ಬೆಂಗಳೂರು: ಅಂದಾಜು ಒಂದು ಲಕ್ಷ ಠೇವಣಿದಾರರಿಗೆ 2,000 ಕೋಟಿ ರು.ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಎಂಎ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿ ಎಲ್ ಸಿ ನಾಗರಾಜ್ ಮತ್ತು ಗ್ರಾಮ ಲೆಕ್ಕಿಗ ಮಂಜುನಾಥ್ ವಿರುದ್ಧ ಸಿಬಿಐ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ.
ಕಳೆದ ಒಂದು ವಾರದ ಹಿಂದೆಯೇ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಐಎಂಎ ನಿರ್ದೇಶಕ ಮೊಹಮ್ಮದ್ ಮನ್ಸೂರ್ ರಿಂದ ಉಪ ವಿಭಾಗಾಧಿಕಾರಿಯಾಗಿದ್ದ ಎಲ್ ಸಿ ನಾಗರಾಜ್ ಅವರು 4.5 ಕೋಟಿ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 10 ಲಕ್ಷ ರು.ಪಡೆದಿದ್ದ ಗ್ರಾಮ ಲೆಕ್ಕಿಗ ಮಂಜುನಾಥ್, ನಾಗರಾಜ್ ಮತ್ತು ಮನ್ಸೂರ್‌ಖಾನ್ ಮಧ್ಯೆ ಸಭೆ ಏರ್ಪಡಿಸಿದ್ದ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ ಎಂದು ಗೊತ್ತಾಗಿದೆ.
ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್, ಎಲ್ ಸಿ ನಾಗರಾಜ್ ಮತ್ತು ಮಂಜುನಾಥ್ ಅವರು ಐಎಂಎ ಕಂಪನಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಸಿಬಿಐ ತನಿಖೆ ನಡೆಸುತ್ತಿದ್ದ ಅವಧಿಯಲ್ಲೇ ವಿಜಯಶಂಕರ್ ಅವರು ಜೂನ್ 24ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಐಎಂಎ ವಂಚನೆ ಪ್ರಕರಣ 2019ರ ಜೂನ್‌ನಲ್ಲಿ ಬಹಿರಂಗವಾಗಿತ್ತು. ಪ್ರಕರಣ ಬಯಲಾಗುತ್ತಿದ್ದಂತೆ ಮನ್ಸೂರ್‌ಖಾನ್ ದುಬೈಗೆ ಪರಾರಿಯಾಗಿದ್ದನಲ್ಲದೆ ಈ ಪ್ರಕರಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ವಿಡಿಯೋ ಮೂಲಕ ಆರೋಪಿಸಿದ್ದ. ಈತ ಜುಲೈ 19ರಂದು ಬಂಧನಕ್ಕೊಳಗಾಗಿದ್ದ.
ಈ ಪ್ರಕರಣದಲ್ಲಿ ಮನ್ಸೂರ್‌ಖಾನ್ ಸೇರಿದಂತೆ ಒಟ್ಟು 25 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲದೆ 12 ನಿರ್ದೇಶಕರೂ ಇದ್ದಾರೆ. ಜತೆಗೆ ಕೆಲ ಫಲಾನುಭವಿಗಳೂ ಇದರಲ್ಲಿ ಸೇರಿದ್ದಾರೆ ಎಂದು ಹೇಳಲಾಗಿದೆ.