ಲಾಕ್‌ಡೌನ್‌ ಪರಿಣಾಮ; ಅಧೀನ ಕಾರ್ಯದರ್ಶಿಗಳ ಹೆಗಲಿಗೆ ವಿಧಾನಸೌಧ ಶೌಚಾಲಯಗಳ ನಿರ್ವಹಣೆ

ಬೆಂಗಳೂರು; ಲಾಕ್‌ಡೌನ್‌  ನಡುವೆಯೂ ಸಚಿವಾಲಯ ಸೇರಿದಂತೆ ಸರ್ಕಾರದ ವಿವಿಧ  ಇಲಾಖೆಗಳ ಅಧೀನ ಕಾರ್ಯದರ್ಶಿ, ಶಾಖಾಧಿಕಾರಿಗಳನ್ನು ಕಚೇರಿ ಕರ್ತವ್ಯಕ್ಕೆ ಕರೆಸಿಕೊಂಡಿರುವ  ಸರ್ಕಾರ, ವಿಧಾನಸೌಧ, ವಿಕಾಸಸೌಧ ಮತ್ತು ಬಹಮಹಡಿ ಕಟ್ಟಡ,  ಸಚಿವರು ಮತ್ತು ಅಧಿಕಾರಿಗಳ ಕೊಠಡಿಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮಾಡುವ ಕೆಲಸವನ್ನು ಕೊಟ್ಟಿದೆ. 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 2020ರ ಏಪ್ರಿಲ್‌ 21ರಂದು ಅನಧಿಕೃತ ಟಿಪ್ಪಣಿಯನ್ನು ಹೊರಡಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ  ಈ ಟಿಪ್ಪಣಿಗೆ ಇಲಾಖೆಗಳ ಅಧೀನ ಕಾರ್ಯದರ್ಶಿ ಮತ್ತು ಶಾಖಾಧಿಕಾರಿಗಳ ವಲಯದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. 

ಕಾರಿಡಾರ್‌ನಲ್ಲಿರುವ ಸಾರ್ವಜನಿಕ ಶೌಚಾಲಯಗಳು ಮತ್ತು ಅಧಿಕಾರಿಗಳ  ಕೊಠಡಿಗಳಲ್ಲಿರುವ ಶೌಚಾಲಯಗಳಲ್ಲಿ ಸೋಪ್‌ ಆಯಿಲ್‌ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನಿರಿಸುವುದು ಮತ್ತು ಅದನ್ನು ನಿರ್ವಹಣೆ ಮಾಡಲು ಹೊರಗುತ್ತಿಗೆ ಪಡೆದಿರುವ ಏಜೆನ್ಸಿ ಸಿಬ್ಬಂದಿ ಬಾರದ ಕಾರಣ ಈ ಎಲ್ಲಾ ಕೆಲಸಗಳನ್ನೂ ಇದೀಗ ಅಧೀನ ಕಾರ್ಯದರ್ಶಿ, ಶಾಖಾಧಿಕಾರಿಗಳೇ ನಿರ್ವಹಿಸಬೇಕಿದೆ. ಸೋಪ್‌ ಆಯಿಲ್‌ ಸೇರಿದಂತೆ ಇನ್ನಿತರೆ ಸಾಮಾಗ್ರಿಗಳನ್ನು ಇಡಬಹುದೇ  ಹೊರತು, ಅಲ್ಲಿ ಸ್ವಚ್ಛತೆ ಕಾರ್ಯಗಳನ್ನು ಮಾಡುವರ್ಯಾರು ಎಂಬ ಪ್ರಶ್ನೆಯೂ ಅಧೀನ  ಕಾರ್ಯದರ್ಶಿ, ಶಾಖಾಧಿಕಾರಿಗಳನ್ನು ಕಾಡತೊಡಗಿದೆ. 

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಅವರು ಈಗಾಗಲೇ   ಸರ್ಕಾರಿ ಅಧಿಕಾರಿ, ನೌಕರರ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಶೌಚಾಲಯಗಳನ್ನು ಪರಿವೀಕ್ಷಿಸಲು ಸೂಚಿಸಿರುವ ಡಿಪಿಎಆರ್‌ನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೇಮಲತಾ ಅವರು ಅಧಿಕಾರಿ, ನೌಕರರ ಕೋಪಕ್ಕೆ ತುತ್ತಾಗಿದ್ದಾರೆ. 

ಸಾರಿಗೆ ಸಂಪರ್ಕಗಳಿಲ್ಲದಿದ್ದರೂ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಕಚೇರಿ ಕರ್ತವ್ಯಕ್ಕೆ ಹಾಜರಾಗಿರುವ ಅಧೀನ ಕಾರ್ಯದರ್ಶಿ ಮತ್ತು ಶಾಖಾಧಿಕಾರಿ ಸಿಬ್ಬಂದಿ 2020ರ ಮೇ 15ರವರೆಗೆ ಶೌಚಾಲಯಗಳನ್ನು ನಿರ್ವಹಿಸಬೇಕಿದೆ. ಶೌಚಾಲಯಗಳಲ್ಲಿ ಸಾಮಗ್ರಿಗಳು ಇಲ್ಲದಿದ್ದಲ್ಲಿ ಮತ್ತು ಅವ್ಯವಸ್ಥೆಗಳಿದ್ದಲ್ಲಿ ಅಧಿಕಾರಿ, ನೌಕರರೇ ಇದರ ಹೊಣೆ ಹೊರಬೇಕು ಎಂದು ಎಚ್ಚರಿಸಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ. 

‘ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳ ಸಾರ್ವಜನಿಕ ಶೌಚಾಲಯಗಳು ಮತ್ತು ಸಚಿವರುಗಳು, ಅಧಿಕಾರಿಗಳ ಕೊಠಡಿಗಳಲ್ಲಿನ ಶೌಚಾಲಯಗಳು ಹಾಗೂ ಕಾರಿಡಾರ್‌ಗಳಲ್ಲಿ  ಸ್ವಚ್ಛತೆ, ಸಾರ್ವಜನಿಕ ಶೌಚಾಲಯಗಳಲ್ಲಿ ಕಡ್ಡಾಯವಾಗಿ ಸೋಪ್‌ ಆಯಿಲ್‌ ಸೇರಿದಂತೆ ಇನ್ನಿತರೆ ಸ್ವಚ್ಛತಾ ಸಾಮಗ್ರಿಗಳನ್ನು ಇಟ್ಟಿರುವ ಬಗ್ಗೆ ಪ್ರತಿದಿನ 3 ಗಂಟೆಗೆ ಒಂದು  ಸಾರಿ ಪರೀಕ್ಷಿಸಬೇಕು,’ ಎಂದು ಅನಧಿಕೃತ ಟಿಪ್ಪಣಿಯಲ್ಲಿ ಸೂಚಿಸಲಾಗಿದೆ. 

ಅದೇ ರೀತಿ ಈ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಕಾರಿಡಾರ್‌ಗಳಲ್ಲಿನ ಸ್ವಚ್ಛತೆ ಮತ್ತು ಶೌಚಾಲಯಗಳ ನಿರ್ವಹಣೆ ಕುರಿತು ಡಿಪಿಎಆರ್‌  ಕಾರ್ಯಕಾರಿ ವಿಭಾಗಕ್ಕೆ  ವರದಿ ಸಲ್ಲಿಸಬೇಕು. ‘ಒಂದು ವೇಳೆ ಮೇಲಾಧಿಕಾರಿಗಳು ಈ  ಸ್ಥಳಗಳನ್ನು ಪರಿಶೀಲಿಸಿದಾಗ ಸ್ವಚ್ಛತೆ ಇಲ್ಲದಿದ್ದಲ್ಲಿ ಮತ್ತು ಶೌಚಾಲಯಗಳಲ್ಲಿ ಸೋಪ್‌ ಆಯಿಲ್‌ ಇಲ್ಲದಿದ್ದಲ್ಲಿ ಅದನ್ನು ಭರ್ತಿ ಮಾಡುವ ಬಗ್ಗೆ ಹಿರಿಯ ಆರೋಗ್ಯ ಪರಿವೀಕ್ಷಕರ ಗಮನಕ್ಕೆ  ತರಬೇಕು. ಸ್ವಚ್ಛತಾ ಪದಾರ್ಥಗಳು ಹಾಗೂ ಶೌಚಾಲಯಗಳಲ್ಲಿ ಸೋಪ್‌ ಆಯಿಲ್‌ ಇಲ್ಲದಿದ್ದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳೇ ಹೊಣೆಗಾರರನ್ನಾಗಿ ಮಾಡಲಾಗುವುದು,’ ಎಂದು ಡಿಪಿಎಆರ್‌ ಉಪ ಕಾರ್ಯದರ್ಶಿ ಚನ್ನಬಸಪ್ಪ ಅವರು ಟಿಪ್ಪಣಿಯಲ್ಲಿ ಎಚ್ಚರಿಸಿದ್ದಾರೆ. 

ವಿಧಾನಸೌಧದ ನೆಲ ಮಹಡಿ ಸೇರಿದಂತೆ  3  ಮಹಡಿಗಳು ಅದೇ ರೀತಿ ವಿಕಾಸಸೌಧದ 4 ಮಹಡಿಗಳು ಮತ್ತು ಬಹುಮಹಡಿ ಕಟ್ಟಡದಲ್ಲಿರುವ 7 ಮಹಡಿಗಳಲ್ಲಿರುವ ಸಚಿವರು, ಅಧಿಕಾರಿಗಳ ಕೊಠಡಿಗಳು ಹಾಗೂ ಕಾರಿಡಾರ್‌ಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಪರಿವೀಕ್ಷಿಸಬೇಕಿದೆ. 

2020ರ ಏಪ್ರಿಲ್‌  22ರಿಂದ ಮೇ 15ರವರೆಗೆ ಯಾವ್ಯಾವ ಅಧಿಕಾರಿಗಳು ಯಾವ ಕೊಠಡಿ,  ಶೌಚಾಲಯಗಳನ್ನು ನಿರ್ವಹಿಸಬೇಕು ಎಂದು ದಿನಾಂಕ ಸಮೇತ  ಅಧೀನ  ಕಾರ್ಯದರ್ಶಿ ಮತ್ತು ಶಾಖಾಧಿಕಾರಿಗಳನ್ನು ನಿಯೋಜಿಸಲಾಗಿದೆ.  

‘ದಿ ಫೈಲ್‌’ ಜತೆ ಮಾತನಾಡಿದ ಅಧಿಕಾರಿಯೊಬ್ಬರು ‘ಅಧೀನ ಕಾರ್ಯದರ್ಶಿ ಹುದ್ದೆ ಉಪ ವಿಭಾಗಾಧಿಕಾರಿ ಶ್ರೇಣಿ ಮತ್ತು ಶಾಖಾಧಿಕಾರಿ ಹುದ್ದೆ ತಹಶೀಲ್ದಾರ್‌ ಶ್ರೇಣಿ ಹೊಂದಿದೆ. ಕಚೇರಿಯಲ್ಲಿ ಕೆಲಸ ಇಲ್ಲದಿದ್ದರೂ ಕರೆಸಿಕೊಂಡಿರುವ ಮುಖ್ಯ ಕಾರ್ಯದರ್ಶಿಗಳು ಶೌಚಾಲಯ ಪರಿವೀಕ್ಷಿಸುವ ಕೆಲಸಕ್ಕೆ ನಿಯೋಜಿಸಿರುವುದು ಎಷ್ಟರಮಟ್ಟಿಗೆ  ಸರಿ,’ ಎಂದು ಪ್ರಶ್ನಿಸಿದರು. 

ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ದಿನವೊಂದರಲ್ಲಿ ಮೂರ್ನಾಲ್ಕು ಆದೇಶ,ಸುತ್ತೋಲೆಗಳನ್ನು ಹೊರಡಿಸುವ ಮೂಲಕ ನೌಕರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕಚೇರಿ ಕರ್ತವ್ಯಕ್ಕೆ ಹಾಜರಾಗಲು ಸಾರಿಗೆ ಸಂಪರ್ಕಗಳ ವ್ಯವಸ್ಥೆ ಇಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ಆಗಮಿಸುತ್ತಿರುವ ಅಧಿಕಾರಿ, ನೌಕರರು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಜತೆಯಲ್ಲೇ ಶೌಚಾಲಯಗಳ ನಿರ್ವಹಣೆ, ಕಾರಿಡಾರ್‌ಗಳ ಸ್ವಚ್ಛತೆ  ಹೊಣೆಗಾರಿಕೆಯನ್ನು ಒಲ್ಲದ ಮನಸ್ಸಿನಿಂದಲೇ ನಿರ್ವಹಿಸಬೇಕಿದೆ. 

SUPPORT THE FILE

Latest News

Related Posts