ಬೆಂಗಳೂರು; ರೈತರ ಆದಾಯ ದ್ವಿಗುಣಗೊಳಿಸಲು ಬದ್ಧ ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕಾಗಿ ಯಾವುದೇ ಅನುದಾನವನ್ನು ಒದಗಿಸದಿರುವುದು ಇದೀಗ ಬಹಿರಂಗವಾಗಿದೆ. ಇದೊಂದೇ ಅಲ್ಲ, ಕೃಷಿ, ತೋಟಗಾರಿಕೆ, ಜಲಾನಯನಕ್ಕೆ ಸಂಬಂಧಿಸಿದ ಹಲವು ಘೋಷಣೆಗಳು ಕೇವಲ ಆಯವ್ಯಯ ಹೇಳಿಕೆಯಾಗಿತ್ತಲ್ಲದೆ ಈ ಸಂಬಂಧ ನಿರ್ದಿಷ್ಟ ಯೋಜನೆಗಳು ಅನುಷ್ಠಾನವೂ ಆಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
2020-21ನೇ ಸಾಲಿನ ಆಯವ್ಯಯದಲ್ಲಿ ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆಗೆ ಸಂಬಂಧಿಸಿದ ಕಂಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮಾಹಿತಿ ಒದಗಿಸಿರುವ ಕೃಷಿ ಅಧಿಕಾರಿಗಳು ರೈತರ ಆದಾಯ ದ್ವಿಗುಣಗೊಳಿಸುವ ಹೇಳಿಕೆ ಕೇವಲ ಘೋಷಣೆಯಾಗಿತ್ತು ಎಂದು ಷರಾ ಬರೆದಿದ್ದಾರೆ. ಇದಲ್ಲದೆ ಬಜೆಟ್ ಮಂಡಿಸುವ ವೇಳೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದ ಬಹುತೇಕ ಹೇಳಿಕೆಗಳು ಘೋಷಣೆಯಾಗಿವೆಯೇ ಹೊರತು ಅನುದಾನವನ್ನೂ ಒದಗಿಸಿಲ್ಲ, ನಿರ್ದಿಷ್ಟ ಯೋಜನೆಯೂ ಅನುಷ್ಠಾನವೂ ಆಗಿಲ್ಲ.
ಕೇಂದ್ರ ಸರ್ಕಾರವು ಘೋಷಿಸಿದ್ದ ಹೊಸ ಯೋಜನೆಗಳ ಜತೆಗೆ ತಜ್ಞರ ಹಾಗೂ ರೈತ ಮುಖಂಡರ ಸಲಹೆಗಳು, ಹೊಸ ಕೃಷಿ ನೀತಿ, ರೈತ ಸಂಪರ್ಕ ಕೇಂದ್ರಗಳು, ಸಂಚಾರಿ ಕೃಷಿ ಕ್ಲಿನಿಕ್, ನೀರಿನಲ್ಲಿ ಕರಗುವ ಗೊಬ್ಬರ, ಸಾವಯವ ಕೃಷಿ ಪ್ರೋತ್ಸಾಹ, ಮಣ್ಣಿನ ಆರೋಗ್ಯ, ಆಹಾರ ಸಂಸ್ಕರಣಾ ವಲಯ, ಸುಜಲ ಯೋಜನೆ ಸಂಬಂಧ ಬಜೆಟ್ ಮಂಡಿಸುವ ವೇಳೆಯಲ್ಲಿ ನೀಡಿದ್ದ ಹೇಳಿಕೆಗಳೂ ಇದೇ ಸಾಲಿಗೆ ಸೇರಿರುವುದು ಅಧಿಕಾರಿಗಳು ಸರ್ಕಾರಕ್ಕೆ ನೀಡಿರುವ ವಿವರಣೆಗಳಿಂದ ತಿಳಿದು ಬಂದಿದೆ.
ದ್ವಿಗುಣಗೊಳ್ಳದ ರೈತರ ಆದಾಯ
‘ರಾಜ್ಯವು ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದರೂ ಸಹ ನಮ್ಮ ಸರ್ಕಾರವು ರೈತರ ಬದುಕನ್ನು ಹಸನುಗೊಳಿಸಿ, ಬಡವರು ಮತ್ತು ದುರ್ಬಲರ ಅಭ್ಯುದಯ ಸಾಧಿಸಲು ಬದ್ಧವಾಗಿದೆ. ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಆಯವ್ಯಯ ಇದಾಗಿದೆ. ರೈತರ ನಿರಂತರ ಪರಿಶ್ರಮದ ಫಲವಾಗಿ ನಮಗೆ ಆಹಾರ ಸಿಗುತ್ತಿದೆ. ನಮ್ಮ ಸರ್ಕಾರವು ರೈತರ ಕಲ್ಯಾಣ ಹಾಗೂ ಅವರ ಆದಾಯ ದ್ವಿಗುಣಗೊಳಿಸಲು ಬದ್ಧವಾಗಿದೆ,’ ಎಂದು ಘೋಷಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿರುವ ಅಧಿಕಾರಿಗಳು ‘ಈ ಘೋಷಣೆಯನ್ನು ಅನುಷ್ಠಾನಗೊಳಿಸಲು ಅನುದಾನ ಮತ್ತು ಲೆಕ್ಕ ಶೀರ್ಷಿಕೆಯಲ್ಲಿ ಅನುದಾನ ಒದಗಿಸಿರುವುದಿಲ್ಲ ಮತ್ತು ಇದೊಂದು ಆಯವ್ಯಯ ಹೇಳಿಕೆ ಮಾತ್ರವಾಗಿದ್ದು, ಯಾವುದೇ ನಿರ್ದಿಷ್ಟ ಯೋಜನೆಯ ಅನುಷ್ಠಾನವಾಗಿರುವುದಿಲ್ಲ,’ ಎಂದು ಅಧಿಕಾರಿಗಳು ಷರಾ ಬರೆದಿದ್ದಾರೆ.
ಹೊಸ ಯೋಜನೆಗಳಿಗೂ ಅನುದಾನವಿಲ್ಲ
ಕೃಷಿ ವಲಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹೊಸ ಆಯಾಮ ನೀಡುವ ಭಾಗವಾಗಿ ಕೇಂದ್ರ ಸರ್ಕಾರವು ಘೋಷಿಸಿದ ಹೊಸ ಯೋಜನೆಗಳ ಜತೆಗೆ ತಜ್ಞರ ಹಾಗೂ ರೈತರ ಮುಖಂಡರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಈ ಸಂಬಂಧ ಬಿಡಿಗಾಸನ್ನೂ ನೀಡಿಲ್ಲ, ಯೋಜನೆಯನ್ನೂ ರೂಪಿಸಿಲ್ಲದಿರುವುದು ಅಧಿಕಾರಿಗಳು ನೀಡಿರುವ ವಿವರಣೆಯಿಂದ ಗೊತ್ತಾಗಿದೆ.
ಕೃಷಿ, ತೋಟಗಾರಿಕೆಗೆ ಸಿಗದ ಉದ್ದಿಮೆ ಸ್ಪರ್ಶ
ನೀರಿನ ಭದ್ರತೆ, ಭೂಸಂಚಯ, ಸಾಮೂಹಿಕ ಕೃಷಿಯನ್ನು ಪ್ರೋತ್ಸಾಹಿಸುವುದು, ಸೂಕ್ಷ್ಮ ನೀರಾವರಿ ಕೃಷಿಕರಿಗೆ ಉತ್ತೇಜನ, ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆಯ ಪ್ರೋತ್ಸಾಹ, ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದರೂ ಈವರೆವಿಗೂ ಅನುದಾನ ಒದಗಿಸಿಲ್ಲ. ಆದರೆ ಸಮಿತಿ ರಚಿಸಿ ಕೈ ತೊಳೆದುಕೊಂಡಿರುವುದು ತಿಳಿದು ಬಂದಿದೆ.
ದೊರೆಯದ ಪಾಲಿಮರ್ ಲೇಪಿತ ಬೀಜ
ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸುವ ಜತೆಯಲ್ಲಿಯೇ ಹುಟ್ಟುವಳಿ ಖರ್ಚು ಕಡಿಮೆ ಮಾಡುವುದು, ಅಧಿಕ ಮೊಳಕೆ ಒಡೆಯುವ ಸಾಮರ್ಥ್ಯವಿರುವ ಬೀಜ ಒದಗಿಸುವ ದೃಷ್ಟಿಯಿಂದ ರಾಸಾಯನಿಕದಿಂದ ಪೂರ್ವ ಸಂಸ್ಕೃತಿ ಹಾಗೂ ಪಾಲಿಮರ್ ಲೇಪಿತ ಬೀಜ ಒದಗಿಸಲಾಗುವುದು ಎಂದು ಸದನದಲ್ಲಿ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಅನುದಾನವನ್ನೇ ಒದಗಿಸಿಲ್ಲ. ಅಲ್ಲದೆ ಕೃಷಿ ಆಯುಕ್ತರು ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವುದರಲ್ಲೇ ಕಾಲಹರಣ ಮಾಡಿದ್ದಾರೆ.
200 ಕೋಟಿ ಪ್ರೋತ್ಸಾಹ ಧನ ಘೋಷಣೆ ಏನಾಗಿದೆ?
ರಾಸಾಯನಿಕ ಆಧರಿತ ಕೃಷಿಯ ಅನಾನುಕೂಲತೆ ಮತ್ತು ಅಪಾಯ ಇರುವ ಕಾರಣ ಸಾವಯವ ಕೃಷಿಶಕ್ಕೆ ಉತ್ತೇಜನ ನೀಡುವ ಉದ್ದೇಶಕ್ಕಾಗಿ ನೀರಿನಲ್ಲಿ ಕರಗುವಂತಹ ಗೊಬ್ಬರಗಳು, ಸೂಕ್ಷ್ಮ ಪೌಷ್ಠಿಕಾಂಶಗಳು, ಹೈಡ್ರೋಜೆಲ್ ಇತ್ಯಾದಿಗಳನ್ನು ಬಳಸಲು ನೆರವು ನೀಡುವುದಾಗಿ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಸಾವಯವ ಕೃಷಿ ಪ್ರೋತ್ಸಾಹಕ್ಕಾಗಿ 200 ಕೋಟಿ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಈ ಸಂಬಂಧ ಅನುದಾನವನ್ನೇ ಒದಗಿಸಿಲ್ಲ.
‘ಯೋಜನೆಯ ಅನುಷ್ಠಾನಕ್ಕೆ ಆಯವ್ಯಯ ಭಾಷಣದಲ್ಲಿ 200 ಕೋಟಿ ರು.ಗಳನ್ನು ನಮೂದಿಸಲಾಗಿರುತ್ತದೆ. ಆದರೆ ಸಂಪುಟ-3ರಲ್ಲಿ ಯಾವುದೇ ಅನುದಾನ ಒದಗಿಸಿರುವುದಿಲ್ಲ,’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಷರಾ ಬರೆದಿದ್ದಾರೆ.
ಮಣ್ಣಿನ ಆರೋಗ್ಯ ನೀತಿಯ ಕಥೆಯಿದು
ಮಣ್ಣಿನ ಆರೋಗ್ಯ ಕಾರ್ಯಕ್ರಮವನ್ನು ಆದ್ಯತೆ ಮೇಲೆ ತೆಗೆದುಕೊಂಡು 163 ಲಕ್ಷ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ಕೃಷಿಕರಿಗೆ ವಿತರಿಸಿತ್ತು. ಭೂ ಸಂಪನ್ಮೂಲ, ನೀರಿನ ಲಭ್ಯತೆ, ಮಣ್ಣು ಆರೋಗ್ಯ ಕಾರ್ಡ್‌ಗಳ ಶಿಫಾರಸ್ಸುಗಳ ಮೇಲೆ ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಠಿಕಾಂಶಗಳನ್ನು ಉಪಯೋಗಿಸುವಂತಹ ಶಿಫಾರಸ್ಸುಗಳನ್ನೊಳಗೊಂಡ ನೀತಿಗೆ ಸಂಬಂಧಿಸಿದಂತೆ ಸಮಿತಿ ರಚಿಸಿ ಕೈ ತೊಳೆದುಕೊಂಡಿದೆ. ಅಲ್ಲದೆ ಈ ಉದ್ದೇಶಕ್ಕಾಗಿ ಜಲಾನಯನ ಅಭಿವೃದ್ಧಿ ಇಲಾಖೆಗೆ ಅನುದಾನವನ್ನೇ ಒದಗಿಸಿಲ್ಲ.
