ಕರೊನಾ ಬಿಕ್ಕಟ್ಟು: ಉತ್ತರ, ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ನಾಯಕತ್ವ ಪ್ರದರ್ಶಿಸಿದ್ದೇಗೆ?

ಬೆಂಗಳೂರು; ಕೊರೊನಾ ವೈರಸ್‌ನಿಂದಾಗಿ ಉಂಟಾಗಿರುವ ಬಿಕ್ಕಟ್ಟುಗಳನ್ನು ನಿವಾರಿಸುವಲ್ಲಿ ದೇಶದ ಹಲವು ರಾಜ್ಯಗಳು ಮುಗ್ಗುರಿಸಿ ಬಿದ್ದಿವೆ. ಇಂತಹ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ನಾಯಕತ್ವ ಕೌಶಲ್ಯವನ್ನು ಸಾಬೀತುಪಡಿಸಬೇಕಿದ್ದ ಉತ್ತರ ಮತ್ತು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಉದಾಸಿನ, ಉಡಾಫೆ ಧೋರಣೆ ತಳೆದಿದ್ದರು. ಕೋವಿಡ್‌-19 ನ್ನು ಗಂಭೀರವಾಗಿ ಪರಿಗಣಿಸದಿದ್ದ ಹಲವು ಮುಖ್ಯಮಂತ್ರಿಗಳು ಈಗ ತಡಬಡಾಯಿಸಿಕೊಂಡು ಮೈ ಕೊಡವಿದ್ದಾರೆ. 

ಇಷ್ಟಾದರೂ ಸೋಂಕಿತರ ತಪಾಸಣೆ ಮತ್ತು ವೈರಸ್‌ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಮತ್ತು ಉತ್ತರದ ಹಲವು ರಾಜ್ಯಗಳು ಹಿನ್ನಡೆ ಸಾಧಿಸುತ್ತಲೇ ಇವೆ. 

ಈ ಸಾಂಕ್ರಾಮಿಕ ರೋಗದ ವಿರುದ್ಧ  ಸೆಣೆಸುತ್ತಿರುವ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮುಂಚೂಣಿಯಲ್ಲಿದ್ದಾರೆ. ಮಾದರಿಗಳ ಪರೀಕ್ಷಣೆ ಮತ್ತು ಸೋಂಕಿತರ ತಪಾಸಣೆ ವಿಚಾರದಲ್ಲಿ ಎಲ್ಲ ರಾಜ್ಯಗಳಿಗಿಂತಲೂ ಮುಂದಿದ್ದಾರೆ. ಆದರೆ ಬಹುತೇಕ ರಾಜ್ಯಗಳಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾದರಿಯಾಗಲಿಲ್ಲ. ಅಲ್ಲಿ ಜಾರಿಗೊಳಿಸಿರುವ ಕ್ರಮಗಳನ್ನು ತಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಯೋಚಿಸಲೂ ಇಲ್ಲ. ಕೊರೊನಾ ಬಿಕ್ಕಟ್ಟಿನ ಸುತ್ತ ನಡೆದಿರುವ ಬೆಳವಣಿಗೆಗಳಲ್ಲಿ  ನಾಯಕತ್ವ ಕೌಶಲ್ಯ ಮೆರೆದವರ ಸಂಖ್ಯೆ ಬೆರಳಣಿಕೆಯಷ್ಟಿದೆ. 

ಕೆಲವು ರಾಜ್ಯಗಳ ಮುಖ್ಯಮಂತ್ರಿಗಳ ಧೋರಣೆ  ಹೇಗಿತ್ತೆಂದರೆ ಕರೊನಾ ವೈರಸ್‌ನ್ನು ನಿಭಾಯಿಸಲು ಪ್ಯಾರಸಿಟಮಲ್‌ ಒಂದೇ ಸಾಕು ಎಂದು ಕೈಕಟ್ಟಿ ಕುಳಿತರೇ ವಿನಃ ಈ ವೈರಸ್‌ನ್ನು ಕಟ್ಟಿಹಾಕಲು ಕಠಿಣ ಕ್ರಮಗಳಿಗೆ ಮುಂದಾಗಲೇ ಇಲ್ಲ. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸ್ಥಳೀಯ ಚುನಾವಣೆಗಳನ್ನು ಮುಂದೂಡಿದ್ದ ಆಂಧ್ರದ ಚುನಾವಣೆ ಆಯುಕ್ತರನ್ನು ಅಲ್ಲಿನ ಮುಖ್ಯಮಂತ್ರಿ ಜಗನ್‌ಮೋಹನ್‌  ರೆಡ್ಡಿ ತರಾಟೆಗೆ ತೆಗೆದುಕೊಂಡರೇ ವಿನಃ, ವೈರಸ್‌ನ್ನು ಹೇಗೆ ಹಿಮ್ಮೆಟ್ಟಿಸಬಹುದು ಎಂದು ಯೋಚಿಸಲಿಲ್ಲ; ಇದಕ್ಕಾಗಿ ಮುಂಜಾಗರೂಕತೆಯನ್ನು ವಹಿಸಲಿಲ್ಲ. 

ಅದೇ ರೀತಿ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಹೊಸ ಸೋಂಕುಗಳನ್ನು ನಿಲ್ಲಿಸಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜಸ್ಥಾನದ ಭಿಲ್ವಾರ ದೇಶದ ಉಳಿದ ಭಾಗಗಳಿಗೆ ಅತ್ಯುತ್ತಮ ಉದಾಹರಣೆಯಾಗಿದ್ದರೂ, ಇದರ ಬಗ್ಗೆ ದಕ್ಷಿಣದ ಯಾವ ರಾಜ್ಯಗಳೂ ಸೂಕ್ಷ್ಮವಾಗಿ ಗಮನಹರಿಸಲಿಲ್ಲ. ಹೀಗಾಗಿಯೇ ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ದಿನವೊಂದಕ್ಕೆ 10 ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. 

ಇದರ ಮಧ್ಯೆ ಕೋಮು ವೈಷಮ್ಯಕ್ಕೆ ಕಾರಣವಾಗಲಿದ್ದ ನಿಜಾಮುದ್ದಿನ್‌ ಪ್ರಕರಣವನ್ನು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಿದರು. ಮುಸ್ಲಿಂ ಸಮುದಾಯದ ವಿರುದ್ಧ ತಿರುಗಿ ಬೀಳಲು ಮಾಧ್ಯಮಗಳು ಪ್ರಚೋದಿಸಿದ್ದರೂ ಯಡಿಯೂರಪ್ಪ ಸಕಾಲದಲ್ಲಿ ಮಧ್ಯ ಪ್ರವೇಶ ಮಾಡಿದ್ದರಿಂದಾಗಿ ಸಂಭಾವ್ಯ ಗಲಭೆಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಿದರು. ಕೋಮು ವೈಷಮ್ಯಕ್ಕೆ ಕಾರಣರಾದವರ ವಿರುದ್ಧ ತೀಕ್ಷ್ಣ ಕ್ರಮ ಜರುಗಿಸಲಾಗುವುದು ಎಂಬ ಸಂದೇಶ ರವಾನಿಸಿದರಲ್ಲದೆ, ಸ್ಥಳೀಯ ಮಾಧ್ಯಮಗಳ ಬಾಯಿಯನ್ನು ತಕ್ಷಣಕ್ಕೇ ಮುಚ್ಚಿಸಿದರು.  

ಆದರೆ ಯಡಿಯೂರಪ್ಪ ಅವರ ಸಂಪುಟದ ಸಿ ಟಿ ರವಿ,  ಬಸನಗೌಡ ಪಾಟೀಲ್‌ ಯತ್ನಾಳ್‌, ರೇಣುಕಾಚಾರ್ಯ ಸೇರಿದಂತೆ ಸಂಘ ಪರಿವಾರದ ಹಿನ್ನೆಲೆಯ ಅನಂತಕುಮಾರ ಹೆಗಡೆಯಂತವರು ನಿಜಾಮುದ್ದೀನ್‌ ಪ್ರಕರಣವನ್ನು ಕೆದಕುತ್ತಲೇ ಕೋಮು ಪ್ರಚೋದಕ ವಿಚಾರಗಳನ್ನು ಈಗಲೂ ಹರಡುತ್ತಲೇ ಬಂದಿದ್ದಾರೆ. ಇದಲ್ಲದೆ ಇಸ್ಲಾಮೋಫೋಬಿಯಾವನ್ನು ಹರಡುವ ಮೂಲಕ ಜಮಾಅತ್ ವೈಫಲ್ಯಕ್ಕೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುತ್ತಿರುವ ಕೆಲವು ಬಿಜೆಪಿ ನಾಯಕರ ವಿರುದ್ಧ ಯಡಿಯೂರಪ್ಪ  ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ನಿಜಾಮುದ್ದೀನ್‌ ಪ್ರಕರಣದಲ್ಲಿ ಸಕಾಲದಲ್ಲಿ ಮಧ್ಯ ಪ್ರವೇಶ ಮಾಡಿದ್ದಕ್ಕಷ್ಟೇ ಯಡಿಯೂರಪ್ಪ ಅವರು ಅಭಿನಂದನಾರ್ಹರು. ಮತ್ತೊಂದು ವಿಪರ್ಯಾಸದ ಸಂಗತಿ ಎಂದರೆ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಬೆಕ್ಕಿಗೆ ಆಹಾರ ನೀಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಸದ್ದು ಮಾಡಿತು. ಆದರೆ ರಾಜ್ಯಾದ್ಯಂತ ಇರುವ ಹಲವು ಸಾಕುಪ್ರಾಣಿಗಳಿಗೆ ಆಹಾರ ಸರಬರಾಜು ಮಾಢುವ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಿಲ್ಲ.  

ಅದೇ ರೀತಿ ಬೆಂಗಳೂರು ಮೆಟ್ರೋ ರೈಲು ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ವಲಸೆ ಕಾರ್ಮಿಕರಿಗೆ ಕಳೆದ ಫೆಬ್ರುವರಿಯಿಂದ ಸಂಬಳ ನೀಡದಿದ್ದರೂ ಅವರ ಬಗ್ಗೆ ಗಮನ ಹರಿಸಲಿಲ್ಲ. ನಗರ ಪ್ರದಕ್ಷಿಣೆ ಹಾಕಿದ್ದ ಯಡಿಯೂರಪ್ಪ ಅವರು ಬೀದಿ ಬದಿಯ ವ್ಯಾಪಾರಸ್ಥರ ಸಂಕಷ್ಟಗಳಿಗೆ ಕಿವಿಯಾದರೆ ಹೊರತು, ಬೆಂಗಳೂರು ನಗರ ಮತ್ತು ಇದಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿನ ತರಕಾರಿ ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಭರವಸೆ ಹುಟ್ಟಿಸುವ ಕ್ರಮಗಳನ್ನು ಕೈಗೊಳ್ಳಲಿಲ್ಲ. 

ಹೀಗಾಗಿಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್‌ ನೇರವಾಗಿ ತೋಟಗಳಿಗೆ ತೆರಳಿ ಅಲ್ಲಿಂದಲೇ ವಿಡಿಯೋ ಚಿತ್ರೀಕರಣ ಮಾಡಿ ಬೆಳೆಗಾರರಲ್ಲಿ ಭರವಸೆ ಹುಟ್ಟಿಸಲು ಯತ್ನಿಸಿದರಲ್ಲದೆ,  ಇನ್ನೂ ಒಂದು  ಹೆಜ್ಜೆ ಮುಂದಕ್ಕೆ ತೆರಳಿದ್ದ ಅವರು ತಮ್ಮ ಹಣದಲ್ಲಿ ಬೆಳೆಗಾರರಿಂದಲೇ ನೇರವಾಗಿ ಖರೀದಿಸಿ ಅದನ್ನು ಸಂತ್ರಸ್ತರಿಗೆ ತಲುಪಿಸಲು ಮುಂದಾದರು. ಇಂತಹ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಬೇಕಿದ್ದ ಯಡಿಯೂರಪ್ಪ ಅವರು ಎಲ್ಲದಕ್ಕೂ ಕೇಂದ್ರದ ದಾರಿಯನ್ನೇ ಎದುರು ನೋಡುವಂತಾಗಿತ್ತು.   

ಅದೇ ರೀತಿ ಕೋವಿಡ್‌ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಆರಂಭದಲ್ಲಿ ಜವಾಬ್ದಾರಿ ಹೊತ್ತಿದ್ದ ಆರೋಗ್ಯ ಸಚಿವ ಬಿ ಶ್ರೀರಾಮುಲು ಎಡವಿ ಬಿದ್ದರು. ಆರೋಗ್ಯ ಇಲಾಖೆ ಬಿಡುಗಡೆ ಮಾಡುತ್ತಿದ್ದ ಅಂಕಿ ಸಂಖ್ಯೆಗಳಿಗೂ ಶ್ರೀರಾಮುಲು ಅವರು ಮಾಧ್ಯಮಗಳಿಗೆ ನೀಡುತ್ತಿದ್ದ ಹೇಳಿಕೆಗಳು ತಾಳೆಯಾಗುತ್ತಿರಲಿಲ್ಲ.  

ಹೀಗಾಗಿಯೇ ಶ್ರೀರಾಮುಲು ಬದಲಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರ ಹೆಗಲಿಗೆ ಈ ಜವಾಬ್ದಾರಿ ವಹಿಸಲಾಯಿತು.  ಆದರೆ ಅತ್ಯಲ್ಪ ದಿನಗಳಲ್ಲೇ ಅವರ ಹೆಗಲಿನಿಂದ ಈ  ಜವಾಬ್ದಾರಿ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರ ಹೆಗಲಿಗೆ  ವರ್ಗಾಯಿಸಿದರು. ಇನ್ನು, ಇಡೀ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟವನ್ನು ಮುನ್ನಡೆಸಬೇಕಿದ್ದ ಪರಿಸರ ಸಚಿವ ಆನಂದ್‌ಸಿಂಗ್‌  ಅವರ ಸುಳಿವೇ ಇಲ್ಲ. 

ಈ ಎಲ್ಲ  ಬೆಳವಣಿಗೆಗಳು  ಕೊರೊನಾ ವೈರಸ್‌ ವಿರುದ್ಧದ ಯುದ್ಧದಲ್ಲಿ ನೆರೆಯ ಕೇರಳ ರಾಜ್ಯಕ್ಕಿಂತಲೂ ಕರ್ನಾಟಕ ಹಿಂದೆ ಬೀಳುವಂತಾಯಿತು. ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಪಾಸಣೆಯೇ ಪ್ರಮುಖ ಅಸ್ತ್ರ  ಎಂದು ವಿಶ್ವ ಅರೋಗ್ಯ ಸಂಸ್ಥೆ ಎಚ್ಚರಿಸಿದ್ದರೂ ಇನ್ನೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ. 

ಕರ್ನಾಟಕದಲ್ಲಿ ಸದ್ಯ ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೇವಲ 131 ಮಾದರಿಗಳನ್ನು ಪರೀಕ್ಷಿಸುತ್ತಿದೆ.  ಆದರೆ ಇದೇ ಹೊತ್ತಿನಲ್ಲೇ ನೆರೆಯ ಕೇರಳವು ಪ್ರತಿ ಮಿಲಿಯನ್‌ಗೆ 400 ಜನರನ್ನು ಪರೀಕ್ಷಿಸುತ್ತಿತ್ತು. ಅಂದರೆ ಮೂರು ಪಟ್ಟು ಹೆಚ್ಚು. ಇದಲ್ಲದೆ, ಚೇತರಿಕೆ ದರ ಮತ್ತು ಮರಣ ಪ್ರಮಾಣವು ಕರ್ನಾಟಕದಲ್ಲಿ ಶೇಕಡ 17.29 ಮತ್ತು 2.80 ರಷ್ಟಿದ್ದರೆ, ಕೇರಳದಲ್ಲಿ ಇದು 33.79 ಮತ್ತು 0.5 ಪ್ರತಿಶತದಷ್ಟು ದಾಖಲಿಸಿತ್ತು.  ಈ ಅಂಕಿ ಸಂಖ್ಯೆಗಳು ಯಡಿಯೂರಪ್ಪ ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. 

