ಸ್ಯಾನಿಟೈಸೇಷನ್‌; ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರ ನೀಡದ ಸಚಿವಾಲಯ, ಪ್ರಸ್ತಾವನೆ ಕೈ ಬಿಟ್ಟಿದ್ದೇಕೆ?

ಬೆಂಗಳೂರು; ವಿಧಾನಸಭೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ವಿಧಾನಸೌಧದ ಕೊಠಡಿ ಮತ್ತು ಶಾಸಕರ ಭವನದ ಕಟ್ಟಡಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರವನ್ನು ಆರ್‌ಟಿಐ ಅಡಿ ಒದಗಿಸದ ವಿಧಾನಸಭೆ ಸಚಿವಾಲಯವು ಇದೀಗ ಆ ಪ್ರಸ್ತಾವನೆಯನ್ನೇ ಕೈ ಬಿಟ್ಟಿದೆ.

ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರವನ್ನು ಒದಗಿಸಲು 15 ದಿನಗಳ ಕಾಲಾವಕಾಶ ಕೋರಿದ್ದ ವಿಧಾನಸಭೆ ಸಚಿವಾಲಯವು ಇದೀಗ ‘ಪ್ರಸ್ತಾವನೆ’ಯನ್ನೇ ಕೈ ಬಿಟ್ಟಿದೆ ಎಂದು 2020ರ ಆಗಸ್ಟ್‌ 17ರಂದು ಆರ್‌ಟಿಐ ಅರ್ಜಿಗೆ ಲಿಖಿತ ಉತ್ತರ ನೀಡಿದೆ. ಪತ್ರವನ್ನು ಅರ್ಜಿದಾರರಿಗೆ ಒದಗಿಸದೆಯೇ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಉತ್ತರ ನೀಡಿರುವ ವಿಧಾನಸಭೆ ಸಚಿವಾಲಯದ ಈ ನಡೆ ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರವನ್ನು ಆರ್‌ಟಿಐ ಅಡಿಯಲ್ಲಿ ‘ದಿ ಫೈಲ್‌’ 2020ರ ಜುಲೈ 9ರಂದು ಕೋರಿತ್ತು. ‘ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರವನ್ನು ಪರಿಶೀಲಿಸಲಾಗುತ್ತಿದೆ. ಈ ಮಾಹಿತಿ ಬಗ್ಗೆ ಪರಿಶೀಲಿಸಲಾಗುತ್ತಿರುವುದರಿಂದ  15 ದಿನಗಳ ಕಾಲಾವಕಾಶಬೇಕಾಗುತ್ತದೆಂದು,’ ಎಂದು ವಿಧಾನಸಭೆ ಸಚಿವಾಲಯವು 2020ರ ಆಗಸ್ಟ್‌ 7ರಂದು ಉತ್ತರಿಸಿತ್ತು.

ಅಲ್ಲದೆ ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಸಲ್ಲಿಸಿದ್ದ ಮತ್ತೊಂದು ಅರ್ಜಿಗೆ ಉತ್ತರಿಸಿದ್ದ ವಿಧಾನಸಭೆ ಸಚಿವಾಲಯವು ಕೆಸಿಐಸಿ ಕಂಪನಿಗೆ ಕಾರ್ಯಾದೇಶ ನೀಡಿದೆ ಎಂದು 2020ರ ಆಗಸ್ಟ್‌ 5ರಂದು ಲಿಖಿತ ರೂಪದಲ್ಲಿ ಮಾಹಿತಿ ನೀಡಿತ್ತು. ಆದರೆ ಕಾರ್ಯಾದೇಶ ಪ್ರತಿಯನ್ನು ಒದಗಿಸಿರಲಿಲ್ಲ. ಸ್ಯಾನಿಟೈಸೇಷನ್‌ ಮಾಡಲು ಯಾವ ಮೊತ್ತಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸದೇ ದರದ ಮಾಹಿತಿಯನ್ನು ಈಗಲೂ ಗೌಪ್ಯವಾಗಿರಿಸಿದೆ.

 

ಕೇವಲ ಕಂಪನಿ ಹೆಸರಿನ ಮಾಹಿತಿ ನೀಡಿ ಉಳಿದ ಯಾವ ವಿವರಗಳನ್ನೂ ಒದಗಿಸದೇ ಅರೆಬರೆ ಮಾಹಿತಿ ನೀಡಿ ನುಣುಚಿಕೊಂಡಿದ್ದ ವಿಧಾನಸಭೆ ಸಚಿವಾಲಯವು ಈ ಅರ್ಜಿಗೆ ಮಾಹಿತಿ ನೀಡಿದ 9 ದಿನಗಳ ಅಂತರದಲ್ಲಿ ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ನಲ್ಲಿ 6 ತಿಂಗಳ ಅವಧಿಗೆ ಅಲ್ಪಾವಧಿ ಟೆಂಡರ್‌ ಕರೆದಿದೆ.

ಅಲ್ಪಾವಧಿ ಟೆಂಡರ್‌ (ಸಂಖ್ಯೆ;ಕೆಎಲ್‌ಎಸ್‌/ಇಬಿ/37/ಸ್ಯಾನಿಟೈಸಿಂಗ್‌/2020, ದಿನಾಂಕ 14.08.2020) ಪ್ರಜಾವಾಣಿ ದಿನಪತ್ರಿಕೆಯಲ್ಲಿ 2020ರ ಆಗಸ್ಟ್‌ 19 ಮತ್ತು 20ರಂದು(ತಿದ್ದುಪಡಿ) ಪ್ರಕಟವಾಗಿದೆ. ಇದರ ಪ್ರಕಾರ ಖಾಸಗಿ/ಸಾರ್ವಜನಿಕ ವಲಯದ ಸಂಸ್ಥೆಗಳು/ಮಾಲೀಕರು ಆಗಸ್ಟ್‌ 21ರೊಳಗೆ ಟೆಂಡರ್‌ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಕಡೆ ದಿನಾಂಕ ಎಂದು ತಿಳಿಸಿದೆ. 24ರಂದು ತಾಂತ್ರಿಕ ಬಿಡ್‌ಗಳನ್ನು ತೆರೆದರೆ, 27ಕ್ಕೆ ಆರ್ಥಿಕ ಬಿಡ್‌ಗಳನ್ನು ತೆರೆಯಲಿದೆ.

ಕೆಸಿಐಸಿ ಕಂಪನಿಗೆ ಕಾರ್ಯಾದೇಶ

‘ಕೋವಿಡ್‌-19ರ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯದ ಅಧೀನದಲ್ಲಿರುವ ವಿಧಾನಸೌಧ ಕೊಠಡಿಗಳನ್ನು ಸ್ಯಾನಿಟೈಸೇಷನ್‌ ಮಾಡಲು ಕೆಸಿಐಸಿ ಪ್ರೈವೈಟ್‌ ಲಿಮಿಟೆಡ್‌ಗೆ ಕಾರ್ಯಾದೇಶ ನೀಡಿದ್ದು, ಈ ಸಂಬಂಧದಲ್ಲಿ ಕಡತವು ಚಾಲ್ತಿಯಲ್ಲಿರುತ್ತದೆ,’ ಎಂದು ವಿಧಾನಸಭೆ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಜಯಲಕ್ಷ್ಮಮ್ಮ ಅವರು 2020ರ ಆಗಸ್ಟ್‌ 8ರಂದು ಮಾಹಿತಿ ನೀಡಿ ಕೈತೊಳೆದುಕೊಂಡಿದ್ದರು.

ಸಂದೇಹಕ್ಕೆ ಕಾರಣವಾಗಿತ್ತು ಅರೆಬರೆ ಮಾಹಿತಿ

ವಿಧಾನಸೌಧದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವುದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಮಾಹಿತಿ ಹಕ್ಕಿನ ಅಡಿಯಲ್ಲಿ 2020ರ ಜುಲೈ 9ರಂದು ಮಾಹಿತಿ ಕೇಳಿತ್ತು. ಕೊಠಡಿವಾರು, ಚದುರ ಮೀಟರ್‌ ವಿಸ್ತೀರ್ಣವಾರು, ಕಂಪನಿ ನೀಡಿರುವ ದರ, ಸಚಿವಾಲಯ ನಿಗದಿಪಡಿಸಿರುವ ದರ ಮತ್ತು ಎಷ್ಟು ಮೊತ್ತ ಪಾವತಿಸಿದೆ ಅಥವಾ ಇಲ್ಲವೇ ಎಂಬ ಮಾಹಿತಿ ಕೇಳಿತ್ತು.

ಕಂಪನಿಯು ನಿರ್ವಹಿಸಬೇಕಾದ ಕಾಮಗಾರಿ ವಿವರ, ಪಾವತಿ ಸಂಬಂಧ ಸಲ್ಲಿಸಬೇಕಾದ ಬಿಲ್‌ಗಳ ವಿವರ ಕಾಮಗಾರಿ ನಿರ್ವಹಿಸಬೇಕಾದ ಕಾಲಮಿತಿ, ಕೆಲಸ ಪೂರ್ಣಗೊಂಡ ನಂತರ ಹಣ ಪಾವತಿ ಸಂಬಂಧ ಬಿಲ್‌ಗಳ ಒದಗಿಸುವ ಮಾಹಿತಿ ಕಾರ್ಯಾದೇಶದಲ್ಲಿರುತ್ತದೆ. ಆದರೆ ಈ ಯಾವ ವಿವರಗಳನ್ನೂ ಒದಗಿಸದ ಸಚಿವಾಲಯ ಕೇವಲ ಕಾರ್ಯಾದೇಶ ನೀಡಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿ ಉಳಿದ ಮಾಹಿತಿಗಳನ್ನೂ ನೀಡದಿರುವುದು ಸಂದೇಹಾಸ್ಪದವಾಗಿತ್ತು.

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸ್ಪೀಕರ್‌ ಕೊಠಡಿಯೂ ಸೇರಿದಂತೆ ವಿಧಾನಸಭೆ ಸಚಿವಾಲಯ ವ್ಯಾಪ್ತಿಯಲ್ಲಿರುವ ಕೊಠಡಿಗಳನ್ನು ಈ ಕಂಪನಿ ಈಗಾಗಲೇ ಸ್ಯಾನಿಟೈಸೇಷನ್‌ ಮಾಡಿದೆ ಎಂದು ತಿಳಿದು ಬಂದಿದೆ. ಆದರೆ ಈ ಕಂಪನಿಗೆ ಕಾರ್ಯಾದೇಶ ನೀಡುವ ಮುನ್ನ ಯಾವುದೇ ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ ಮತ್ತು ಇತರೆ ಕಂಪನಿಗಳಿಂದ ದರಪಟ್ಟಿಯನ್ನೂ ಪಡೆದಿರಲಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ವಿಧಾನಸಭೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ವಿಧಾನಸೌಧ ಕೊಠಡಿ/ಆವರಣ, ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಲು ತಿಂಗಳಿಗೆ 98.00 ಲಕ್ಷ ರು ಲೆಕ್ಕದಲ್ಲಿ ಒಂದು ವರ್ಷಕ್ಕೆ 11.76 ಕೋಟಿ ರು. ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಎಲ್ಲಾ ಮಾಹಿತಿಗಳು ಬಹಿರಂಗಗೊಂಡ ನಂತರ ವಿಧಾನಸಭೆ ಸಚಿವಾಲಯವು ಅಲ್ಪಾವಧಿ ಟೆಂಡರ್‌ ಕರೆದಿದೆ. ಆದರೆ ಇದಕ್ಕೂ ಮುನ್ನ ಕೆಸಿಐಸಿ ಕಂಪನಿಗೆ ಕಾರ್ಯಾದೇಶ ನೀಡಿದ್ದ ಸಚಿವಾಲಯವು ಟೆಂಡರ್‌ ಕರೆದಿರಲಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

1.00 ಲಕ್ಷ ರು. ಮೊತ್ತದ ಒಳಗಿನ ಕಾಮಗಾರಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವ ಅಧಿಕಾರ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಿದೆ. ಅದೇ ರೀತಿ 5.00 ಲಕ್ಷ ರು. ಮಿತಿಯೊಳಗೆ ಅನುಮೋದನೆ ನೀಡಲು ಸ್ಪೀಕರ್‌ ಕಾರ್ಯಾದೇಶ ಹೊರಡಿಸಬಹುದು.

ಆದರೆ ಸ್ಯಾನಿಟೈಸೇಷನ್‌ ಮಾಡಿಸಲು ತಿಂಗಳಿಗೆ 98.00 ಲಕ್ಷ ರು.ವೆಚ್ಚ ಎಂದು ಅಂದಾಜಿಸಿರುವಾಗ ಕೆಸಿಐಸಿಗೆ ಯಾವ ಮೊತ್ತಕ್ಕೆ ಕಾರ್ಯಾದೇಶ ನೀಡಲಾಗಿದೆ, ಟೆಂಡರ್‌ ಇಲ್ಲದೆಯೇ ಕಾರ್ಯಾದೇಶ ನೀಡಲಾಗಿದೆಯೇ ಆರ್ಥಿಕ ಇಲಾಖೆ 4 (ಜಿ) ವಿನಾಯಿತಿ ನೀಡಿದ್ದು ಯಾವಾಗ, ವಿನಾಯಿತಿ ನೀಡಿದ್ದೇ ನಿಜವಾದಲ್ಲಿ ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರವನ್ನೇಕೆ ಆರ್‌ಟಿಐ ಕಾಯ್ದೆ ಪ್ರಕಾರ ನಿಗದಿತ ಅವಧಿಯಲ್ಲಿ ನೀಡಲಿಲ್ಲ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಟೆಂಡರ್‌ ಕರೆಯಲು ಕಾಲಾವಕಾಶ ಇಲ್ಲದೇ ಇದ್ದ ಪಕ್ಷದಲ್ಲಿ ಕಂಪನಿಗಳಿಂದ ದರಪಟ್ಟಿ ಕರೆಯಬಹುದಿತ್ತು. ಆದರೆ ಈ ಪ್ರಕ್ರಿಯೆಯೂ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಪಾವಧಿ ಟೆಂಡರ್‌, ದರ ಪಟ್ಟಿ ಪಡೆಯದೇ ಏಕಪಕ್ಷೀಯವಾಗಿ ನಿರ್ದಿಷ್ಟ ಕಂಪನಿಗೆ ಕಾರ್ಯಾದೇಶ ನೀಡಿರುವುದರ ಹಿಂದೆ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಒಟ್ಟು 5 ಸಮುಚ್ಛಯಗಳನ್ನೊಂದಿರುವ ಶಾಸಕರ ಭವನದಲ್ಲಿ ಅಂದಾಜು 400 ಕೊಠಡಿಗಳಿವೆ ಎನ್ನಲಾಗಿದೆ. ಈ ಪೈಕಿ ವಿಧಾನಸಭೆ ಸದಸ್ಯರಿಗೆ 300 ಕೊಠಡಿಗಳು ಮೀಸಲಾಗಿವೆ. ಇಷ್ಟೂ ಕೊಠಡಿಗಳಿಗೆ ಅಡಿ ಲೆಕ್ಕದಲ್ಲಿ ಪ್ರತಿ ದಿನವೂ ಸ್ಯಾನಿಟೈಸೇಷನ್‌ ಮಾಡಿಸಲಿದೆ ಎಂದು ಗೊತ್ತಾಗಿದೆ.

ಅದೇ ರೀತಿ ಶಾಸಕರ ಭವನ ಗಣ್ಯಾತಿಗಣ್ಯರಿರುವ ಪ್ರದೇಶ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಉಚಿತವಾಗಿಯಾದರೂ ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸಲು ಅವಕಾಶಗಳಿದ್ದವು. ಶಿವಾಜಿನಗರ ವಾರ್ಡ್‌ ವ್ಯಾಪ್ತಿಯಲ್ಲಿರುವ ಕಾರಣ ಅಲ್ಲಿನ ಕಾರ್ಪೋರೇಟರ್‌ ಮತ್ತು ಬಿಬಿಎಂಪಿ ಆಯುಕ್ತರ ನೆರವು ಪಡೆಯಲು ಅವಕಾಶವಿತ್ತು. ಆದರೆ ಇದಾವುದರ ಗೊಡವೆಗೆ ವಿಧಾನಸಭೆ ಸಚಿವಾಲಯ ಹೋಗಿಲ್ಲದಿರುವುದು ಸಹಜವಾಗಿ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

‘ಸರ್ಕಾರದ ಪ್ರತಿಯೊಂದು ದಾಖಲೆಯೂ ಪ್ರಸ್ತಾವನೆ ಆಗಿರಬಹುದು ಅಥವಾ ಆದೇಶವಾಗಿರಬಹುದು. ಪ್ರತಿಯೊಂದು ದಾಖಲೆಯನ್ನೂ ಆರ್‌ಟಿಐ ಅಡಿ ನೀಡಬೇಕಾಗುತ್ತದೆ. ಪ್ರಸ್ತಾವನೆ ತಿರಸ್ಕೃತಗೊಂಡಿದ್ದರೂ ಪ್ರಸ್ತಾವನೆ ಹಂತದಲ್ಲಿ ಆಗಿರುಬಹುದಾದ ಅಕ್ರಮಗಳು ಮತ್ತು ಕಾಳ ಉದ್ದೇಶಗಳು ಪ್ರಸ್ತಾವಿತ ಪತ್ರದಲ್ಲಿರುತ್ತವೆ. ಹಾಗಾಗಿ ಸಚಿವಾಲಯವು ಆ ಪತ್ರವನ್ನೇ ನೀಡದಿರುವುದು ಅಕ್ರಮ ನಡೆಯುತ್ತಿತ್ತು ಎಂಬುದನ್ನು ಖಚಿತಪಡಿಸುತ್ತದೆ. ಅಕ್ರಮಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಟೆಂಡರ್‌ ಕರೆದಿದೆ ಎಂಬುದು ಖಚಿತವಾಗಿ ಹೇಳಬಹುದು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

SUPPORT THE FILE

Latest News

Related Posts