ವೆಂಟಿಲೇಟರ್‌ ಖರೀದಿಯಲ್ಲಿ ಭಾರೀ ಅಕ್ರಮ; ತಮಿಳುನಾಡಿನಲ್ಲಿ 4.78 ಲಕ್ಷ, ಕರ್ನಾಟಕದಲ್ಲಿ 18 ಲಕ್ಷ

ಬೆಂಗಳೂರು; ಕೋವಿಡ್‌-19ರ ಹಿನ್ನೆಲೆಯಲ್ಲಿ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿಯು ದುಪ್ಪಟ್ಟು ದರದಲ್ಲಿ 200 ವೆಂಟಿಲೇಟರ್ಸ್‌ ಖರೀದಿಸಲು ಆದೇಶ ಹೊರಡಿಸಿದ್ದನ್ನು ‘ದಿ ಫೈಲ್‌’ ಇದೀಗ ಹೊರಗೆಡವಿದೆ.

 

ನೆರೆಯ ತಮಿಳುನಾಡು ಸರ್ಕಾರ ಖರೀದಿಸಿರುವ ದರಕ್ಕೆ ಹೋಲಿಸಿದರೆ ಕರ್ನಾಟಕ ಸರ್ಕಾರ ನೀಡಿರುವ ದರದಲ್ಲಿ ಭಾರೀ ವ್ಯತ್ಯಾಸವಿದೆ. ತಮಿಳುನಾಡು ಸರ್ಕಾರ ವೆಂಟಿಲೇಟರ್‌ವೊಂದಕ್ಕೆ 4.78 ಲಕ್ಷ ರು. ನೀಡಿದ್ದರೆ ಕರ್ನಾಟಕ ಸರ್ಕಾರ ಗರಿಷ್ಠ 18 ಲಕ್ಷ ರು. ತೆತ್ತಿದೆ.ತಮಿಳುನಾಡು ಸರ್ಕಾರ 4.78 ಲಕ್ಷ ರು.ನಂತೆ 100 ವೆಂಟಿಲೇಟರ್ಸ್‌ಗಳನ್ನು ಒಟ್ಟು 4.78 ಕೋಟಿ ರು.ಗೆ ಖರೀದಿಸಿದ್ದರೆ ಕರ್ನಾಟಕ ಸರ್ಕಾರ ವಿವಿಧ ದರಗಳಲ್ಲಿ 200 ವೆಂಟಿಲೇಟರ್‌ಗಳಿಗೆ 15.86 ಕೋಟಿ ರು. ತೆತ್ತಿದೆ.

 

ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಚಾರಣೆಗೆ ಕೈಗೆತ್ತಿಕೊಂಡಿರುವುದು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊರೊನಾ ಸಂದರ್ಭದಲ್ಲಿ ಖರೀದಿಸಿರುವ ಸಾಮಗ್ರಿಗಳ ವಿವರ ನೀಡಲು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಬೆನ್ನಲ್ಲೇ ದುಪ್ಪಟ್ಟು ದರದಲ್ಲಿ ವೆಂಟಿಲೇಟರ್ಸ್‌ಗಳನ್ನು ಖರೀದಿಸಿರುವುದು ಮುನ್ನೆಲೆಗೆ ಬಂದಿದೆ.

 

ತಮಿಳುನಾಡಿನಲ್ಲಿ 4.78 ಲಕ್ಷ

 

ತಮಿಳುನಾಡು ಸರ್ಕಾರದ ಅಂಗ ಸಂಸ್ಥೆಯಾಗಿರುವ ತಮಿಳುನಾಡು ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ ಕೋವಿಡ್‌-19ರ ಹಿನ್ನೆಲೆಯಲ್ಲಿ ತಲಾ ವೆಂಟಿಲೇಟರ್‌ಗೆ 4,78,000.00 ರು.ನಂತೆ ಒಟ್ಟು 100 ವೆಂಟಿಲೇಟರ್‌ಗಳ (Model; Astral 150) ಸರಬರಾಜಿಗೆ 2020ರ ಮಾರ್ಚ್‌ 26ರಂದು ದೆಹಲಿಯಲ್ಲಿರುವ ರೆಸ್‌ಮೆಡ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ಗೆ ಆದೇಶ ನೀಡಿತ್ತು. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕದಲ್ಲಿ 18 ಲಕ್ಷ


ಕೋವಿಡ್‌ ಸಂದರ್ಭದಲ್ಲೇ ತಮಿಳುನಾಡು ಸರ್ಕಾರ ವೆಂಟಿಲೇಟರ್‌ವೊಂದಕ್ಕೆ 4,78,000 ರು. ನೀಡಿದ್ದರೆ ಕರ್ನಾಟಕ ಸರ್ಕಾರವು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ ಮೂಲಕ ವೆಂಟಿಲೇಟರ್‌ವೊಂದನ್ನು ಗರಿಷ್ಠ 18,20,000 ರು.ದರದಲ್ಲಿ ಖರೀದಿಸಲಾಗಿದೆ.


ಈ ಲೆಕ್ಕಾಚಾರದ ಪ್ರಕಾರ 200 ವೆಂಟಿಲೇಟರ್‌ಗಳಿಗೆ ಒಟ್ಟು 15,86,81,600 ರು.ಗಳಾಗಿದೆ. ಈ ಪೈಕಿ ಸರಬರಾಜಾಗಿರುವ 63 ವೆಂಟಿಲೇಟರ್‌ಗಳಿಗೆ 5,09,22,260 ರು.ಗಳನ್ನು ಈಗಾಗಲೇ ಪಾವತಿಸಿರುವುದು ತಿಳಿದು ಬಂದಿದೆ.  ತಮಿಳುನಾಡು ಸರ್ಕಾರದಂತೆಯೇ ಕರ್ನಾಟಕ ಸರ್ಕಾರವೂ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲೇ ವೆಂಟಿಲೇಟರ್‌ಗಳನ್ನು ಖರೀದಿಸಿತ್ತು. ತಮಿಳುನಾಡು ಸರ್ಕಾರ ಖರೀದಿಸಿದ್ದ 4,78,000 ರು.ದರದಲ್ಲೇ ಕರ್ನಾಟಕವೂ 200 ವೆಂಟಿಲೇಟರ್‌ ಖರೀದಿ ಮಾಡಿದ್ದರೆ 9.56 ಕೋಟಿ ರು. ಅಗುತ್ತಿತ್ತು. ಆದರೆ ಕರ್ನಾಟಕದ ಅಧಿಕಾರಿಗಳ ಕಮಿಷನ್‌ ಆಸೆಯಿಂದಾಗಿ ಇಷ್ಟೂ ವೆಂಟಿಲೇಟರ್‌ಗಳಿಗೆ 15.86 ಕೋಟಿ ರು.ಗಳನ್ನು ತೆತ್ತಬೇಕಾಗಿದೆ.


6.30 ಕೋಟಿ ರು.ನಷ್ಟ


ತಮಿಳುನಾಡು ಸರ್ಕಾರ ನೀಡಿರುವ ದರವನ್ನು ಕರ್ನಾಟಕ ಸರ್ಕಾರ ಪಾವತಿಸಿರುವ ದರಕ್ಕೆ ಹೋಲಿಸಿದರೆ ಗರಿಷ್ಠ 8 ಲಕ್ಷ ರು.ವರೆಗೆ ವ್ಯತ್ಯಾಸವಿದೆ. ಕರ್ನಾಟಕ ಸ್ಟೇಟ್‌ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ ಅಧಿಕಾರಿಗಳ ವಿವೇಚನೆ ರಹಿತ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 6.30 ಕೋಟಿ ರು. ನಷ್ಟ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

13 ಲಕ್ಷ ವ್ಯತ್ಯಾಸ


2020ರ ಮಾರ್ಚ್‌ ಮತ್ತು ಏಪ್ರಿಲ್‌ನ ವಿವಿಧ ದಿನಾಂಕಗಳಲ್ಲಿ ಖರೀದಿಸಿರುವ ದರದಲ್ಲಿ ಒಂದೊಂದು ವೆಂಟಿಲೇಟರ್‌ ಯುನಿಟ್‌ಗೆ 82,000, 7,14,800, 7,54,000, 13,42,000 ರು., 8,66,000, 7,54,000, 8,10,000, 5,25,520, 8,94,000, 2,98,160, 4,64,480 ರು. ವ್ಯತ್ಯಾಸವಿರುವುದು ಕಂಡು ಬಂದಿದೆ.


ವಿವಿಧ ದರಗಳಲ್ಲಿ ಖರೀದಿ


2020ರ ಮಾರ್ಚ್‌ 22ರಂದು ಯೂನಿಟ್‌ವೊಂದಕ್ಕೆ 5,60,000 ರು. ದರದಲ್ಲಿ ಒಟ್ಟು 130 ವೆಂಟಿಲೇಟರ್‌ಗಳ ಸರಬರಾಜಿಗೆ ಸ್ಕ್ಯಾನ್‌ ರೇ ಟೆಕ್ನಾಲಾಜೀಸ್‌ಗೆ ಆದೇಶ ನೀಡಿದೆ. ಈ ಪೈಕಿ 35 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿರುವ ಈ ಕಂಪನಿಗೆ 1,75,60,000 ರು. ಪಾವತಿಸಿದೆ.

ಅದೇ ರೀತಿ ಇದೇ ಕಂಪನಿ 2020ರ ಮಾರ್ಚ್‌ 22ರಂದೇ 4 ವೆಂಟಿಲೇಟರ್‌ಗಳ ಸರಬರಾಜಿಗೆ ಆದೇಶ ಪಡೆದಿತ್ತಲ್ಲದೆ, ಯೂನಿಟ್‌ಗೆ 11,92,800 ರು.ನಂತೆ ಒಟ್ಟು 4 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದೆ. ಈಗಾಗಲೇ ಈ ಕಂಪನಿಗೆ 47,21,200 ರು.ಗಳನ್ನು ಪಾವತಿಸಿದೆ. ಆದರೆ ಇದೇ ಕಂಪನಿ 12,32,000 ರು. ದರದಲ್ಲಿ 10 ವೆಂಟಿಲೇಟರ್‌ಗಳ ಪೈಕಿ 8 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದೆ. ಯಾವ ದಿನಾಂಕದಂದು ಖರೀದಿ ಆದೇಶ ಹೊರಡಿಸಿದೆ ಎಂಬ ವಿವರಗಳನ್ನು ಒದಗಿಸದ ಆರೋಗ್ಯ ಇಲಾಖೆ, ಈ ಕಂಪನಿಗೆ ಈಗಾಗಲೇ ಒಟ್ಟಾರೆ 3,21,87,200 ರು.ಗಳನ್ನು ಪಾವತಿಸಿದೆ.


ಹಾಗೆಯೇ ವೆಂಟಿಲೇಟರ್‌ವೊಂದನ್ನು 18,20,000 ರು. ದರದಲ್ಲಿ ಖರೀದಿಸಿದೆ. ಈ ಸಂಬಂಧ 2020ರ ಮಾರ್ಚ್‌ 24ರಂದು ಆದೇಶ ಹೊರಡಿಸಿದೆಯಾದರೂ ಯಾವ ಕಂಪನಿಯಿಂದ ಖರೀದಿಸಿದೆ ಎಂಬ ವಿವರಗಳನ್ನು ಒದಗಿಸಿಲ್ಲ. ಅಲ್ಲದೆ ಇದೇ ದಿನಾಂಕದಂದು 5 ವೆಂಟಿಲೇಟರ್‌ಗಳ ಸರಬರಾಜಿಗೆ ಆದೇಶ ಹೊರಡಿಸಿರುವ ಸರ್ಕಾರ ಈವರೆವಿಗೆ ಒಟ್ಟು 67,20,000 ರು.ಗಳನ್ನು ಪಾವತಿಸಿದೆ.
ಇನ್ನು 12,32,000 ರು. ದರದಲ್ಲಿ 16 ಮತ್ತು 12,88,000 ರು. ದರದಲ್ಲಿ 22 ವೆಂಟಿಲೇಟರ್‌ಗಳ ಸರಬರಾಜಿಗೆ ಇದೇ ದಿನಾಂಕದಂದು ಆದೇಶ ಹೊರಡಿಸಿತ್ತಾದರೂ ಆ ನಂತರ ಆದೇಶವನ್ನು ರದ್ದುಗೊಳಿಸಿದೆ. ಆದರೆ ಯಾವ ಕಂಪನಿಗೆ ಆದೇಶ ನೀಡಿತ್ತು ಎಂಬ ಮಾಹಿತಿ ಒದಗಿಸಿಲ್ಲ.


ಮಾರ್ಚ್‌ 30ರಂದು ಒಟ್ಟು 6 ವೆಂಟಿಲೇಟರ್‌ಗಳಿಗೆ ತಲಾ 10,03,520 ರು., 13,72,000 ರು. ದರದಂತೆ 2, 2020ರ ಏಪ್ರಿಲ್‌ 16ರಂದು 2 ವೆಂಟಿಲೇಟರ್‌ಗಳಿಗೆ ತಲಾ 7,76,160 ರು. ಮತ್ತು 9,42,480 ರು.ನಂತೆ ಒಟ್ಟು 2 ವೆಂಟಿಲೇಟರ್‌ ಸರಬರಾಜಿಗೆ ಆದೇಶ ಹೊರಡಿಸಿದೆ. 2020ರ ಮಾರ್ಚ್‌ 24ರಿಂದ ಏಪ್ರಿಲ್‌ 16ವರೆಗೆ ಒಟ್ಟು ಸರಬರಾಜಾಗಿರುವ 16 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿರುವ ಕಂಪನಿಗೆ ಒಟ್ಟಾರೆ 1,87,35,360 ರು.ಗಳನ್ನು ಈಗಾಗಲೇ ಪಾವತಿಸಿರುವುದು ಗೊತ್ತಾಗಿದೆ.


2020ರ ಮಾರ್ಚ್‌ 22ರಿಂದ ಏಪ್ರಿಲ್‌ 16ರವರೆಗೆ ಕರ್ನಾಟಕ ಸರ್ಕಾರ ಒಟ್ಟು 1,580 ವೆಂಟಿಲೇಟರ್ಸ್‌ಗಳ ಖರೀದಿಗೆ ಆದೇಶ ನೀಡಿತ್ತು. ಈ ಪೈಕಿ 691 ವೆಂಟಿಲೇಟರ್ಸ್‌ಗಳು ಸರಬರಾಜಾಗಿರುವುದು ಆರೋಗ್ಯ ಇಲಾಖೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ. 


1,580 ವೆಂಟಿಲೇಟರ್‌ಗಳ ಖರೀದಿಗೆ ಅಲ್ಪಾವಧಿ ಟೆಂಡರ್‌ ಕರೆದಿದ್ದರೆ ಅಥವಾ ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ದರ ಪಟ್ಟಿ ಆಹ್ವಾನಿಸಿದ್ದರೆ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವೆಂಟಿಲೇಟರ್‌ಗಳನ್ನು ಖರೀದಿಸಲು ಸಾಕಷ್ಟು ಅವಕಾಶವಿತ್ತು. ಆದರೆ ಅಧಿಕಾರಿಗಳಲ್ಲಿನ ಕಮಿಷನ್‌ ಆಸೆ ಇದಕ್ಕೆ ಆಸ್ಪದ ನೀಡಿಲ್ಲ.


‘ಕೇಂದ್ರ ಸರ್ಕಾರ ವೆಂಟಿಲೇಟರ್‌ಗಳ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ವೆಂಟಿಲೇಟರ್‌ ತಯಾರಕರಿಗೆ ರಾಜ್ಯ ಸರ್ಕಾರಗಳೇ ಪ್ರಮುಖ ಗ್ರಾಹಕರಾಗಿದ್ದವು. ಅಂತಹ ಪರಿಸ್ಥಿತಿಯಲ್ಲಿ ಸರ್ಕಾರ, ವೆಂಟಿಲೇಟರ್‌ ದರವನ್ನು ಕಡಿಮೆಗೊಳಿಸಲು ಹೆಚ್ಚು ಪ್ರಯತ್ನಪಡಬೇಕಿತ್ತು. ಇದನ್ನು ಮಾಡದೇ ಇದ್ದಿದ್ದಕ್ಕೆ ಸಾರ್ವಜನಿಕರ ಹಣ ಪೋಲು ಮಾಡಿರುವ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಆದರೆ ಈ ವ್ಯವಹಾರ ಪ್ರಾಮಾಣಿಕವಾಗಿ ನಡೆದಿಲ್ಲ ಎನ್ನುವುದಾದರೆ ಅದು ನೇರವಾಗಿ ಭ್ರಷ್ಟಾಚಾರವಾಗುತ್ತದೆ. ತುರ್ತು ಪರಿಸ್ಥಿತಿ ನೆಪವೊಡ್ಡಿ ಸರ್ಕಾರ ಟೆಂಡರ್‌ ಕರೆಯದೇ ಇದ್ದದ್ದರಿಂದ ಯಾವ ಕಂಪನಿಗಳ ವಸ್ತುಗಳನ್ನು ಖರೀದಿ ಮಾಡಿದೆಯೋ ಅಂತಹ ಕಂಪನಿಗಳ ಜತೆ ನಡೆಸಿದ ಮಾತುಕತೆ ವಿವರವನ್ನು ಸಾರ್ವಜನಿಕರ ಗಮನಕ್ಕೆ ತರಬೇಕಾಗುತ್ತದೆ. ಅಂತಹ ಸಂಸ್ಥೆಗಳ ಹೆಸರು ಹೇಳಲು ಹಿಂಜರಿದರೆ ಅಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಮೆಲ್ನೋಟಕ್ಕೆ ಕಂಡು ಬರುತ್ತದೆ,’ ಎನ್ನುತ್ತಾರೆ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕೆ ವಿ ಧನಂಜಯ.


‘ಆರೋಗ್ಯ ತುರ್ತು ಪರಿಸ್ಥಿತಿ ಹೆಸರಿನಲ್ಲಿ ದುಪ್ಪಟ್ಟು ದರದಲ್ಲಿ ವೆಂಟಿಲೇಟರ್‌ಗಳನ್ನು ಖರೀದಿಸಿರುವುದು ಅಪ್ಪಟ ದೇಶದ್ರೋಹಿ ಕೃತ್ಯ. ಇಂತಹ ಭ್ರಷ್ಟಾಚಾರಿಗಳ ವಿರುದ್ಧ ತನಿಖೆ ಮಾಡಿ ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ಆ ಮೂಲಕ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ 3 ತಿಂಗಳ ಒಳಗೇ ಶಿಕ್ಷೆ ವಿಧಿಸಬೇಕು. ಇಂತಹ ಸ್ಪಷ್ಟ ಸಂದೇಶ ಮಾತ್ರ 6 ತಿಂಗಳ ನಂತರದ ಭ್ರಷ್ಟಾಚಾರವನ್ನು ನಿಲ್ಲಿಸಬಹುದು. ಆದರೆ ಸದ್ಯ ನಡೆದಿರುವ ಭ್ರಷ್ಟಾಚಾರವನ್ನು ಯಾರಿಂದಲೂ ತಡೆಯಲು ಸಾಧ್ಯವಾಗುತ್ತಿಲ್ಲ,’ ಎಂದು ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅಸಹಾಯಕತೆಯಿಂದ ಮರುಗಿದರು.

SUPPORT THE FILE

Latest News

Related Posts