ಕೋವಿಡ್‌ ಭ್ರಷ್ಟಾಚಾರ; ಪೆನ್‌ಡ್ರೈವ್‌ ಬೆನ್ನಲ್ಲೇ ಹೊರಬಿತ್ತು ಜಿಲ್ಲಾ ವಿಪತ್ತು ನಿಧಿಯಲ್ಲಿನ ಅಕ್ರಮ

ಬೆಂಗಳೂರು; ಕೋವಿಡ್‌-19ರ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದಲ್ಲಿ ನಡೆದಿರುವ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯಲ್ಲೂ ಕೋಟ್ಯಂತರ ರು. ಅವ್ಯವಹಾರ ನಡೆದಿರುವುದು ಬಹಿರಂಗವಾಗಿದೆ. ಜಿಲ್ಲಾ ವಿಪತ್ತು ನಿಧಿ ಬಳಸಿಕೊಂಡು ವೈದ್ಯಕೀಯ ಸಲಕರಣೆಗಳನ್ನು ಖರೀದಿಸುತ್ತಿರುವ ಜಿಲ್ಲಾಧಿಕಾರಿಗಳು ಶಾಸಕರಿಗೆ ಸಮಂಜಸವಾದ ಮಾಹಿತಿ ನೀಡುತ್ತಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯ ಈಶ್ವರ ಖಂಡ್ರೆ ಬಹಿರಂಗಪಡಿಸಿದ್ದಾರೆ.


ಅವ್ಯವಹಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಶಾಸಕ ಮುರುಗೇಶ್‌ ನಿರಾಣಿ ಅವರ ಬಳಿ ಇದೆ ಎನ್ನಲಾಗಿರುವ ಪೆನ್‌ ಡ್ರೈವ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೆ ಇತ್ತ ಜಿಲ್ಲಾ ಮಟ್ಟದಲ್ಲಿಯೂ ಖರ್ಚಾಗಿರುವ ಎಸ್‌ಡಿಆರ್‌ಎಫ್‌ ನಿಧಿಯಲ್ಲೂ ಅಕ್ರಮ ನಡೆದಿದೆ ಎಂದು ಸಮಿತಿ ಮುಂದೆ ಬಹಿರಂಗಪಡಿಸಿರುವ ಈಶ್ವರ ಖಂಡ್ರೆ ಅವರು ಕೊರೊನಾ ಹೆಸರಿನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಗಳನ್ನು ಮತ್ತಷ್ಟು ವಿಸ್ತರಿಸಿದ್ದಾರೆ.


‘ಸುಮಾರು 5.50 ಕೋಟಿ ರು. ಹಣ ಬಿಡುಗಡೆಯಾಗಿದ್ದು ಯಾವುದಕ್ಕೆ ಖರ್ಚು ಮಾಡಿದ್ದಾರೆನ್ನುವ ಮಾಹಿತಿ ಇಲ್ಲ. ಲ್ಯಾಬ್‌ಗಳು ಪ್ರಾರಂಭವಾಗಿಲ್ಲ. ಪಿಪಿಇ ಕಿಟ್‌, ಇನ್ನಿತರ ಸುರಕ್ಷತಾ ಸಾಮಗ್ರಿಗಳ ಬಗ್ಗೆ ಲೆಕ್ಕಪತ್ರಗಳಿಲ್ಲ,’ ಎಂದು 2020ರ ಮೇ 28ರಂದು ನಡೆದಿದ್ದ ಸಭೆಯಲ್ಲಿ ಪ್ರಸ್ತಾಪಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಕೊರೊನಾ ಹರಡುತ್ತಿರುವ ಪರಿಸ್ಥಿತಿಯಲ್ಲಿಯೂ ಸಾರ್ವಜನಿಕರ ಹಣ, ತೆರಿಗೆ ಪಾವತಿದಾರರ ಹಣ ಲೂಟಿ ಹೊಡೆದು ಅವ್ಯವಹಾರ ಮಾಡುತ್ತಿದ್ದಾರೆ. ಪಿಪಿಇ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌, ಗ್ಲೋವ್ಸ್‌ ಇನ್ನಿತರೆ ಅವಶ್ಯಕ ಪರಿಕರಗಳನ್ನು ಒದಗಿಸಬೇಕು. ಎಸ್‌ಡಿಆರ್‌ಎಫ್‌ಗೆ ಕೊಡುವ ಹಣದಲ್ಲಿ ಜಿಲ್ಲಾಧಿಕಾರಿಗಳೇನು ಖರ್ಚು ಮಾಡುತ್ತಿದ್ದಾರೆಯೋ ಅದರ ಬಗ್ಗೆ ಪರಿಶೀಲನಾ ಸಭೆಯಲ್ಲಿ ಕೇಳಿದರೆ ಸಮಂಜಸವಾದ ಉತ್ತರ ನೀಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದಿರುವುದು ನಡವಳಿಯಿಂದ ಗೊತ್ತಾಗಿದೆ.


ಇದೇ ಸಭೆಯಲ್ಲಿ ವಲಸಿಗ ಕಾರ್ಮಿಕರಿಗೆ ವಿತರಿಸಿರುವ ಕಿಟ್‌ಗಳ ಬಗ್ಗೆಯೂ ಪ್ರಸ್ತಾಪವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಲ್ಲಿ 7 ಲಕ್ಷ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರಾದರೂ ಈ 7 ಲಕ್ಷ ಕಿಟ್‌ಗಳನ್ನು ಯಾವ ಕಡೆ ವಿತರಣೆ ಮಾಡಿದ್ದಾರೆ, ಯಾವ ವಿಧಾನಸಭೆ ಕ್ಷೇತ್ರಕ್ಕೆ ಎಷ್ಟೆಷ್ಟು ಕಿಟ್‌ಗಳನ್ನು ನೀಡಿದ್ದಾರೆ, ಒಂದು ವಿಧಾನಸಭೆ ಕ್ಷೇತ್ರಕ್ಕೆ 3,000 ಕಿಟ್‌ಗಳನ್ನು ನೀಡಿದರೆ ಮತ್ತೊಂದು ವಿಧಾನಸಭೆ ಕ್ಷೇತ್ರಕ್ಕೆ 30,000 ಕಿಟ್‌ಗಳನ್ನು ನೀಡಿದ್ದಾರೆ. ಯಾರ ಕೈಗೆ ನೀಡಿದ್ದಾರೆ, ಇವುಗಳನ್ನು ಯಾರು ವಿತರಣೆ ಮಾಡಿದರು ಎಂದು ಸಭೆಯಲ್ಲಿ ಈಶ್ವರ ಬಿ ಖಂಡ್ರೆ ಅವರು ಪ್ರಶ್ನಿಸಿರುವುದು ಸಮಿತಿ ನಡವಳಿಯಿಂದ ತಿಳಿದು ಬಂದಿದೆ.


‘ಈ ಕೂಡಲೇ ಕೋವಿಡ್‌ ನಿಯಂತ್ರಣಕ್ಕೆಂದು ಖರ್ಚು ಮಾಡಿರುವ ಎಲ್ಲಾ ಬಾಬತ್ತುಗಳ ಸಾರ್ವಜನಿಕ ಪರಿಶೀಲನೆ ಆಗಬೇಕು. ಹಲವು ಇಲಾಖೆಗಳಲ್ಲಿ ಯಾವುದೇ ಲೆಕ್ಕಪತ್ರ ಇಡದೇ ಬಹುಶಃ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರುಪಾಯಿಯನ್ನು ಲಪಟಾಯಿಸಿದ್ದಾರೆ ಎಂಬ ಮಾಹಿತಿ ಇದೆ. ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ಪರಿಶೀಲನೆ ಸಭೆಯಲ್ಲಿ ಶಾಸಕರಿಗೆ ಕೊಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ.

SUPPORT THE FILE

Latest News

Related Posts