ಬೆಂಗಳೂರು; ಲಾಕ್‌ಡೌನ್‌ನಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ದೇಶದ ಹಲವು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಕೇಂದ್ರದಿಂದ ಆರ್ಥಿಕ ನೆರವಿನ ಬೆಂಬಲ ಕೋರಿದ್ದರೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತ್ರ ಮದ್ಯ ಮಾರಾಟ ಮಾಡಲು ಸಲಹೆ ನೀಡಿದ್ದ ಸಂಗತಿ ಇದೀಗ ಹೊರಬಿದ್ದಿದೆ.
ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯಗಳು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಮಾರ್ಗಸೂಚಿ ರೂಪಿಸುವ ಬಗ್ಗೆ 2020ರ ಏಪ್ರಿಲ್ 25ರಂದು ರಾಷ್ಟ್ರಪತಿ ಭವನದಲ್ಲಿ ನಡೆದಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮದ್ಯ ಮಾರಾಟಕ್ಕೆ ನೀಡುವ ಅಂಶವನ್ನು ಅನುಮತಿ ನೀಡುವ ಚಟುವಟಿಕೆಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರು ಸಲಹೆ ನೀಡಿರುವುದು ಗೊತ್ತಾಗಿದೆ. 2020ರ ಏಪ್ರಿಲ್ 25ರಂದು ನಡೆದಿದ್ದ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಒಟ್ಟು ಆದಾಯದಲ್ಲಿ ರಾಜ್ಯ ಅಬಕಾರಿ ಆದಾಯ ಗಣನೀಯವಾಗಿದೆ. ಹೀಗಾಗಿ ಅನುಮತಿ ನೀಡುವ ಚಟುವಟಿಕೆಗಳ ಪಟ್ಟಿಯಲ್ಲಿ ಮದ್ಯ ಮಾರಾಟವನ್ನೂ ಸೇರ್ಪಡೆ ಮಾಡಬಹುದು ,’ ಎಂದು ಸಲಹೆ ನೀಡಿರುವುದು ಸಭೆಯ ನಡವಳಿಯಲ್ಲಿ ದಾಖಲಾಗಿದೆ.
‘ಇದು ಮುಖ್ಯ ಕಾರ್ಯದರ್ಶಿಗಳ ಮಾತಲ್ಲ. ಮದ್ಯದ ಲಾಬಿ ಮುಖ್ಯಮಂತ್ರಿಗಳ ಮೂಲಕ ಹೇಳಿಸಿರುವ ಮಾತು. ಇದು ನಾಚಿಕೆಗೇಡಿನ ಸಂಗತಿ. ರಾಜ್ಯಕ್ಕೆ ಕೇಂದ್ರದಿಂದ ಬರಲೇಬೇಕಾದ ಹಕ್ಕಿನ ಹಣ ಸಹಾಯವನ್ನು ಪ್ರತಿಪಾದಿಸದೇ ಕೇವಲ ಮದ್ಯ ಮಾರಾಟಕ್ಕೆ ಅನುಮತಿ ಕೇಳುವುದು ಈ ಸರ್ಕಾರದ ನಿಷ್ಠೆ ಯಾರ ಪದತಲದಲ್ಲಿದೆ ಇದೆ ಎನ್ನುವುದು ಸ್ಟಷ್ಟವಾಗುತ್ತದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.
ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನ ಅಂದರೆ ಮೇ 4 ರಂದು 45 ಕೋಟಿ ರೂಪಾಯಿ, ಎರಡನೇ ದಿನ 197 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದ್ದರೆ, ಮೂರನೇ ದಿನದಲ್ಲಿ ಒಟ್ಟು 231.6 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು.
ಸಂಪುಟ ಕಾರ್ಯದರ್ಶಿ ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಉಳಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹೆಚ್ಚುವರಿ ಸಾಲ ಪಡೆಯಲು ಮಂಜೂರಾತಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಿದರೆ ನಿಧಾನವಾಗಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಕಾಣಬಹುದು ಎಂದು ಸಲಹೆ ನೀಡಿದ್ದರು.
ಇದೇ ಸಭೆಯಲಿ ಹೊರರಾಜ್ಯಗಳ ವಲಸಿಗ ಕಾರ್ಮಿಕರ ಪರಿಸ್ಥಿತಿ ಕುರಿತೂ ಚರ್ಚೆಯಾಗಿದೆ. ಆದರೆ ಕರ್ನಾಟಕದಲ್ಲಿ ವಲಸಿಗ ಕಾರ್ಮಿಕರು ಪಡುತ್ತಿದ್ದ ಬವಣೆ ಕುರಿತು ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಹೆಚ್ಚಿನ ಒತ್ತು ನೀಡದಂತಿಲ್ಲ. ಮದ್ಯ ಮಾರಾಟ ವಿಷಯವನ್ನು ಅನುಮತಿ ನೀಡಬಹುದಾದ ಚಟುವಟಿಕೆಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಲಹೆ ನೀಡಿದ್ದು ಹೊರತುಪಡಿಸಿದರೆ ಆರ್ಥಿಕ, ವಾಣಿಜ್ಯ ಚಟುವಟಿಕೆಗಳ ಪುನರಾರಂಭಕ್ಕೆ ಆರ್ಥಿಕ ಬೆಂಬಲ ಕೇಳಿರುವ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ.
ಲಾಕ್‌ಡೌನ್ ಜಾರಿಗೊಂಡ ದಿನದಂದೇ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಮೊದಲ ಹಂತದ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಪನ್ಮೂಲ ಸಂಗ್ರಹ ಸ್ಥಗಿತಗೊಂಡಿರುವುದನ್ನೇ ನೆಪ ಮಾಡಿಕೊಂಡಿದ್ದ ರಾಜ್ಯ ಸರ್ಕಾರ, ಮದ್ಯ ಮಾರಾಟದಿಂದಲೇ ಆದಾಯ ಸಂಗ್ರಹಿಸಲು ಹೊರಟಿತ್ತು. ಇದಕ್ಕೆ ರಾಜ್ಯದ ವಿವಿಧೆಡೆ ವಿರೋಧ ವ್ಯಕ್ತವಾಗಿತ್ತು. ಆದರೂ ವಿರೋಧವನ್ನು ಲೆಕ್ಕಿಸದೆಯೇ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು.
ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚುವರಿ ದುಡಿಯುವ ಬಂಡವಾಳದ ಅಗತ್ಯವಿದೆ ಎಂದು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲಹೆ ನೀಡಿದ್ದರೆ, ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಕೃಷಿ ಸಾಲದ ಬೆಂಬಲ ಬೇಕಿದೆ ಎಂದು ಕೋರಿದ್ದರು ಎಂಬುದು ನಡವಳಿಯಿಂದ ತಿಳಿದು ಬಂದಿದೆ.
ಈ ಸಭೆಯಲ್ಲಿ ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್, ಬಿಹಾರ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಅಲ್ಲದೆ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹೀರಾಲಾಲ್ ಸಮರಿಯಾ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು, ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಕೇಂದ್ರದ ಇನ್ನಿತರೆ ಇಲಾಖೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.