ಬಿಡುಗಡೆಯಾಗದ 137 ಕೋಟಿ ಅನುದಾನ; ತರಕಾರಿ ಬೆಳೆಗಾರರ ಸಂಕಷ್ಟದ ಹೊರೆ ಇಳಿಸದ ಸರ್ಕಾರ

ಬೆಂಗಳೂರು; ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಬಿಜೆಪಿ ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಫಲಾನುಭವಿಗಳ ಖಾತೆಗೆ ನೆರವಿನ ಮೊತ್ತವೂ ಜಮಾ ಆಗಿಲ್ಲ. ನಷ್ಟಕ್ಕೊಳಗಾಗಿರುವ ಹೂವಿನ ಬೆಳೆಗಾರರಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಧನವೂ ವಿತರಣೆಯಾಗಿಲ್ಲ.


ಕೋವಿಡ್‌-19ರ ನಂತರದ ಪರಿಸ್ಥಿತಿಯಲ್ಲಿ ರಾಜ್ಯದ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಘೋಷಿಸಿದ್ದ ವಿಶೇಷ ಪ್ಯಾಕೇಜ್‌ನ ಅನುದಾನ ಮತ್ತು ಪ್ರಗತಿ ವಿವರವನ್ನು ತೋಟಗಾರಿಕೆ ಇಲಾಖೆ, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2020ರ ಜುಲೈ 13ರಂದು ಒದಗಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಲಾಕ್‌ಡೌನ್‌ ವಿಶೇಷ ಪ್ಯಾಕೇಜ್‌ ಪರಿಹಾರ ಹಣ ಜಮಾ ಆಗಲಿದೆ ಎಂದು ಸಚಿವ ನಾರಾಯಣಗೌಡ ಅವರು ಮೇ 28ರಂದು ಘೋಷಿಸಿದ್ದರು. ಒಂದೂವರೆ ತಿಂಗಳಾದರೂ ಬೆಳೆಗಾರರ ಖಾತೆಗೆ ಪೂರ್ಣ ಪ್ರಮಾಣದಲ್ಲಿ ಹಣ ಜಮಾ ಆಗಿಲ್ಲ.

‘ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ 15,000 ರು.ಗಳ ಪರಿಹಾರವನ್ನು ಒದಗಿಸಲಾಗಿರುತ್ತದೆ. ಈ ಕಾರ್ಯಕ್ರಮದಡಿ ಅಂದಾಜು 137 ಕೋಟಿ ರು. ಅನುದಾನ ಬಿಡುಗಡೆಗೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಅನುದಾನ ಬಿಡುಗಡೆಯಾದ ನಂತರ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು (DBT) ಮುಖಾಂತರ ಪರಿಹಾರಧನ ವಿತರಿಸಲಾಗುವುದು,’ ಎಂದು ಇಲಾಖೆಯ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಒಟ್ಟು 12,735 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಯಲಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ಹೆಕ್ಟೇರ್ ಗೆ ತಲಾ 25,000 ರೂ. ನೀಡಲು 31.83 ಕೋಟಿ ರು.ಗಳನ್ನು ತೆಗೆದಿಟ್ಟಿದ್ದ ಸರ್ಕಾರ, ಈವರೆವಿಗೂ 1457.35 ಲಕ್ಷ ರು. ಮಾತ್ರ ವಿತರಿಸಿದೆ.
‘ನಷ್ಟಕ್ಕೊಳಗಾದ ಹೂವಿನ ಬೆಳೆಗಾರರಿಗೆ ಹೆಕ್ಟೇರ್‌ಗೆ 25,000 ರು.ನಂತೆ ಒಟ್ಟು 12,735 ಹೆಕ್ಟೇರ್‌ ಪ್ರದೇಶಕ್ಕೆ 3183.75 ಲಕ್ಷ ರು.ಗಳನ್ನು ಒದಗಿಸಲಾಗಿದೆ. ಈ ಅನುದಾನದಲ್ಲಿ ಒಟ್ಟು 3082.65 ಲಕ್ಷ ರು.ಗಳನ್ನು ಜಿಲ್ಲಾವಾರು ಬಿಡುಗಡೆಗೊಳಿಸಿದೆ. ಈವರೆವಿಗೂ 1457.35 ಲಕ್ಷ ರು.ಗಳನ್ನು ಪರಿಹಾರ ಧನ ರೂಪದಲ್ಲಿ 20,268 ರೈತರಿಗೆ ವಿತರಿಸಿದೆ. ಇನ್ನುಳಿದ ಮೊತ್ತಕ್ಕೆ ಇಲಾಖೆ ಕ್ರಮ ವಹಿಸಲಾಗುತ್ತಿದೆ,’ ಎಂದು ಇಲಾಖೆ ನಿರ್ದೇಶಕರು ತಿಳಿಸಿರುವುದು ಪತ್ರದಿಂದ ತಿಳಿದು ಬಂದಿದೆ.


ಲಾಕ್‌ಡೌನ್‌ ಅವಧಿಯಲ್ಲಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರ ಸಂಕಷ್ಟವನ್ನು ಆಲಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನೇರವಾಗಿ ತೋಟಗಳಿಗೆ ಭೇಟಿ ನೀಡಿದ್ದರು. ಅಲ್ಲಿಯವರೆಗೂ ಮೌನ ವಹಿಸಿದ್ದ ಬಿಜೆಪಿ ಸರ್ಕಾರ, ಡಿ ಕೆ ಶಿವಕುಮಾರ್‌ ಅವರು ಭೇಟಿ ಕೊಟ್ಟ ನಂತರ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿತ್ತು.


ಹೂವು, ಹಣ್ಣು, ತರಕಾರಿ ಬೆಳೆಗಾರರ ಮಾಹಿತಿಯನ್ನು ಸರ್ಕಾರ ಈಗಾಗಲೇ ಕಲೆ ಹಾಕಿದೆ. ಇದರ ಆಧಾರದ ಮೇಲೆ ಸಂಪೂರ್ಣ ವಿವರ ಸಿದ್ದಪಡಿಸಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗಲಿದೆ ಎಂದು ಹೇಳಿದ್ದ ಸರ್ಕಾರ ಬೆನ್ನು ಚಪ್ಪರಿಸಿಕೊಂಡಿತ್ತು.
ರಾಜ್ಯದಲ್ಲಿ ಒಟ್ಟಾರೆ 50,083 ಹೆಕ್ಟೇರ್ ನಲ್ಲಿ ತರಕಾರಿ, 41,054 ಹೆಕ್ಟೇರ್ ನಲ್ಲಿ ಹಣ್ಣು ಬಳೆಯಲಾಗಿದೆ. ಕೋವಿಡ್‌-19ರ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ರೈತರಿಗೆ ಸಾಕಷ್ಟು ಬೆಳೆ ನಷ್ಟ ಆಗಿತ್ತು. ಹೂವಿನ ಬೆಳೆಗಾರರಂತು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಹೀಗಾಗಿ ಸರ್ಕಾರ ಮೊದಲು ಹೂವು ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿತ್ತು.


ಲಾಕ್‌ಡೌನ್‌ನಿಂದಾಗಿ ಹಣ್ಣು, ತರಕಾರಿ ಬೆಳೆದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು. ಹೊರ ರಾಜ್ಯ ಹಾಗೂ ಹೊರ ದೇಶಕ್ಕೆ ರಫ್ತು ಸ್ಥಗಿತವಾಗಿತ್ತಲ್ಲದೆ, ಸಂಸ್ಕರಣಾ ಘಟಕ, ವೈನ್, ಡಿಸ್ಟಿಲರಿಸ್ ಘಟಕಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಉತ್ಪಾದನೆ ಹೆಚ್ಚಾಗಿ ಮಾರಾಟ ಕಡಿಮೆಯಾಗಿದ್ದರ ಪರಿಣಾಮ ಬೆಳೆಗಾರರು ತೀವ್ರವಾಗಿ ಸಂಕಷ್ಟದಲ್ಲಿ ಸಿಲುಕಿದ್ದರು.


ಸ್ಥಳೀಯ ಮಾರುಕಟ್ಟೆಯೂ ಇಲ್ಲ, ಅತ್ತ ಬೇರೆ ರಾಜ್ಯ, ದೇಶಗಳಿಗೆ ರಫ್ತು ಮಾಡದ ಕಾರಣ ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಣ್ಣು ತರಕಾರಿ ಹೂವು ಬೇಡಿಕೆ ಇಲ್ಲದೆ ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆದ ರೈತರು‌ ಸಾಲದ ಸುಳಿಯಲ್ಲಿದ್ದಾರೆ.


ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ, ಕರ್ಬೂಜ , ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆ, ಪಪ್ಪಾಯ, ಸೀಬೆ, ಸಪೋಟ ಬೆಳೆದವರು ಕಟಾವು ಮಾಡಿ ಬೇಡಿಕೆ ಇಲ್ಲದೆ‌ ಲಕ್ಷಾಂತರ ಟನ್ ಹೊಲ ತೋಟಗಳಲ್ಲೇ ಬಿಟ್ಟು ಕೊಳೆಯುವಂತಾಗಿತ್ತು.
ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ, ಆಲೂಗಡ್ಡೆ, ಬೀಟ್ ರೋಟ್, ಹೂಕೋಸು, ಎಲೆ ಕೋಸು, ದಪ್ಪ ಮೆಣಸಿನಕಾಯಿ, ನವಿಲು ಕೋಸು, ಗೆಣಸು, ಬೂದುಗುಂಬಳಕಾಯಿ, ಕ್ಯಾರೆಟ್, ಬೀನ್ಸ್, ಸೊಪ್ಪು, ಈರುಳ್ಳಿ ಮಾರಾಟವಾಗದ ಕಾರಣ ಲಾಕ್‌ಡೌನ್‌ ಅವಧಿಯಲ್ಲಿ ರೈತರು ಕಂಗಾಲಾಗಿದ್ದರು.


ಅದರಲ್ಲೂ ಸಾವಿರಾರು‌ ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆದವರಂತೂ ಶೂನ್ಯ ಮಾರುಕಟ್ಟೆಯಿಂದ ಆತ್ಮಹತ್ಯೆ ‌ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಶ್ರೇಷ್ಠ ಗುಣಮಟ್ಟದ ಹೂವು ಬೆಳೆದು ವಿದೇಶಗಳಿಗೆ ರಫ್ತು ಮಾಡುತ್ತಿದ್ದ ‌ರಾಜ್ಯದ ಹೆಸರು‌ ಜಗತ್ತಿನಲ್ಲಿ ಎತ್ತಿ ಹಿಡಿದಿದ್ದ ರೈತರು ಬೀದಿಗೆ ಬೀಳುವಂತಾಗಿತ್ತು.


ಲಾಕ್‌ಡೌನ್‌ನಿಂದಾಗಿ‌ ರಾಜ್ಯದಲ್ಲಿ ಹಣ್ಣು, ತರಕಾರಿ, ಹೂವು ಬೆಳೆದು ನಷ್ಟಗೊಂಡಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮಾಜಿ ಪ್ರಧಾನಿ ಮಂತ್ರಿ ಹೆಚ್. ಡಿ. ದೇವೇಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts