ಕೋವಿಡ್‌-19; ಖರ್ಚಿನ ಮಾಹಿತಿ ಒದಗಿಸಲು 15 ದಿನ ಕಾಲಾವಕಾಶ ಕೋರಿದ ಆರೋಗ್ಯ ಇಲಾಖೆ

ಬೆಂಗಳೂರು; ಕೋವಿಡ್‌-19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಲಾದ ವಿಶೇಷ ಅನುದಾನದಲ್ಲಿ ಖರ್ಚು ಮಾಡಿರುವುದು ಮತ್ತು ಉಳಿಕೆ ಅನುದಾನದ ಬಗ್ಗೆ ವಿಧಾನಸಭೆಯ ಅಂದಾಜು ಸಮಿತಿ ಮಾಹಿತಿ ಒದಗಿಸಬೇಕಿದ್ದಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾಲಾವಕಾಶ ಕೋರಿ ಪತ್ರ ಬರೆದಿದ್ದಾರೆ.

ಆಗಸ್ಟ್‌ 19ರಂದು ನಡೆದ ಸಭೆಗೆ ಭಾಗವಹಿಸಿದ್ದ ಇಲಾಖೆ ಅಧಿಕಾರಿಗಳು ಕೋವಿಡ್‌-19ರ ನಿರ್ವಹಣೆಯಲ್ಲಿ ಅಧಿಕಾರಿಗಳು ತೊಡಗಿರುವ ಕಾರಣ ಸಮಿತಿ ಸೂಚಿಸಿದ ದಿನಾಂಕದೊಳಗೆ ಮಾಹಿತಿ ನೀಡಲು ಆಗುತ್ತಿಲ್ಲ. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು ಎಂದು ಗೊತ್ತಾಗಿದೆ. ಮಾಹಿತಿ ಒದಗಿಸಬೇಕು ಎಂದು ಸಮಿತಿಯು ಆಗಸ್ಟ್‌ 12ರಂದೇ ಪತ್ರ ಬರೆದಿತ್ತು. ಆದರೆ ಕಾಲಾವಕಾಶ ಕೋರಿ ಬರೆದಿದ್ದ ಇಲಾಖೆಯ ಪತ್ರ, ಸಮಿತಿ ಅಧಿಕಾರಿಗಳಿಗೆ ತಡವಾಗಿ ತಲುಪಿತ್ತು ಎಂದು ತಿಳಿದು ಬಂದಿದೆ.

ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಆಗಿದೆ ಎನ್ನಲಾಗಿರುವ ಗಂಭೀರ ಸ್ವರೂಪದ ಅಕ್ರಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಶೇಷ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಸಿಎಜಿಗೆ ಪತ್ರ ಬರೆದಿರುವ ಬೆನ್ನಲ್ಲೇ ಇದೀಗ ಅಂದಾಜು ಸಮಿತಿ ಕೂಡ ಕೋವಿಡ್‌-19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖರ್ಚು ಮಾಡಿರುವ ಹಣದ ಲೆಕ್ಕ ಕೇಳಲಾರಂಭಿಸಿದೆ.

ಈ ಕುರಿತು ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ 2020ರ ಆಗಸ್ಟ್‌ 12ರಂದು ಪತ್ರದಲ್ಲಿ 15 ಪ್ರಶ್ನಾವಳಿಗಳನ್ನು ನೀಡಲಾಗಿತ್ತು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಕೋವಿಡ್‌-19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೆಚ್ಚಿನ ಉತ್ತೇಜನ ನೀಡಲು ಒದಗಿಸಲಾದ ವಿಶೇಷ ಅನುದಾನದಡಿ ಖರ್ಚಾದ ಹಾಗೂ ಬಾಕಿ ಉಳಿದಿರುವ ಅನುದಾನದ ಇತ್ತೀಚಿನ ಪೂರ್ಣ ಮಾಹಿತಿ ಒದಗಿಸಬೇಕು,’ ಎಂದು ಕಾರ್ಯದರ್ಶಿ ಪತ್ರದಲ್ಲಿ ನಿರ್ದೇಶಿಸಿದ್ದರು.

ಕಳೆದ 3 ವರ್ಷಗಳಲ್ಲಿ ಮೂಲ ಆಯವ್ಯಯ ಅನುದಾನವನ್ನು ಮತ್ತು ಪೂರಕ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಬೇಡಿಕೆ ಎಷ್ಟು, ಅನುದಾನ ಬೇಡಿಕೆಯ ಪ್ರಸ್ತಾವನೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ನೀಡಿದ ಸಮರ್ಥನೆಗಳ ವಿವರಗಳು, ಇದೇ ಅವಧಿಯಲ್ಲಿ ಮೂಲ ಅನುದಾನ, ಪೂರಕ ಅನುದಾನ ಬಿಡುಗಡೆ, ವೆಚ್ಚ, ಹೆಚ್ಚುವರಿ ವೆಚ್ಚ , ಉಳಿತಾಯಗಳಿಗೆ ಕಾರಣಗಳು, ಕೇಂದ್ರದ ಅನುದಾನದ ಲೆಕ್ಕ ಶೀರ್ಷಿಕೆವಾರು ಯೋಜನೆವಾರು ವಿವರಗಳನ್ನು ಒದಗಿಸಬೇಕು ಎಂದು ಕಾರ್ಯದರ್ಶಿ ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.

ಹಾಗೆಯೇ ಇಲಾಖೆಯ ಆಯವ್ಯಯದಲ್ಲಿ ಒದಗಿಸಲಾದ ಅನುದಾನದ ಸದ್ಬಳಕೆ, ಮಿತವ್ಯಯ, ಆರ್ಥಿಕ ಶಿಸ್ತು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಆಡಳಿತದಲ್ಲಿ ದಕ್ಷತೆ, ಸುಧಾರಣೆ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಪೂರ್ಣ ವಿವರವನ್ನೂ ಒದಗಿಸಲು ನಿರ್ದೇಶಿಸಿರುವುದು ತಿಳಿದು ಬಂದಿದೆ.

ಇಲಾಖೆಯಲ್ಲಿರುವ ಸ್ವಂತ ವಾಹನಗಳ ಸಂಖ್ಯೆ, ಇಂಧನ ನಿರ್ವಹಣೆ, ದುರಸ್ತಿಗೆ ವಾರ್ಷಿಕ ವೆಚ್ಚದ ಮೊತ್ತ, ಬಾಡಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ವಾಹನಗಳು ಮತ್ತು ನೀಡುತ್ತಿರುವ ಬಾಡಿಗೆ ಮೊತ್ತದ (ಕಳೆದ 3 ವರ್ಷಗಳ ಮಾಹಿತಿ) ವಿವರ ಒದಗಿಸಲು ಸೂಚಿಸಿದ್ದರು.

 

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯು ವೈದ್ಯಕೀಯ ಸಲಕರಣೆ ವೆಚ್ಚ/ವೈದ್ಯಕೀಯ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಒಟ್ಟು 316.43 ಕೋಟಿ ರು ಖರ್ಚು ಮಾಡಿದೆ. ಇದರಲ್ಲಿ ರಾಷ್ಟ್ರೀಯ ಅರೋಗ್ಯ ಅಭಿಯಾನದಡಿ 103.27 ಕೋಟಿ, ಎಸ್‌ಡಿಆರ್‌ಎಫ್‌ ಅಡಿ 50.00 ಕೋಟಿ, ವೈದ್ಯಕೀಯ ಸೇವೆ, ಟೆಲಿ ಮೆಡಿಸಿನ್‌ಗಾಗಿ ಎಸ್‌ಡಿಆರ್‌ಎಫ್‌ ಅಡಿ 20.00 ಕೋಟಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ 109.10 ಕೋಟಿ, ಕೆಡಿಎಲ್‌ಡಬ್ಲ್ಯಎಸ್‌ ಅಡಿ 104.33 ಕೋಟಿಯೂ ಒಳಗೊಂಡಿದೆ.

ಕೋವಿಡ್‌-19ರ ನಿರ್ವಹಣೆಗಾಗಿ ಆರೋಗ್ಯ ಇಲಾಖೆಯು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ ಹೌಸಿಂಗ್‌ ಸೊಸೈಟಿ ಮೂಲಕ ದುಬಾರಿ ದರದಲ್ಲಿ ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್ಸ್‌, ಗ್ಲೋವ್ಸ್‌, ಆರ್‌ಟಿಪಿಸಿಆರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿದೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದೆ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರಸಮಿತಿಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts