ಆರ್‌ಟಿಪಿಸಿಆರ್‌; ಐಎಎಸ್‌ ಮಂಜುಶ್ರೀ ಸೇರಿ ಹಿರಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಬಿಜೆಪಿ ಮಾಜಿ ಶಾಸಕ

ಬೆಂಗಳೂರು; ‘ದಿ ಫೈಲ್‌’ ಹೊರಗೆಡವಿದ್ದ ಆರ್‌ಟಿಪಿಸಿಆರ್‌ ಉಪಕರಣಗಳ ಖರೀದಿಯಲ್ಲಿನ ಅಕ್ರಮ ಪ್ರಕರಣ ಇದೀಗ ಕರ್ನಾಟಕ ಲೋಕಾಯುಕ್ತ ಮೆಟ್ಟಿಲೇರಿದೆ.

ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯು 4 ಪಟ್ಟು ಹೆಚ್ಚುವರಿ ದರ ತೆತ್ತು ಆರ್‌ಟಿಪಿಸಿಆರ್‌ ಉಪಕರಣಗಳನ್ನು ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ದಾಖಲಿಸಿದ್ದಾರೆ.

ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕಿ ಐಎಎಸ್‌ ಅಧಿಕಾರಿ ಎನ್‌ ಮಂಜುಶ್ರೀ ಅವರನ್ನು ದೂರಿನಲ್ಲಿ ಮೊದಲ ಪ್ರತಿವಾದಿಯನ್ನಾಗಿಸಿರುವ ಸಾರ್ವಭೌಮ ಬಗಲಿ ಅವರು, ಸೊಸೈಟಿಯ ಮುಖ್ಯ ಪರಿವೀಕ್ಷಕ ಡಾ ಮಹೇಶ್‌ಕುಮಾರ್‌, ಆಹಾರ ಸುರಕ್ಷತೆಯ ಉಪ ಆಯುಕ್ತರಾದ ಡಾ ಪ್ರಿಯಾಲತಾ , ಡಾ ಲತಾ ಪ್ರಮೀಳಾ, ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕಿ ಐಎಎಸ್‌ ಅಧಿಕಾರಿ ಅರುಂಧತಿ ಚಂದ್ರಶೇಖರ್‌, ಆರೋಗ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಂಕಜಕುಮಾರ್‌ ಪಾಂಡೆ, ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರನ್ನು ಇತರೆ ಪ್ರತಿವಾದಿಗಳನ್ನಾಗಿಸಿದ್ದಾರೆ. ದೂರಿನ ಪ್ರತಿ ‘ದಿ ಫೈಲ್‌’ ಗೆ ಲಭ್ಯವಾಗಿದೆ.

350 ಆರ್‌ಟಿಪಿಸಿಆರ್‌ ಉಪಕರಣಗಳಿಗೆ (ಆರ್‌ಎನ್‌ಎ ಒಳಗೊಂಡಂತೆ) ತಲಾ 1,120 ರು. ದರದಲ್ಲಿ ಒಟ್ಟು 3,92,00,000 ರು.ಗೆ ಮಂಜುಶ್ರೀ ಅವರು ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ಗೆ ಖರೀದಿ ಆದೇಶ ನೀಡಿದ್ದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತೆಲಂಗಾಣ ಮೂಲದ ಹುವೆಲ್‌ ಲೈಫ್‌ ಸೈನ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ಛತ್ತೀಸ್‌ಗಢ್‌, ರಾಜಸ್ಥಾನ, ಗುಜರಾತ್‌, ಒಡಿಶಾ ರಾಜ್ಯಕ್ಕೆ ಕಡಿಮೆ ದರದಲ್ಲಿ ಸರಬರಾಜು ಮಾಡಿದ್ದರೂ ಇದನ್ನು ಪರಿಶೀಲಿಸದೆಯೇ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ಗೆ ದುಬಾರಿ ದರದಲ್ಲಿ ಸರಬರಾಜು ಮಾಡಲು ಆದೇಶ ಹೊರಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಈ ಮೂಲಕ ನಮೂದಿಸಿದ್ದ ದರವನ್ನು ಮರೆಮಾಚಿ ದುಬಾರಿ ದರದಲ್ಲಿ ಆರ್‌ಟಿಪಿಸಿಆರ್‌ ಸಾಧನಗಳನ್ನು ಸರಬರಾಜು ಮಾಡುವ ಮೂಲಕ ಕರ್ನಾಟಕಕ್ಕೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಡಾ ಬಗಲಿ ಅವರು ಆರೋಪಿಸಿದ್ದಾರೆ.

ಹುವೈಲ್‌ ಲೈಫ್‌ ಸೈನ್ಸ್‌ಸ್‌ ಪ್ರೈವೈಟ್‌ ಲಿಮಿಟೆಡ್‌, ಕರ್ನಾಟಕದ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಸೇರಿದಂತೆ ವಿವಿಧ ಸರಬರಾಜುದಾರರ ಮೂಲಕ ದೇಶದ ಹಲವು ರಾಜ್ಯಗಳ ಮೆಡಿಕಲ್‌ ಕಾರ್ಪೋರೇಷನ್‌ನಿಂದ ಆರ್‌ಟಿಪಿಸಿಆರ್‌(ಆರ್‌ಎನ್‌ಎ ಕಿಟ್‌ ಒಳಗೊಂಡಂತೆ) ಸಾಧನಗಳ ಸರಬರಾಜಿಗೆ 2020ರ ಏಪ್ರಿಲ್‌, ಮೇ, ಜೂನ್‌ ಮತ್ತು ಜುಲೈ ತಿಂಗಳಲ್ಲಿ ವಿವಿಧ ದರಗಳಲ್ಲಿ ಖರೀದಿ ಆದೇಶ ಪಡೆದಿದವೆ ಎಂದು ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.

ಹುವೈಲ್‌ ಲೈಫ್‌ ಸೈನ್ಸ್‌ ಪ್ರೈವೈಟ್‌ ಲಿಮಿಟೆಡ್‌ನ ಸರಬರಾಜುದಾರ ಎಂದು ಹೇಳಲಾಗಿರುವ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ನಿಂದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್ಸ್‌ ವೇರ್‌ ಹೌಸಿಂಗ್‌ ಸೊಸೈಟಿಯು 2020ರ ಮೇ 29 ಮತ್ತು ಜೂನ್‌ 8ರಂದು ಒಟ್ಟು 700 ಕಿಟ್‌ಗಳನ್ನು 7.84 ಕೋಟಿ ರು.ನಲ್ಲಿ ಖರೀದಿಸಿದೆ ಎಂದು ವಿವರಿಸಲಾಗಿದೆ.

ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ಗೆ ಸರಬರಾಜು ಆದೇಶ ನೀಡಿದ್ದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯ ಅಧಿಕಾರಿಗಳು, ಇದೇ ಕಂಪನಿಯು ಉಳಿದ ರಾಜ್ಯಗಳಿಗೆ ಯಾವ ದರದಲ್ಲಿ ಉಪಕರಣಗಳನ್ನು ಸರಬರಾಜು ಮಾಡಿದೆ ಎಂಬುದನ್ನು ಪರಿಶೀಲಿಸದ ಪರಿಣಾಮ ಕಿಟ್‌ಗೆ ಹೆಚ್ಚುವರಿ ದರವನ್ನು ಪಾವತಿಸಿದಂತಾಗಿದೆ ಎಂದು ವಿವರಿಸಿದ್ದಾರೆ. ಒಡಿಶಾ ಮೆಡಿಕಲ್‌ ಕಾರ್ಪೋರೇಷನ್‌ಗೆ ತಲಾ 1,10,000 ರು.ನಂತೆ ಒಟ್ಟು 50 ಪ್ಯಾಕ್‌ಗಳನ್ನು 55,00,000 ರು., ಆರ್‌ಎನ್‌ಎ ಎಕ್ಷಾಟ್ರಾಕ್ಷನ್‌ನ 50 ಪ್ಯಾಕ್‌ಗಳನ್ನು ತಲಾ ಪ್ಯಾಕ್‌ಗೆ 20,000 ರು.ನಂತೆ ಒಟ್ಟು 10,00,000 ರು.ಸೇರಿದಂತೆ (ಜಿಎಸ್‌ಟಿ ಒಳಗೊಂಡಂತೆ) ಒಟ್ಟು 72,80,000 ರು.ಗಳಿಗೆ 2020ರ ಮೇ 6ರಂದು ಹುವೈಲ್‌ ಲೈಫ್‌ ಸೈನ್ಸ್‌ಸ್‌ ಪ್ರೈವೈಟ್‌ ಲಿಮಿಟೆಡ್‌ ನೇರವಾಗಿ ಆದೇಶ ಪಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದರ ಪ್ರಕಾರ ಪ್ರತಿ ಟೆಸ್ಟ್‌ಗೆ 650.00 ರು. ಮತ್ತು ಪ್ರತಿ ಕಿಟ್‌ಗೆ 65,000 ರು.ನಂತೆ (100 ಟೆಸ್ಟ್‌) ನಿಗದಿಪಡಿಸಿದೆ. ಆದರೆ ಇದೇ ಕಂಪನಿಯ ಬೆಂಗಳೂರು ಮೂಲದ ಸರಬರಾಜುದಾರ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ಗೆ ಪ್ರತಿ ಟೆಸ್ಟ್‌ಗೆ 1,120 ರು. ನಿಗದಿಪಡಿಸಿರುವುದು ಆದೇಶದಿಂದ ತಿಳಿದು ಬಂದಿದೆ. ರಾಜ್ಯದಲ್ಲಿ ನಡೆಸುವ ಪ್ರತಿ ಟೆಸ್ಟ್‌ಗೆ ಈ ಕಂಪನಿ ನಿಗದಿಪಡಿಸಿರುವ ದರದಲ್ಲಿ 470 ರು. ವ್ಯತ್ಯಾಸವಿದೆ. ಅಲ್ಲದೆ ಈ ಕಂಪನಿಗೆ ರಾಜ್ಯ ಸರ್ಕಾರ 700 ಕಿಟ್‌ಗಳಿಗೆ 3.29 ಕೋಟಿ ರು. ಹೆಚ್ಚುವರಿ ದರ ನೀಡಿದಂತಾಗಿದೆ. ಇದು ಸರ್ಕಾರಕ್ಕೆ ಆಗಿರುವ ನಷ್ಟ ಎಂದು ಡಾ ಬಗಲಿ ಅವರು ಆಪಾದಿಸಿದ್ದಾರೆ.

ಅದೇ ರೀತಿ ಇದೇ ಕಂಪನಿಯ ಸರಬರಾಜುದಾರ ದೆಹಲಿ ಮೂಲದ ಪಿ ಡಿ ಎಂಟರ್‌ಪ್ರೈಸೆಸ್‌, ಛತ್ತೀಸ್‌ಗಢ್‌ ರಾಜ್ಯಕ್ಕೆ ಪ್ರತಿ ಟೆಸ್ಟ್‌ಗೆ ಕೇವಲ 510 ರು. ಮತ್ತು ಶೇ.12ರ ಜಿಎಸ್‌ಟಿ ಸೇರಿದಂತೆ ಒಟ್ಟು 571.20 ರ. ನಮೂದಿಸಿ 2020ರ ಜುಲೈ 10ರಂದು ಕೊಟೇಷನ್‌ ನೀಡಿದ್ದರು. ಇದರ ಪ್ರಕಾರ ಪ್ರತಿ ಟೆಸ್ಟ್‌ಗೆ (ಆರ್‌ಎನ್‌ಎ ಹೊರತುಪಡಿಸಿ) 548.80 ರು. ವ್ಯತ್ಯಾಸವಿದೆ. ಆರ್‌ಎನ್‌ಎ ಟೆಸ್ಟ್‌ಗೆ ಗರಿಷ್ಠ 200 ರು ಎಂದಿಟ್ಟುಕೊಂಡರೂ 771.20 ರು. ಆಗಲಿದೆ. ಇದರ ಪ್ರಕಾರ 348.80 ರು. ವ್ಯತ್ಯಾಸವಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕಕ್ಕೆ ಒಂದು ಕಿಟ್‌ನಿಂದ 100 ಟೆಸ್ಟ್‌ನಂತೆ 700 ಕಿಟ್‌ಗಳಿಗೆ 70,000 ಟೆಸ್ಟ್‌ ಮಾಡಬಹುದು. ಆದರೆ ಒಡಿಶಾಕ್ಕೆ ನಿಗದಿಪಡಿಸಿರುವ ದರದ ಪ್ರಕಾರ 2.44 ಕೋಟಿ ರು. ಹೆಚ್ಚುವರಿಯಾಗಿ ಕರ್ನಾಟಕ ಪಾವತಿಸಿದಂತಾಗಿದೆ ಎಂದೂ ಹೇಳಿದ್ದಾರೆ.

ಗುಜರಾತ್‌ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ಗೆ 2020ರ ಮೇ 7ರಂದು ಪ್ರತಿ ಟೆಸ್ಟ್‌ಗೆ 179 ರು. ನಂತೆ ಒಟ್ಟು 25,000 ಟೆಸ್ಟ್‌ಗಳಿಗೆ 44,75,000 ರು. ದರದಲ್ಲಿ ಆರ್‌ಎನ್‌ಎ ಕಿಟ್‌ಗಳನ್ನು ಸರಬರಾಜು ಮಾಡಿದೆ. ಆರ್‌ಟಿಪಿಸಿಆರ್‌ ಹೊರತುಪಡಿಸಿದರೆ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ ಆರ್‌ಎನ್‌ಎ ಟೆಸ್ಟ್‌ಗೆ 941 ರು. ಹೆಚ್ಚುವರಿ ದರ ನೀಡಿದಂತಾಗಿದೆ. ಇದರ ಪ್ರಕಾರ ರಾಜ್ಯದಲ್ಲಿ ನಡೆಸುವ 70,000 ಆರ್‌ಎನ್‌ಎ ಟೆಸ್ಟ್‌ಗಳಿಗೆ 6.58 ಕೋಟಿ ರು. ಹೆಚ್ಚುವರಿ ಪಾವತಿಸಿದಂತಾಗಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ರಾಜಸ್ಥಾನ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ಗೆ ಯೆಸ್‌ ಅಸೋಸಿಯೇಟ್ಸ್‌ ಆರ್‌ಟಿಪಿಸಿಆರ್‌ ಮತ್ತು ಆರ್‌ಎನ್‌ಎ ತಲಾ ಕಿಟ್‌ಗೆ 373 ರು. ನಮೂದಿಸಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಟೆಸ್ಟ್‌ ಮಾಡಲಾಗುವುದು ಎಂಬ ಮಾಹಿತಿ ಅದರಲ್ಲಿ ಒದಗಿಸಿಲ್ಲ. ಯೆಸ್‌ ಅಸೋಸಿಯೇಟ್ಸ್‌ ನಮೂದಿಸಿರುವ ದರಕ್ಕೂ ಕರ್ನಾಟಕ ಸರ್ಕಾರ ನೀಡಿರುವ ದರಕ್ಕೆ ಹೋಲಿಸಿದರೆ ಒಟ್ಟು 746 ರು. ವ್ಯತ್ಯಾಸವಿದೆ. 70,000 ಟೆಸ್ಟ್‌ಗಳಿಗೆ 5.22 ಕೋಟಿ ರು. ಹೆಚ್ಚುವರಿ ಪಾವತಿಸಿದಂತಾಗಿದೆ ಎಂದು ವಿವರಿಸಿದ್ದಾರೆ.

ಈ ಕಿಟ್‌ಗಳನ್ನು 3.92 ಕೋಟಿ ರು. ದರದಲ್ಲಿ ಖರೀದಿಸಲು 2020ರ ಮೇ 29ರಂದು ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಆದೇಶ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಆದೇಶವನ್ನುಅನುಮೋದಿಸಿತ್ತು. ಈ ಕುರಿತು ‘ದಿ ಫೈಲ್‌’ ಜುಲೈ 28 ಮತ್ತು 29 ರಂದು ಸರಣಿ ವರದಿಗಳನ್ನು ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts