ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖರೀದಿ, ಸಿಬ್ಬಂದಿ ನೇಮಕ ಮತ್ತು ಇತರೆ ಕಾಮಗಾರಿಗಳಲ್ಲಿ ನಡೆದಿದ್ದ ಒಟ್ಟು 18.00 ಕೋಟಿ ರು. ಮೊತ್ತದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಬ್ರಿಮ್ಸ್ ಹಿಂದಿನ ನಿರ್ದೇಶಕ ಡಾ ಚನ್ನಣ್ಣ ಸಿ ಸೇರಿದಂತೆ ಒಟ್ಟು 10 ಮಂದಿ ಅಧಿಕಾರಿ ಸಿಬ್ಬಂದಿ ವಿರುದ್ಧ ವಿಚಾರಣೆಗೆ ಮಂಜೂರಾತಿ ದೊರೆತಿದೆ.
ಬ್ರಿಮ್ಸ್‌ನಲ್ಲಿ ನಡೆದಿದ್ದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರನ್ನಾಧರಿಸಿ ತನಿಖೆ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ, ಅವ್ಯವಹಾರ ನಡೆದಿದೆ ಎಂದು ತನಿಖೆ ವೇಳೆಯಲ್ಲಿ ಸಾಬೀತುಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲು ಅಭಿಯೋಜನಾ ಮಂಜೂರಾತಿ ಪಡೆದಿರುವ ಎಸಿಬಿ ತನಿಖೆಯನ್ನು ಚುರುಕುಗೊಳಿಸಿದೆ.
ಬೀದರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ಹಲವು ಅಕ್ರಮಗಳ ಕುರಿತು ತನಿಖೆ ನಡೆದು ಹಲವು ತಿಂಗಳಾಗಿದ್ದರೂ ಅಭಿಯೋಜನಾ ಮಂಜೂರಾತಿ ನೀಡಿರಲಿಲ್ಲ. ಆದರೆ ಡಾ ಕೆ ಸುಧಾಕರ್ ವೈದ್ಯಕೀಯ ಶಿಕ್ಷಣರಾಗುತ್ತಿದ್ದಂತೆ ಆರೋಪಿಗಳ ವಿರುದ್ಧ ವಿಚಾರಣೆಗೆ ಅನುಮತಿ ದೊರೆತಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಬ್ರಿಮ್ಸ್‌ನ ಹಿಂದಿನ ವೈದ್ಯಕೀಯ ಅಧೀಕ್ಷಕ ಡಾ ಶಿವಕುಮಾರ್ ಶೆಟಕಾರ, ಹಿಂದಿನ ಸಿಇಓ ಆನಂದಸಾಗರ ರೆಡ್ಡಿ, ಸಹಾಯಕ ಆಡಳಿತಾಧಿಕಾರಿ ಅನುಸೂಯ, ಕಚೇರಿ ಅಧೀಕ್ಷಕ ಬಾಬು ಕೋಟೆ, ಪ್ರಕಾಶ ಶರಣಪ್ಪ ಮಡಿವಾಳ, ಪ್ರಥಮ ದರ್ಜೆ ಸಹಾಯಕ ಪ್ರಕಾಶ ಮಾಳಗೆ, ವರ್ಷ, ಮಾಚೆ ಕಲ್ಲಪ್ಪ, ಮತ್ತು ದ್ವಿತೀಯ ದರ್ಜೆ ಸಹಾಯಕ ಶಿವಾಜಿ ಅವರು ಇದೀಗ ವಿಚಾರಣೆ ಎದುರಿಸಬೇಕಾಗಿದೆ. ಈ ಆರೋಪಿಗಳ ವಿರುದ್ಧ ಈಗಾಗಲೇ ದೋಷಾರೋಪಣಾ ಪಟ್ಟಿ ಜಾರಿಗೊಳಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಆದರೆ ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಸಮಜಾಯಿಷಿ ನೀಡಿದ್ದಾರೆ. ಇದನ್ನು ಪರಿಶೀಲಿಸುತ್ತಿರುವ ಎಸಿಬಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಇತರೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಯೋಜನಾ ಇಲಾಖೆಗೆ ಸಹಮತಿ ಕೋರಿ ಪತ್ರ ಬರೆದಿದೆ. ಆದರೆ ಈವರೆವಿಗೂ ಈ ಇಲಾಖೆಗಳಿಂದ ಸಹಮತಿ ಪತ್ರ ಎಸಿಬಿಗೆ ದೊರೆತಿಲ್ಲ ಎಂಬುದು ಗೊತ್ತಾಗಿದೆ.