ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿ 8 ಕೋಟಿ ಅವ್ಯವಹಾರ; ತನಿಖೆಗೆ ಆದೇಶ

ಬೆಂಗಳೂರು; ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ 8 ಕೋಟಿ ರು. ಅಧಿಕ ಮೊತ್ತದ ಅವ್ಯವಹಾರಗಳ ಕುರಿತು ತನಿಖೆಗೆ ರಾಜ್ಯ ಸರ್ಕಾರ ಕಡೆಗೂ ಮುಂದಡಿಯಿಟ್ಟಿದೆ.
ಕೋರ್‌ ಬ್ಯಾಂಕಿಂಗ್‌ ಸಲ್ಯೂಷನ್ಸ್‌(ಸಿಬಿಎಸ್‌) ಅಳವಡಿಸುವ ಸಂಬಂಧ ಕರ್ನಾಟಕ ಪಾರದರ್ಶಕ ಕಾಯ್ದೆ ಕಾಯ್ದೆ ಮತ್ತು ಬ್ಯಾಂಕ್‌ ಆರ್‌ಪಿಎಫ್‌ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ ಎಂ ಹೊನ್ನೆಗೌಡ ಅವರು ಸರ್ಕಾರಕ್ಕೆ 2020ರ ಏಪ್ರಿಲ್‌ 21 ಮತ್ತು 28ರಂದು ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಾಂಬಿಕಾದೇವಿ ಅವರು ತನಿಖೆಗೆ ಆದೇಶಿಸಿದ್ದಾರೆ.
‘ದೂರರ್ಜಿಯಲ್ಲಿ ವಿವರಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಒಂದು ತಂಡ ರಚಿಸಿ ವಿಚಾರಣೆ ನಡೆಸಬೇಕು,’ ಎಂದು ಸಹಕಾರ ಸಂಘಗಳ ನಿಬಂಧಕರಿಗೆ ಆದೇಶಿಸಿದ್ದಾರೆ. ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮ ತನಿಖೆಗೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಅನುಮೋದಿಸಿದ್ದಾರೆ.

‘ಮಂಡ್ಯ ತಾಲೂಕಿನ ಭಾರತಿನಗರ ಮತ್ತು ಚಿಕ್ಕರಸಿನಕೆರೆ ವೃತ್ತಗಳ ವ್ಯಾಪ್ತಿಯಲ್ಲಿ 8.00 ಕೋಟಿ ರು.ಗೂ ಅಧಿಕ ಮೊತ್ತ ಅವ್ಯವಹಾರವಾಗಿದೆ. ಬ್ಯಾಂಕ್‌ನ ವೃತ್ತ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಮರಿಸ್ವಾಮಿ ಮತ್ತು ಪ್ಯಾಕ್ಸ್‌ ಆಡಳಿತ ಮಂಡಳಿಯೇ ಇದಕ್ಕೆ ಕಾರಣ,’ ಎಂದು ಹೊನ್ನೆಗೌಡ ಅವರು ದೂರಿನಲ್ಲಿ ವಿವರಿಸಿದ್ದರು ಎಂದು ತಿಳಿದು ಬಂದಿದೆ.
ಕೋರ್‌ ಬ್ಯಾಂಕಿಂಗ್‌ ಸಲ್ಯೂಷನ್ಸ್‌ ಅಳವಡಿಸಲು ಒಟ್ಟು 965.00 ಲಕ್ಷ ರು. ವೆಚ್ಚವಾಗಲಿದೆ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಅಂದಾಜಿಸಿತ್ತು. ಆದರೆ ಬ್ಯಾಂಕ್‌ ಅಧಿಕಾರಿಗಳು ಆರ್‌ಪಿಎಫ್‌ ಮತ್ತು ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಎನ್‌ಐಆರ್‌ಬಿ ಜತೆ ಶಾಮೀಲಾಗಿ ಯುಎಸ್‌ಟಿ ಇಂಟರ್‌ನ್ಯಾಷನಲ್‌ ಪ್ರೈವೈಟ್‌ ಲಿಮಿಟೆಡ್‌ಗೆ 5 ವರ್ಷಗಳ ಅವಧಿಗೆ ಕಾರ್ಯಾದೇಶ ನೀಡಿದ್ದರು.
ಅಲ್ಲದೆ ಬ್ಯಾಂಕ್‌ನಲ್ಲಿ ಭದ್ರತಾ ವ್ಯವಸ್ಥೆಗಾಗಿ ವಾರ್ಷಿಕ 200.00 ಲಕ್ಷ ರು. ವೆಚ್ಚವಾಗುತ್ತಿದೆ. ಕಳೆದ 8 ರಿಂದ 10 ವರ್ಷಗಳವರೆಗೆ ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್‌ ಕರೆಯದೇ ಒಂದೇ ಏಜೆನ್ಸಿಯವರಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂದು ಹೊನ್ನೆಗೌಡ ಅವರು ನೀಡಿದ್ದ ದೂರಿನಿಂದ ಗೊತ್ತಾಗಿದೆ.
ಅದೇ ರೀತಿ ಬ್ಯಾಂಕ್‌ನಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿ ಕೆಲಸಗಳಿಗೆ ಹಾಗೂ ಅಗತ್ಯವಿರುವ ಪೀಠೋಪಕರಣ ಖರೀದಿ, ಲೇಖನಾ ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಯಾವ ನಿಯಮಗಳನ್ನೂ ಪಾಲಿಸದೇ ಬ್ಯಾಂಕ್‌ಗೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

Your generous support will help us remain independent and work without fear.

Latest News

Related Posts