ಲಾಕ್‌ಡೌನ್‌; ವಿದ್ಯುತ್‌ ಬೇಡಿಕೆ ಶುಲ್ಕಕ್ಕೆ ವಿನಾಯ್ತಿ ನೀಡಿದರೆ 500 ಕೋಟಿ ಹೊರೆ?

ಬೆಂಗಳೂರು; ಲಾಕ್‌ಡೌನ್‌ನಿಂದಾಗಿ ಅತೀವ ನಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್‌ ಗುತ್ತಿಗೆ ಬೇಡಿಕೆ, ಬೇಡಿಕೆ ಶುಲ್ಕ, ಎಲ್ಲಾ ಬಗೆಯ ವಿದ್ಯುತ್‌ ಶುಲ್ಕ ಮನ್ನಾ, ವಿನಾಯ್ತಿ ಸೇರಿದಂತೆ ಇನ್ನಿತರೆ ಪರಿಹಾರ ಕ್ರಮಗಳನ್ನು ಕೈಗೊಂಡಲ್ಲಿ ಸರ್ಕಾರಕ್ಕೆ ಒಟ್ಟು 501 .06 ಕೋಟಿ ರು ಹೊರೆಯಾಗಲಿದೆ.


ಸಂಪನ್ಮೂಲ ಸಂಗ್ರಹ ಸ್ಥಗಿತದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವ ಹೊತ್ತಿನಲ್ಲೇ ಈ ಹೊರೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಸರ್ಕಾರ ಚಿಂತಿತವಾಗಿದೆ.


ಎಂಎಸ್‌ಎಂಇ ಕೈಗಾರಿಕೆಗಳಿಗೆ 2020ರ ಏಪ್ರಿಲ್‌ ಹಾಗೂ ಜೂನ್‌ ತಿಂಗಳವರೆಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ಹಂತದಲ್ಲಿ ಬೇಡಿಕೆ ಶುಲ್ಕ ಮನ್ನಾ ಮಾಡಿದರೆ ಒಟ್ಟು 262.93 ಕೋಟಿ ರು. ಹೊರೆಯಾಗಲಿದೆ. ಎಂಎಸ್‌ಎಂಇ ಅಲ್ಲದ ಕೈಗಾರಿಕೆ ಗ್ರಾಹಕರಿಗೆ ಶುಲ್ಕದ ಮೇಲಿನ ಬಡ್ಡಿ ಮನ್ನಾ ಮಾಡಿದರೆ 19.70 ಕೋಟಿ ರು., ವಿದ್ಯುತ್‌ ಬಳಕೆ ಶುಲ್ಕದ ಜತೆಗೆ ಮಂಜೂರಾದ ಗುತ್ತಿಗೆ ಬೇಡಿಕೆಯ (ಕಾಂಟ್ರಾಕ್ಟ್ ಡಿಮ್ಯಾಂಡ್‌) ಶೇ. 85ರಿಂದ ಶೇ.60ಕ್ಕಿಳಿಸಿದರೆ 93.59 ಕೋಟಿ ರು., ಸಣ್ಣ ಕೈಗಾರಿಕೆಗಳಿಗೆ ನಿಗದಿಪಡಿಸಿರುವ ಶುಲ್ಕವನ್ನು ಶೇ.100ರಿಂದ ಶೇ.60ಕ್ಕಿಳಿಸಿದರೆ 43.84 ಕೋಟಿ ರು., ವಿದ್ಯುತ್‌ ಬಳಕೆ ಶುಲ್ಕದ ಜತೆಗೆ ಮಂಜೂರಾದ ಗುತ್ತಿಗೆ ಬೇಡಿಕೆಯನ್ನು ಶೇ.85ರಿಂದ 70ಕ್ಕಿಳಿಸಿದರೆ 29.40 ಕೋಟಿ ರು., ವಾಣಿಜ್ಯ ಬಳಕೆಯ ನಿಗದಿತ ಶುಲ್ಕವನ್ನು ಶೇ.100ರಿಂದ 70ಕ್ಕಿಳಿಸಿದರೆ 31.60 ಕೋಟಿ ರು. ಹೊರೆಯಾಗಲಿದೆ ಎಂಬ ಮಾಹಿತಿಯನ್ನು ಇಂಧನ ಇಲಾಖೆ ಸರ್ಕಾರಕ್ಕೆ ಒದಗಿಸಿದೆ ಎಂದು ತಿಳಿದು ಬಂದಿದೆ.


1ರಿಂದ 5 ದಿನಗಳವರೆಗೆ ಶೇ.1.00, 6ರಿಂದ 15 ದಿನಗಳವರೆಗೆ ಶೇ.0.50, 15ರಿಂದ 30 ದಿನಗಳವರೆಗೆ ಯಾವುದೇ ರಿಬೇಟ್‌ ನೀಡದೇ ಇದ್ದಲ್ಲಿ ಎದುರಾಗುವ ಹೊರೆಯನ್ನು ಎಸ್ಕಾಂಗಳೇ ಹೊರಬೇಕು. ಹೀಗಾಗಿ ಎಸ್ಕಾಂಗಳಿಗೆ ಸರ್ಕಾರ ಪರಿಹಾರ ರೂಪದಲ್ಲಿ ಸಹಾಯಾನುದಾನವನ್ನು ಘೋಷಿಸಬೇಕು ಎಂದು ಕೋರಿದೆ.


ಬಡ್ಡಿ ರಹಿತವಾಗಿ ವಿದ್ಯುತ್‌ ಬಿಲ್‌ ಪಾವತಿಸಲು 15 ದಿನಗಳಿಂದ 30 ದಿನಗಳವರೆಗೆ ಕಾಲಾವಧಿಯನ್ನು ವಿಸ್ತರಿಸಿದರೆ ಎಸ್ಕಾಂಗಳಿಗೆ ಒಟ್ಟು 20 ಕೋಟಿ ರು. ಹೊರೆಯಾಗಲಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.


ವಿದ್ಯುತ್‌ ಬಳಕೆ ಶುಲ್ಕದ ಜತೆಗೆ ಮಂಜೂರಾದ ಗುತ್ತಿಗೆ ಬೇಡಿಕೆಯ (ಸ್ಯಾಂಕ್ಷನ್‌ ಕಾಂಟ್ರಾಕ್ಟ್ ಡಿಮ್ಯಾಂಡ್‌) ಶೇ. 80ರಷ್ಟು ಮೊತ್ತವನ್ನು ಬೇಡಿಕೆ ಶುಲ್ಕದ ರೂಪದಲ್ಲಿ ಎಸ್ಕಾಂಗಳು ಸಂಗ್ರಹಿಸುತ್ತಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಎಸ್ಕಾಂಗಳು ವಿಧಿಸುತ್ತಿರುವ ಬೇಡಿಕೆ ಶುಲ್ಕ ಕನಿಷ್ಠ ಪ್ರಮಾಣದಲ್ಲಿದೆ. ಇದಲ್ಲದೆ, ವಿದ್ಯುತ್‌ ಉತ್ಪಾದನಾ ನಿಗಮಗಳಿಗೂ ಹಣ ಪಾವತಿಸಬೇಕಿದೆ. ಬಹುತೇಕ ಎಸ್ಕಾಂಗಳು ಕೆಪಿಸಿಎಲ್‌ಗೆ ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಬೇಡಿಕೆ ಶುಲ್ಕಕ್ಕೆ ವಿನಾಯ್ತಿ ನೀಡಿದರೆ ಇನ್ನಷ್ಟು ಹೊರೆಯಾಗಲಿದೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ರಾಜ್ಯದಲ್ಲಿ ಎಲ್ಲಾ ಎಸ್ಕಾಂಗಳು ಖರೀದಿಸುವ ವಿದ್ಯುತ್‌ ತಿಂಗಳಿಗೆ 3 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಅಧಿಕಾರಿ/ಸಿಬ್ಬಂದಿ ವೇತನಕ್ಕೆ 650 ಕೋಟಿ ರೂ., ನಾನಾ ಕಾಮಗಾರಿಗಳ ಸಾಲ, ಬಡ್ಡಿ ಪಾವತಿಗೆ 727 ಕೋಟಿ ರೂ. ಸೇರಿದಂತೆ ಪ್ರತಿ ತಿಂಗಳು ಒಟ್ಟು 4,325 ಕೋಟಿ ರೂ. ಖರ್ಚಾಗಲಿದೆ. ಇದಲ್ಲದೆ ನಿರ್ವಹಣೆ ಹಾಗೂ ಇತರೆ ವೆಚ್ಚ ಸೇರಿ ಎಸ್ಕಾಂಗಳ ಮಾಸಿಕ ವೆಚ್ಚ 5000 ಕೋಟಿ ರೂ. ಆಗಲಿದೆ.


ಎಂಎಸ್‌ಎಂಇ ಕೈಗಾರಿಕೆಗಳ ಗ್ರಾಹಕರಿಗೆ ಏಪ್ರಿಲ್‌ ಹಾಗೂ ಮೇ ತಿಂಗಳ ಬಿಲ್‌ಗಳಿಗೆ ನಿಗದಿತ ಶುಲ್ಕ ಮನ್ನಾ ಮಾಡಲಾಗಿದೆ. ಎಂಎಸ್‌ಎಂಇ ಅಲ್ಲದ ಕೈಗಾರಿಕೆ ಗ್ರಾಹಕರಿಗೆ ಎರಡು ತಿಂಗಳ ನಿಗದಿತ ಶುಲ್ಕ ಪಾವತಿಯನ್ನು ಜೂನ್‌ವರೆಗೆ ತನಕ ಮುಂದೂಡಲಾಗಿದೆ.


ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಮೂರು ತಿಂಗಳವರೆಗೆ ವಿದ್ಯುತ್ ಬಿಲ್ ಕಟ್ಟೋದಕ್ಕೆ ವಿನಾಯ್ತಿ ನೀಡಲಾಗಿತ್ತು. ಆದರೆ ಈ ಮಧ್ಯೆಯೂ ರಾಜ್ಯ ಸರ್ಕಾರ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚನೆ ನೀಡಿತ್ತು. ಅದರಲ್ಲೂ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts