ಬೆಂಗಳೂರು; ಪರಿಸರ ಮಾಲಿನ್ಯ ತಡೆಗಟ್ಟಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ನಿಯಮಗಳನ್ನು ಉಲ್ಲಂಘಿಸುವ ಖಾಸಗಿ ವಲಯದ ಬೃಹತ್ ಪ್ರಮಾಣದ ಕೈಗಾರಿಕೆಗಳತ್ತ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.
ದೂರು ಸಲ್ಲಿಕೆಯಾದ ನಂತರ ಕೇವಲ ನೋಟೀಸ್ ನೀಡಿ ಕೈತೊಳೆದುಕೊಳ್ಳುತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿ ದಂಡ ವಸೂಲು ಮಾಡದೆ ಕೇವಲ ಕಣ್ಣೊರೆಸುವುದಕಷ್ವೇ ಸೀಮಿತವಾಗಿದೆ. ದಂಡ ವಸೂಲು ಮಾಡಿಲ್ಲ ಎಂಬುದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಆನಂದ್‌ಸಿಂಗ್ ಅವರು ಸದನದಲ್ಲಿ ನೀಡಿರುವ ಲಿಖಿತ ಉತ್ತರದಿಂದ ತಿಳಿದು ಬಂದಿದೆ.
ಇದಕ್ಕೊಂದು ಜ್ವಲಂತ ನಿದರ್ಶನ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಬಾಲಾಜಿ ಸಿಮೆಂಟ್ಸ್ ಮತ್ತು ಪವರ್ ಲಿಮಿಟೆಡ್. ಸೇಡಂ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಹಲವು ಸಿಮೆಂಟ್ ಕಂಪನಿಗಳು ಪರಿಸರ ಮಾಲಿನ್ಯ ಮಾಡುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿದೆ.
ಸಿಮೆಂಟ್ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗುತ್ತಿರುವ ಪ್ರಕರಣಗಳು ಗಮನದಲ್ಲಿದ್ದರೂ ಸರ್ಕಾರದ ಅರಣ್ಯ,ಪರಿಸರ ಜೀವಿಶಾಸ್ತ್ರ ಇಲಾಖೆಯೂ ಯಾವುದೇ ಕ್ರಮ ಕೈಗೊಳ್ಳದೇ ಭಂಡ ನಿರ್ಲಕ್ಷ್ಯ ವಹಿಸಿದೆ.
ಬಾಲಾಜಿ ಸಿಮೆಂಟ್ಸ್ ಮತ್ತು ಪವರ್ ಲಿಮಿಟೆಡ್(ಹಿಂದಿನ ಸೌತ್ ಇಂಡಿಯಾ ಸಿಮೆಂಟ್ಸ್) ಕಾರ್ಖಾನೆ ಸಮ್ಮತಿ ಪತ್ರವನ್ನು ಉಲ್ಲಂಘಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಮೇ 15 ಮತ್ತು ನವೆಂಬರ್ 30ರಂದು ನೋಟೀಸ್ ನೀಡಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ಮಾಲಿನ್ಯ ಉಂಟುಮಾಡಿದ ಕಂಪನಿಯಿಂದ ದಂಡದ ರೂಪದಲ್ಲಿ ಬಿಡಿಗಾಸನ್ನೂ ವಸೂಲು ಮಾಡಿಲ್ಲದಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಸಿಮೆಂಟ್ ಕೈಗಾರಿಕೆಗಳ ಆವರಣದಲ್ಲಿ ಪರಿವೇಷ್ಠಕ ವಾಯು ಗುಣಮಟ್ಟವನ್ನು ಮಾಪನ ಮಾಡಿರುವ ಮಂಡಳಿಯ ಪ್ರಾದೇಶಿಕ ಕಚೇರಿ, ಪಿಎಂ 10(ಹತ್ತು ಮೈಕ್ರಾನ್‍ಗಿಂತ ಕಡಿಮೆ ಇರುವ ಧೂಳಿನ ಪ್ರಮಾಣವು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ 2009ರಲ್ಲಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ಇದೆ ಎಂದು ಹೇಳಿದೆ.
ಧೂಳಿನ ಪ್ರಮಾಣದಲ್ಲಿ ಅಕಸ್ಮಾತ್ ಆಗಿ ಕ್ಷಿಪ್ರ ಬದಲಾವಣೆ ಕಂಡು ಬಂದಲ್ಲಿ ಎಸ್‍ಎಂಎಸ್ ಅಥವಾ ಇ-ಮೇಲ್ ಮೂಲಕ ಎಚ್ಚರಿಕೆ ನೀಡಿ ಕೈತೊಳೆದುಕೊಳ್ಳುತ್ತಿರುವುದು ದಾಖಲೆಯಿಂದ ಗೊತ್ತಾಗಿದೆ.