ಸಂಪುಟ ರಹಸ್ಯ; 79 ಎ, ಬಿ ತಿದ್ದುಪಡಿಗೆ ಕೆಟ್ಟ ಆರ್ಥಿಕ ಪರಿಸ್ಥಿತಿಯೇ ರಕ್ಷಾಕವಚ

ಬೆಂಗಳೂರು; ಕೃಷಿ ಭೂಮಿ ಖರೀದಿಗೆ ಸಂಬಂಧಿಸಿದಂತೆ ದೇಶದಲ್ಲೇ ಅತ್ಯಂತ ವಿಶಿಷ್ಟವೆನಿಸಿದ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ಕ್ಕೆ ತಿದ್ದುಪಡಿ ತರುವ ಮೂಲಕ ಮತ್ತೊಂದು ವಿವಾದವನ್ನು ಭುಗಿಲೆಬ್ಬಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಲಾಕ್‌ಡೌನ್‌ನಿಂದಾಗಿ ಕುಂಠಿತವಾಗಿರುವ ರಾಜ್ಯದ ಆರ್ಥಿಕ ಪರಿಸ್ಥಿತಿ ರಕ್ಷಣೆ ಪಡೆದಿರುವುದು ಬಹಿರಂಗವಾಗಿದೆ.


ಕರ್ನಾಟಕ ಭೂ ಸುಧಾರಣೆ ಕಾಯ್ದೆಯ 79 ಎ ಮತ್ತು ಬಿ ಯನ್ನು ತೆಗೆದುಹಾಕಲು ರೈತರ ಆರ್ಥಿಕ ಪರಿಸ್ಥಿತಿ ಮತ್ತು ಕೃಷಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದೆ. ಈ ಸಂಬಂಧ ಸಚಿವ ಸಂಪುಟದ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ರೈತರ ಹಿತದೃಷ್ಟಿಯಿಂದ ಹಾಗೂ ಕೃಷಿ ಭೂಮಿಯನ್ನು ಕಾಪಾಡುವ ನಿಟ್ಟಿನಲ್ಲಿ ತರಲಾಗಿದ್ದ ಪುನರಾವಲೋಕನ ಆಡುವ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಯುವ ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಮುಂದೆ ಬರುತ್ತಿದೆ. ಹಾಗೆಯೇ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79 ಎ ಮತ್ತು 79 ಬಿ ತೆಗೆದು ಹಾಕಲು ನಿರ್ಧರಿಸಿದೆ ಎಂದು ಸಮರ್ಥಿಸಿಕೊಂಡಿದೆ.


‘ರಾಜ್ಯದ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿದ್ದು, ರೈತರು ಕೃಷಿ ಕಾರ್ಯಗಳನ್ನು ಕೈಗೊಳ್ಳಲು ತೊಂದರೆಯಾಗುತ್ತಿದೆ. ಇದು ಅವರ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ,’ ಎಂದು ಸಚಿವ ಸಂಪುಟದ ಮುಂದೆ ಕಂದಾಯ ಇಲಾಖೆ ಸಮರ್ಥಿಸಿಕೊಂಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ಆದರೆ ಈ ಹಿಂದೆ ಇದೇ ಪ್ರಸ್ತಾವನೆಯನ್ನು ಯಡಿಯೂರಪ್ಪ ಅವರು ವಿರೋಧಿಸಿದ್ದರಲ್ಲದೆ ಆ ಪ್ರಸ್ತಾವನೆಯನ್ನೇ ತಳ್ಳಿ ಹಾಕಿದ್ದರು.


ಆರ್ಥಿಕವಾಗಿ ಸಬಲರಾಗಿದ್ದವರು ಹಾಗೂ ಕೃಷಿ ಚಟುವಟಿಕೆ ಕೈಗೊಳ್ಳಲು ಆಸಕ್ತಿ ಹೊಂದಿರುವವರು ಕೃಷಿ ಜಮೀನನ್ನು ಹೊಂದಲು ಅವಕಾಶ ಕಲ್ಪಿಸಿದಲ್ಲಿ ಆಧುನಿಕ ರೀತಿಯಲ್ಲಿ ಕೃಷಿ ಮಾಡಿ ಹೆಚ್ಚು ಇಳುವರಿ ಪಡೆದು ರಾಜ್ಯದ ಕೃಷಿ ಉತ್ಪನ್ನಗಳ ಆದಾಯವನ್ನು ಹೆಚ್ಚಿಸಬಹುದು ಎಂಬ ಅಂಶವನ್ನು ಸಚಿವ ಸಂಪುಟದ ಮುಂದೊಡ್ಡಿರುವುದು ಗೊತ್ತಾಗಿದೆ.


‘ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರಗಳು ಅಸ್ತಿತ್ವದಲ್ಲಿ ಇರಲಿಲ್ಲ. ಪ್ರಸ್ತುತ ನಗರ ಯೋಜನಾ ಪ್ರಾಧಿಕಾರಗಳು ಹೊರಡಿಸುವ ಮಾರ್ಗಸೂಚಿಗಳನ್ವಯ ಭೂ ಬಳಕೆ ನಿರ್ಧರಿಸಲಾಗುವುದರಿಂದ ಜಮೀನುಗಳನ್ನು ನಿಗದಿತ ಉದ್ದೇಶಕ್ಕಲ್ಲದೆ ಇತರೆ ಉದ್ದೇಶಕ್ಕೆ ದುರುಪಯೋಗವಾಗುವ ಸಾಧ್ಯತೆಗಳಿರುವುದಿಲ್ಲ,’ ಎಂದು ಸಮರ್ಥಿಸಿಕೊಂಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.


ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 63ರ ಅಡಿಯಲ್ಲಿ ಕೃಷಿ ಭೂಮಿಯನ್ನು ಹೊಂದಲು ಗರಿಷ್ಠ ಮಿತಿ ನಿಗದಿಪಡಿಸಿತ್ತು. ಹೀಗಾಗಿ ಯಾವುದೇ ಒಬ್ಬ ವ್ಯಕ್ತಿಗೆ ಗರಿಷ್ಠ ಮಿತಿಗಿಂತ ಹೆಚ್ಚು ಜಮೀನು ಹೊಂದಲು ಅವಕಾಶಗಳಿರಲಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಕಲಂ 79 ಎ ಮತ್ತು 79 ಬಿ ನಿಬಂಧನೆಗಳಿಲ್ಲ. ಹೀಗಾಗಿ ರಾಷ್ಟ್ರದ ಇತರ ರಾಜ್ಯಗಳಂತೆಯೇ ಏಕರೂಪತೆ ತರುವ ಉದ್ದೇಶದಿಂದ ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.


ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ, ಹಾಳುಬಿದ್ದಿರುವ ಭೂಮಿಯನ್ನು ಕೈಗಾರಿಕೆಗೆ ಬಳಸಬಹುದು ಎಂಬ ಲೆಕ್ಕಾಚಾರ ಮಾಡಿರುವ ಸರ್ಕಾರ ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದು ವಾರ್ಷಿಕ ಸುಮಾರು 8000 ಕೋಟಿ ರೂ. ನಷ್ಟವಾಗುತ್ತಿದೆ ಎಂಬ ಅಂದಾಜಿಸಿದೆ.


‘ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಬೇಕಾಬಿಟ್ಟಿಯಾಗಿ ಕಾನೂನು ರಚಿಸುವುದು ಸರಿಯಲ್ಲ. ಇವು ಅಲ್ಪಾವಧಿಯಲ್ಲಿ ನೆರವು ನೀಡಿದರೂ ದೀರ್ಘಾವಧಿಯಲ್ಲಿ ತೀವ್ರ ತರದ ಪರಿಣಾಮಗಳು ಬೀರುತ್ತವೆ. ಕಂದಾಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರ, ಲಂಚಕೋರತನ ಮತ್ತು ಅಕ್ರಮಗಳನ್ನು ಪ್ರೋತ್ಸಾಹಿಸುವ ಕೃತ್ಯಗಳನ್ನು ತಡೆಯಲಾರದೆ ಸೋಲೊಪ್ಪಿಕೊಂಡು ಈಗ ಅವರೆಲ್ಲರ ಅಕ್ರಮಗಳನ್ನು, 5,000 ಎಕರೆಗಿಂತಲೂ ಕೃಷಿ ಜಮೀನು ನಿಯಮ ಬಾಹಿರವಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳ ಪಾಲಾಗಿದ್ದಂತಹ ಅಕ್ರಮಗಳ ಸಮೇತವಾಗಿ, ಈಗ ಎಲ್ಲವನ್ನೂ ಸಕ್ರಮ ಮಾಡುವಂತಹ ಕೃತ್ಯಕ್ಕೆ ಮುಂದಾಗಿದ್ದಾರೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

the fil favicon

SUPPORT THE FILE

Latest News

Related Posts