ಕೋವಿಡ್‌ ಬಿಲ್ವಿದ್ಯೆ; ವಾಹನ ಬಳಸದಿದ್ದರೂ 5 ಕೋಟಿ ರು.ಪಾವತಿ?

ಬೆಂಗಳೂರು; ಕೋವಿಡ್‌-19ರ ಜಾಗೃತಿ ಕಾರ್ಯಕ್ರಮಗಳ ಹೆಸರಿನಲ್ಲಿ ಖಾಸಗಿ ವಾಹನಗಳನ್ನು ಬಳಸದೆಯೇ 5 ಕೋಟಿ ರು.ಗೂ ಹೆಚ್ಚಿನ ಮೊತ್ತಕ್ಕೆ ಬಿಲ್‌ ಸೃಷ್ಟಿಸಿರುವ ಕರ್ನಾಟಕ ಡ್ರಗ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯ ಬಿಲ್ವಿದ್ಯೆ ಇದೀಗ ಬಹಿರಂಗಗೊಂಡಿದೆ.


ಕೋವಿಡ್‌ ಹೆಸರಿನಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಲು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸೂಚಿಸಿರುವ ಬೆನ್ನಲ್ಲೇ ಬಳಸದಿರುವ ವಾಹನಗಳಿಗೂ ಬಿಲ್‌ ಸಲ್ಲಿಸಿರುವ ಪ್ರಕರಣ ಹೊರಬಿದ್ದಿದೆ. ಕೋವಿಡ್‌ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ.


ಕೊರೊನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಟೆಂಪೋ ಟ್ರಾವಲರ್‌, ಇನ್ನೋವಾ, ಆಂಬುಲೆನ್ಸ್‌ ಮತ್ತು ಟ್ಯಾಕ್ಸಿ ಸೇರಿದಂತೆ ಒಟ್ಟು 396 ವಾಹನಗಳನ್ನು ಖಾಸಗಿಯವರಿಂದ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡಿದೆ. ಬಹುತೇಕ ವಾಹನಗಳು ಅಧಿಕಾರಿಗಳ ಸಂಬಂಧಿಕರಿಗೆ ಸೇರಿವೆ ಎಂಬ ಆರೋಪಗಳು ಕೇಳಿ ಬಂದಿವೆ.


46 ಟೆಂಪೋ ಟ್ರಾವಲರ್‌ಗಳಿಗೆ 1,20,000 ರು., 64 ಇನ್ನೋವಾ ವಾಹನಗಳಿಗೆ 10,4,000 ರು, 55 ಆಂಬುಲೆನ್ಸ್‌ಗಳಿಗೆ 75,000 ರು., ಮಾಸಿಕ ಬಾಡಿಗೆ ಲೆಕ್ಕಾಚಾರದಲ್ಲಿ ನೀಡಿದ್ದರೆ, 32 ಟ್ಯಾಕ್ಸಿಗಳಿಗೆ ದಿನದ ಬಾಡಿಗೆ ಲೆಕ್ಕಾಚಾರದಲ್ಲಿ 3,200 ರು. ಸೇರಿ 3 ತಿಂಗಳ ಅವಧಿಯವರೆಗೆ ಅಧಿಕಾರಿಗಳು ಒಟ್ಟು 5.81 ಕೋಟಿ ರು. ಬಿಲ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


‘ಆರೋಗ್ಯ ಇಲಾಖೆಯ 130 ಮತ್ತು ಇತರೆ ಇಲಾಖೆಗಳು ಆರೋಗ್ಯ ಇಲಾಖೆಗೆ 69 ವಾಹನಗಳು ಸೇರಿದಂತೆ ಒಟ್ಟು 199 ವಾಹನಗಳಿವೆ. ಈ ವಾಹನಗಳನ್ನಷ್ಟೇ ಬಳಸಿಕೊಂಡಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಖಾಸಗಿ ವಲಯದ 396 ವಾಹನಗಳ ಪೈಕಿ ಬಹುತೇಕ ವಾಹನಗಳನ್ನು ಬಳಸಿಕೊಂಡಿಲ್ಲ. ಆದರೂ ವಾಹನಗಳನ್ನು ಬಳಸಲಾಗಿದೆ ಎಂದು ಕೋವಿಡ್‌ 19ರ ಹೆಸರಿನಲ್ಲಿ ಬಿಡುಗಡೆಯಾಗಿರುವ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ,’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.


ಖಾಸಗಿ ವಾಹನಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಅಥವಾ ಬಳಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ವಾಹನಗಳ ಲಾಗ್‌ ಪುಸ್ತಕವನ್ನು ತನಿಖೆಗೊಳಪಡಿಸಿದರೆ ಇದರ ಸತ್ಯಾಂಶ ಹೊರಬರಲಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು. ಪ್ರತಿ ಕಿ ಮೀ ಗೆ ನಿಗದಿಪಡಿಸಿರುವ ದರದ ಜತೆಗೆ ಇಂಧನ ವೆಚ್ಚವನ್ನೂ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ ಭರಿಸಿದೆ ಎಂದು ಗೊತ್ತಾಗಿದೆ.
‘ಮಾಸಿಕ ಬಾಡಿಗೆ ಅಧಾರದಲ್ಲಿ ಪಡೆದುಕೊಂಡಿರುವ ವಾಹನಗಳು ದಿನವೊಂದರಲ್ಲಿ ಎಷ್ಟು ಕಿ.ಮೀ.ವರೆಗೆ ಪ್ರಯಾಣಿಸಿದೆ, ಯಾವ ಅಧಿಕಾರಿಗಳು ಯಾವ ಸ್ಥಳಕ್ಕೆ ತೆರಳಿದ್ದರು ಎಂಬುದನ್ನು ತನಿಖೆಗೊಳಪಡಿಸಿದಲ್ಲಿ ವಾಹನಗಳ ಬಳಕೆ ನಿಜಾಂಶ ಹೊರಬೀಳಲಿದೆ,’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕರ್ನಾಟಕ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆಯಲ್ಲಿ ಹಲವು ಅಕ್ರಮಗಳು ನಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದರೂ ಸಚಿವ ಬಿ ಶ್ರೀರಾಮುಲು ಅವರು ಮಾತ್ರ ಯಾವುದರಲ್ಲಿಯೂ ಅಕ್ರಮ ನಡೆದಿಲ್ಲ ಎಂದೇ ಹೇಳುತ್ತಿದ್ದಾರೆ. ಅಕ್ರಮ ಎಸಗಿರುವ ಪ್ರಕರಣಗಳು ದಾಖಲೆ ಸಮೇತ ಬಹಿರಂಗವಾಗುತ್ತಿದ್ದರೂ ಅಧಿಕಾರಿಗಳ ವಿರುದ್ಧ ಕ್ರಮವಿರಲಿ, ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡುವ ಗೋಜಿಗೂ ಹೋಗಿಲ್ಲ. ಇದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.


ಪಿಪಿಇ ಕಿಟ್‌, ಸ್ಯಾನಿಟೈಸರ್‌, ಗ್ಲುಕೋಸ್‌, ವೆಂಟಿಲೇಟರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು. ಈ ಎಲ್ಲಾ ಅಕ್ರಮಗಳ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts