ಭೂಕಬಳಿಕೆ ನಿಷೇಧ; ವಿಶೇಷ ನ್ಯಾಯಾಲಯದ ಅಧಿಕಾರ ಮೊಟಕಿನ ನಂತರ ಅಧಿನಿಯಮಕ್ಕೆ ಸಿದ್ಧತೆ

ಬೆಂಗಳೂರು; ಭೂ ಹಗರಣಗಳನ್ನು ಕೊನೆಗಾಣಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭವಾಗಿದ್ದ ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯದ ಅಧಿಕಾರವನ್ನು ಮೊಟಕುಗೊಳಿಸಿದ್ದ ರಾಜ್ಯ ಬಿಜೆಪಿ ಸರ್ಕಾರ ಇದೀಗ ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ಅಧಿನಿಯಮ 2020ನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.

ಕರ್ನಾಟಕ ಭೂಕಬಳಿಕೆ ನಿಷೇಧ ( ತಿದ್ದುಪಡಿ) ಅಧಿನಿಯಮ 2020ರಲ್ಲಿ 2, 9 ಪ್ರಕರಣಕ್ಕೆ ತಿದ್ದುಪಡಿ ತರಲಿದೆಯಲ್ಲದೆ 10-ಎ, 10-ಬಿ, 17-ಎ, 22ನೇ ಹೊಸ ಪ್ರಕರಣವನ್ನು ಸೇರ್ಪಡೆಗೊಳಿಸಲಿದೆ. ಅಧಿನಿಯಮ 2020ರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಶೇಷ ನ್ಯಾಯಾಲಯದ ಪ್ರಕ್ರಿಯೆ, ಸಿವಿಲ್‌ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಗೊತ್ತುಪಡಿಸುವುದು, ವಿಶೇಷ ನ್ಯಾಯಾಲಯಗಳ ಆದೇಶಗಳ ವಿರುದ್ಧ ಮೇಲ್ಮನವಿಗಾಗಿ ಉಪಬಂಧ ಕಲ್ಪಿಸುವ ಉದ್ದೇಶವಿದೆ ಎಂದು ಬಿಜೆಪಿ ಸರ್ಕಾರವು ಉದ್ದೇಶಿತ ಅಧಿನಿಯಮವನ್ನು ಸಮರ್ಥಿಸಿಕೊಂಡಿದೆ.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಪ್ರಕಾರ 94 ಎ, 94 ಬಿ, 94 ಸಿ ಮತ್ತು 94ಸಿಸಿ ಪ್ರಕರಣಗಳ ವ್ಯಾಪ್ತಿಯಲ್ಲಿ ಬರುವ ಮತ್ತು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಸಾಂಪ್ರದಾಯಕ ಅರಣ್ಯವಾಸಿಗಳ ಅಧಿನಿಯಮ 2006ರ ಅಡಿಯಲ್ಲಿನ ಭೂಮಿಗಳನ್ನು ಒಳಗೊಳ್ಳತಕ್ಕದ್ದಲ್ಲ ಎಂದು 2ನೇ ಪ್ರಕರಣದಲ್ಲಿ ತಿದ್ದುಪಡಿ ತರಲಿದೆ ಎಂಬುದು ಅಧಿನಿಯಮದಿಂದ ಗೊತ್ತಾಗಿದೆ.

ಅದೇ ರೀತಿ ಎಲ್ಲಾ ಆರೋಪಿತ ಭೂ ಕಬಳಿಕೆ ಕೃತ್ಯಗಳು, ಕಬಳಿಸಲಾದ ಭೂಮಿ ಎಲ್ಲಿದೆಯೋ ಆ ಪ್ರದೇಶಕ್ಕಾಗಿ ರಚಿಸಲಾದ ವಿಶೇಷ ನ್ಯಾಯಾಲಯ ಮಾತ್ರವೇ ಅಥವಾ ಅಂಥ ಪ್ರದೇಶಕ್ಕಾಗಿ ಒಂದಕ್ಕಿಂತ ಹೆಚ್ಚಿನ ವಿಶೇಷ ನ್ಯಾಯಾಲಯಗಳಿದ್ದರೆ ಅವುಗಳ ಪೈಕಿ ಸೂಕ್ತವೆಂದು ಭಾವಿಸಿದಲ್ಲಿ ಮಾತ್ರ ವಿಶೇಷ ನ್ಯಾಯಾಲಯವು ಯಾವುದೇ ಅಪರಾಧವನ್ನು ಕ್ಷಿಪ್ರವಾಗಿ ವಿಚಾರಣೆ ಮಾಡಲು ಮೂಲ ಅಧಿನಿಯಮದ 9ನೇ ಪ್ರಕರಣದಲ್ಲಿ (3)ನೇ ಉಪ ಪ್ರಕರಣಕ್ಕೆ ತಿದ್ದುಪಡಿ ಮೂಲಕ ಅವಕಾಶ ಕಲ್ಪಿಸಿರುವುದು ತಿಳಿದು ಬಂದಿದೆ.

ಹಾಗೆಯೇ ಸಾಕಷ್ಟು ಆಧಾರಗಳು ಇಲ್ಲವೆಂದು ವಿಶೇಷ ನ್ಯಾಯಾಲಯವು ಅಭಿಪ್ರಾಯಪಟ್ಟರೆ ನ್ಯಾಯಾಲಯವು ದೂರನ್ನು ವಜಾಗೊಳಿಸುವುದು ಅಥವಾ ಮುಂದಿನ ವಿಚಾರಣೆಗಳನ್ನು ಕೈಬಿಡುವುದಲ್ಲದೆ ಪ್ರತಿಯೊಂದು ಪ್ರಕರಣದಲ್ಲಿ ಸಂಕ್ಷಿಪ್ತ ಕಾರಣಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಿದೆ.

ಇನ್ನು, ಅಪರಾಧಕ್ಕೆ ಸಂಬಂಧಿಸಿದ ಸಮನ್ಸ್‌ ವಿಚಾರಣೆ, ವಾರೆಂಟ್‌ ಪ್ರಕರಣಗಳ ವಿಚಾರಣೆ ನಡೆಸುವ ಅಪರಾಧ ಎಂದು ವಿಶೇಷ ನ್ಯಾಯಾಲಯಕ್ಕೆ ತೋರಿದರೆ ವಾರೆಂಟ್‌ ಪ್ರಕರಣಗಳ ವಿಚಾರಣೆಗಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರಲ್ಲಿ ಪ್ರಕರಣವನ್ನು ಮರು ಆಲಿಸಲು ಮುಂದುವರೆಯಬಹುದು ಮತ್ತು ಯಾವುದೇ ಸಾಕ್ಷಿಯನ್ನು ಈ ಅಧಿನಿಯಮದ ಪ್ರಕಾರ ಪುನಃ ಕರೆಸಬಹುದು.

ಸರ್ಕಾರದ ಯಾವುದೇ ಭೂಮಿ ಅಥವಾ ಇತರ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಿವಾದ, ಪ್ರಶ್ನೆ ಅಥವಾ ಇತರ ವಿಷಯದ ಸಂಬಂಧದಲ್ಲಿ ಯಾವುದೇ ಸಿವಿಲ್‌ ನ್ಯಾಯಾಲಯದಲ್ಲಿ ಯಾವುದೇ ದಾವೆ ಅಥವಾ ಇತರೆ ಕಾನೂನಿನ ಪ್ರಕಾರ ವ್ಯವಹರಣೆಯನ್ನು ಹೂಡಲು ಈ ಅಧಿನಿಯಮದ 10-ಎ ಪ್ರಕಾರ ಅವಕಾಶವಿರುವುದಿಲ್ಲ ಎಂಬುದು ತಿಳಿದು ಬಂದಿದೆ.

ಭೂ ಕಬಳಿಕೆಗೆ ಸಂಬಂಧಿಸಿದಂತೆ ಯಾವುದೇ ವಿವಾದ, ಪ್ರಶ್ನೆ ಅಥವಾ ಇತರೆ ವಿಷಯವನ್ನು ನಿರ್ಧರಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗಲೆಲ್ಲ ಅಥವಾ ಸ್ವಯಂ ಪ್ರೇರಣೆಯಿಂದ ವ್ಯವಹರಣೆ ಹೂಡಿದ ದಿನದಿಂದ 6 ತಿಂಗಳ ಅವಧಿಯೊಳಗೆ ಮುಕ್ತಾಯಗೊಳಿಸಲು ಅಧಿನಿಯಮ 10-ಬಿ ಪ್ರಕಾರ ಅವಕಾಶ ಕಲ್ಪಿಸಿದೆ.

ಈ ಅಧಿನಿಯಮದಲ್ಲಿ ಮೇಲ್ಮನವಿಗಳಿಗೆ (ಅಪೀಲು) ಸಂಬಂಧಿಸಿದಂತೆ 17-ಎ ಹೊಸ ಪ್ರಕರಣವನ್ನು ಸೇರ್ಪಡೆಗೊಳಿಸಿದೆ. ಮೇಲ್ಮನವಿಗಳನ್ನು ಆಲಿಸುವ ಸಂದರ್ಭದಲ್ಲಿ ಕಾನೂನಿನ ಪ್ರಶ್ನೆಯನ್ನು ಪ್ರಕರಣ ಒಳಗೊಂಡಿದೆ ಎಂದು ಹೈಕೋರ್ಟ್‌ ಮನಗಂಡರೆ ಮಾತ್ರ ದಾವೆಯನ್ನು ಹೈಕೋರ್ಟ್‌ ಮುಂದೆಯೇ ಹೂಡಬೇಕು ಎಂದು ಹೊಸ ಅಂಶವನ್ನು ಸೇರ್ಪಡೆಗೊಳಿಸಿರುವುದು ಅಧಿನಿಯಮದಿಂದ ಗೊತ್ತಾಗಿದೆ.

ಅಲ್ಲದೆ ಯಾವುದೇ ಕ್ರಿಮಿನಲ್‌ ಹೊಣೆಗಾರಿಕೆಯನ್ನು ನಿರ್ಧರಿಸುವ ನಿರಪರಾಧದ ನಿರ್ಣಯ ಅಥವಾ ಅಪರಾಧದ ನಿರ್ಣಯದ ಆದೇಶದ ವಿರುದ್ಧವಾದ ಯಾವುದೇ ಮೇಲ್ಮನವಿ ಉಚ್ಛ ನ್ಯಾಯಾಲಯಕ್ಕೆ ಬರಬೇಕು ಎಂದು ಅಧಿನಿಯಮದಲ್ಲಿ ಸೇರ್ಪಡೆಗೊಳಿಸಿರುವುದು ತಿಳಿದು ಬಂದಿದೆ.

ಬಿಜೆಪಿ ಸರ್ಕಾರ ತರಾತುರಿಯಲ್ಲಿ ತಂದಿದ್ದ ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ)-2020 ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಏಪ್ರಿಲ್‌ 9ರಂದು ಅಂಕಿತ ಹಾಕಿದ್ದರಲ್ಲದೆ ಏಪ್ರಿಲ್‌ 10ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು.

ಒತ್ತುವರಿ ಪ್ರಕರಣಗಳ ತನಿಖೆಗೆ ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸಲು ಕ್ರಮ ಕೈಗೊಂಡು ಪ್ರಕರಣಗಳನ್ನು ಪರಿಶೀಲಿಸಲು ರಚನೆಯಾಗಿದ್ದ ಜಂಟಿ ಸದನ ಸಮಿತಿಯು ವಿಧಾನ ಮಂಡಲಕ್ಕೆ 2 ಭಾಗಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. 30,000 ಎಕರೆ ಸರ್ಕಾರಿ ಭೂ ಪ್ರದೇಶವು ಒತ್ತುವರಿಯಾಗಿದೆ ಎಂದು ಹೇಳಿತ್ತಲ್ಲದೆ ಈ ಒತ್ತುವರಿ ಪ್ರಕರಣದಲ್ಲಿ 33,812 ಜನರು ಭಾಗಿಯಾಗಿದ್ದರು ಎಂದು ದಾಖಲೆ ಸಮೇತ ಬಿಚ್ಚಿಟ್ಟಿತ್ತು. ವರದಿ ಶಿಫಾರಸ್ಸಿನ ಮೇರೆಗೆ ಭೂಕಬಳಿಕೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts