ಮಾಸ್ಕ್‌ ಖರೀದಿ ; ಎಸಿಎಸ್‌ ಜಾವೇದ್‌ ಅಖ್ತರ್‌ ಸೇರಿ ಹಲವರಿಂದ ವಿವರಣೆ ಕೇಳಿದ ಲೋಕಾಯುಕ್ತ

ಬೆಂಗಳೂರು; ಮಾಸ್ಕ್‌ ತಯಾರಿಕೆ ಕಂಪನಿಗಳಲ್ಲದ ಸಾಫ್ಟ್‌ವೇರ್‌ ಕಂಪನಿಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಮೂರು ಪದರುಳ್ಳ ಮತ್ತು ಎನ್‌-95 ಮಾಸ್ಕ್‌ಗಳನ್ನು ಖರೀದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸೇರಿದಂತೆ ಇನ್ನಿತರೆ ಐಎಎಸ್‌ ಅಧಿಕಾರಿಗಳಿಂದ ವಿವರಣೆ ಕೇಳಿದೆ.

ಕೋವಿಡ್‌-19ರ ನಿರ್ವಹಣೆಗಾಗಿ ಸಾಫ್ಟ್‌ವೇರ್‌ ಕಂಪನಿಗಳಿಂದ ಮಾಸ್ಕ್‌ ಖರೀದಿಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಆಗಸ್ಟ್‌ 11ರಂದು ಸಲ್ಲಿಸಿದ್ದ ಎರಡು ದೂರಿನ ಮೇರೆಗೆ ಪ್ರತ್ಯೇಕವಾಗಿ 2 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವಿವರಣೆ ಕೇಳಿರುವ ಲೋಕಾಯುಕ್ತ ಸಂಸ್ಥೆಯು ಎರಡು ಪ್ರಕರಣಗಳನ್ನು ಕ್ರಮವಾಗಿ 2020ರ ಸೆಪ್ಟಂಬರ್‌ 7 ಮತ್ತು 16ಕ್ಕೆ ಮುಂದೂಡಿದೆ.

ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಂಕಜಕುಮಾರ್‌ ಪಾಂಡೆ, ಕೆಎಸ್‌ಡಿಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕಿ ಐಎಎಸ್‌ ಅಧಿಕಾರಿ ಮಂಜುಶ್ರೀ, ಸೊಸೈಟಿಯ ಮುಖ್ಯ ಪರಿವೀಕ್ಷಕ ಮಹೇಶ್‌ಕುಮಾರ್‌, ಡಾ ಪ್ರಿಯಾಲತಾ, ಡಾ ಲತಾ ಪರಿಮಳ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಐಎಎಸ್‌ ಅಧಿಕಾರಿ ಅರುಂಧತಿ ಚಂದ್ರಶೇಖರ್‌ ಅವರನ್ನೂ ಈ ದೂರಿನಲ್ಲಿ ಇತರೆ ಪ್ರತಿವಾದಿಗಳನ್ನಾಗಿಸಲಾಗಿದೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯಲ್ಲಿರುವ ಹರ್ಷಿಕಾ ಟೆಕ್ನಾಲಾಜೀಸ್‌, ಎ ಟೆಕ್‌ ಟ್ರಾನ್‌ ಸೇರಿದಂತೆ ಇನ್ನಿತರೆ ಕಂಪನಿಗಳಿಂದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಮಾಸ್ಕ್‌ಗಳನ್ನು ಖರೀದಿಸಿತ್ತು. ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾಸ್ಕ್‌ಗಳನ್ನು ಖರೀದಿಸಿದೆ ಎಂಬ ಬಲವಾದ ಆರೋಪವೂ ಕೇಳಿ ಬಂದಿತ್ತು.

ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯಲ್ಲಿರುವ ಹರ್ಷಿಕಾ ಟೆಕ್ನಾಲಾಜೀಸ್‌ ಪ್ರೈವೈಟ್‌ ಕಂಪನಿಯಿಂದ ಮೂರು ಪದರುಳ್ಳ ಮಾಸ್ಕ್‌ನ್ನು ಯೂನಿಟ್‌ಗೆ 12.99 ರು. ದರದಲ್ಲಿ ಒಟ್ಟು 64.95 ಲಕ್ಷ ರು.ಗೆ 5,00,000 ಮಾಸ್ಕ್‌ಗಳ ಖರೀದಿಗೆ 2020ರ ಮಾರ್ಚ್‌ 30ರಂದು (KDL/PUR/240/2019-20) ಆದೇಶ ಹೊರಡಿಸಿತ್ತು.

ಅದೇ ರೀತಿ ವೆಬ್‌ಸೈಟ್‌ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಎ ಟೆಕ್‌ ಟ್ರಾನ್‌ ಕಂಪನಿಯಿಂದಲೂ ಎನ್‌-95 ಮಾಸ್ಕ್‌ ಖರೀದಿಸಿದೆ. 140 ರು. ದರದಲ್ಲಿ 1,00,000.00 ಎನ್‌-95 ಮಾಸ್ಕ್‌ಗಳನ್ನು 1.56 ಕೋಟಿ ರು.ದರದಲ್ಲಿ ಖರೀದಿಸಲು 2020ರ ಮಾರ್ಚ್‌20ರಂದು ಆದೇಶ ನೀಡಿದೆ.

ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯು ಈ ಕಂಪನಿಗೆ ಈಗಾಗಲೇ 30,57,600 ರು.ಗಳನ್ನು ಪಾವತಿಸಿದೆ ಎಂದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ. ಮತ್ತೊಂದು ಸಂಗತಿ ಏನಂದರೆ ಇದೇ ಎ ಟೆಕ್‌ ಟ್ರಾನ್‌ ಕಂಪನಿಯಿಂದ 2.00 ಕೋಟಿ ರು. ದರದಲ್ಲಿ ಒಟ್ಟು 25,000 ಪಿಪಿಇ ಕಿಟ್‌ಗಳನ್ನೂ ಈ ಸೊಸೈಟಿಯು ಖರೀದಿಸಿದೆ ಎಂದು ಡಾ ಬಗಲಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಹಾಗೆಯೇ ಮಾಸ್ಕ್‌ ಖರೀದಿ ಸಂಬಂಧ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾಸ್ಕ್‌ಗಳನ್ನು ಸೊಸೈಟಿಯು ಖರೀದಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿಗದಿಗಿಂತ ಹೆಚ್ಚಿನ ದರ

ಎರಡು ಮತ್ತು ಮೂರು ಪದರುಳ್ಳ ಮಾಸ್ಕ್‌ಗಳ ಖರೀದಿಗೆ ಸಂಬಂಧಿಸಿದಂತೆ 2020ರ ಮಾರ್ಚ್‌ 21ರಂದು ದರ ನಿಗದಿ ಮಾಡಿತ್ತು. ಇದರ ಪ್ರಕಾರ 2 ಪದರುಳ್ಳ ಸರ್ಜಿಕಲ್‌ ಮಾಸ್ಕ್‌ವೊಂದಕ್ಕೆ 8 ರು., ಮೂರು ಪದರುಳ್ಳ ಮಾಸ್ಕ್‌ವೊಂದಕ್ಕೆ ರೀಟೈಲ್‌ನಲ್ಲಿ ಗರಿಷ್ಠ 10.00 ರು. ಮೀರಬಾರದು ಎಂದು ಸೂಚಿಸಿತ್ತು. ಈ ಮಾರ್ಗಸೂಚಿ ಹೊರಬಿದ್ದ ನಂತರವೂ ರಾಜ್ಯ ಬಿಜೆಪಿ ಸರ್ಕಾರವು ಮಾಸ್ಕ್‌ವೊಂದಕ್ಕೆ 12.00, 16.00 ರು ಮತ್ತು 20 ರು.ದರದಲ್ಲಿ ಲಕ್ಷಾಂತರ ಸಂಖ್ಯೆಯ ಮಾಸ್ಕ್‌ಗಳನ್ನು ಖರೀದಿಸಿದೆ ಎಂದು ಡಾ ಬಗಲಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಗುಣಮಟ್ಟದ ಪಿಪಿಇ ಕಿಟ್‌ ಪೂರೈಕೆ ಮಾಡಿಲ್ಲ ಎಂಬ ಕಾರಣಕ್ಕೆ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ಗೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ ಕೆಎಸ್‌ಡಿಡಬ್ಲ್ಯೂಎಸ್‌, ಎನ್‌-95 ಮಾಸ್ಕ್‌ಗಳನ್ನೂ ಖರೀದಿಸಿದೆ ಎಂದು ದೂರಿನಲ್ಲಿ ಆರೋಪಿಸಿರುವ ಡಾ ಬಗಲಿ ಅವರು ಮಾಸ್ಕ್‌ವೊಂದಕ್ಕೆ 147 ರು. ದರದಂತೆ ಒಟ್ಟು 1,50,000 ಮಾಸ್ಕ್‌ಗಳಿಗೆ 2.10 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಮಾರ್ಚ್‌ 9ರಂದು ಆದೇಶ ಹೊರಡಿಸಿದೆ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಮಾಸ್ಕ್‌ಗಳಿಗೆ ಮಾರುಕಟ್ಟೆಯಲ್ಲಿ ಗರಿಷ್ಠ 87 ರು.(ಎಂಆರ್‌ಪಿ)ದರವಿದೆ. ಈ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಯಾವ ಕಂಪನಿಯೂ ಮಾಸ್ಕ್‌ಗಳನ್ನು ಮಾರಾಟ ಮಾಡಲು ಅವಕಾಶಗಳಿಲ್ಲ. ಆದರೂ ಈ ಕಂಪನಿ,ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ಗೆ 147 ರು. ದರದಲ್ಲಿ ಮಾರಾಟ ಮಾಡಿದೆ ಎಂದು ದೂರಿದ್ದಾರೆ.

