ಸಂಜಯನಗರ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ಸಿಐಡಿ ಹೆಗಲಿಗೆ; ಡಿಜಿಐಜಿ ಆದೇಶ

ಬೆಂಗಳೂರು; ಲಾಕ್‌ಡೌನ್‌ ಅವಧಿಯಲ್ಲಿ ಪೊಲೀಸ್‌ ಸಿಬ್ಬಂದಿ ಮೇಲೆ ಬೆಂಗಳೂರಿನ ಸಂಜಯನಗರದ ಮುಸ್ಲಿಂ ಯುವಕರಿಬ್ಬರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದ ಪ್ರಕರಣವನ್ನು  ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ.

ಈ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಸಿಐಡಿ ತನಿಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಿದ್ದಾರೆ. 

ಮುಸ್ಲಿಂ ಯುವಕರಿಬ್ಬರ ಮೇಲೆ ಪೊಲೀಸ್‌ ದೌರ್ಜನ್ಯ ಕುರಿತು ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಮತ್ತು ಪ್ರಕಾಶ್‌ಬಾಬು ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ ವಿಚಾರಣೆ ನಡೆಸುತ್ತಿದ್ದರೆ, ಇತ್ತ ಪೊಲೀಸ್‌ ಮಹಾನಿರ್ದೇಶಕರು ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಜಯನಗರ ಪೊಲೀಸ್‌ ಅಧಿಕಾರಿಗಳು ನೀಡಿರುವ ದೂರಿನ ಮೇಲೆ ದಾಖಲಾಗಿದ್ದ ಒಟ್ಟು 3 ಪ್ರಕರಣಗಳನ್ನು (ಮೊಕದ್ದಮೆ ಸಂಖ್ಯೆ 43/2020, 44 ಮತ್ತು 45) ತನಿಖೆ ನಡೆಸಲು ಸಿಐಡಿಗೆ ಹಸ್ತಾಂತರಿಸಿದ್ದಾರೆ. 

ಆದರೆ ಈ ಪ್ರಕರಣದಲ್ಲಿ ಪೊಲೀಸ್‌ ಸಿಬ್ಬಂದಿಯೇ ಮುಸ್ಲಿಂ ಯುವಕರಿಬ್ಬರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ್ದರಲ್ಲದೆ, ಮಹಜರು ವೇಳೆಯಲ್ಲಿ ಗುಂಡು ಹಾರಿಸಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು. ಯುವಕರಿಬ್ಬರ ಮೇಲೆ ಪೊಲೀಸ್‌ ಸಿಬ್ಬಂದಿ ನಡೆಸಿದ್ದ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಲಾಗಿದ್ದ ವಿಡಿಯೋ ವೈರಲ್‌ ಆಗಿತ್ತು. 

ಏನದು ಪ್ರಕರಣ?

ಕರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆ ನಂತರ ರಸ್ತೆಗೆ ಇಳಿದಿದ್ದ ಕಾರಣಕ್ಕೆ ತಾಜುದ್ದೀನ್‌ ಮತ್ತು ಕುತುಬುದ್ದೀನ್‌ ಎಂಬಿಬ್ಬರು ಸಂಜಯನಗರ ಠಾಣೆಯ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಹರಿದಾಡಿತ್ತಲ್ಲದೆ, ಇದು ಪೊಲೀಸ್‌ ಸಮೂಹವನ್ನು ಸಿಟ್ಟಿಗೆಬ್ಬಿಸಿತ್ತು.  

ಆದರೆ ಅದಕ್ಕೂ ಮುನ್ನ  ಪೊಲೀಸ್‌ ಪೇದೆಗಳಿಬ್ಬರು ಈ ಇಬ್ಬರು ಯುವಕರ ಮೇಲೆ ಅನಾಗರಿಕವಾಗಿ  ವರ್ತಿಸಿದ್ದಲ್ಲದೆ ಗಂಭೀರ  ಹಲ್ಲೆ ನಡೆಸಿದ್ದರು. ಈ ಕುರಿತಾದ  ವಿಡಿಯೋ ವೈರಲ್‌ ಆಗಿತ್ತು. ಯುವಕರಿಬ್ಬರ ಮೇಲೆ  ಪೊಲೀಸ್‌ ಪೇದೆಗಳು ನಡೆಸಿದ್ದ ಹಲ್ಲೆಗೆ ಸಾರ್ವಜನಿಕ ವಲಯದಲ್ಲಿ  ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಅಲ್ಲದೆ ಬಂಧಿತ ಆರೋಪಿಗಳಿಬ್ಬರ ಜತೆ ಸೇರಿ ಕೆಲವು ಸಾರ್ವಜನಿಕರೂ ಪೊಲೀಸ್‌ ಪೇದೆಗೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ  ಜಾಲತಾಣದಲ್ಲಿ ಹರಿದಾಡಿದ್ದವು. ಇದರ  ಬೆನ್ನಲ್ಲೇ ವೈರಲ್‌ ಆಗಿದ್ದ ಮತ್ತೊಂದು ವಿಡಿಯೋದಲ್ಲಿ  ಪೊಲಿಸ್‌ ಪೇದೆಯೇ ತಾಜುದ್ದೀನ್‌ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸುತ್ತಿರುವುದು, ಬೂಟು ಕಾಲಿನಲ್ಲಿ ಒದೆಯುವುದು, ಗೋಡೆಗೆ ಒತ್ತಿ ಹಿಡಿದು ಮುಖಕ್ಕೆ ಗುದ್ದುವುದು, ಜೇಬಿಗೆ ಬಲವಂತವಾಗಿ ಕೈ ತುರುಕುವುದು, ಮೊಬೈಲ್‌ ಕಸಿದುಕೊಳ್ಳುವ ದೃಶ್ಯಗಳಿದ್ದವು. 

ಈ ವಿಡಿಯೋ ಹೊರಬೀಳುವ ಮುನ್ನವೇ ಪೊಲೀಸ್‌ ಪೇದೆಗಳಿಬ್ಬರ ಮೇಲೆ ನಡೆದಿದ್ದ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರ ಡಿಸಿಪಿ ವಿಭಾಗದ ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರಲ್ಲದೆ ಇಬ್ಬರ ಮೇಲೆ  ಎಫ್‌ಐಆರ್‌ ದಾಖಲಿಸಿದ್ದರು. ಅಲ್ಲದೆ ಬಂಧಿತ ತಾಜುದ್ದೀನ್‌ ಎಂಬಾತನನ್ನು ಕಳೆದ ಗುರುವಾರ ನಸುಕಿನಲ್ಲಿ ಮಹಜರ್‌ಗೆಂದು ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎಂದು ಬಿಂಬಿಸಲಾಗಿತ್ತು. 

ಈ ವೇಳೆ ಸಬ್‌ ಇನ್ಸ್‌ಪೆಕ್ಟರ್‌ ರೂಪಾ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಮಂಜಣ್ಣಗೆ ಗಾಯವಾಗಿತ್ತು ಎಂದು ಹೇಳಿದ್ದ  ಪೊಲೀಸ್‌ ಇಲಾಖೆ, ತಕ್ಷಣ ಸಂಜಯನಗರ ಇನ್‌ಸ್ಪೆಕ್ಟರ್‌ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಮಾತು ಕೇಳದಿದ್ದಾಗ ಆರೋಪಿ ಶರಣಾಗಿರಲಿಲ್ಲ  ಎಂದು ಕಾರಣ  ನೀಡಿದ್ದ ಪೊಲೀಸರು ಎಡಗಾಲಿಗೆ ಗುಂಡು ಹೊಡೆದಿದ್ದರು. 

ತಾಜುದ್ದೀನ್‌ಗೆ ಮೊದಲು ಹೊಡೆದು ಆತನಿಂದ ಮೊಬೈಲ್‌ ಕಿತ್ತುಕೊಂಡಿದ್ದ ಪೇದೆಗಳಿಬ್ಬರು ಹಿರಿಯ ಅಧಿಕಾರಿಗಳಿಗೆ ಅರ್ಧ ಸತ್ಯವನ್ನು ಮಾತ್ರ ಹೇಳಿ, ಉಳಿದರ್ಧ ಸತ್ಯವನ್ನು ಮುಚ್ಚಿಟ್ಟು ಕತೆ ಕಟ್ಟಿದ್ದಾರೆಯೇ ಎಂಬ  ಅನುಮಾನಗಳು ವ್ಯಕ್ತವಾಗಿದ್ದವು. 

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಇದು ಇಡೀ ಇಲಾಖೆಗೆ ಆದ ಅವಮಾನ. ಅವರು ಹೊಡೆದಿದ್ದು ಅವರಿಬ್ಬರಿಗರಲ್ಲ (ಕಾನ್‌ಸ್ಟೆಬಲ್‌ಗಳು) ಇಡೀ ಪೊಲೀಸ್ ಸಮೂಹಕ್ಕೆ’ ಎಂದಿದ್ದನ್ನು ಸ್ಮರಿಸಬಹುದು. 

the fil favicon

SUPPORT THE FILE

Latest News

Related Posts