದಾಖಲಿಸಲೇಬೇಕು. ಹಾಗೆಯೇ ಇಂತಹ ಸಂದರ್ಭದಲ್ಲಿ ಪೂರ್ವ ವಿಚಾರಣೆಯನ್ನುಮಾಡಲು ಪೊಲೀಸರಿಗೆ ಅವಕಾಶವಿಲ್ಲ ಎಂಬುದು ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಗೊತ್ತಾಗಿದೆ.

ಈ ಕುರಿತು ‘ದಿ ಫೈಲ್‌’ ಜತೆ ಮಾತನಾಡಿದ ರಾಜ್ಯ ಸರ್ಕಾರದ ಮಾಜಿ ರಾಜ್ಯ ಅಭಿಯೋಜಕ ಬಿ ಟಿ ವೆಂಕಟೇಶ್‌ ಅವರು ಕಾನೂನಿನ ಪ್ರಕಾರ ಸಂಜ್ಞೆಯ ಅಪರಾಧದ ದೂರಾಗಿದ್ದಲ್ಲಿ ಅದರ ಎಫ್‌ಐಆರ್‌ನ್ನು ತಪ್ಪದೇ 24 ಗಂಟೆಯೊಳಗಾಗಿ ಸಲ್ಲಿಸಬೇಕು. ಇದು ಸುಪ್ರೀಂ ಕೋರ್ಟ್‌ನ ತೀರ್ಪು. ಇದು ದಂಡ ಪ್ರಕ್ರಿಯಾ ಸಂಹಿತೆ ನಿಯಮ ಹಾಗೂ ಪೊಲೀಸ್‌ ಇಲಾಖೆಯ ನಿರ್ದೇಶನವೂ ಹೌದು. ದುರಂತವೆಂದರೆ ಈ ನಿಯಮಗಳನ್ನು ಪಾಲಿಸುವಲ್ಲಿ ಬಹುತೇಕ ಠಾಣಾಧಿಕಾರಿಗಳು ವಿಫಲವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಕಷ್ಟು ಪ್ರಕರಣಗಳಲ್ಲಿ ಅಪರಾಧದ ಸಮಯವನ್ನು ಅದಲು-ಬದಲು ಮಾಡಿದ ನಿದರ್ಶನಗಳಿವೆ. ಪೊಲೀಸ್‌ ಇಲಾಖೆಯ ಇಂತಹ ತಪ್ಪುಗಳಿಗೆ ಅದೆಷ್ಟೋ ಸಲ ನ್ಯಾಯಾಲಯಗಳು ಟೀಕೆ ಮಾತ್ರವಲ್ಲ ಹಲವು ಬಾರಿ ಛೀಮಾರಿ ಹಾಕಿರುವ ಪ್ರಕರಣಗಳೂ ಇವೆ. ಯಾವುದೇ ಗುರುತರ ಅಪರಾಧದ (ಸಂಜ್ಞೆ) ದೂರು ಬಂದ ತಕ್ಷಣ ದೂರನ್ನು ಪ್ರಥಮ ವರ್ತಮಾನ ವರದಿ ಜತೆ 24 ಗಂಟೆಗಳಲ್ಲಿ ನ್ಯಾಯಾಲಯಕ್ಕೆ ತಲುಪಿಸಲೇಬೇಕಾಗಿರುತ್ತದೆ ಎಂದೂ ವಿವರಿಸಿದರು.

ಒಂದು ವೇಳೆ ಎಫ್‌ಐಆರ್‌ ಹಾಕುವುದು ತಡವಾದಲ್ಲಿ ಕೇಸಿನ ವಿಷಯವನ್ನೇ ತಿರುಚುವ ಅವಕಾಶವಿರುತ್ತದೆ ಎಂಬ ಕಾರಣದಿಂದಾಗಿ ಪ್ರಥಮ ವರ್ತಮಾನವನ್ನು 24 ತಾಸಿನಲ್ಲೇ ಹಾಕಲು ನಿಯಮಗಳನ್ನು ರೂಪಿಸಲಾಗಿದೆ. ತಿರುಚುವ ಕಾರಣಕ್ಕೆ ಪ್ರಥಮ ವರ್ತಮಾನ ವರದಿ ನ್ಯಾಯಾಲಯಕ್ಕೆ ಸಲ್ಲಿಸುವುದನ್ನು ವಿಳಂಬ ಮಾಡಿರುವುದು ಸಾಕಷ್ಟು ಬಾರಿ ನ್ಯಾಯಾಲಯಗಳಲ್ಲಿ ಚರ್ಚೆಯಾಗಿದೆ.

ಈ ಹಿನ್ನೆಲೆಯಲ್ಲಿ ‘ಗುರುತರ ಆರೋಪಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ್‌ ಮರಡಿ ಎಂಬುವರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌ ಸಲ್ಲಿಸಿರುವ ದೂರಿನ ಪ್ರಥಮ ವರ್ತಮಾನ ವರದಿಯನ್ನು ಕೂಡಲೇ ಸಲ್ಲಿಸಿ ತಕ್ಷಣವೇ ತನಿಖೆ ಕೈಗೊಳ್ಳಬೇಕು. ತನಿಖೆಯಲ್ಲಿ ದೂರು ಸಾಬೀತಾಗದ ಪಕ್ಷದಲ್ಲಿ ದೂರಿನಲ್ಲಿ ಹುರುಳಿಲ್ಲ ಎಂದು ಅಂತಿಮ ವರದಿ ಸಲ್ಲಿಸುವ ಅವಕಾಶವೂ ಇದೆ. ಸಂಜ್ಞೆಯ ಅಪರಾಧಕ್ಕೆ ಸಂಬಂಧಿಸಿದ ದೂರಿನ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸುವುದನ್ನು ವಿಳಂಬ ಮಾಡುವುದು ಯಾವ ಕಾರಣಕ್ಕೂ ಸರಿ ಅಲ್ಲ,’ ಎಂದು ರಾಜ್ಯ ಸರ್ಕಾರದ ಮಾಜಿ ರಾಜ್ಯ ಅಭಿಯೋಜಕ ಬಿ ಟಿ ವೆಂಕಟೇಶ್‌ ಅಭಿಪ್ರಾಯಿಸಿದ್ದಾರೆ.

‘ನಮ್ಮ ದೂರನ್ನಾಧರಿಸಿ 96 ಗಂಟೆಯಾದ ನಂತರವೂ ಎಫ್‌ಐಆರ್‌ ದಾಖಲಿಸಿಲ್ಲ. ದೂರಿನಲ್ಲಿ ಸಂಜ್ಞೆಯ ಅಪರಾಧಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳನ್ನು ಉಲ್ಲೇಖಿಸಿದರೂ ಸಹ ಅದನ್ನು ಪರಿಗಣಿಸದೇ ಸರ್ವೋಚ್ಛ ನ್ಯಾಯಾಲಯದ ಕಾನೂನಿನ ನಿರ್ದೇಶನವನ್ನು ಉಲ್ಲಂಘಿಸಲಾಗಿದೆ. ಶೇಷಾದ್ರಿಪುರಂ ಇನ್ಸ್‌ಪೆಕ್ಟರ್‌ನವರು ತಾವೇ ಕಲಂ 217  ಐಪಿಸಿ ಅಡಿಯಲ್ಲಿ ಅಪರಾಧ ಎಸಗಿರುತ್ತಾರೆ. ಈ ನಿಟ್ಟಿನಲ್ಲಿ ಎರಡು ದಿನ ಕಾಯ್ದು ಅವರ ವಿರುದ್ಧವೂ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದೇವೆ.

                        ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ದೂರಿನಲ್ಲೇನಿದೆ?

ವಸತಿ ಸಮುಚ್ಛಯ ನಿರ್ಮಾಣದ ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಕಂಪನಿಯಿಂದ ನಗದು ಮತ್ತು ಆರ್‌ಟಿಜಿಎಸ್‌ ಮೂಲಕ ಸುಮಾರು 20 ಕೋಟಿ ರು.ಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ದೂರಿನಲ್ಲಿ ವಿವರಿಸಿದೆ.

ಬಿ ವೈ ವಿಜಯೇಂದ್ರ ಮತ್ತು ಶಶಿಧರ್‌ ಮರಡಿ ಎಂಬುವರ ಮೇಲೆ ಐಪಿಸಿ 384, ಸೆಕ್ಷನ್‌ 34 ಮತ್ತು 120(ಬಿ) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಆಗ್ರಹಿಸಿದೆ. ಖಾಸಗಿ ಮಾಧ್ಯಮವೊಂದು ಇತ್ತೀಚೆಗೆ ಮಾಡಿದ್ದ ವರದಿ ಆಧರಿಸಿ ಈ ದೂರನ್ನು ಸಲ್ಲಿಸಿತ್ತು.

ಶಶಿಧರ್‌ ಮರಡಿ ಅವರು ಹೊಂದಿರುವ ಬ್ಯಾಂಕ್‌ ಖಾತೆಗೆ 7.4 ಕೋಟಿ ರು.ಗಳನ್ನು ನಿರ್ಮಾಣ ಕಂಪನಿ ಆರ್‌ಟಿಜಿಎಸ್‌ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್‌ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್‌ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್‌ 100 ರು. ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.

ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ನಿರ್ಮಾಣ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಸಹ ಆ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಪರಿಷತ್‌ ವಿವರಿಸಿತ್ತು.

ವಾಟ್ಸಾಪ್‌ ಚಾಟ್‌ಗಳಲ್ಲಿ ಶಶಿಧರ್‌ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‌ಟಿಜಿಎಸ್‌ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.

the fil favicon

SUPPORT THE FILE

Latest News

Related Posts