ಹೊಸ ತಂತ್ರಜ್ಞಾನ ಪರಿಚಯವಾಗಲೇ ಇಲ್ಲ
ಆಹಾರ ಸಂಸ್ಕರಣೆ ವಲಯದ ಬಲವರ್ಧನೆ, ಕೃಷಿ ಉತ್ಪನ್ನ ಆಧರಿತ ರಫ್ತು ಹೆಚ್ಚಿಸುವುದು, ಕೃಷಿ ಮಹಾಮಂಡಳಗಳು, ರಫ್ತುದಾರರು, ಆಹಾರ ಸಂಸ್ಕರಣಾ ಸಂಸ್ಥೆಗಳು, ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಕೇಂದ್ರೀಯ ಆಹಾರ ತಂತ್ರಜ್ಞಾನ, ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸಹಯೋಗದಡಿ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು, ಪ್ಯಾಕೇಜಿಂಗ್‌ಗಳ ಬಗ್ಗೆ ಹೊಸ ತಂತ್ರಜ್ಞಾನ ಪರಿಚಯಿಸುವ ಸಂಬಂಧವೂ ಅನುದಾನವನ್ನು ಒದಗಿಸಿಲ್ಲ ಎಂಬುದು ತಿಳಿದು ಬಂದಿದೆ.
ಹೊಳೆಯದ ಸುಜಲಾ
ಸುಜಲಾ ಯೋಜನೆ ಮಾದರಿಯಲ್ಲೇ ವಿಶ್ವ ಬ್ಯಾಂಕ್‌ನಿಂದ ಅನುದಾನ ಪಡೆದಿರುವ ಹೊಸ ಬಹು ರಾಜ್ಯ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ಮುಂದಿನ 6 ವರ್ಷದಲ್ಲಿ ರಾಜ್ಯವೂ ಭಾಗವಹಿಸಬೇಕಿತ್ತು. ಹೀಗಾಗಿ 10 ಲಕ್ಷ ಹೆಕ್ಟೇರ್ ಮಳೆ ಆಧರಿತ ಜಲಾನಯನ ಪ್ರದೇಶ, ಒಂದು ಲಕ್ಷ ಹೆಕ್ಟೇರ್‌ಗೂ ಮೀರಿದ ಜಲಾನಯನ ಅಭಿವೃದ್ಧಿ ಮತ್ತು ರೈತ ಉತ್ಪಾದಕರ ಸಂಘಗಳ ಪ್ರವರ್ಧನೆ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿಯಲ್ಲಿನ ಭೂ ಸಂಪನ್ಮೂಲಕ್ಕೆ ನೆರವಾಗಲಾಗುವುದು ಎಂದು ನೀಡಿದ್ದ ಹೇಳಿಕೆ ಪ್ರಕಾರ ಅನುದಾನ ನೀಡಿಲ್ಲ.
ಅದೇ ರೀತಿ ನೀರಿನ ಆಡಿಟ್, ನೀರಿನ ಕೊರತೆ ನೀಗಿಸುವುದು, ಕಿಂಡಿ ಅಣೆಕಟ್ಟು ಯೋಜನೆ, ಅಂತರ್ಜಲ ಹೆಚ್ಚಿಸುವುದು, ಇಸ್ರೇಲ್ ಮಾದರಿಯ ಸೂಕ್ಷ್ಮ ನೀರಾವರಿ ಕಲ್ಪಿಸುವ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದೆಯೇ, ಯೋಜನೆ ರೂಪಿಸಲಾಗಿದೆಯೇ ಎಂಬ ಬಗ್ಗೆ ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.