ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಎತ್ತಂಗಡಿ; ‘ದಿ ಫೈಲ್‌’ 2 ತಿಂಗಳು ಮೊದಲೇ ಸುಳಿವು ನೀಡಿತ್ತು

ಬೆಂಗಳೂರು; ಬೆಂಗಳೂರು ನಗರದ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಕ್ಕೆ ಒಳಗಾಗಿದ್ದ ಆಯುಕ್ತ ಭಾಸ್ಕರರಾವ್ ಅವರನ್ನು ಸರ್ಕಾರ ಕಡೆಗೂ ಎತ್ತಂಗಡಿ ಮಾಡಿದೆ.
ಭಾಸ್ಕರರಾವ್‌ ಅವರ ಎತ್ತಂಗಡಿ ಆಗಲಿದೆ ಎಂದು ‘ದಿ ಫೈಲ್‌’ 2020ರ ಮೇ 17ರಂದೇ ವರದಿ ಮಾಡಿತ್ತು. ಅಲ್ಲದೆ ಈ ಜಾಗಕ್ಕೆ ಮತ್ತೊಬ್ಬ ಹಿರಿಯ ಐಪಿಎಸ್‌ ಅಧಿಕಾರಿ ಕಮಲ್‌ ಪಂತ್ ಅವರನ್ನು ನೇಮಿಸಲಿದೆ ಎಂದೂ 2 ತಿಂಗಳ ಮೊದಲೇ ವರದಿ ಮಾಡಿತ್ತು.


ನೂತನ ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ಸರ್ಕಾರ, ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಎಡಿಜಿಪಿ ಆಗಿ ವರ್ಗಾಯಿಸಿದೆ.


ಡಿಜಿ ಮತ್ತು ಐಜಿಪಿ ಹುದ್ದೆ ಬಳಿಕ ಅತ್ಯಂತ ಮಹತ್ವದ್ದಾಗಿರುವ ಪೊಲೀಸ್‌ ಕಮಿಷನರ್‌ ಹುದ್ದೆ ಗಿಟ್ಟಿಸುವಲ್ಲಿ ಕಮಲ್‌ ಪಂತ್‌ ಅವರು ಯಶಸ್ವಿಯಾಗಿದ್ದಾರೆ. ಕಮಿಷನರ್‌ ಹುದ್ದೆಗೇರಲು ಭಾರೀ ಯತ್ನ ನಡೆಸಿದ್ದ ಅಮೃತ್‌ಪಾಲ್‌ ಅವರನ್ನು ಕಮಲ್‌ಪಂತ್‌ ಹಿಂದಕ್ಕೆ ಹಾಕಲಿದ್ದಾರೆ ಎಂದು ‘ದಿ ಫೈಲ್‌’ ಮೇ 17ರಂದು ವರದಿ ಮಾಡಿದ್ದನ್ನು ಸ್ಮರಿಸಬಹುದು. ಅದರಂತೆಯೇ ಕಮಲ್‌ ಪಂತ್‌ ಅವರನ್ನು ಸರ್ಕಾರ ಬೆಂಗಳೂರು ಪೊಲೀಸ್‌ ಕಮಿಷನರ್‌ ಹುದ್ದೆಗೇರಿಸಿದೆ.


ಲಾಕ್‌ಡೌನ್ ನಡುವೆಯೂ ಅಕ್ರಮ ಮದ್ಯ ಸಾಗಣೆ, ಸಿಗರೇಟ್‌ ಮಾರಾಟ ಪ್ರಕರಣ, ನಕಲಿ ಮಾಸ್ಕ್‌ ತಯಾರಕರ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳೇ ಲಂಚ ಪಡೆದಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಕುರಿತು ನಡೆದಿದ್ದ ವಿಚಾರಣೆಯಲ್ಲಿ ಪೊಲೀಸ್‌ ಅಧಿಕಾರಿಗಳ ವಿರುದ್ಧದ ಆರೋಪಗಳು ಸಾಬೀತಾಗಿದ್ದವು.


ಈ ಪ್ರಕರಣಗಳು ಬಹಿರಂಗಗೊಂಡ ನಂತರ ಆಯುಕ್ತ ಭಾಸ್ಕರರಾವ್‌ ಅವರು ತೀವ್ರ ಮುಜುಗರಕ್ಕೊಳಗಾಗಿದ್ದರು. ಎಸಿಪಿ, ಇನ್ಸ್‌ಪೆಕ್ಟರ್‌ಗಳೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿ ಆಗಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಅಲ್ಲದೆ ಕ್‌ಡೌನ್‌ ದಿನಗಳಲ್ಲಿ ನಾಗರಿಕರಿಗೆ ಪಾಸ್‌ ವಿತರಣೆ ಮಾಡುವುದರಲ್ಲಿಯೂ ಲಂಚ ಪಡೆಯಲಾಗಿದೆ ಎಂದು ಆರೋಪಿಸಿದ್ದ ಉಪ ಮುಖ್ಯಮಂತ್ರಿ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಇವರನ್ನು ಎತ್ತಂಗಡಿ ಮಾಡಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿತ್ತು.


ಈ ಬೆಳವಣಿಗೆಗಳಿಂದಾಗಿ ಬೇಸರಗೊಂಡಿದ್ದ ಭಾಸ್ಕರರಾವ್‌ ಅವರು ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ತನಿಖೆ ನಡೆಸಿ ಎಂದು ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದರು. ಇನ್ನು, ಬೆಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿಗಳ ಮೇಲೆ ಭಾಸ್ಕರರಾವ್‌ ಅವರು ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.


ಹಾಗೆ ನೋಡಿದರೆ ಭಾಸ್ಕರರಾವ್‌ ಅವರ ನೇಮಕವೇ ಮೂಲಕ ವಿವಾದಕ್ಕೊಳಗಾಗಿತ್ತು. ದೂರವಾಣಿ ಕದ್ದಾಲಿಕೆ ಆರೋಪ ಹೊತ್ತಿರುವ ಅಲೋಕ್‌ಕುಮಾರ್‌, ಸೋನಿಯಾ ಗಾಂಧಿ ಆಪ್ತ ಎಂದು ಹೇಳಿಕೊಂಡಿದ್ದ ಫರಾಜ್‌ ಎಂಬುವರ ಜತೆ ಭಾಸ್ಕರರಾವ್‌ ಅವರು ನಡೆಸಿದ್ದರು ಎನ್ನಲಾಗಿದ್ದ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರು ಎನ್ನಲಾಗಿತ್ತು. ಇದು ಪೊಲೀಸ್‌ ಇಲಾಖೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.


ಅದೇ ರೀತಿ ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರು ನಗರವನ್ನು ಪೊಲೀಸ್‌ ಕಮಿಷನರ್‌ ನಿಭಾಯಿಸಿದ ಬಗ್ಗೆ ಡಿಜಿ ಮತ್ತು ಐಜಿಇಪಿ ಪ್ರವೀಣ್‌ ಸೂದ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ಬೆಂಗಳೂರು ಪೊಲೀಸರ ಕಾರ್ಯಕ್ಷೇತ್ರದಲ್ಲಿ ಡಿಜಿ ಮತ್ತು ಐಜಿ ಹಸ್ತಕ್ಷೇಪ ಮಾಡಿದ್ದು ಅತ್ಯಂತ ವಿರಳ.ೀ ವಿಷಯದಲ್ಲಿ ಪ್ರವೀಣ್‌ಸೂದ್‌, ಭಾಸ್ಕರರಾವ್‌ ಅವರಿಗೆ ಪತ್ರ ಬರೆದಿದ್ದು ಪೊಲೀಸ್‌ ವಲಯದಲ್ಲಿ ವ್ಯಾಪಕ ಚರ್ಚೆಗಳನ್ನು ಹುಟ್ಟು ಹಾಕಿತ್ತು.


ನಗರದ ರಸ್ತೆಗಳಲ್ಲಿ ಪೊಲೀಸರು ಕಣ್ಮರೆಯಾಗಿದ್ದಾರೆ,ಬ್ಯಾರಿಕೇಡ್‌ಗಳು ನಾಪತ್ತೆಯಾಗಿವೆ. ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ವಾಹನಗಳ ಸಂಚಾರ ವಿಪರೀತವಾಗಿದೆ ಎಂದೆಲ್ಲಾ ಪತ್ರದಲ್ಲಿ ಗುಡುಗಿದ್ದರು. ಪತ್ರದ ಪರಿಭಾಷೆಯೇ ಒಂದು ರೀತಿ ಭಾಸ್ಕರರಾವ್ ಅವರಿಗೆ ಇರುಸುಮುರುಸು ಉಂಟು ಮಾಡಿತ್ತು. ಭಾಸ್ಕರರಾವ್ ಅವರ ವರ್ಗಾವಣೆಗೆ ಈ ಎಲ್ಲವೂ ಕಾರಣವಾಗಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

SUPPORT THE FILE

Latest News

Related Posts