ಕೊರೊನಾ  ಬಿಕ್ಕಟ್ಟನ್ನು ನಿವಾರಿಸುವುದರಲ್ಲಿ ಕೇರಳ ಉಳಿದೆಲ್ಲ ರಾಜ್ಯಗಳಿಗಿಂತಲೂ ಅತ್ಯುತ್ತಮ ಪ್ರದರ್ಶನ ನೀಡಿದೆ.  ಸೋಂಕಿನ ಪತ್ತೆ, ಪರೀಕ್ಷೆ ಮಾದರಿಗಳ ಸಂಗ್ರಹಣೆ, ತಪಾಸಣೆ ಸಂಖ್ಯೆಯಲ್ಲಿನ ಹೆಚ್ಚಳ, ಸೋಂಕಿತರನ್ನು ಪ್ರತ್ಯೇಕಗೊಳಿಸುವುದು, ಆರೋಗ್ಯ ಕಾರ್ಯಕರ್ತರ ಜಾಲವನ್ನು ಬಲಗೊಳಿಸಿರುವುದು, ಪ್ರಾಥಮಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿದ್ದೇ ಉತ್ತಮ ಪ್ರದರ್ಶನ ನೀಡಲು ನೆರವಾಯಿತು. 

ಹಾಗೆಯೇ ಮಹಾರಾಷ್ಟ್ರ ಈ ವಿಚಾರದಲ್ಲಿ ತುಂಬಾ ಹಿಂದೆ ಬಿದ್ದಿಲ್ಲ. ಕೊರೊನಾ ವೈರಸ್‌ನ್ನು ಹಿಮ್ಮೆಟ್ಟಿಸುವಲ್ಲಿ ಆಕ್ರಮಣಶೀಲತೆಯಿಂದ ವರ್ತಿಸಿತು. ಮಹಾರಾಷ್ಟ್ರವು ಈಗ 400 ಕ್ಕೂ ಹೆಚ್ಚು ಸೂಕ್ಷ್ಮ ವಲಯಗಳನ್ನು ಹೊಂದಿದೆ. ಈ ಪೈಕಿ ಮುಂಬೈವೊಂದರಲ್ಲೇ 381 ಪ್ರದೇಶಗಳಿವೆ. ಮುಂಬೈ, ಅದರ ಪಕ್ಕದ ಪ್ರದೇಶಗಳು ಮತ್ತು ಪುಣೆಯಲ್ಲಿ ತ್ವರಿತ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಿತ್ತಲ್ಲದೆ, ಸೋಂಕು ಹರಡಬಹುದಾದ ಇತರೆ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಅಲ್ಲಿಯೇ ಕೇಂದ್ರೀಕರಿಸಿತ್ತು. ಆದರೂ ಸೋಂಕಿತರ ಸಂಖ್ಯೆಯಲ್ಲಿನ ಗಣನೀಯ ಹೆಚ್ಚಳವನ್ನು ತಡೆಯಲಾಗಲಿಲ್ಲ.

ತಮಿಳುನಾಡಿನ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿತ್ತು. ಪ್ರಕರಣಗಳ ಸಂಖ್ಯೆಯಲ್ಲಿ  ಸ್ಥಿರತೆ  ಇದೆ ಎಂದು ಅಂಕಿ ಸಂಖ್ಯೆಗಳು ಬಿಡುಗಡೆ ಆಗುತ್ತಿದ್ದ ಮಧ್ಯೆಯೇ ಅಲ್ಲಿಯೂ ಪ್ರಕರಣಗಳ ಸಂಖ್ಯೆ ಏರುತ್ತಲೇ  ಇತ್ತು. ಲಾಕ್‌ಡೌನ್‌ ವಿಸ್ತರಿಸಲು ವೈದ್ಯಕೀಯ ಸಮಿತಿ ಒಂದು  ವಾರದ ಹಿಂದೆಯೇ ಶಿಫಾರಸ್ಸು ಮಾಡಿದ್ದರೂ ಅಲ್ಲಿನ ಮುಖ್ಯಮಂತ್ರಿ ಎ ಕೆ ಪಳನಿಸ್ವಾಮಿ ಏಪ್ರಿಲ್‌ 13ರ ಮಧ್ಯಾಹ್ನದ ಹೊತ್ತಿಗೆ ಘೋಷಿಸಿದರು. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಗೆ ಸೂಕ್ಷ್ಮವಾಗಿ ವರ್ತಿಸಿದ್ದರೋ ಅದೇ ಹಾದಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಅವರು ಸಾಗಿದರು.  ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಅವರ ಸೂಕ್ಷ್ಮ ನಿರ್ವಹಣೆಯೂ ಹಲವೆಡೆ ಮೆಚ್ಚುಗೆಗೆ  ಕಾರಣವಾಗಿತ್ತು.  ಆರಂಭದಲ್ಲಿ ಕರೊನಾ ವೈರಸ್‌ ಭೀತಿಗೆ ಹೆದರದಿದ್ದ  ಅವರು ದೆಹಲಿ ಗಲಭೆಯಿಂದ  ಬೇರೆಡೆ ತಿರುಗಿಸುವ ತಂತ್ರವೆಂದು ಆರೋಪಿಸಿದ್ದರು. ಆದರೆ ಅತ್ಯಲ್ಪ ಅವಧಿಯಲ್ಲೇ ಸಮಸ್ಯೆಯ ಗಂಭೀರತೆಯನ್ನು ಅರಿತುಕೊಂಡರಲ್ಲದೆ, ಬಿಕ್ಕಟ್ಟನ್ನು ಎದುರಿಸಲು ಇಡೀ ರಾಜ್ಯವನ್ನೇ ಸಜ್ಜುಗೊಳಿಸಿದರು. 

ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸಲು ₹ 200 ಕೋಟಿಯನ್ನು ಘೋಷಿಸಿದರಲ್ಲದೆ ರಾಜ್ಯದ 10 ಲಕ್ಷ ಸರ್ಕಾರಿ ವೈದ್ಯಕೀಯ ಸಿಬ್ಬಂದಿಗೆ ತಲಾ ₹ 5 ಲಕ್ಷ ವಿಮೆ, 7.5 ಕೋಟಿಗೂ ಅಧಿಕ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರ ಮತ್ತು ಅಸಂಘಟಿತ ಕಾರ್ಮಿಕರಿಗೆ ₹ 1,000 ಸಹಾಯಧನ ನೀಡುವುದು ಸೇರಿದಂತೆ ಕೈಗೊಂಡ ಹಲವು ಕ್ರಮಗಳು ವ್ಯಾಪಕ ಮೆಚ್ಚುಗೆ ಗಳಿಸಲು ನೆರವಾಯಿತು. 

ಉತ್ತರ ಪ್ರದೇಶದ ಹಾದಿ, ಉಳಿದೆಲ್ಲ ರಾಜ್ಯಗಳಿಗಿಂತಲೂ ಭಿನ್ನವಾಗಿತ್ತು. ಲಾಕ್‌ಡೌನ್‌ ಘೋಷಣೆಯಾದ ನಂತರವೂ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರೇರೇಪಿಸಬೇಕಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ ಕಾಂಪೌಂಡ್‌ನಲ್ಲಿ ಭಗವಾನ್‌ ರಾಮನ ವಿಗ್ರಹವನ್ನು ಸ್ಥಳಾಂತರಿಸುವುದೇ ಮುಖ್ಯವಾಗಿತ್ತು. 

ಅಲ್ಲಿಯೂ ಸೂಕ್ಷ್ಮ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ಆರೋಗ್ಯ ಸೌಲಭ್ಯಗಳನ್ನು ನೀಡುವುದರಲ್ಲಿ ರಾಜ್ಯ ಮುಂದಾಗಿದೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಆರ್‌ ಕೆ ತಿವಾರಿ ಹೇಳುತ್ತಾರಾದರೂ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ನಿಯಂತ್ರಿಸಲಾಗುತ್ತಿಲ್ಲ. 

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ರಾವ್ ಮತ್ತು  ಆಂಧ್ರಪ್ರದೇಶದ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆರಂಭದಲ್ಲಿ ಕೋವಿಡ್‌ 19 ಸೃಷ್ಟಿಸಿರುವ  ಬಿಕ್ಕಟ್ಟನ್ನು ನಿವಾರಿಸಲು ಆದ್ಯತೆ ನೀಡಿದರು.  ಆದರೆ ಇವರಿಬ್ಬರೂ ಪ್ಯಾರಸಿಟಮಾಲ್‌ನ್ನೇ ಪರಿಹಾರ ರೂಪದಲ್ಲಿ ಸೂಚಿಸಿದ್ದು ಮಾತ್ರ ನಗೆಪಾಟಲಿಗೀಡಾಗಿತ್ತು. 

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಚುನಾವಣೆಗಳನ್ನು ಅನಿರ್ದಿಷ್ಟವಾಗಿ ಮುಂದೂಡಿದ್ದ ಚುನಾವಣಾ ಆಯುಕ್ತರನ್ನೇ ತರಾಟೆಗೆ  ತೆಗೆದುಕೊಂಡಿದ್ದ ಜಗನ್‌ಮೋಹನ್‌ರೆಡ್ಡಿ ಅವರಿಗೆ ಕೊರೊನಾ ಬಿಕ್ಕಟ್ಟಿಗಿಂತಲೂ ಚುನಾವಣೆಯೇ ಮೊದಲ ಆದ್ಯತೆಯಾಗಿತ್ತು ಎಂಬುದು ಅವರ ವರ್ತನೆಯೇ ಸಾಕ್ಷೀಕರಿಸಿತ್ತು.

ಈ ಎರಡೂ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಳವಾಗುತ್ತಿದ್ದಂತೆ ಈ ಇಬ್ಬರೂ ಮುಖ್ಯಮಂತ್ರಿಗಳು ಕಂಫರ್ಡ್ ಝೋನ್‌ನಿಂದ ಹೊರಬಂದರು.  ಲಾಕ್‌ಡೌನ್‌ ಘೋಷಣೆಯಾದ ನಂತರ  ಪರಿಸ್ಥಿತಿ ನಿಭಾಯಿಸಲು ಮತ್ತು ದುರ್ಬಲ ವರ್ಗಗಳಿಗೆ ಪರಿಹಾರ ಕ್ರಮಗಳನ್ನು ಘೋಷಿಸಿದರು. ಇದರ ಜತೆಜತೆಯಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಿದರು. 

ಲಾಕ್‌ಡೌನ್‌ ಘೋಷಿಸಿದ ನಂತರವೂ ತೆಲಂಗಾಣದಲ್ಲಿ ಜನರ ಓಡಾಟ ಎಂದಿನಂತೆ ಇದ್ದದ್ದನ್ನು ಕಂಡ ಕೆ  ಸಿ ಚಂದ್ರಶೇಖರ್‌  ರಾವ್‌ ಕೋಪೋದ್ರಿಕ್ತರಾಗಿದ್ದರಲ್ಲದೆ, ಕಂಡಲ್ಲಿ ಗುಂಡು ಹೊಡೆಯಲು ಆದೇಶ ಹೊರಡಿಸಲಾಗುವುದು ಎಂದು  ಎಚ್ಚರಿಸಿದರು. 

ಇಷ್ಟೊತ್ತಿಗೆ ಮುನ್ನೆಲೆಗೆ ಬಂದಿದ್ದ ನಿಜಾಮುದ್ದೀನ್‌ ಪ್ರಕರಣ  ಅವರನ್ನು  ಇನ್ನಷ್ಟು ಕಂಗೆಡಿಸಿತ್ತು. ತಬ್ಲೀಘಿಇ ಜಮಾಅತ್‌ ಸಭೆಗೆ ಹಾಜರಾಗಿದ್ದ ಪ್ರತಿನಿಧಿಗಳು ಅಥವಾ  ಅವರ  ಕುಟುಂಬ ಸದಸ್ಯರು, ಸಂಬಂಧಿಕರ ಸಂಪರ್ಕಗಳಿಂದಾಗಿಯೇ ತೆಲಂಗಾಣದಲ್ಲಿ ಕರೊನಾ  ವೈರಸ್‌ ಪ್ರಕರಣಗಳು  ಹೆಚ್ಚಿದೆ ಎಂದು ವಾದಿಸಲಾರಂಭಿಸಿದರು. “ನಿಜಾಮುದ್ದೀನ್ ಘಟನೆ ಸಂಭವಿಸದಿದ್ದರೆ, ತೆಲಂಗಾಣವು ಸಂಪೂರ್ಣವಾಗಿ ಸುರಕ್ಷಿತ ವಲಯವಾಗಿ ಉಳಿಯುತ್ತಿತ್ತು” ಎಂದು ಹೇಳಿಕೆ ನೀಡಿದ್ದರು.  

ಇನ್ನು ಆಂಧ್ರಪ್ರದೇಶದ  ಮುಖ್ಯಮಂತ್ರಿ  ಜಗನ್‌ಮೋಹನ್‌ ರೆಡ್ಡಿ ಲಾಕ್‌ಡೌನ್‌ ವಿಸ್ತರಣೆಯನ್ನು ಕೇವಲ ಸೂಕ್ಷ್ಮಪ್ರದೇಶಗಳಿಗಷ್ಟೇ ಸೀಮಿತಗೊಳಿಸಬೇಕು  ಎಂದು ಒತ್ತಾಯಿಸಿದ್ದರು.  ಸೂಕ್ಷ್ಮವಲ್ಲದ ಪ್ರದೇಶಗಳಲ್ಲಿ ಆರ್ಥಿಕ  ಚಟುವಟಿಕೆ ಪುನರಾರಂಭಿಸಬೇಕು  ಎಂದು  ವಾದಿಸಿದ್ದರು. ಇದೆಲ್ಲ ಏನೇ ಇದ್ದರೂ ಈ ಎರಡೂ ರಾಜ್ಯಗಳು ಲಾಕ್‌ಡೌನ್‌ ಹಿನ್ನೆಲೆಯಲ್ಲಿ  ಅಲ್ಲಿನ ದುರ್ಬಲರಿಗೆ, ಬಡವರಿಗೆ  ಸುರಕ್ಷತಾ ಭಾವನೆಯನ್ನು ಮೂಡಿಸುವಲ್ಲಿ  ಯಶಸ್ವಿಯಾಗಿದ್ದವು. ರಾಜ್ಯದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ತೆಲಂಗಾಣ ಸರ್ಕಾರವು ಪ್ರತಿ ಕುಟುಂಬಕ್ಕೆ, 500 ರಿಂದ 1,500 ರು.ನೀಡಿದರೆ ಆಂಧ್ರ ಪ್ರದೇಶ ಪ್ರತಿ ಬಡ ಕುಟುಂಬಕ್ಕೆ 12 ಕೆಜಿ ಉಚಿತ ಅಕ್ಕಿ ನೀಡಲು ಘೋಷಿಸಿತು.  

ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ಇತರ ಕೆಲವು ರಾಜ್ಯಗಳು ಆರಂಭದಲ್ಲಿ ನಿರ್ಲಕ್ಷ್ಯಿಸಿದರೂ ನಂತರದ ದಿನಗಳಲ್ಲಿ ಅದರ ವ್ಯಾಪಕತೆಯನ್ನು ಅರಿತು ತಪಾಸಣೆ ಮತ್ತು ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸಿತು. ಕೊರೊನಾ ವೈರಸ್‌ ಹರಡಿದ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಹೊಸ ಸೋಂಕುಗಳನ್ನು ನಿಲ್ಲಿಸಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ರಾಜಸ್ಥಾನದ ಬಿಲ್ವಾರ ಪಾತ್ರವಾಯಿತು. 

SUPPORT THE FILE

Latest News

Related Posts