ಎನ್‌-95 ಮಾಸ್ಕ್‌ಗಳನ್ನು ಕೋವಿಡ್‌-19ರ ಸಂದರ್ಭದಲ್ಲೇ ಖರೀದಿಸಿರುವ ಇಲಾಖೆ ಯೂನಿಟ್‌ವೊಂದಕ್ಕೆ 126 ರು.ಗಳಿಂದ 156 ರು.ಗಳವರೆಗೆ ಪಾವತಿಸಿದೆ. ಸ್ಥಳೀಯ ಸರಬರಾಜುದಾರರು ಎನ್‌ 95 ಮಾಸ್ಕ್‌ಗಳನ್ನು ಪೂರೈಕೆ ಮಾಡದ ಕಾರಣ ಆಮದು ಮಾಡಿಕೊಳ್ಳಲಾಗಿದೆ. 2020ರ ಮಾರ್ಚ್‌ 21ರಂದು ತಲಾ 126 ರು. ದರದಲ್ಲಿ ಒಟ್ಟು 5 ಲಕ್ಷ ಮಾಸ್ಕ್‌ಗಳಿಗೆ 6.30 ಕೋಟಿ ರು. ಪಾವತಿಸಿದೆ. ಆದರೆ ಯಾವ ಕಂಪನಿಯಿಂದ ಆಮದು ಮಾಡಿಕೊಂಡಿದೆ ಎಂಬ ವಿವರವನ್ನು ಒದಗಿಸಿರಲಿಲ್ಲ.

2020ರ ಮಾರ್ಚ್‌ 26ರಂದು 1,80,000 ಮಾಸ್ಕ್‌ಗಳನ್ನು ಸರಬರಾಜು ಮಾಡಿರುವ ಎಚ್‌ಎಲ್‌ಎಲ್‌ ಲೈಫ್‌ ಕೇರ್‌ ಪ್ರೈ ಲಿ.,ಗೆ ಎಷ್ಟು ಮೊತ್ತ ಪಾವತಿಸಿದೆ ಎಂಬ ಮಾಹಿತಿಯನ್ನು ಒದಗಿಸಿರಲಿಲ್ಲ. ಮಾರ್ಚ್‌ 30ರಂದು ಔಷಧ ನಿಯಂತ್ರಕರ ನೆರವಿನೊಂದಿಗೆ ಎನ್‌ 95 ಮಾಸ್ಕ್‌ವೊಂದಕ್ಕೆ ತಲಾ 97.89 ರು. ದರದಲ್ಲಿ 83,040 ಮಾಸ್ಕ್‌ಗಳಿಗೆ 81,28,786 ರು ಪಾವತಿಸಿದೆ. 2020ರ ಏಪ್ರಿಲ್‌ 21ರಂದು ತಲಾ ಮಾಸ್ಕ್‌ವೊಂದಕ್ಕೆ 147 ರು.ದರದಲ್ಲಿ ಒಟ್ಟು 8,100 ಮಾಸ್ಕ್‌ಗಳಿಗೆ 11,90,700 ರು. ಪಾವತಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts