ಕೋವಿಡ್ ಭ್ರಷ್ಟಾಚಾರ; ಕಾಂಗ್ರೆಸ್‌ ವಿರುದ್ಧ ಕೆಂಪಣ್ಣ ಆಯೋಗ ವರದಿಯ ಪ್ರತ್ಯಾಸ್ತ್ರ?

ಬೆಂಗಳೂರು:ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಾಗಿರುವ ಅಕ್ರಮಗಳ ಕುರಿತು ಬೀದಿಗಿಳಿದು ಹೋರಾಟಕ್ಕೆ ಕರೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರನ್ನು ಕುಗ್ಗಿಸಲು ರಾಜಕೀಯ ಪ್ರತ್ಯಾಸ್ತ್ರ ಪ್ರಯೋಗಿಸಲು ರಾಜ್ಯ ಬಿಜೆಪಿ ಸರ್ಕಾರ ಕಾರ್ಯೋನ್ಮುಖವಾಗಿದೆ.


ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್‌ ಹಗರಣ ಕುರಿತು ನ್ಯಾ. ಎಚ್‌.ಎಸ್‌. ಕೆಂಪಣ್ಣ ಆಯೋಗದ ವಿಚಾರಣೆ ವರದಿಯನ್ನು ಬಿಜೆಪಿ ಸರ್ಕಾರವು ಅಸ್ತ್ರವನ್ನಾಗಿಸಿಕೊಳ್ಳಲು ಮುಂದಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.


ಆದರೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಆಯೋಗ ಕ್ಲೀನ್‌ ಚಿಟ್‌ ನೀಡಿದೆ ಎನ್ನಲಾಗಿದೆ. ಆದರೂ ವರದಿಯನ್ನು ಮತ್ತೊಮ್ಮೆ ಅವಲೋಕನ ಮಾಡಲು ಮೂವರು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ ಎಂದು ಗೊತ್ತಾಗಿದೆ.


ಈ ಸಂಬಂಧ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಇ ವಿ ರಮಣರೆಡ್ಡಿ, ಮಹೇಂದ್ರ ಜೈನ್‌ರೊಂದಿಗೆ ಈಗಾಗಲೇ ಸರಣಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಯಾವ ಮಾಹಿತಿಯೂ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿರುವ ಮುಖ್ಯ ಕಾರ್ಯದರ್ಶಿ ಅವರು ವಿಚಾರಣೆ ವರದಿ ಹೊರಗೆಡವಿರುವ ಅಂಶಗಳು ಮತ್ತು ಎತ್ತಿರುವ ತಕರಾರುಗಳ ಕುರಿತು ವರದಿ ಸಲ್ಲಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.


ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಷನ್‌ ಕುರಿತು ಸಿಬಿಐ ತನಿಖೆ ನಡೆಸುವಂತೆ ಹಲವು ವರ್ಷಗಳ ಹಿಂದೆಯೇ ಬೊಬ್ಬೆ ಹಾಕಿದ್ದ ಬಿಜೆಪಿ ನಾಯಕರು, ಆ ನಂತರ ಇದನ್ನು ಮರೆತು ಬಿಟ್ಟಿದ್ದರು.


ಅಲ್ಲದೆ, ಅರ್ಕಾವತಿ ಬಡಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ 2003ರಿಂದ 2018ರವರೆಗೂ ಕಾಗದ ಪತ್ರಗಳನ್ನು ಅಧಿವೇಶನಕ್ಕೆ ಮುನ್ನವೇ ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ನೀಡಲಾಗುವುದು ಎಂದು ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದರು. ಹಾಗೆಯೇ ‘ಅರ್ಕಾವತಿ ಬಡಾವಣೆ ಆರಂಭದಿಂದ ಇಲ್ಲಿಯವರೆಗೆ ನಡೆದಿರುವ ಹಗರಣಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲವನ್ನೂ ಸೇರಿಸಿ ನ್ಯಾಯಾಂಗ ಆಯೋಗಕ್ಕೆ ಸಲ್ಲಿಸಲಾಗುವುದು. ಇದರಿಂದ ಯಾರ ಕಾಲದಲ್ಲಿ ಏನೇನು ನಡೆದಿದೆ ಎನ್ನುವುದು ಗೊತ್ತಾಗುತ್ತದೆ. ಜೆಡಿಎಸ್ ಈ ಹೋರಾಟ ಮುಂದುವರಿಸಲಿದ್ದು, ಸದನದ ಒಳಗೂ ದನಿ ಎತ್ತಲಾಗುವುದು,’’ ಎಂದು ಹೇಳಿದ್ದರು.


ಕೆಂಪಣ್ಣ ಆಯೋಗ ನೀಡಿದ್ದ ವರದಿಯನ್ನು ಕಾಂಗ್ರೆಸ್‌ ಸರ್ಕಾರ ಬಹಿರಂಗಗೊಳಿಸಿರಲಿಲ್ಲ. ಅಲ್ಲದೆ ಕಾಂಗ್ರೆಸ್‌,ಜೆಡಿಎಸ್‌ ಮೈತ್ರಿಕೂಟ ಸರ್ಕಾರದಲ್ಲಿ ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಆಯೋಗದ ವರದಿಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಿರಲಿಲ್ಲ. ಮೈತ್ರಿಕೂಟ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೇರಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ನಡೆದಿರುವ ಅಧಿವೇಶನದಲ್ಲಿಯೂ ಈ ವರದಿಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿರಲಿಲ್ಲ.


ಆದರೀಗ ಕೋವಿಡ್‌ ಭ್ರಷ್ಟಾಚಾರ ಪ್ರಕರಣಗಳನ್ನು ಕಾಂಗ್ರೆಸ್‌ ರಾಜಕೀಯವಾಗಿ ಪ್ರತಿಷ್ಠೆಯನ್ನಾಗಿಸಿಕೊಳ್ಳುತ್ತಿದ್ದಂತೆ ಬಿಜೆಪಿ ದಿಢೀರ್‌ ಎಂದು ಅರ್ಕಾವತಿ ಡಿ ನೋಟಿಫಿಕೇಷನ್‌ ಕುರಿತು ನೀಡಿದ್ದ ಕೆಂಪಣ್ಣ ಆಯೋಗದ ವರದಿಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷದ ಮೇಲೆ ಪ್ರತ್ಯಾಸ್ತ್ರ ಪ್ರಯೋಗಿಸಲು ಚಿಂತಿಸಿರುವುದು ಕುತೂಹಲ ಮೂಡಿಸಿದೆ.


ಅರ್ಕಾವತಿ ಡಿ ನೋಟಿಫಿಕೇಷನ್‌ ಪ್ರಕರಣ ಹಿನ್ನೆಲೆ


ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 16 ಹಳ್ಳಿಗಳ 2,750 ಎಕರೆ ಜಮೀನು ಸ್ವಾಧೀನಕ್ಕೆ 2004 ರ ಫೆಬ್ರವರಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಅಂತಿಮ ಅಧಿಸೂಚನೆಯಲ್ಲಿದ್ದ ಜಮೀನಿನ ಪೈಕಿ ಒಟ್ಟು 983.33 ಎಕರೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಡಿನೋಟಿಫೈ ಮಾಡಿತ್ತು. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷದ ನಾಯಕರಾಗಿದ್ದ ಜಗದೀಶ್‌ ಶೆಟ್ಟರ್‌ ಅವರು ವಿಧಾನಸಭೆಯಲ್ಲಿ ಆರೋಪಿಸಿದ್ದರು.


ಈ ಹಗರಣವನ್ನೇ ಮುಂದಿಟ್ಟುಕೊಂಡು ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ಎಬ್ಬಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌ ಎಸ್‌ ಕೆಂಪಣ್ಣ ನೇತೃತ್ವದಲ್ಲಿ ಏಕ ವ್ಯಕ್ತಿ ತನಿಖಾ ಸಮಿತಿ ನೇಮಿಸಿದ್ದರು.
ಸ್ವಾಧೀನ ಮಾಡಿಕೊಂಡಿದ್ದ ಜಮೀನಿನಲ್ಲಿ 983.33 ಎಕರೆ ಡಿ ನೋಟಿಫಿಕೇಷನ್‌ ಮಾಡಿದ್ದರ ಕುರಿತು ತನಿಖೆ ನಡೆಸಿದ್ದ ಆಯೋಗವು 5 ಅಂಶಗಳ ಕುರಿತು ವಿಚಾರಣೆ ನಡೆಸಿತ್ತು.


ಸ್ವಾಧೀನ ಮಾಡಿಕೊಂಡಿದ್ದ ಜಮೀನಿನಲ್ಲಿ 983.33 ಎಕರೆಯನ್ನು ಡಿನೋಟಿಫೈ ಮಾಡಿರುವ ಸರ್ಕಾರದ ಕ್ರಮ­ದಿಂದ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳ ಉಲ್ಲಂಘನೆ ಆಗಿದೆಯೇ, ಅರೆ ನ್ಯಾಯಾಂಗದ ಅಧಿಕಾರ ಹೊಂದಿದ್ದ ನಾಲ್ವರು ಭೂ­ಸ್ವಾಧೀನ ಅಧಿಕಾರಿಗಳು ಜಮೀನು ಮಾಲೀಕರ ಅಹವಾಲು ಆಲಿಸಿ ನೀಡಿರುವ ಆದೇಶಗಳು ಕಾನೂನುಬದ್ಧವಾಗಿ ಇವೆಯೇ, ಜಮೀನು ಮಾಲೀಕರು ಎತ್ತಿದ ತಕರಾರು ಗಳನ್ನು ­ಆಲಿಸಿದ ಬಿಡಿಎ, ಜಮೀನು ಡಿನೋಟಿಫೈ ಮಾಡಲು ತೆಗೆದುಕೊಂಡ ನಿರ್ಣಯಗಳು ನ್ಯಾಯಾಲಯಗಳ ಆದೇಶಕ್ಕೆ ವಿರುದ್ಧವಾಗಿವೆಯೇ ಎಂಬ ಕುರಿತು ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

SUPPORT THE FILE

Latest News

Related Posts